ADVERTISEMENT

49 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಐಟಿ, ಹಣಕಾಸು ವಲಯದ ಷೇರುಗಳ ಗಳಿಕೆ

ಪಿಟಿಐ
Published 11 ಜನವರಿ 2021, 16:30 IST
Last Updated 11 ಜನವರಿ 2021, 16:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮುಂಬೈ ಮತ್ತು ರಾಷ್ಟ್ರೀಯ ಷೇರುಪೇಟೆಗಳು ಸೋಮವಾರದ ವಹಿವಾಟನ್ನು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಅಂತ್ಯಗೊಳಿಸಿವೆ.

ಮೂರನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಗಳಿಕೆಯು ಉತ್ತೇಜನಕಾರಿಯಾಗಿದೆ. ಇದರಿಂದಾಗಿ ಹೂಡಿಕೆದಾರರು ಐಟಿ, ಹಣಕಾಸು ಮತ್ತು ವಾಹನ ವಲಯದ ಷೇರುಗಳಲ್ಲಿ ಹೂಡಿಕೆ ಮಾಡಿದರು. ಇದರ ಫಲವಾಗಿ ಸೂಚ್ಯಂಕಗಳು ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಿನದ ವಹಿವಾಟಿನಲ್ಲಿ 487 ಅಂಶಗಳ ಗಳಿಕೆ ಕಂಡು ದಾಖಲೆಯ 49,269 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಮಧ್ಯಂತರ ವಹಿವಾಟಿನಲ್ಲಿ 49,304 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ADVERTISEMENT

ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ದಾಖಲೆಯ ₹ 196.56 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 137 ಅಂಶ ಹೆಚ್ಚಾಗಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 14,485 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಗಳಿಕೆ: ಎಚ್‌ಸಿಎಲ್‌ ಟೆಕ್‌ ಷೇರು ಶೇ 6.09ರಷ್ಟು ಗರಿಷ್ಠ ಗಳಿಕೆ ಕಂಡಿತು. ಇನ್ಫೊಸಿಸ್‌, ಎಚ್‌ಡಿಎಫ್‌ಸಿ, ಮಾರುತಿ, ಟೆಕ್‌ ಮಹೀಂದ್ರ, ಬಜಾಜ್ ಆಟೊ ಮತ್ತು ಮಹೀಂದ್ರ ಷೇರುಗಳು ಸಹ ಉತ್ತಮ ಗಳಿಕೆ ಕಂಡವು.

ಟಿಸಿಎಸ್‌ ಮತ್ತು ಡಿ–ಮಾರ್ಟ್‌ ಕಂಪನಿಗಳ ಉತ್ತಮ ಹಣಕಾಸು ಸಾಧನೆಯಿಂದಾಗಿ ದೇಶಿ ಷೇರುಪೇಟೆಗಳ ಮೇಲೆ ಗೂಳಿಯ ಹಿಡಿತ ಬಿಗಿಗೊಂಡಿತು. ಸೂಚ್ಯಂಕಗಳು ಹೊಸ ಎತ್ತರ ತಲುಪಿದವು ಎಂದು ರಿಲಯನ್ಸ್‌ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ಮೋದಿ ತಿಳಿಸಿದ್ದಾರೆ.

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 0.17ರವರೆಗೂ ಏರಿಕೆ ಕಂಡವು.

ಲಾಭಗಳಿಕೆ ಉದ್ದೇಶದ ವಹಿವಾಟು ಮತ್ತು ಕೋವಿಡ್–19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಗಳು ದಾಖಲೆ ಮಟ್ಟದಿಂದ ಕೆಳಗಿಳಿದವು.

ಟಿಸಿಎಸ್‌ ಉತ್ತಮ ಗಳಿಕೆ: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ಡಿಸೆಂಬರ್‌ ತ್ರೈಮಾಸಿಕದ ನಿವ್ವಳ ಲಾಭ ಶೇ 7.2ರಷ್ಟು ಏರಿಕೆ ಕಂಡಿದ್ದು ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರು ಬೆಲೆಯನ್ನು ಶೇ 2ರವರೆಗೂ ಏರಿಕೆ ಕಾಣುವಂತೆ ಮಾಡಿತು. ವಹಿವಾಟಿನ ಅಂತ್ಯದ ವೇಳೆಗೆ ಟಿಸಿಎಸ್‌ ಕಂಪನಿಯ ಮಾರುಕಟ್ಟೆ ಮೌಲ್ಯವು ₹ 11.91 ಲಕ್ಷ ಕೋಟಿ ಆಗಿತ್ತು.

16 ಪೈಸೆ -ಡಾಲರ್‌ ಎದುರು ರೂಪಾಯಿ ಮೌಲ್ಯದಲ್ಲಿ ಆಗಿರುವ ಇಳಿಕೆ

1.52% -ಬ್ರೆಂಟ್‌ ತೈಲ ದರ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.