ADVERTISEMENT

ಮಾರಾಟದ ಒತ್ತಡ: ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಪಿಟಿಐ
Published 24 ನವೆಂಬರ್ 2021, 13:45 IST
Last Updated 24 ನವೆಂಬರ್ 2021, 13:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಿಲಯನ್ಸ್‌, ಇನ್ಫೊಸಿಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರ ಇಳಿಕೆ ಕಾಣುವಂತಾಯಿತು.

ದಿನದ ವಹಿವಾಟಿನ ಬಹುತೇಕ ಅವಧಿಯಲ್ಲಿ ಸಕಾರಾತ್ಮಕ ಚಲನೆ ಕಂಡುಬಂದಿತ್ತು. ಆದರೆ, ಅಂತಿಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 323 ಅಂಶ ಇಳಿಕೆ ಕಂಡು 58,341 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 88 ಅಂಶ ಇಳಿಕೆ ಕಂಡು 17,415ಕ್ಕೆ ತಲುಪಿತು.

ಮಾರುತಿ, ಟೆಕ್‌ ಮಹೀಂದ್ರ, ಐಟಿಸಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಲ್‌ಆ್ಯಂಡ್‌ಟಿ, ಅಲ್ಟ್ರಾಟೆಕ್‌ ಸಿಮೆಂಟ್‌ ಮತ್ತು ಎಚ್‌ಡಿಎಫ್‌ಸಿ ಷೇರುಗಳ ಮೌಲ್ಯವು ಶೇಕಡ 2.62ರವರೆಗೆ ಇಳಿಕೆ ಆಗಿದೆ.

ADVERTISEMENT

ತೈಲ ಮತ್ತು ಅನಿಲ ಹಾಗೂ ವಾಹನ ವಲಯದ ಷೇರುಗಳ ಮೌಲ್ಯ ಇಳಿಕೆಯು ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆಯನ್ನು ಮರೆಮಾಚಿದವು. ಚಳಿಗಾಲದ ಅಧಿವೇಶನದಲ್ಲಿ ಬ್ಯಾಂಕಿಂಗ್‌ ಕಾಯ್ದೆಗೆ ತಿದ್ದುಪಡಿ ತಂದು, ಸರ್ಕಾರಿ ವಲಯದ ಎರಡು ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಡೆಯಿಂದಾಗಿ ಬ್ಯಾಂಕಿಂಗ್‌ ವಲಯವು ಹೆಚ್ಚು ಗಮನ ಸೆಳೆಯಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಮೂರು ದಿನಗಳಿಂದ ಇಳಿಮುಖವಾಗಿದ್ದ ರೂಪಾಯಿ ಮೌಲ್ಯವು ಬುಧವಾರ 2 ಪೈಸೆ ಏರಿಕೆ ಕಂಡು ಒಂದು ಡಾಲರ್‌ಗೆ ₹ 74.40ರಂತೆ ವಿನಿಮಯಗೊಂಡಿತು. ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.24ರಷ್ಟು ಇಳಿಕೆ ಕಂಡು ಒಂದು ಬ್ಯಾರಲ್‌ಗೆ 82.11 ಡಾಲರ್‌ಗೆ ತಲುಪಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.