ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ 75 ದೇಶಗಳಿಗೆ ವಿಧಿಸಿರುವ ಪ್ರತೀಕಾರ ಸುಂಕಗಳ ಮೇಲೆ 90 ದಿನಗಳ ವಿರಾಮ ಘೋಷಿಸಿದ ನಂತರ ಗುರುವಾರ ಏಷ್ಯಾದ ಷೇರು ಮಾರುಕಟ್ಟೆಗಳು ಏರಿಕೆ ಕಂಡವು. ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ನಡುವೆ ಈ ನಿರ್ಧಾರವು ಜಾಗತಿಕ ಹೂಡಿಕೆದಾರರಿಗೆ ಸ್ವಲ್ಪ ಸಮಾಧಾನ ತಂದಿದೆ ಎಂದು ವರದಿ ತಿಳಿಸಿದೆ.
ಜಪಾನ್‌ನ ನಿಕ್ಕಿ 225 ಸೂಚ್ಯಂಕವು ಶೇ 8.34ಕ್ಕಿಂತ ಹೆಚ್ಚು ಜಿಗಿದರೆ, ತೈವಾನ್‌ನ ಸೂಚ್ಯಂಕವು ಶೇ 9ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ದಕ್ಷಿಣ ಕೊರಿಯಾದ ಕಾಸ್ಪಿ ಸೂಚ್ಯಂಕವು ಶೇ 5ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ.
ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ಶೇ 4ರಷ್ಟು ಏರಿಕೆಯಾಗಿತ್ತು. ಆದರೆ, ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಸಾರ್ವಜನಿಕ ರಜಾದಿನವಾದ್ದರಿಂದ ಭಾರತೀಯ ಷೇರು ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.
ಕೆಲವು ದೇಶಗಳಿಗೆ ತಾತ್ಕಾಲಿಕ ಪರಿಹಾರ ದೊರೆತರೂ, ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಯುದ್ಧ ಉಲ್ಬಣಗೊಳ್ಳುತ್ತಲೇ ಇದೆ.
ಬುಧವಾರ ಅಮೆರಿಕ ಅಧ್ಯಕ್ಷ ಟ್ರಂಪ್, ಚೀನಾದ ಸರಕುಗಳ ಮೇಲಿನ ಸುಂಕವನ್ನು ಶೇ 125ಕ್ಕೆ ಹೆಚ್ಚಿಸಿದ್ದಾರೆ. ಏಪ್ರಿಲ್ 10ರಿಂದ ಚೀನಾ, ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಶೇ 34ರಿಂದ ಶೇ84ಕ್ಕೆ ಹೆಚ್ಚಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಅದೇ ಸಮಯದಲ್ಲಿ, ಪ್ರಸ್ತುತ ಅಮೆರಿಕದೊಂದಿಗೆ ವ್ಯಾಪಾರ ಮಾತುಕತೆ ನಡೆಸುತ್ತಿರುವ 75 ದೇಶಗಳಿಗೆ ಸುಂಕವನ್ನು ಕಡಿಮೆ ಮಾಡುವುದಾಗಿ ಟ್ರಂಪ್ ಹೇಳಿದ್ದಾರೆ. 90 ದಿನಗಳ ವಿರಾಮ ಮತ್ತು ಕಡಿಮೆ ಪರಸ್ಪರ ಸುಂಕ ನೀತಿ ರೂಪಿಸುವುದಾಗಿ ಹೇಳಿದ್ದಾರೆ. ಭಾರತವೂ ಈ ದೇಶಗಳಲ್ಲಿ ಒಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.