ADVERTISEMENT

ಷೇರು ಮಾರುಕಟ್ಟೆ ಹೂಡಿಕೆ ಏಕೆ?

ಶರತ್ ಎಂ.ಎಸ್.
Published 11 ಜನವರಿ 2021, 19:31 IST
Last Updated 11 ಜನವರಿ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಅಯ್ಯೋ, ಸ್ಟಾಕ್ ಮಾರ್ಕೆಟ್ ಸಹವಾಸ ಬೇಡಪ್ಪಾ, ಅಲ್ಲಿ ಹೂಡಿಕೆ ಮಾಡಿದ್ರೆ ಇರೋ ಹಣವನ್ನೆಲ್ಲಾ ಕಳೆದುಕೊಳ್ಳುತ್ತೇನೆ. ಷೇರು ಹೂಡಿಕೆ ಮಾಡೋಕೆ ನಾನೇನು ಸ್ಟಾಕ್ ಮಾರ್ಕೆಟ್ ತಜ್ಞನಾ? ಚಾರ್ಟೆಡ್ ಅಕೌಂಟೆಂಟಾ?’

ಹೀಗೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವು ದರಿಂದ ದೂರ ಉಳಿದಿರುವುದಕ್ಕೆ ತಮ್ಮದೇ ಸಮರ್ಥನೆಗಳನ್ನು ನೀಡುವ ಬಹಳಷ್ಟು ಜನರನ್ನು ನಾವು ನೋಡುತ್ತೇವೆ. ನಿಜ, ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಒಂದಿಷ್ಟು ರಿಸ್ಕ್ ಇದ್ದೇ ಇದೆ. ಹಾಗೆಂದಮಾತ್ರಕ್ಕೆ ಅದನ್ನೇ ನೆಪ ಮಾಡಿಕೊಂಡು ಷೇರು ಮಾರುಕಟ್ಟೆಯಿಂದ ದೂರ ಉಳಿಯುತ್ತೇವೆ ಎನ್ನುವುದು ಒಳ್ಳೆಯ ನಿರ್ಧಾರ ಆಗುವುದಿಲ್ಲ.

ರಿಸ್ಕ್ ಎನ್ನುವುದು ಪ್ರತಿಯೊಂದರಲ್ಲೂ ಇದೆ. ನಾವು ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದರೆ ಕೆಲಸ ಕಳೆದುಕೊಳ್ಳುವ ರಿಸ್ಕ್ ಇರುತ್ತದೆ, ಕೃಷಿ ಮಾಡುವಾಗ ಮಾರುಕಟ್ಟೆ ಲೆಕ್ಕಾಚಾರಗಳನ್ನು ಅರಿತು ಮುನ್ನಡೆಯದಿದ್ದರೆ ಬೆಲೆ ಕುಸಿತದ ರಿಸ್ಕ್ ಎದುರಿಸಬೇಕಾಗುತ್ತದೆ, ಬಿಸಿನೆಸ್ ಮಾಡುವಾಗ ಸರಿಯಾದ ಯೋಜನೆ ಇಲ್ಲದೆ ಮುಂದೆ ಸಾಗಿದರೆ ನಷ್ಟದ ರಿಸ್ಕ್ ಇರುತ್ತದೆ. ಇದೇ ಬಗೆಯ ಲೆಕ್ಕಾಚಾರ ಷೇರು ಮಾರುಕಟ್ಟೆಗೂ ಅನ್ವಯಿಸುತ್ತದೆ. ಸರಿಯಾದ ಅರಿವಿಲ್ಲದೆ ಯಾರದ್ದೋ ಮಾತು ಕೇಳಿ ಹೂಡಿಕೆ ಮಾಡಲು ಮುಂದಾದರೆ ಷೇರು ಮಾರುಕಟ್ಟೆಯಲ್ಲೂ ಹೆಚ್ಚು ರಿಸ್ಕ್ ಇರುತ್ತದೆ. ಆದರೆ ಅರಿತು ಹೂಡಿಕೆ ಮಾಡಿದರೆ ಷೇರು ಮಾರುಕಟ್ಟೆ ನಿಮ್ಮ ಪಾಲಿಗೆ ಸಂಪತ್ತು ಸೃಷ್ಟಿಸುವ ಕೇಂದ್ರವಾಗುತ್ತದೆ.

ADVERTISEMENT

ಅರಿತು ಹೂಡಿಕೆ ಮಾಡಿದವರು ಇಲ್ಲಿ ಗಳಿಸಿದ್ದಾರೆ. ಭಾರತದ ವಾರನ್ ಬಫೆಟ್ ಎಂದು ಕರೆಸಿಕೊಳ್ಳುವ ರಾಕೇಶ್ ಜುನ್‌ಜುನ್‌ವಾಲಾ ಅವರು ಹೂಡಿಕೆ ಆರಂಭಿಸಿದ್ದು ₹ 5 ಸಾವಿರದಿಂದ. ಇವತ್ತು ಅವರ ಹೂಡಿಕೆಯ ಒಟ್ಟು ಮೌಲ್ಯ ಸುಮಾರು ₹ 15,000 ಕೋಟಿ. ತಂದೆ ತೀರಿಕೊಂಡಾಗ ವಿಜಯ್ ಕೇಡಿಯಾ ಅವರ ವಯಸ್ಸು 18 ವರ್ಷ. ತಮ್ಮ ಕುಟುಂಬಕ್ಕೆ ನೆರವಾಗಲು ಕೊಲ್ಕತ್ತಾ ಮೂಲದ ವಿಜಯ್ ₹ 35,000ದೊಂದಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಮುಂದಾದರು. ಇವತ್ತು ಅವರ ಒಟ್ಟು ಹೂಡಿಕೆ ಮೌಲ್ಯ ₹ 350 ಕೋಟಿಗೂ ಹೆಚ್ಚು. ಅರಿತು ಹೂಡಿಕೆ ಮಾಡಿದ ಇಂತಹ ಸಾವಿರಾರು ಮಂದಿ ಷೇರು ಮಾರುಕಟ್ಟೆಯಲ್ಲಿ ಒಳ್ಳೆಯ ಹಣ ಗಳಿಸಿದ ಉದಾಹರಣೆಗಳಿವೆ.

ಕನಸುಗಳನ್ನು ಈಡೇರಿಸಿಕೊಳ್ಳಲು ದೊಡ್ಡ ಮೊತ್ತದ ಹಣ ಬೇಕು. ಸ್ವಂತ ಮನೆ ಕಟ್ಟಿಸಬೇಕು, ಕಾರು ಕೊಳ್ಳಬೇಕು, ವಿದೇಶ ಪ್ರಯಾಣ ಮಾಡಬೇಕು, ಬಿಸಿನೆಸ್ ಶುರು ಮಾಡಬೇಕು, ವಿದೇಶದಲ್ಲಿ ಅಧ್ಯಯನಕ್ಕೆ ತೆರಳಬೇಕು... ಹೀಗೆ ಪ್ರತೀ ವ್ಯಕ್ತಿಗೂ ಹತ್ತಾರು ಕನಸುಗಳಿರುತ್ತವೆ. ಈ ಕನಸುಗಳ ಜತೆಗೆ ಒಂದಿಷ್ಟು ಹೊಣೆಗಳಿರುತ್ತವೆ. ಮನೆಯ ಬಾಡಿಗೆ, ಮಕ್ಕಳ ಶಾಲೆಯ ಶುಲ್ಕ, ವೈದ್ಯಕೀಯ ವೆಚ್ಚ, ದಿನಸಿ ಖರ್ಚು ಹೀಗೆ ಒಂದಿಷ್ಟು ಜವಾಬ್ದಾರಿಗಳನ್ನು ಎಲ್ಲರೂ ನಿಭಾಯಿಸಲೇಬೇಕಾಗುತ್ತದೆ. ಸಂಬಳ ಮಾತ್ರ ನೆಚ್ಚಿಕೊಂಡರೆ ಎಲ್ಲ ಕನಸುಗಳನ್ನೂ ಈಡೇರಿಸಿಕೊಳ್ಳಲು ಎಲ್ಲರಿಂದಲೂ ಆಗದು.

ಸಂಪತ್ತು ಸೃಷ್ಟಿ ಮತ್ತು ಷೇರು ಮಾರುಕಟ್ಟೆ ಹೂಡಿಕೆ

ನಿಮ್ಮ ಬಳಿ ₹ 50 ಸಾವಿರ ಹಣವಿದೆ ಎಂದಿಟ್ಟುಕೊಳ್ಳಿ. ಅದನ್ನು ನಿಶ್ಚಿತ ಠೇವಣಿಯಲ್ಲಿ ಇರಿಸಿದರೆ, ವರ್ಷಕ್ಕೆ ಶೇಕಡ 5ರಿಂದ ಶೇ 7ರಷ್ಟು ಬಡ್ಡಿ ಸಿಗುತ್ತದೆ. ಆದರೆ ಅದೇ ₹ 50 ಸಾವಿರವನ್ನು ಷೇರು ಮಾರುಕಟ್ಟೆಯಲ್ಲಿ, ಉತ್ತಮ ಕಂಪನಿಯೊಂದರಲ್ಲಿ ಹೂಡಿಕೆ ಮಾಡಿದರೆ ಕನಿಷ್ಠ ಶೇ 13ರಿಂದ ಶೇ 20ರಷ್ಟು ಲಾಭ ಸಿಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಮಾತ್ರ ಈ ರೀತಿ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.