ADVERTISEMENT

Union Budget 2023: ಬಜೆಟ್‌ಗೆ ಷೇರುಪೇಟೆ ಮಿಶ್ರ ಪ್ರತಿಕ್ರಿಯೆ

ಪಿಟಿಐ
Published 1 ಫೆಬ್ರುವರಿ 2023, 16:02 IST
Last Updated 1 ಫೆಬ್ರುವರಿ 2023, 16:02 IST
   

ಮುಂಬೈ: ಬುಧವಾರ ಮಂಡನೆಯಾದ ಕೇಂದ್ರ ಬಜೆಟ್‌ಗೆ ದೇಶದ ಷೇರುಪೇಟೆಗಳು ಮಿಶ್ರ ‍ಪ್ರತಿಕ್ರಿಯೆ ನೀಡಿವೆ. ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ದರ ಕುರಿತು ಯಾವ ತೀರ್ಮಾನ ಕೈಗೊಳ್ಳಬಹುದು ಎಂಬ ಬಗ್ಗೆಯೂ ಹೂಡಿಕೆದಾರರು ಗಮನ ಇರಿಸಿದ್ದರು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 158 ಅಂಶ ಏರಿಕೆ ಕಂಡಿದೆ. ದಿನದ ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ 1,223 ಅಂಶಗಳಷ್ಟು ಏರಿಕೆ ಕಂಡಿತ್ತು. ಆದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 45 ಅಂಶ ಇಳಿಕೆ ಕಂಡಿದೆ.

‘ಬೇಡಿಕೆ ಹೆಚ್ಚಿಸುವುದಕ್ಕೆ ಆದ್ಯತೆ ನೀಡಿರುವ ಹಾಗೂ ಬಂಡವಾಳ ವೆಚ್ಚವನ್ನು ಹೆಚ್ಚಿಸುವ ಈ ಬಜೆಟ್‌ ಮಾರುಕಟ್ಟೆಯಲ್ಲಿ ಆಶಾವಾದವನ್ನು ಹೆಚ್ಚು ಮಾಡಿತ್ತು. ಆದರೆ ಅದಾನಿ ಸಮೂಹಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಹಾಗೂ ಫೆಡರಲ್‌ ರಿಸರ್ವ್‌ ಸಭೆಯ ಕಡೆಗಿನ ಗಮನವು ಮಾರುಕಟ್ಟೆಯಲ್ಲಿನ ತೇಜಿ ಸ್ಥಿತಿಯನ್ನು ತಗ್ಗಿಸಿದವು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

‘ಜೀವ ವಿಮಾ ವಲಯದ ಕಂಪನಿಗಳ ಷೇರುಗಳು ಹೆಚ್ಚು ಕುಸಿದವು. ಏಕೆಂದರೆ, ಹೊಸ ತೆರಿಗೆ ದರ ಪದ್ಧತಿಗೆ ಹೆಚ್ಚಿನ ಆದ್ಯತೆ ಸಿಕ್ಕಿರುವುದರಿಂದ ತೆರಿಗೆ ಉಳಿತಾಯಕ್ಕೆ ಜೀವ ವಿಮೆ ಖರೀದಿಸುವುದು ಹೆಚ್ಚು ಆಕರ್ಷಕವಾಗಿ ಇರುವುದಿಲ್ಲ ಎಂಬುದು ಇದಕ್ಕೆ ಕಾರಣ’ ಎಂದು ಅವರು ಹೇಳಿದ್ದಾರೆ.

‘ಬಂಡವಾಳ ವೃದ್ಧಿ ತೆರಿಗೆ ವಿಚಾರದಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಇರುವುದು ಮಾರುಕಟ್ಟೆಗಳ ಪಾಲಿಗೆ ಒಳ್ಳೆಯ ವಿಚಾರ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ನ ಸಂಶೋಧನಾ ವಿಶ್ಲೇಷಕ ಸಂಜಯ್ ಮೂರ್ಜಾನಿ ಹೇಳಿದ್ದಾರೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.