ADVERTISEMENT

ತೆರಿಗೆ ಉಳಿಸಲು ಅಂಚೆ ಯೋಜನೆ

ಪ್ರಜಾವಾಣಿ ವಿಶೇಷ
Published 20 ಜನವರಿ 2019, 20:10 IST
Last Updated 20 ಜನವರಿ 2019, 20:10 IST
   

ಅಂಚೆ ಕಚೇರಿಯಲ್ಲಿ 9 ಮಾದರಿಯ ಉಳಿತಾಯ ಯೋಜನೆಗಳಿದ್ದು , ಈ ಪೈಕಿ 5 ಯೋಜನೆಗಳು ಆದಾಯ ತೆರಿಗೆಯ ಸೆಕ್ಷನ್ 80 ಸಿ ಅನ್ವಯ ತೆರಿಗೆ ಅನುಕೂಲಗಳನ್ನು ನೀಡುತ್ತವೆ. ಅವುಗಳ ವಿವರವಾದ ಪರಿಚಯ ಇಲ್ಲಿದೆ.

ಅಂಚೆ ಕಚೇರಿ ಅವಧಿ ಠೇವಣಿ ಯೋಜನೆ: ಅಂಚೆ ಕಚೇರಿ ಅವಧಿ ಠೇವಣಿ ಯೋಜನೆಯಲ್ಲಿ ಒಂದು, ಎರಡು ಹಾಗೂ ಮೂರು ವರ್ಷಗಳ ಅವಧಿಗೆ ಹಣ ಹೂಡಿಕೆ ಮಾಡಿದರೆ ಶೇ 7 ರಷ್ಟು ಬಡ್ಡಿ ಸಿಗಲಿದೆ. ಐದು ವರ್ಷಗಳ ಅವಧಿ ಠೇವಣಿ ಯೋಜನೆಯಲ್ಲಿ ಶೇ 7.8 ರಷ್ಟು ಬಡ್ಡಿ ವರಮಾನ ಸಿಗಲಿದೆ.

ಬಡ್ಡಿ ದರಗಳನ್ನು ತ್ರೈಮಾಸಿಕ ಅವಧಿಗೆ ಲೆಕ್ಕಾಚಾರ ಮಾಡಿ, ವಾರ್ಷಿಕವಾಗಿ ಪಾವತಿಸಲಾಗುತ್ತದೆ. ಐದು ವರ್ಷಗಳ ಅವಧಿ ಠೇವಣೆ ಯೋಜನೆಗೆ ಆದಾಯ ತೆರಿಗೆ ಅನುಕೂಲ ಸಿಗಲಿದೆ.

ADVERTISEMENT

15 ವರ್ಷಗಳ ಅವಧಿಯ ಪಿಪಿಎಫ್: ಸಾರ್ವಜನಿಕ ಭವಿಷ್ಯ ನಿಧಿ ( ಪಿಪಿಎಫ್) ಯೋಜನೆಗೆ ಶೇ 8 ರಷ್ಟು ಬಡ್ಡಿ ದರ ಇದೆ. ತೆರಿಗೆ ಮುಕ್ತ ವರಮಾನ ನೀಡುವ ಪಿಪಿಎಫ್‌ನಲ್ಲಿ ವರ್ಷದಿಂದ ವರ್ಷಕ್ಕೆ ಹಣ ಬೆಳೆಯುತ್ತಾ ಹೋಗುತ್ತದೆ. ವರ್ಷಕ್ಕೆ ಕನಿಷ್ಠ ₹ 500 ರಿಂದ ಗರಿಷ್ಠ ₹ 1.5 ಲಕ್ಷಗಳ ವರೆಗೆ ಹೂಡಿಕೆಗೆ ಅವಕಾಶವಿದೆ.

ಮೂರನೇ ಆರ್ಥಿಕ ವರ್ಷದಿಂದ ಹೂಡಿಕೆ ಮಾಡಿರುವ ಮೊತ್ತದ ಆಧಾರದಲ್ಲಿ ಸಾಲ ಪಡೆಯಬಹುದು. ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಲಾಭ ಸಿಗುತ್ತದೆ. ಆದರೆ, ಪಿಪಿಎಫ್ ನಲ್ಲಿರುವ ಸಂಪೂರ್ಣ ಹಣವನ್ನು 15 ವರ್ಷಗಳಿಗಿಂತ ಮೊದಲು ತೆಗೆಯಲು ಸಾಧ್ಯವಿಲ್ಲ.

ಹಿರಿಯ ನಾಗರಿಕರ ಉಳಿತಾಯ ಯೋಜನೆ: 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಈ ಯೋಜನೆ ಅನ್ವಯಿಸಲಿದೆ. ಯೋಜನೆಯ ಅವಧಿಯನ್ನು 5 ವರ್ಷಗಳಿಗೆ ನಿಗದಿ ಮಾಡಲಾಗಿದ್ದು, ವಾರ್ಷಿಕ ಶೇ 8.7 ರ ಬಡ್ಡಿ ದರ ನಿಗದಿ ಮಾಡಲಾಗಿದೆ. ಇದರಲ್ಲಿ ₹ 1 ಸಾವಿರದಿಂದ ಗರಿಷ್ಠ ₹ 15 ಲಕ್ಷದ ವರೆಗೆ ಹೂಡಿಕೆ ಮಾಡಬಹುದಾಗಿದೆ. ಸೆಕ್ಷನ್ 80 ಸಿ ಅನ್ವಯ ತೆರಿಗೆ ವಿನಾಯ್ತಿ ಇದೆ. ಹೂಡಿಕೆ ಮೇಲಿನ ಬಡ್ಡಿಗೆ ತೆರಿಗೆ ಅನ್ವಯಿಸುತ್ತದೆ.

ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ)ರಾಷ್ಟ್ರೀಯ ಉಳಿತಾಯ ಪತ್ರದಲ್ಲಿ ಬಡ್ಡಿ ದರ ಶೇ 7.6 ರಿಂದ ಶೇ 8 ಕ್ಕೆ ಹೆಚ್ಚಳವಾಗಿದೆ. ನೀವು ‘ಎನ್‌ಎಸ್‌ಸಿ’ಯಲ್ಲಿ ಈಗ ₹ 100 ಹೂಡಿಕೆ ಮಾಡಿದರೆ5 ವರ್ಷಗಳ ನಂತರ ಅದು ₹146 ಆಗಿರುತ್ತದೆ. ಕನಿಷ್ಠ ಹೂಡಿಕೆ ₹ 100 ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಎನ್‌ಎಸ್‌ಸಿ ಪತ್ರಗಳನ್ನು ಭದ್ರತೆಗಾಗಿ ನೀಡಬಹುದು. ಈ ಹೂಡಿಕೆಯ ಅವಧಿ 5 ವರ್ಷಗಳಾಗಿದ್ದು ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯ್ತಿ ಲಭ್ಯ.

ಸುಕನ್ಯಾ ಸಮೃದ್ಧಿ ಯೋಜನೆ: 10 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ಈ ಖಾತೆ ಆರಂಭಿಸಬಹುದು. ಪ್ರಸ್ತುತ ಬಡ್ಡಿ ದರ ಶೇ 8.5 ರಷ್ಟಿದ್ದು , ವಾರ್ಷಿಕವಾಗಿ ಕನಿಷ್ಠ ₹ 250 ರಿಂದ ₹ 1.5 ಲಕ್ಷದ ವರೆಗೆ ಜಮಾ ಮಾಡಲು ಅವಕಾಶವಿದೆ. ಇದು ಸಂಪೂರ್ಣ ತೆರಿಗೆ ರಹಿತ (ಇಇಇ ಪ್ರಾಡಕ್ಟ್) ಉಳಿತಾಯ ಯೋಜನೆ.

ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳ ಓಟ!

ಷೇರುಪೇಟೆಯಲ್ಲಿನ ಅಗ್ರಮಾನ್ಯ ಕಂಪನಿಗಳು ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಗಳಿಕೆ ದಾಖಲಿಸಿವೆ. ಇದರ ಪ್ರಭಾವ ಸೂಚ್ಯಂಕಗಳ ಮೇಲಾಗುತ್ತಿದ್ದು, ವಾರದ ಕೊನೆಗೆ ಸೆನ್ಸೆಕ್ಸ್ ಶೇ 1.05 ರಷ್ಟು (36,387) ಮತ್ತು ನಿಫ್ಟಿ ಶೇ 1.04 ರಷ್ಟು (10,907) ಏರಿಕೆ ಕಂಡಿವೆ. ಒಂದು ತಿಂಗಳ ಅವಧಿಯಲ್ಲಿ ಪೇಟೆ ಕಂಡ ಅತ್ಯುತ್ತಮ ಫಲಿತಾಂಶ ಇದಾಗಿದೆ.

ಒಟ್ಟಾರೆಯಾಗಿ ನೋಡಿದಾಗ ಲಾರ್ಜ್ ಕ್ಯಾಪ್ ಕಂಪನಿಗಳ ಷೇರುಗಳ ವಹಿವಾಟಿನಲ್ಲಿ ಹಿಂಜರಿಕೆ ಕಂಡು ಬಂದರೂ ಕೂಡ ರಿಲಯನ್ಸ್, ಇನ್ಫೊಸಿಸ್ ಮತ್ತು ಇನ್ನಿತರ ಪ್ರಮುಖ ಕಂಪನಿಗಳ ನೆರವಿನಿಂದ ಸೂಚ್ಯಂಕಗಳು ಸಕಾರಾತ್ಮಕ ಹಿಡಿತ ಸಾಧಿಸುವಲ್ಲಿ ಯಶ ಕಂಡಿವೆ.

ಪ್ರಮುಖ ವಿದ್ಯಮಾನ: ಸನ್ ಫಾರ್ಮಾ ವಿರುದ್ಧ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ (ಸೆಬಿ) ದೂರು ದಾಖಲಾಗಿರುವ ಪರಿಣಾಮ ಷೇರುಗಳು ಶೇ 12 ರಷ್ಟು ಇಳಿಕೆ ಕಂಡು ₹ 390.75 ಕ್ಕೆ ಕುಸಿದಿವೆ. ಇದು ಆರು ವರ್ಷಗಳಲ್ಲಿ ಸನ್ ಫಾರ್ಮಾ ಕಂಡಿರುವ ಗರಿಷ್ಠ ಕುಸಿತ.

₹ 2,544 ಕೋಟಿ ನಿವ್ವಳ ಲಾಭ ಗಳಿಸಿರುವ ವಿಪ್ರೊ, ಷೇರುದಾರರು ಹೊಂದಿರುವ ಪ್ರತಿ 3 ಷೇರಿಗೆ 1 ಬೋನಸ್ ಷೇರು ನೀಡುವುದಾಗಿ ಘೋಷಿಸಿದೆ. ಜತೆಗೆ ₹ 1 ಅನ್ನು ಮಧ್ಯಂತರ ಲಾಭಾಂಶವನ್ನಾಗಿ ನೀಡಲಿದೆ.
ಹಿಂದೂಸ್ಥಾನ್ ಯುನಿಲಿವರ್ 3 ನೇ ತ್ರೈಮಾಸಿಕದಲ್ಲಿ ₹ 1,444 ಕೋಟಿ ನಿವ್ವಳ ಲಾಭ ಗಳಿಸಿದ್ದು ಶೇ 9 ರಷ್ಟು ಪ್ರಗತಿ ಸಾಧಿಸಿದೆ.

ಮುನ್ನೋಟ: ಈ ವಾರ ಕೋಟಕ್ ಬ್ಯಾಂಕ್, ಏಷಿಯನ್ ಪೇಂಟ್ಸ್, ಐಟಿಸಿ, ಏರ್‌ಟೆಲ್, ಇಂಡಿಗೊ, ವಿಜಯ ಬ್ಯಾಂಕ್ , ಯೆಸ್ ಬ್ಯಾಂಕ್ , ಬಯೋಕಾನ್, ಎಲ್‌ಆ್ಯಂಡ್‌ಟಿ , ಮಾರುತಿ ಸುಜುಕಿ, ಡಿಎಚ್ಎಫ್‌ಎಲ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಹಣಕಾಸು ವರದಿ ಪ್ರಕಟಿಸಲಿವೆ.

ತ್ರೈಮಾಸಿಕ ವರದಿಗಳು, ಚಿಲ್ಲರೆ ಹಣದುಬ್ಬರ ಇಳಿಕೆ, ತೈಲ ಬೆಲೆ, ರೂಪಾಯಿ ವಿನಿಮಯ ಮೌಲ್ಯ ಸೇರಿದಂತೆ ಇನ್ನಿತರ ಬಾಹ್ಯ ವಿದ್ಯಮಾನಗಳು ಈ ವಾರದ ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಉಪಾಧ್ಯಕ್ಷ )

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.