ADVERTISEMENT

ಮಿಡ್‌, ಸ್ಮಾಲ್‌ ಕ್ಯಾಪ್‌: ಅತಿ ನಿರೀಕ್ಷೆ ಬೇಡ

ವಿಜಯ್ ಜೋಷಿ
Published 17 ಸೆಪ್ಟೆಂಬರ್ 2020, 19:31 IST
Last Updated 17 ಸೆಪ್ಟೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಮಲ್ಟಿಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಹೂಡಿಕೆಯನ್ನು ಎಲ್ಲೆಲ್ಲಿ, ಎಷ್ಟರ ಪ್ರಮಾಣದಲ್ಲಿ ಮಾಡಬೇಕು ಎಂಬ ವಿಚಾರವಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಈಚೆಗೆ ಹೊರಡಿಸಿರುವ ಸುತ್ತೋಲೆಯೊಂದು ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಏರುಗತಿಯಲ್ಲಿ ಸಾಗುವಂತೆ ಮಾಡಿದೆ.

ಸೆಬಿ ಈ ಸುತ್ತೋಲೆ ಹೊರಡಿಸಿದ್ದು ಸೆಪ್ಟೆಂಬರ್ 11ರಂದು. ಈ ಸುತ್ತೋಲೆ ಹೊರಬಿದ್ದ ನಂತರ ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕವು ಸರಿಸುಮಾರು 300 ಅಂಶಗಳ ಏರಿಕೆ ದಾಖಲಿಸಿದೆ. ಬಿಎಸ್‌ಇ ಸ್ಮಾಲ್‌ ಕ್ಯಾಪ್‌ ಸೂಚ್ಯಂಕವು ಸರಿಸುಮಾರು 630 ಅಂಶಗಳಷ್ಟು ಏರಿಕೆ ಕಂಡಿದೆ. ‘ಸೆಬಿ ನೀಡಿರುವ ಸೂಚನೆಯ ಪರಿಣಾಮವಾಗಿ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಕಂಪನಿಗಳ ಷೇರು ಮೌಲ್ಯದಲ್ಲಿ ಭಾರಿ ಏರಿಕೆ ಆಗಲಿದೆ, ಅವುಗಳಲ್ಲಿ ಹೂಡಿಕೆ ಮಾಡಲು ಇದು ಸಕಾಲ’ ಎಂಬ ಅಭಿಪ್ರಾಯ ಒಂದು ವಲಯದಿಂದ ವ್ಯಕ್ತವಾಗಿದೆ.

ಆದರೆ, ‘ಸ್ವಲ್ಪ ತಾಳಿ, ತಕ್ಷಣಕ್ಕೆ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಕಂಪನಿಗಳ ಮೇಲೆ ಹೂಡಿಕೆ ಬೇಡ’ ಎನ್ನುವ ಮಾತನ್ನು ಹಣಕಾಸು ಸಲಹೆಗಾರರು ನೀಡಿದ್ದಾರೆ. ಆ ಕಂಪನಿಗಳ ಷೇರು ಖರೀದಿಗೆ ಆತುರ ತೋರುವುದು ಬೇಡ, ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳ ಮೇಲೆ ಒಮ್ಮೆಗೇ ಹೂಡಿಕೆ ಹೆಚ್ಚಿಸುವುದು ಕೂಡ ಸರಿಯಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ.

ADVERTISEMENT

‘ಈಗಿರುವ ಮಲ್ಟಿಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳು ಹೆಚ್ಚಿನ ಪ್ರಮಾಣದ ಹೂಡಿಕೆಯನ್ನು ಲಾರ್ಜ್‌ಕ್ಯಾಪ್‌ ಕಂಪನಿಗಳ ಮೇಲೆ ಮಾಡಿವೆ. ಸೆಬಿ ಸೂಚನೆಯ ಪರಿಣಾಮವಾಗಿ ಮಲ್ಟಿಕ್ಯಾಪ್‌ ಫಂಡ್‌ಗಳಲ್ಲಿನ ಹಣದಲ್ಲಿ ಒಂದಿಷ್ಟು ಪಾಲನ್ನು ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಕಂಪನಿಗಳ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಎಲ್ಲವೂ ಮಾತಿನಲ್ಲಿ ಹೇಳಿದಷ್ಟು ಸರಳವಾಗಿಲ್ಲ’ ಎಂದು ಹೂಡಿಕೆ ಸಲಹೆಗಾರ ಬಸವರಾಜ ತೊಣಗಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ ಕಂಪನಿಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಹೆಚ್ಚು ಅಪಾಯ ಕೂಡ ಇದೆ. ಈ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಎಲ್ಲ ಮ್ಯೂಚುವಲ್‌ ಫಂಡ್‌ ಕಂಪನಿಗಳೂ ಸಿದ್ಧವಿರುವುದಿಲ್ಲ. ಹಾಗಾಗಿ, ಸುತ್ತೋಲೆಯಲ್ಲಿ ಇರುವ ಸೂಚನೆಯನ್ನು ಪಾಲಿಸಲು ಹೆಚ್ಚಿನ ಕಾಲಾವಕಾಶ ಕೇಳಬಹುದು. ಅಥವಾ ಈಗಿರುವ ಮಲ್ಟಿಕ್ಯಾಪ್‌ ಫಂಡ್‌ಗಳನ್ನು ಅವು ಲಾರ್ಜ್‌ಕ್ಯಾಪ್‌ ಫಂಡ್‌ ಆಗಿ ಪರಿವರ್ತಿಸಬಹುದು ಸಹ. ಮ್ಯೂಚುವಲ್‌ ಫಂಡ್‌ ಕಂಪನಿಗಳ ಎದುರು ಈ ಎಲ್ಲ ಸಾಧ್ಯತೆಗಳು ಇರುವ ಕಾರಣ, ಈಗಲೇ ಸ್ಮಾಲ್‌ಕ್ಯಾಪ್‌ ಹಾಗೂ ಮಿಡ್‌ಕ್ಯಾಪ್‌ ಕಂಪನಿಗಳ ಷೇರುಗಳ ಮೇಲೆ ಅಥವಾ ಮಿಡ್‌ಕ್ಯಾಪ್‌ ಹಾಗೂ ಸ್ಮಾಲ್‌ಕ್ಯಾಪ್‌ ಮ್ಯೂಚುವಲ್‌ ಫಂಡ್‌ಗಳ ಮೇಲೆ ಹೂಡಿಕೆ ಮಾಡುವುದು ಬೇಡ ಎಂದು ಬಸವರಾಜ ಸಲಹೆ ನೀಡುತ್ತಾರೆ.

ಸೆಬಿ ಸೂಚನೆಯನ್ನು ಮ್ಯೂಚುವಲ್‌ ಫಂಡ್‌ ಕಂಪನಿಗಳು ದೊಡ್ಡ ದನಿಯಲ್ಲಿ ವಿರೋಧಿಸಿವೆ. ಕಂಪನಿಗಳು ನೀಡುವ ಸಲಹೆಗಳನ್ನು ಮುಕ್ತವಾಗಿ ಪರಿಶೀಲಿಸುವುದಾಗಿ ಸೆಬಿ ಹೇಳಿದೆ. ಹಾಗಾಗಿ, ಸ್ಮಾಲ್‌ಕ್ಯಾಪ್‌ ಫಂಡ್‌ಗಳು ಮತ್ತು ಸ್ಮಾಲ್‌ಕ್ಯಾಪ್‌ ಷೇರುಗಳ ವಿಚಾರದಲ್ಲಿ ಭಾರಿ ಎಚ್ಚರಿಕೆ ಬೇಕು ಎಂದು ಪ್ರೈಮ್‌ಇನ್ವೆಸ್ಟರ್‌ನ ಸಹ ಸಂಸ್ಥಾಪಕಿ ವಿದ್ಯಾ ಬಾಲಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ ವಲಯದ ಮೇಲೆ ತಕ್ಷಣಕ್ಕೆ ಹೊಸ ಹೂಡಿಕೆ ಬೇಡ’ ಎಂದು ರಿಟೇಲ್ ಹೂಡಿಕೆದಾರರಿಗೆ ಕಿವಿಮಾತು ಹೇಳಿದ ವಿದ್ಯಾ, ‘ಈ ಎರಡು ವಲಯಗಳಲ್ಲಿ ತಕ್ಷಣಕ್ಕೆ ಭಾರಿ ಏರಿಕೆ ಕಂಡುಬಂದರೆ, ಲಾಭ ಗಳಿಕೆಯ ಉದ್ದೇಶದಿಂದ ಷೇರುಗಳನ್ನು ಅಥವಾ ಮ್ಯೂಚುವಲ್‌ ಫಂಡ್‌ ಯೂನಿಟ್‌ಗಳನ್ನು ಮಾರಾಟ ಮಾಡುವುದು ಒಳಿತು’ ಎಂದರು.

ಏನಿದೆ ಸೆಬಿ ಸುತ್ತೋಲೆಯಲ್ಲಿ?

ಲಾರ್ಜ್‌ಕ್ಯಾಪ್, ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಕಂಪನಿಗಳ ಮೇಲೆ ತಲಾ ಶೇಕಡ 25ರಷ್ಟು ಹೂಡಿಕೆ ಮಾಡಬೇಕು ಎಂಬುದು ಸೆಬಿ, ಮ್ಯೂಚುವಲ್‌ ಫಂಡ್‌ ಕಂಪನಿಗಳಿಗೆ ನೀಡಿರುವ ಸೂಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.