ADVERTISEMENT

ಸೆನ್ಸೆಕ್ಸ್: ಸಾರ್ವಕಾಲಿಕ ದಾಖಲೆ

ಜಾಗತಿಕ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನ ಪ್ರಭಾವ

ಪಿಟಿಐ
Published 9 ನವೆಂಬರ್ 2020, 17:38 IST
Last Updated 9 ನವೆಂಬರ್ 2020, 17:38 IST
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ
ಷೇರುಪೇಟೆಯಲ್ಲಿ ಗೂಳಿ ಓಟ–ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈ ಷೇರುಪೇಟೆಯು ಸೋಮವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯನ್ನು ಸೃಷ್ಟಿಸಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದ ಉತ್ತೇಜನ ಪಡೆದ ಬಿಎಸ್‌ಇ, ವಹಿವಾಟಿನ ಅಂತ್ಯಕ್ಕೆ 42,597 ಅಂಶಗಳಿಗೆ ತಲುಪಿದೆ. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 704 ಅಂಶಗಳಷ್ಟು ಏರಿಕೆ ಕಂಡಿದೆ.

ಜೋ ಬೈಡೆನ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರದಲ್ಲಿ ಆರ್ಥಿಕತೆಗೆ ಉತ್ತೇಜನ ನೀಡಲು ಹೆಚ್ಚಿನ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯು ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು. ದಿನದ ವಹಿವಾಟಿನ ನಡುವೆ ಸೆನ್ಸೆಕ್ಸ್ 42,645 ಅಂಶಗಳಿಗೆ ಏರಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ (ಎನ್‌ಎಸ್‌ಇ) ಕೂಡ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 12,461ಕ್ಕೆ ವಹಿವಾಟು ಅಂತ್ಯಗೊಳಿಸಿದೆ. ಇಂಡಸ್ ಇಂಡ್ ಬ್ಯಾಂಕ್‌ನ ಷೇರು ಮೌಲ್ಯ ಗರಿಷ್ಠ ಶೇಕಡ 4.95ರಷ್ಟು ಏರಿಕೆ ಕಂಡಿತು. ಭಾರ್ತಿ ಏರ್‌ಟೆಲ್‌, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪವರ್ ಗ್ರಿಡ್, ಟಾಟಾ ಸ್ಟೀಲ್, ಟೈಟಾನ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಕೂಡ ಏರಿಕೆ ದಾಖಲಿಸಿದವು.

ADVERTISEMENT

ಐಟಿಸಿ, ಮಾರುತಿ ಮತ್ತು ಬಜಾಜ್ ಫಿನ್‌ಸರ್ವ್‌ ಕಂಪನಿಯ ಷೇರು ಮೌಲ್ಯದಲ್ಲಿ ಮಾತ್ರ ಕುಸಿತ ಕಂಡುಬಂತು. ‘ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿದ್ದು ಸೂಚ್ಯಂಕಗಳನ್ನು ಎತ್ತರಕ್ಕೆ ಒಯ್ದವು. ದೇಶಿ ಮಾರುಕಟ್ಟೆಗಳಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳು ಕೂಡ ಸೂಚ್ಯಂಕ ಏರುಗತಿಯಲ್ಲಿ ಸಾಗುವಂತೆ ಮಾಡಿದವು’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

‘ಅರ್ಥ ವ್ಯವಸ್ಥೆಗೆ ಶಕ್ತಿ ತುಂಬಲು ಇನ್ನಷ್ಟು ಕ್ರಮಗಳ ಅಗತ್ಯ ಇದೆ ಎಂಬುದು ನಮ್ಮ ನಂಬಿಕೆ. ಈ ವಿಚಾರವಾಗಿ ಸರ್ಕಾರವು ಶೀಘ್ರದಲ್ಲಿಯೇ ಘೋಷಣೆ ಮಾಡಬಹುದು. ಅದು ನಮ್ಮ ಮಾರುಕಟ್ಟೆಗಳಲ್ಲಿ ಹೆಚ್ಚಿನ ಚೇತರಿಕೆಗೆ ಕಾರಣವಾಗಬಹುದು’ ಎಂದು ಅವರು ಹೇಳಿದರು. ಶಾಂಘೈ, ಹಾಂಗ್‌ಕಾಂಗ್‌, ಸೋಲ್ ಮತ್ತು ಟೋಕಿಯೊ ಷೇರು ಮಾರುಕಟ್ಟೆಗಳು ಕೂಡ ಏರಿಕೆ ದಾಖಲಿಸಿದವು.

ಸಂಪತ್ತು ₹ 2 ಲಕ್ಷ ಕೋಟಿ ಹೆಚ್ಚಳ

ನವದೆಹಲಿ (ಪಿಟಿಐ): ಸೋಮವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 2 ಲಕ್ಷ ಕೋಟಿಗಳಷ್ಟು ಹೆಚ್ಚಳ ಕಂಡಿತು.

‘ಸಕಾರಾತ್ಮಕ ವಹಿವಾಟು ನಡೆದಿದ್ದಕ್ಕೆ ಮುಖ್ಯ ಕಾರಣ ಜೋ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾಗಿ ಚುನಾಯಿತ ಆಗಿರುವುದು’ ಎಂದು ರೆಲಿಗೇರ್ ಬ್ರೋಕಿಂಗ್‌ನ ಸಂಶೋಧನಾ ವಿಭಾಗದ ಉಪಾಧ್ಯಕ್ಷ ಅಜಿತ್ ಮಿಶ್ರಾ ಹೇಳಿದರು.

ವಿದೇಶಿ ಹೂಡಿಕೆದಾರರಿಂದ ಮಾರುಕಟ್ಟೆಗೆ ಹಣ ಹರಿದು ಬರುತ್ತಿರುವುದು ಹಾಗೂ ಅಮೆರಿಕದಲ್ಲಿ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಘೋಷಣೆ ಆಗಲಿದೆ ಎಂಬ ಭರವಸೆ ಕೂಡ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಯಲು ಕಾರಣ ಎಂದು ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮಿತ್ ಬಗಾದಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.