ADVERTISEMENT

ಬೋನಸ್ ಷೇರು ಎಂಬ ದುಡ್ಡಿನ ಬೆಳೆ!

ಶರತ್ ಎಂ.ಎಸ್.
Published 2 ಜನವರಿ 2021, 20:40 IST
Last Updated 2 ಜನವರಿ 2021, 20:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಷೇರುದಾರರಿಗೆ ಕಂಪನಿ ಬೋನಸ್ ಷೇರು ನೀಡಿತು’ ಎನ್ನುವ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಈ ಬೋನಸ್ ಷೇರು ಎಂದರೆ ಏನು? ಯಾವೆಲ್ಲ ಕಂಪನಿಗಳು ಸಾಮಾನ್ಯವಾಗಿ ಬೋನಸ್ ಷೇರುಗಳನ್ನು ನೀಡುತ್ತವೆ? ಬೋನಸ್ ಷೇರುಗಳ ಬೆಳವಣಿಗೆ ಹೇಗಾಗುತ್ತದೆ?

ಬೋನಸ್ ಷೇರು ಎಂದರೇನು?: ಕಂಪನಿಯು ತನ್ನ ಷೇರುದಾರರಿಗೆ, ಹೂಡಿಕೆದಾರರಿಗೆ ಉಚಿತವಾಗಿ ನೀಡುವ ಹೆಚ್ಚುವರಿ ಷೇರುಗಳನ್ನು ಬೋನಸ್ ಷೇರುಗಳು ಎಂದು ಕರೆಯಬಹುದು. ಸಾಮಾನ್ಯವಾಗಿ ಅನುಪಾತ (ರೇಷ್ಯೊ) ಲೆಕ್ಕಾಚಾರದಲ್ಲಿ ಬೋನಸ್ ಷೇರುಗಳನ್ನು ನೀಡಲಾಗುತ್ತದೆ. ಉದಾಹರಣೆಗೆ 1:1, 3:1 ಹೀಗೆ ಬೇರೆ ಬೇರೆ ಅನುಪಾತಗಳಲ್ಲಿ ಷೇರುಗಳನ್ನು ನೀಡಲಾಗುತ್ತದೆ. ಅಂದರೆ ಕಂಪನಿ ಮಾಡುವ ನಿರ್ಧಾರದ ಆಧಾರದ ಮೇಲೆ ಪ್ರತಿ ಒಂದು ಷೇರಿಗೆ ಒಂದು ಹೆಚ್ಚುವರಿ ಷೇರು, ಪ್ರತಿ ಒಂದು ಷೇರಿಗೆ 3 ಹೆಚ್ಚುವರಿ ಷೇರುಗಳು... ಹೀಗೆ ಅನುಪಾತಕ್ಕೆ ಅನುಗುಣವಾಗಿ ಬೋನಸ್ ಷೇರುಗಳ ಸಂಖ್ಯೆ ನಿರ್ಧಾರವಾಗುತ್ತದೆ.

ಬೋನಸ್ ಷೇರುಗಳು ಸಿಗಬೇಕಾದರೆ ಯಾವಾಗ ಷೇರುಗಳನ್ನು ಖರೀದಿಸಿರಬೇಕು?: ಕಂಪನಿಯು ರೆಕಾರ್ಡ್ ಡೇಟ್ (ನಿಗದಿತ ದಿನಾಂಕ) ಗೊತ್ತುಪಡಿಸುತ್ತದೆ. ಆ ರೆಕಾರ್ಡ್ ಡೇಟ್‌ನ ಒಳಗಾಗಿ ಷೇರುಗಳು ನಿಮ್ಮ ಡಿ-ಮ್ಯಾಟ್ ಖಾತೆಯಲ್ಲಿ ಇದ್ದರೆ ಮಾತ್ರ ನಿಮಗೆ ಬೋನಸ್ ಷೇರುಗಳು ಸಿಗುತ್ತವೆ.

ADVERTISEMENT

ಬೋನಸ್ ಷೇರು ಸಿಕ್ಕ ತಕ್ಷಣ ನಿಮ್ಮ ಹೂಡಿಕೆಯ ಮೌಲ್ಯ ವೃದ್ಧಿಸುವುದೇ? ಬೋನಸ್ ಷೇರುಗಳ ಮೌಲ್ಯ ತಕ್ಷಣದಲ್ಲೇ ವೃದ್ಧಿ ಆಗುವುದಿಲ್ಲ. ಉದಾಹರಣೆಗೆ, ಷೇರೊಂದರ ಮಾರುಕಟ್ಟೆ ಬೆಲೆ ₹ 1,000 ಇದೆ ಎಂದಿಟ್ಟುಕೊಳ್ಳಿ. ನಿಮಗೆ ಬೋನಸ್ ಷೇರಿನ ಪರಿಷ್ಕೃತ ಬೆಲೆ (ಹೊಸ ಬೆಲೆ) ₹ 500 ಆಗುತ್ತದೆ. ಅದರೆ ₹ 500 ಮುಖಬೆಲೆಯ ಎರಡು ಷೇರುಗಳು ನಿಮ್ಮದಾಗುತ್ತವೆ, ಅಷ್ಟೆ.

ಹಾಗಾದರೆ ಬೋನಸ್ ಷೇರುಗಳಿಂದ ಯಾವುದೇ ಲಾಭವಿಲ್ಲವೇ?: ಖಂಡಿತವಾಗಿಯೂ ದೀರ್ಘಾವಧಿಯಲ್ಲಿ ಲಾಭವಿದೆ. ಸಾಮಾನ್ಯವಾಗಿ ಷೇರಿನ ಬೆಲೆ ಹೆಚ್ಚಳವಾದಾಗ ಹೊಸ ಹೂಡಿಕೆದಾರರು ಹೆಚ್ಚಾಗಿ ಅದರ ಖರೀದಿಗೆ ಮುಂದಾಗುವುದಿಲ್ಲ. ಯಾವಾಗಲೂ ಷೇರಿನ ಬೆಲೆ ಕಡಿಮೆ ಇದ್ದಾಗಲೇ ಖರೀದಿಸಬೇಕು ಎಂಬ ಧೋರಣೆ ಹೂಡಿಕೆದಾರರಿಗೆ ಇರುತ್ತದೆ. ಆದರೆ ಹೂಡಿಕೆ ಮಾಡುವಾಗ ಷೇರಿನ ಬೆಲೆಯನ್ನು ಮಾತ್ರವೇ ಅಲ್ಲದೆ, ಇನ್ನೂ ಹಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ, ಕಂಪನಿಯೊಂದು 9:1ರ ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತದೆ ಎಂದು ಭಾವಿಸೋಣ. ಈ ವೇಳೆ ನಿಮ್ಮ ಬಳಿ ಇದ್ದ ಒಂದು ಷೇರಿನ ಜತೆಗೆ ಹೆಚ್ಚುವರಿಯಾಗಿ 9 ಷೇರುಗಳು ಸಿಗುತ್ತವೆ. ಈ ಸಂದರ್ಭದಲ್ಲಿ ಷೇರಿನ ಮಾರುಕಟ್ಟೆ ಬೆಲೆ ₹ 1000 ಇದ್ದರೆ, ಷೇರಿನ ಪರಿಷ್ಕೃತ ಬೆಲೆ (ಹೊಸ ಬೆಲೆ) ₹ 100 ಆಗುತ್ತದೆ. ಷೇರಿನ ಬೆಲೆ ಕಡಿಮೆ ಆಗಿದೆ ಎಂದು, ಹೆಚ್ಚಿನ ಜನ ಅದನ್ನು ಖರೀದಿಸಲು ಮುಂದಾದಾಗ ಅದರ ಮೌಲ್ಯ ಮತ್ತೆ ವೃದ್ಧಿಯಾಗುತ್ತದೆ.

1993ರಲ್ಲಿ ಇನ್ಫೊಸಿಸ್ ಕಂಪನಿಯಲ್ಲಿ ಹೂಡಿದ್ದ ₹ 950ರ ಈಗ ₹ 61.44 ಲಕ್ಷ!: 1993ರಲ್ಲಿ ಇನ್ಫೊಸಿಸ್‌ನ ಪ್ರತಿ ಷೇರಿನ ಬೆಲೆ ₹ 95 ಇತ್ತು. ಆಗ ನಿಮ್ಮ ತಂದೆ–ತಾಯಿ ₹ 950 ನೀಡಿ 10 ಷೇರುಗಳನ್ನು ಖರೀದಿಸಿದ್ದರು ಎಂದಿಟ್ಟುಕೊಳ್ಳಿ. ಇನ್ಫೊಸಿಸ್ ಈವರೆಗೆ ಎಂಟಕ್ಕಿಂತ ಹೆಚ್ಚು ಬಾರಿ ತನ್ನ ಹೂಡಿಕೆದಾರರಿಗೆ ಬೋನಸ್ ಷೇರುಗಳನ್ನು ನೀಡಿದೆ. ಈಗ ಇನ್ಫೊಸಿಸ್‌ ಷೇರಿನ ಮಾರುಕಟ್ಟೆ ಬೆಲೆ ₹ 1,200ರ ಆಸುಪಾಸಿನಲ್ಲಿ ಇದೆ. ಅಂದರೆ ಬೋನಸ್ ಷೇರುಗಳ ಮೂಲಕ ಹೂಡಿಕೆದಾರ ಗಳಿಸಿದ ಒಟ್ಟು ಮೌಲ್ಯ ₹ 61.44 ಲಕ್ಷ.

1993ರಲ್ಲಿ ₹ 950ಕ್ಕೆ 10 ಷೇರುಗಳನ್ನು ಖರೀದಿಸಿದ್ದರೆ ಈಗ ಅದರ ಮೌಲ್ಯ ₹ 61.44 ಲಕ್ಷ: ಯಾವ ಕಂಪನಿ ಬೋನಸ್ ಷೇರು ನೀಡುತ್ತದೆ ಎಂಬುದನ್ನು ಪತ್ತೆ ಮಾಡುವುದು ಹೇಗೆ? ಕಂಪನಿ ಎಷ್ಟು ಲಾಭ ಗಳಿಸುತ್ತಿದೆ, ಕಂಪನಿ ತನ್ನ ಬಿಸಿನೆಸ್ ವಿಸ್ತರಣೆಯಲ್ಲಿ ಆಸಕ್ತಿ ಹೊಂದಿದೆಯಾ, ಅಥವಾ ಆ ಕಂಪನಿ ಸೀಮಿತ ಪ್ರಮಾಣದಲ್ಲಿ ವಹಿವಾಟು ವಿಸ್ತರಣೆಗೆ ಮನಸ್ಸು ಮಾಡಿದೆಯಾ ಎನ್ನುವ ಅಂಶಗಳ ಆಧಾರದಲ್ಲಿ ಯಾವುದೇ ಕಂಪನಿ ಬೋನಸ್ ಷೇರುಗಳನ್ನು ನೀಡುವುದೇ ಇಲ್ಲವೇ ಎಂಬುದು ಗೊತ್ತಾಗುತ್ತದೆ. ಸಾಮಾನ್ಯವಾಗಿ ಕಂಪನಿಯ ಪೂರ್ವಾಪರ ಗಮನಿಸಿದಾಗ ಈ ವಿಚಾರ ಗೊತ್ತಾಗಿಬಿಡುತ್ತದೆ. ಉದಾಹರಣೆಗೆ ಇನ್ಫೊಸಿಸ್ ಹೆಚ್ಚೆಚ್ಚು ಲಾಭಾಂಶ (ಡಿವಿಡೆಂಟ್ ) ಮತ್ತು ಬೋನಸ್ ಷೇರುಗಳನ್ನು ಹೂಡಿಕೆದಾರರಿಗೆ ನೀಡಿದೆ. ಆದರೆ ಗೂಗಲ್ ತನ್ನ ಹೂಡಿಕೆದಾರರಿಗೆ ಯಾವಾಗಲೂ ಬೋನಸ್ ಷೇರುಗಳನ್ನು ನೀಡಿಲ್ಲ. ಗೂಗಲ್ ಬಂದ ಲಾಭದಿಂದ ಹೆಚ್ಚೆಚ್ಚು ವಹಿವಾಟು ವಿಸ್ತರಣೆ ಮಾಡಿ ಷೇರುಗಳ ಬೆಲೆ ಮತ್ತಷ್ಟು ಹೆಚ್ಚಳವಾಗುವಂತೆ ನೋಡಿಕೊಳ್ಳುತ್ತಿದೆ. ಇದರಿಂದಲೂ ಹೂಡಿಕೆದಾರನಿಗೆ ಅನುಕೂಲವೇ ಇದೆ. ಒಟ್ಟಾರೆ ನಿಮಗೆ ಯಾವ ರೀತಿಯ ಅನುಕೂಲ ಬೇಕು ಎನ್ನುವುದಷ್ಟೇ ಇಲ್ಲಿ ಮುಖ್ಯ.

(ಲೇಖಕ ‘ಇಂಡಿಯನ್‌ಮನಿ.ಕಾಂ’ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.