ADVERTISEMENT

ವಾರದ ಗಳಿಕೆ ನುಂಗಿದ ಆ 30 ನಿಮಿಷ

ನರಸಿಂಹ ಬಿ
Published 10 ಫೆಬ್ರುವರಿ 2019, 20:00 IST
Last Updated 10 ಫೆಬ್ರುವರಿ 2019, 20:00 IST
   

ಪೇಟೆಯ ಲೆಕ್ಕಾಚಾರಗಳು ಯಾವಾಗ ಬೇಕಾದರೂ ತಲೆಕೆಳಗಾಗಬಹುದು ಎನ್ನುವುದಕ್ಕೆ ಶುಕ್ರವಾರದ ವಹಿವಾಟಿನಲ್ಲಿ 30 ನಿಮಿಷಗಳ ಅವಧಿಯಲ್ಲಾದ ಬೆಳವಣಿಗೆ ಸಾಕ್ಷಿ. ವಹಿವಾಟಿನ ಕಡೆಯ ಅರ್ಧ ಗಂಟೆಯಲ್ಲಿ ಪೇಟೆ ಮಾರಾಟದ ಒತ್ತಡಕ್ಕೆ ಸಿಲುಕಿ ಭಾರಿ ನಷ್ಟ ಅನುಭವಿಸಿತು. ಒಂದೇ ದಿನ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಕ್ರಮವಾಗಿ ಶೇ 1.14 ಮತ್ತು ಶೇ 1.15 ರಷ್ಟು ಕುಸಿತ ದಾಖಲಿಸಿದ್ದರಿಂದ ಹೂಡಿಕೆದಾರರ ಸಂಪತ್ತು ₹ 1.67 ಕೋಟಿಗಳಷ್ಟು ಕರಗಿತು. ಹೀಗಾಗಿ ವಾರದ ಅವಧಿಯಲ್ಲಿ ನಿಫ್ಟಿ ಶೇ 0.5 ರಷ್ಟು ಪ್ರಗತಿ ದಾಖಲಿಸಿದರೆ, ಸೆನ್ಸೆಕ್ಸ್ ಶೇ 0.2 ರಷ್ಟು ಏರಿಕೆಯನ್ನು ಮಾತ್ರ ಕಂಡಿತು.

ಟಾಟಾ ಮೋಟರ್ಸ್ ಮಹಾ ಕುಸಿತ: ಪ್ರಮುಖ ಕಂಪನಿಗಳ ತ್ರೈಮಾಸಿಕ ವರದಿಗಳು ಕೂಡ ಪೇಟೆಯ ಚಲನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದವು. ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್ ₹ 26,961 ಕೋಟಿ ನಷ್ಟ ಅನುಭವಿಸಿರುವ ಪರಿಣಾಮ ಕಂಪನಿಯ ಷೇರುಗಳು 2011 ರ ಅಕ್ಟೋಬರ್‌ನಲ್ಲಿದ್ದ ಕನಿಷ್ಠ ಮಟ್ಟಕ್ಕೆ ಕುಸಿದಿವೆ.

ಫಲಿತಾಂಶ ಹೊರಬೀಳುತ್ತಲೇ ಶೇ 17. 6 ರಷ್ಟು ಕುಸಿತ ದಾಖಲಾಗಿರುವುದರಿಂದ ನಿಫ್ಟಿಯಲ್ಲಿ ಈಗ ಪ್ರತಿ ಷೇರಿನ ಬೆಲೆ ₹ 150.15 ಕ್ಕೆ ಇಳಿದಿದೆ. ಭಾರತದ ಕಂಪನಿಯೊಂದು ತ್ರೈಮಾಸಿಕ ಅವಧಿಯಲ್ಲಿ ಭಾರಿ ನಷ್ಟ ಕಂಡಿರುವುದು ಹೂಡಿಕೆ
ದಾರರನ್ನು ಚಿಂತೆಗೀಡುಮಾಡಿದೆ.

ADVERTISEMENT

ದಿಕ್ಕು ತಪ್ಪಿಸುವ ವಿದ್ಯಮಾನ: ಕೆಲ ದಿನಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡಿರುವುದು ದಿಕ್ಕು ತಪ್ಪಿಸುವ ವಿದ್ಯಮಾನವಾಗಿದ್ದು , ಕೇವಲ 10 ರಿಂದ 15 ಕಂಪನಿಗಳು ಷೇರುಗಳು ಮಾತ್ರ ಮುಂಚೂಣಿಯಲ್ಲಿವೆ.

ಫಂಡ್ ಮ್ಯಾನೇಜರ್‌ಗಳು, ಹೂಡಿಕೆದಾರರು ಭಾರಿ ಒತ್ತಡದಲ್ಲಿದ್ದಾರೆ, ಈ ಹಿಂದೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಲು ಪೇಟೆಯಲ್ಲಿ ಪೂರಕ ವಾತಾವರಣವಿಲ್ಲ. ಮಿಡ್ ಕ್ಯಾಪ್ ಷೇರುಗಳು ಕೂಡ ನಕಾರಾತ್ಮಕ ಹಾದಿಯಲ್ಲೇ ಮುಂದುವರಿದಿದ್ದು ಸೂಚ್ಯಂಕ 2.3 ರಷ್ಟು ಕುಸಿದಿದೆ. ಅಮೆರಿಕ-ಚೀನಾ ನಡುವಣ ವ್ಯಾಪಾರ ಬಿಕ್ಕಟ್ಟು ಪರಿಹಾರವಾಗದಿರುವುದು ಮತ್ತು ಪೇಟೆಯಲ್ಲಿ ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಯುತ್ತಿರುವುದು ಅಸ್ಥಿರತೆಯ ವಾತಾವರಣ ಸೃಷ್ಟಿಸಿದೆ.

ಷೇರು ಮರು ಖರೀದಿ: ಕೋಲ್ ಇಂಡಿಯಾ ₹ 1,050 ಕೋಟಿ ಮೌಲ್ಯದ ಷೇರುಗಳ ಮರು ಖರೀದಿ ನಿರ್ಧಾರ ಪ್ರಕಟಿಸಿದೆ, ಪ್ರತಿ ಷೇರಿಗೆ ರೂ 235 ನೀಡುವುದಾಗಿ ತಿಳಿಸಿದೆ.

ಮುನ್ನೋಟ: ಈ ವಾರ ಸಗಟು ಬೆಲೆ ಸೂಚ್ಯಂಕ, ಗ್ರಾಹಕ ಬೆಲೆ ಸೂಚ್ಯಂಕ, ಜನವರಿಯ ವ್ಯಾಪಾರ ವಹಿವಾಟಿನ ಅಂಕಿ- ಅಂಶ, ಕೈಗಾರಿಕಾ ಉತ್ಪನ್ನದ ದತ್ತಾಂಶ ಸೇರಿ ಮಾರುಕಟ್ಟೆಯ ಪ್ರಮುಖ ಮಾನದಂಡಗಳ ಮಾಹಿತಿ ಲಭ್ಯವಾಗಲಿದೆ. ಸನ್‌ಫಾರ್ಮಾ, ಒಎನ್‌ಜಿಸಿ, ಕೋಲ್ ಇಂಡಿಯಾ, ಐಷರ್ ಮೋಟರ್ಸ್, ಹಿಂಡಾಲ್ಕೊ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಆರ್‌ಬಿಐ ಈಗಾಗಲೇ ಮಾಡಿರುವ ಬಡ್ಡಿ ದರ ಇಳಿಕೆಯು ಮಾರುಕಟ್ಟೆಗೆ ಪೂರಕವಾಗಿರಲಿದೆ.

ವಿಮೆ ಕಂಪನಿ ವಿರುದ್ಧ ದೂರು ಹೇಗೆ?

ಇನ್ಶೂರೆನ್ಸ್ ಕಂಪನಿ ಪಾಲಿಸಿ ಪಡೆದ ಮೇಲೆ ಸರಿಯಾದ ಸೇವೆ ನೀಡುತ್ತಿಲ್ಲ , ಕ್ಲೇಮ್ ಸೆಟಲ್‌ಮೆಂಟ್‌ ಮಾಡಲು ನಿರ್ಲಕ್ಷ್ಯ ಮಾಡುತ್ತಿದೆ ಎಂಬಿತ್ಯಾದಿ ಅಭಿಪ್ರಾಯ ನಿಮ್ಮದಾಗಿದ್ದಲ್ಲಿ ದೂರು ನೀಡಲು ಹಲವು ಮಾರ್ಗಗಳಿವೆ. ಜೀವ ವಿಮೆ (ಲೈಫ್ ಇನ್ಶೂರೆನ್ಸ್) ಕಂಪನಿಗಳಾಗಲಿ ಅಥವಾ ಸಾಮಾನ್ಯ (ಜನರಲ್) ಇನ್ಶೂರೆನ್ಸ್ ಕಂಪನಿಗಳಾಗಲಿ ದೂರು ನೀಡಲು ಯಾವುದೇ ಅಡೆತಡೆಯಿಲ್ಲ.

ದೂರು ಪರಿಹಾರ ಅಧಿಕಾರಿಗಳ ಮೊರೆ ಹೋಗಿ: ಇನ್ಶೂರೆನ್ಸ್ ಕಂಪನಿಯು ಸರಿಯಾದ ಸೇವೆ ನೀಡುತ್ತಿಲ್ಲ ಎಂದಾದಲ್ಲಿ ಆ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಯ ದೂರು ಪರಿಹಾರ ಅಧಿಕಾರಿಗಳ (ಗ್ರಿವೆನ್ಸ್ ರಿಡ್ರೆಸ್ಸಲ್ ಆಫೀಸರ್ಸ್) ಮೊರೆ ಹೋಗಬೇಕು.

ಅವರಿಗೆ ಲಿಖಿತ ರೂಪದಲ್ಲಿ ದೂರು ನೀಡಿ, ಪೂರಕ ದಾಖಲೆಗಳನ್ನು ಒದಗಿಸಬೇಕು. ದೂರು ನೀಡಿದ ಬಗ್ಗೆ ಅವರಿಂದ ಹಿಂಬರಹ ಪಡೆದುಕೊಳ್ಳಬೇಕು. ಹೀಗೆ ನೀಡಿದ ದೂರಿಗೆ 15 ದಿನಗಳ ಒಳಗಾಗಿ ಇನ್ಶೂರೆನ್ಸ್ ಕಂಪನಿ ಉತ್ತರಿಸಬೇಕು.

‘ಐಆರ್‌ಡಿಎಐ’ನಲ್ಲಿ ದೂರು ದಾಖಲಿಸಿ: ವಿಮಾ ಕಂಪನಿಯು ದೂರುಗಳನ್ನು ನಿವಾರಿಸದಿದ್ದರೆ ಅಥವಾ ಇನ್ಯೂರೆನ್ಸ್ ಕಂಪನಿ ನೀಡಿದ ಉತ್ತರ ನಿಮಗೆ ಸಮಾಧಾನ ತರದಿದ್ದರೆ ಐಆರ್‌ಡಿಎ, ಅಂದರೆ ಇನ್ಶೂರೆನ್ಸ್ ರೆಗ್ಯೂಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿಯ ಗ್ರಾಹಕ ವಿಭಾಗಕ್ಕೆ ನೀವು ದೂರು ನೀಡಬಹುದು.

ದೂರು ನೀಡಲು ಹಲವು ಆಯ್ಕೆ: ಟೋಲ್ ಫ್ರೀ ನಂಬರ್ 1800 4254 732 ಗೆ ಕರೆ ಮಾಡಿ ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ಇನ್ನಿತರ ಪ್ರಾದೇಶಕ ಭಾಷೆಗಳಲ್ಲಿ ದೂರು ದಾಖಲಿಸಬಹುದು.

ವಿವರವಾಗಿ ದೂರು ಬರೆದು ಇ- ಮೇಲ್ ವಿಳಾಸಕ್ಕೆ (complaints@irda.gov.in) ರವಾನಿಸಬಹುದು.
‘ಐಆರ್‌ಡಿಎಐ’ ಅಂತರ್ಜಾಲ ತಾಣದಲ್ಲಿನ ದೂರುಗಳ ವಿಭಾಗಕ್ಕೆ ಹೋಗಿ ದೂರು ಅರ್ಜಿಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಅಪ್‌ಲೋಡ್ ಮಾಡಬಹುದು.

‘ಐಆರ್‌ಡಿಎಐ’ದ ಸಮಗ್ರ ದೂರು ನಿರ್ವಹಣಾ ವ್ಯವಸ್ಥೆ (ಐಜಿಎಂಎಸ್) ಬಳಸಿ ದೂರು ನೀಡಲು (igms.irda.gov.in) ಲಾಗಿನ್ ಆಗಬೇಕು. ಲಾಗಿನ್ ಬಳಿಕ, ಮಾಹಿತಿ ಭರ್ತಿ ಮಾಡಿದಾಗ ಟೋಕನ್ ನಂಬರ್ ಲಭ್ಯವಾಗುತ್ತದೆ. ಅದರಿಂದ ದೂರಿನ ಸ್ಥಿತಿಗತಿ ಅರಿಯಲು ಸಾಧ್ಯ.

ಅಂಚೆ ಮೂಲಕ ದೂರು ಕಳುಹಿಸಲು ವಿಳಾಸ: ಜನರಲ್ ಮ್ಯಾನೇಜರ್, ಕನ್ಸುಮರ್ ಅಫೇರ್ಸ್ ಡಿಪಾರ್ಟ್‌ಮೆಂಟ್, ಇನ್ಶೂರೆನ್ಸ್ ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ, ಎಸ್ ವೈ. ನಂಬರ್. 115/1, ಫೈನಾನ್ಶಿಯಲ್ ಡಿಸ್ಟ್ರಿಕ್ಟ್, ನಾನಾಕ್ರಮಗುಡಾ, ಗಚ್ಚಿಬೌಲಿ , ಹೈದರಾಬಾದ್ – 500032.

ಇಷ್ಟಾದ ಮೇಲೂ ನಿಮಗೆ ನ್ಯಾಯ ದೊರಕಿಲ್ಲ ಎನಿಸಿದಲ್ಲಿ ಇನ್ಶೂರೆನ್ಸ್ ಒಂಬುಡ್ಸ್‌ಮನ್ ಅಥವಾ ಸಿವಿಲ್ ನ್ಯಾಯಾಲಯದ ಮೊರೆ ಹೋಗಬಹುದು.

(ಲೇಖಕ: ‘ಇಂಡಿಯನ್‌ಮನಿ ಡಾಟ್‌ಕಾಂ’ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.