
ಕೇಂದ್ರ ಸರ್ಕಾರದ ನವರತ್ನ ಕಂಪನಿಗಳ ಪೈಕಿ ಒಂದಾಗಿರುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ (ಬಿಇಎಲ್) ಷೇರುಮೌಲ್ಯವು ₹504ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿಯಾದ ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಎರಡನೆಯ ತ್ರೈಮಾಸಿಕದಲ್ಲಿ ಬಿಇಎಲ್ ಕಂಪನಿಯ ವರಮಾನವು ಶೇಕಡ 26ರಷ್ಟು ಹೆಚ್ಚಳವಾಗಿದೆ. ಕಂಪನಿಯ ಲಾಭದ ಪ್ರಮಾಣವು ಶೇ 18ರಷ್ಟು ಹೆಚ್ಚಾಗಿದ್ದು, ಇದು ನಿರೀಕ್ಷೆಗಿಂತ ಜಾಸ್ತಿ ಎಂದು ಬ್ರೋಕರೇಜ್ ಕಂಪನಿಯು ಹೇಳಿದೆ.
ಕಂಪನಿಯ ಕೈಯಲ್ಲಿ ₹74,453 ಕೋಟಿ ಮೌಲ್ಯದ ಕಾರ್ಯಾದೇಶಗಳು ಇವೆ. ಇದು ಮುಂದಿನ ಮೂರು ವರ್ಷಗಳವರೆಗೆ ಕಂಪನಿಯ ವರಮಾನವು ಚೆನ್ನಾಗಿ ಇರಲಿದೆ ಎಂಬ ಸೂಚನೆ ನೀಡುತ್ತಿದೆ. ಕಂಪನಿಯ ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರವು (ಸಿಎಜಿಆರ್) 2026–27ನೇ ಹಣಕಾಸು ವರ್ಷದವರೆಗೆ ಶೇ 21ರಷ್ಟು ಇರಲಿದೆ ಎಂದು ಜಿಯೋಜಿತ್ ಅಂದಾಜು ಮಾಡಿದೆ.
ವರಮಾನ, ಲಾಭದ ಪ್ರಮಾಣದ ವಿಚಾರದಲ್ಲಿ ಬಿಇಎಲ್ ನಿರೀಕ್ಷೆಗೂ ಮೀರಿದ ಸಾಧನೆ ತೋರುತ್ತಿದೆ. ಕಂಪನಿಯ ಕಾರ್ಯಾದೇಶವು ಉತ್ತಮವಾಗಿರುವುದು, ಹೊಸ ಕಾರ್ಯಾದೇಶಗಳು ಸಿಗುತ್ತಿರುವುದು, ರಕ್ಷಣೆಗೆ ಸಂಬಂಧಿಸಿದ ಹೊಸ ಯೋಜನೆಗಳಲ್ಲಿ ಕಂಪನಿಯ ಪಾತ್ರ ಕಾಣುತ್ತಿರುವುದು ದೀರ್ಘಾವಧಿಯ ಬೆಳವಣಿಗೆಗೆ ಒತ್ತಾಸೆಯಾಗಿವೆ ಎಂದು ಅದು ಹೇಳಿದೆ. ಬುಧವಾರದ ವಹಿವಾಟಿನ ಅಂತ್ಯಕ್ಕೆ ಬಿಇಎಲ್ ಷೇರು ಮೌಲ್ಯವು ₹423.25 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.