ADVERTISEMENT

ಪೇಟೆಯಲ್ಲಿ ಏರಿಳಿತದ ವಹಿವಾಟು

ಕೆ.ಜಿ ಕೃಪಾಲ್
Published 16 ಸೆಪ್ಟೆಂಬರ್ 2018, 19:52 IST
Last Updated 16 ಸೆಪ್ಟೆಂಬರ್ 2018, 19:52 IST

ಕಾರಣಗಳು ವಿಭಿನ್ನ, ವಿಶ್ಲೇಷಣೆಗಳು ವೈವಿಧ್ಯಮಯವಾಗಿದ್ದರು, ಫಲಿತಾಂಶ ಮಾತ್ರ ಸಕಾರಾತ್ಮಕವಾಗಿ ಅಲ್ಪಮಟ್ಟಿನ ಸಮಾಧಾನವನ್ನು ಉಂಟುಮಾಡುವಂತಹುದಾಗಿದೆ.

ಬುಧವಾರ ರೂಪಾಯಿ ಮೌಲ್ಯ ಡಾಲರ್ ವಿರುದ್ಧ ₹72.91 ರ ಸರ್ವಕಾಲೀನ ಕನಿಷ್ಠಮಟ್ಟಕ್ಕೆ ಕುಸಿದು ನಂತರ ಕೆಲವೇ ನಿಮಿಷಗಳಲ್ಲಿ ಅರವತ್ತು ಪೈಸೆಗಳಷ್ಟು ಪುಟಿದೆದ್ದಿತು. ಈ ರೀತಿಯ ಚೇತರಿಕೆಗೆ ಪ್ರಮುಖ ಕಾರಣವೆಂದರೆ ಕೇಂದ್ರ ಸರ್ಕಾರ ಇಥೆನಾಲ್‌ಬೆಲೆಯನ್ನು ಶೇ25 ರಷ್ಟು ಏರಿಕೆ ಮಾಡಿದ್ದಾಗಿದೆ. ಸರ್ಕಾರದ ಈ ಕ್ರಮ ಬಹುಮುಖ ಅನುಕೂಲತೆಗಳನ್ನು ಹೊಂದಿದೆ. ಅವುಗಳಲ್ಲಿ ಪ್ರಮುಖವಾದುವೆಂದರೆ

1. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ನಿಯಂತ್ರಿಸಿ ಕಚ್ಚಾ ತೈಲಬೆಲೆ ಏರಿಕೆಯ ಪ್ರಭಾವ ಮೊಟಕುಗೊಳಿಸುವುದು.

ADVERTISEMENT

2. ಸಂಕಷ್ಟದಲ್ಲಿರುವ ಸಕ್ಕರೆ ವಲಯಕ್ಕೆ ಜೀವ ತುಂಬುವುದು.

3. ಡಾಲರ್ ವಿರುದ್ಧ ಕುಸಿಯುತ್ತಿರುವ ರೂಪಾಯಿಗೆ ಚೇತರಿಕೆ ಮೂಡಿಸುವುದು.

ಸಕ್ಕರೆ ಉತ್ಪಾದನಾ ವಲಯವು ತ್ಯಾಜ್ಯರಹಿತ ವಲಯವಾಗಿದೆ. ಇಲ್ಲಿ ಎಲ್ಲಾ ಉಪ ಉತ್ಪನ್ನಗಳಿಗೂ ಬೇಡಿಕೆಯಿದೆ. ಈ ವಲಯದ ತ್ಯಾಜ್ಯಗಳು ಮೌಲ್ಯವರ್ಧನೆಯ ಮೂಲವಾಗಿದೆ. ಸಕ್ಕರೆಯ ನಂತರ ಕಂಪನಿ ಉತ್ಪಾದಿಸುವ ಇಥೆನಾಲ್ ಬೆಲೆಯನ್ನು ಹೆಚ್ಚಿಸಿದ್ದು ಶುಕ್ರವಾರ ಎಲ್ಲಾ ಸಕ್ಕರೆ ಉತ್ಪಾದನಾ ಕಂಪನಿಗಳ ಷೇರುಗಳಲ್ಲಿ ಮಿಂಚು ಸಂಚರಿಸಿದಂತಾಗಿ ಭಾರಿ ಏರಿಕೆ ಪ್ರದರ್ಶಿಸಿದವು. ಬಲರಾಂಪುರ್ ಚಿನಿ ಮಿಲ್ಸ್ ಷೇರಿನ ಬೆಲೆ ₹77 ರ ಸಮೀಪದಿಂದ ₹92 ರವರೆಗೂ ಏರಿಕೆ ಕಂಡು ₹88.60 ರಲ್ಲಿ ವಾರಾಂತ್ಯ ಕಂಡರೆ, ಧಾಮಪುರ್ ಶುಗರ್ ಸುಮಾರು 19 ರೂಪಾಯಿಗಳ ಏರಿಕೆ, ಶಕ್ತಿ ಶುಗರ್ ಶೇ16 ಕ್ಕೂ ಹೆಚ್ಚಿನ ಏರಿಕೆ ಪಡೆದುಕೊಂಡವು. ಡಿಸಿಎಂ ಶ್ರೀರಾಮ್ ಇಂಡಸ್ಟ್ರೀಸ್, ಬಜಾಜ್ ಹಿಂದುಸ್ಥಾನ್, ದಾಲ್ಮಿಯಾ ಭಾರತ್ ಶುಗರ್, ತ್ರಿವೇಣಿ ಎಂಜಿನಿಯರಿಂಗ್‌, ರಾಜಶ್ರೀ ಶುಗರ್, ರಾಣಾ ಶುಗರ್ ಮುಂತಾದವುಗಳು ಸಹ ಗಮನಾರ್ಹ ಏರಿಕೆ ಪ್ರದರ್ಶಿಸಿವೆ.

ಇತ್ತೀಚಿನ ದಿನಗಳಲ್ಲಿ ಸಕ್ಕರೆ ವಲಯದ ಕಂಪನಿಗಳು ಸಾಮೂಹಿಕ ಏರಿಕೆ ಕಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

ಬಲರಾಂಪುರ್ ಚಿನಿ ಮಿಲ್ಸ್ ಕಂಪನಿ ಷೇರುಗಳನ್ನು ಪ್ರತಿ ಷೇರಿಗೆ ₹150 ರಂತೆ ಬೈಬ್ಯಾಕ್ ಮಾಡಿದ ನಂತರದಲ್ಲಿ ಮೊದಲಬಾರಿಗೆ ಈ ರೀತಿ ಚೇತರಿಕೆ ಕಂಡಿದೆ.

ಕಚ್ಚಾ ತೈಲ ದರದ ಬಗ್ಗೆ ಭಿನ್ನ ಅಭಿಪ್ರಾಯಗಳು ಪ್ರಕಟಿತವಾಗಿವೆ. ಎಲ್ಲಕ್ಕೂ ಮುಖ್ಯವಾಗಿ ವಾಣಿಜ್ಯ ಕದನವೇ ಕಾರಣವಾಗಿದೆ.

ಷೇರುಪೇಟೆಯ ದೃಷ್ಟಿಯಿಂದ ಸತತವಾದ ಇಳಿಕೆಗೆ ಒಳಗಾಗಿದ್ದ ಅಗ್ರಮಾನ್ಯ ಕಂಪನಿಗಳಾದ ಏಷಿಯನ್‌ ಪೇಂಟ್ಸ್‌, ಬಾಲಕೃಷ್ಣ ಇಂಡಸ್ಟ್ರೀಸ್, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಎಚ್‌ಪಿಸಿಎಲ್‌, ಆರ್‌ಇಸಿ, ಯೆಸ್‌ ಬ್ಯಾಂಕ್, ರಿಲಯನ್ಸ್ ಇನ್ಫ್ರಾ, ಜಿಂದಾಲ್ ಸ್ಟೀಲ್‌ ಆ್ಯಂಡ್‌ ಪವರ್, ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಕಾಲ್ಗೇಟ್, ಎಸಿಸಿ ಯಂತಹ ಕಂಪನಿಗಳು ಹೆಚ್ಚಿನ ಏರಿಕೆಯಿಂದ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು.

ಸೋಮವಾರದಿಂದ ಬುಧವಾರದವರೆಗೂ ಕಾಲ್ಗೇಟ್ ಪಾಲ್ಮೊಲೀವ್ ಷೇರಿನ ಬೆಲೆ ₹1,146 ರಿಂದ ₹1,082 ರವರೆಗೂ ಕುಸಿದರೆ ಶುಕ್ರವಾರ ₹1,143 ರವರೆಗೂ ಚೇತರಿಕೆ ಪ್ರದರ್ಶಿಸಿ ₹1,121 ರಲ್ಲಿ ವಾರಾಂತ್ಯ ಕಂಡಿತು.

ಹಿಂದುಸ್ಥಾನ್ ಯೂನಿಲಿವರ್ ಷೇರಿನ ಬೆಲೆ ವಾರದ ಆರಂಭದಲ್ಲಿ ₹1,630ರ ಸಮೀಪದಿಂದ ₹1,578 ರವರೆಗೂ ಕುಸಿದು ₹೧,೬೪೮ ರವರೆಗೂ ಏರಿಕೆ ಕಂಡು ₹1,630 ರಲ್ಲಿ ಕೊನೆಗೊಂಡಿದೆ.

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಷೇರಿನ ಬೆಲೆ ₹1,210 ರಿಂದ ₹1,123 ರ ಸಮೀಪಕ್ಕೆ ಕುಸಿದು ಶುಕ್ರವಾರ ಒಂದೇ ದಿನ ₹93 ರಷ್ಟು ಏರಿಕೆಯಿಂದ ₹1,237 ರವರೆಗೂ ತಲುಪಿ ₹1,226 ರಲ್ಲಿ ವಾರಾಂತ್ಯ ಕಂಡಿತು.

ಬಾಲಕೃಷ್ಣ ಇಂಡಸ್ಟ್ರೀಸ್ ಷೇರಿನ ಬೆಲೆ ₹1,180 ರ ಸಮೀಪದಿಂದ ₹1,122 ರವರೆಗೂ ಕುಸಿದು ಶುಕ್ರವಾರ ₹1,186 ರವರೆಗೂ ಚೇತರಿಕೆ ಕಂಡು ₹1,163 ರಲ್ಲಿ ವಾರಾಂತ್ಯ ಕಂಡಿತು.

ಸಾರ್ವಜನಿಕ ವಲಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳು, ರೂಪಾಯಿಯ ಬೆಲೆ ಕುಸಿತ ಮತ್ತು ಕಚ್ಚಾ ತೈಲ ದರ ಏರಿಕೆಯ ಕಾರಣದಿಂದಾಗಿಬುಧವಾರ ದಿನದ ಮಧ್ಯಂತರದಲ್ಲಿ ವಾರ್ಷಿಕ ಕನಿಷ್ಠ ಮಟ್ಟ ದಾಖಲಿಸಿದವು. ಶುಕ್ರವಾರ ರೂಪಾಯಿಯ ಚೇತರಿಕೆ ಕಾರಣ ಉತ್ತಮ ಏರಿಕೆಯಿಂದ ಮಿಂಚಿದವು.

ಯೆಸ್‌ ಬ್ಯಾಂಕ್ ಷೇರು ಶುಕ್ರವಾರ ₹314 ರ ಸಮೀಪದಿಂದ ₹328 ರವರೆಗೂ ಏರಿಕೆ ದಾಖಲಿಸಿ ₹323 ರಲ್ಲಿ ಕೊನೆಗೊಂಡಿತು. ಕೆನರಾ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಹೆಚ್ಚಿನ ಕುಸಿತ ಕಂಡು ಚೇತರಿಕೆ ಕಂಡವು.

ಶುಕ್ರವಾರ ಲೋಹ ವಲಯದ ಕಂಪನಿಗಳಾದ ಟಾಟಾ ಸ್ಟೀಲ್‌, ವೇದಾಂತ, ಜಿಂದಾಲ್ ಸ್ಟಿಲ್ ಆ್ಯಂಡ್‌ ಪವರ್, ಹಿಂದುಸ್ಥಾನ್ ಜಿಂಕ್ ಮುಂತಾದವು ಚುರುಕಾದ ಏರಿಕೆ ಪಡೆದುಕೊಂಡವು.

ಒಟ್ಟಿನಲ್ಲಿ ಕೇವಲ ನಾಲ್ಕು ದಿನಗಳ ವಹಿವಾಟಿನಲ್ಲಿ ಹೆಚ್ಚಿನ ಅಗ್ರಮಾನ್ಯ ಕಂಪನಿಗಳು ಕುಸಿತ ಕಂಡಷ್ಟೇತ್ವರಿತವಾಗಿ ಚೇತರಿಕೆ ಕಂಡು, ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್‌ಗೆ ಅವಕಾಶ ಮಾಡಿಕೊಟ್ಟಿವೆ.

ಹೊಸ ಷೇರು: ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ₹115 ರಿಂದ ₹118 ರ ಅಂತರದಲ್ಲಿ ಸೆಪ್ಟೆಂಬರ್ 24 ರಿಂದ 26 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. 120ರ ಗುಣಕಗಳಲ್ಲಿಅರ್ಜಿ ಸಲ್ಲಿಸಬಹು. ರಿಟೇಲ್ ಹೂಡಿಕೆದಾರರಿಗೆ ಮತ್ತು ಕಂಪನಿಯ ನೌಕರರಿಗೆ ಪ್ರತಿ ಷೇರಿಗೆ ₹5 ರ ರಿಯಾಯ್ತಿ ನೀಡಲಿದೆ.ಆವಾಸ್ ಫೈನಾನ್ಶಿಯಲ್‌ ಲಿಮಿಟೆಡ್ ಕಂಪನಿಯು ಸೆಪ್ಟೆಂಬರ್ 25 ರಿಂದ 27 ರವರೆಗೂ ಆರಂಭಿಕ ಷೇರು ವಿತರಣೆ ಮಾಡಲಿದೆ. ಮುಖಬೆಲೆ ಸೀಳಿಕೆ:ಸಕುಮ ಎಕ್ಸ್‌ಪೋರ್ಟ್‌ ಆ್ಯಂಡ್‌ ಇಂಪೋರ್ಟ್‌ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ನಿರ್ಧರಿಸಿದೆ.

ಸಾಧನಾ ನೈಟ್ರೊಕೆಮ್ ಲಿಮಿಟೆಡ್ ಕಂಪನಿಯು ಈ ತಿಂಗಳ 24 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಿದೆ.

ಹೆಸರು ಬದಲಾವಣೆ: ಐಡಿಯಾ ಸೆಲ್ಯುಲರ್ ಲಿಮಿಟೆಡ್ ಕಂಪನಿಯ ಹೆಸರು ವೊಡಾಫೋನ್ ಐಡಿಯಾ ಲಿಮಿಟೆಡ್ ಎಂದು ಈ ತಿಂಗಳ 19 ರಿಂದ ಬದಲಾಗಲಿದೆ.ರಾಜ್ ಆಗ್ರೋ ಮಿಲ್ಸ್ ಲಿಮಿಟೆಡ್ ಕಂಪನಿಯ ಹೆಸರು ಪಾವೋಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಬದಲಾಗಿದೆ.

(ಮೊ: 9886313380, ಸಂಜೆ 4.30 ರನಂತರ)

ವಾರದ ಮುನ್ನೋಟ

ಈ ವಾರದ ಷೇರುಪೇಟೆಯ ವಹಿವಾಟಿನ ಮೇಲೆಯೂ ಜಾಗತಿಕ ವಿದ್ಯಮಾನಗಳು ಹೆಚ್ಚಿನ ಪ್ರಭಾವ ಬೀರಲಿವೆ.

ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರವು ದೇಶದ ಷೇರುಪೇಟೆಗಳಲ್ಲಿ ಬಂಡವಾಳ ಹೂಡಿಕೆಯನ್ನು ಕಡಿಮೆ ಮಾಡುತ್ತಿದೆ. ಇನ್ನು, ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ, ವಿದೇಶಿ ಬಂಡವಾಳ ಹೂಡಿಕೆಯೂ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ.

ಮೊಹರಂ ಪ್ರಯುಕ್ತ ಗುರುವಾರ ಷೇರುಪೇಟೆಗೆ ರಜೆ. ಹೀಗಾಗಿ ಈ ವಾರವೂ ನಾಲ್ಕು ದಿನ ಮಾತ್ರ ವಹಿವಾಟು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.