ADVERTISEMENT

ಸೆನ್ಸೆಕ್ಸ್ 1,457 ಅಂಶ ಕುಸಿತ

ಅಮೆರಿಕದ ಹಣದುಬ್ಬರ ದರ ಗರಿಷ್ಠ ಏರಿಕೆ: ಜಾಗತಿಕ ಷೇರುಪೇಟೆಗಳ ಕುಸಿತ

ಪಿಟಿಐ
Published 13 ಜೂನ್ 2022, 13:06 IST
Last Updated 13 ಜೂನ್ 2022, 13:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸೋಮವಾರ ಕರಡಿ ಕುಣಿತ ಜೋರಾಗಿತ್ತು. ಜಾಗತಿಕ ಷೇರುಪೇಟೆಗಳ ನಕಾರಾತ್ಮಕ ವಹಿವಾಟು, ವಿದೇಶಿ ಬಂಡವಾಳ ಹೊರಹರಿವು ಹಾಗೂ ರೂಪಾಯಿ ಮೌಲ್ಯದ ದಾಖಲೆ ಕುಸಿತವು ವಹಿವಾಟಿನಲ್ಲಿ ಭಾರಿ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ.

ಅಮೆರಿಕದ ಗ್ರಾಹಕ ಹಣದುಬ್ಬರ ದರವು ಮೇನಲ್ಲಿ ನಾಲ್ಕು ದಶಕಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಹೀಗಾಗಿಫೆಡರಲ್‌ ರಿಸರ್ವ್‌ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಜಾಸ್ತಿ ಆಗಿದೆ. ಇದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಜಾಗತಿಕ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ನಡೆದು, ಭಾರತದ ಮೇಲೆಯೂ ಪರಿಣಾಮ ಉಂಟಾಯಿತು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,457 ಅಂಶ ಕುಸಿತ ಕಂಡು 52,846 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 427 ಅಂಶ ಇಳಿಕೆ ಕಂಡು 15,774 ಅಂಶಗಳಿಗೆ ತಲುಪಿತು.

ADVERTISEMENT

₹ 6.65 ಲಕ್ಷ ಕೋಟಿ ನಷ್ಟ: ಮುಂಬೈ ಷೇರುಪೇಟೆಯಲ್ಲಿ ನಡೆದ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 6.65 ಲಕ್ಷ ಕೋಟಿಗಳಷ್ಟು ಕರಗಿತು. ಇದರಿಂದ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 245.19 ಲಕ್ಷ ಕೋಟಿಗೆ ಇಳಿಕೆ ಆಯಿತು. ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಒಟ್ಟಾರೆ ₹ 9.75 ಲಕ್ಷ ಕೋಟಿ ನಷ್ಟ ಆಗಿದೆ.

ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರ ಶೇ 0.98ರಷ್ಟು ಇಳಿಕೆ ಆಗಿ ಒಂದು ಬ್ಯಾರಲ್‌ಗೆ 120.74 ಡಾಲರ್‌ಗೆ ತಲುಪಿತು.

ವಲಯವಾರು ಇಳಿಕೆ (%)

ಐ.ಟಿ.;3.92

ತಂತ್ರಜ್ಞಾನ;3.45

ಲೋಹ;3.39

ಕೈಗಾರಿಕೆ;3.35

ಹಣಕಾಸು;3.17

ಬ್ಯಾಂಕ್‌;3.12

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.