ADVERTISEMENT

ತೈಲ ದರ ಏರಿಕೆಗೆ ಷೇರುಪೇಟೆ ಕುಸಿತ

ರಷ್ಯಾ–ಉಕ್ರೇನ್‌ ಸಂಘರ್ಷ: ಮುಂದುವರಿದ ವಿದೇಶಿ ಬಂಡವಾಳ ಹೊರಹರಿವು

ಪಿಟಿಐ
Published 7 ಮಾರ್ಚ್ 2022, 15:48 IST
Last Updated 7 ಮಾರ್ಚ್ 2022, 15:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಕಚ್ಚಾ ತೈಲ ದರವು ಭಾರಿ ಏರಿಕೆ ಕಂಡಿದೆ. ಇದರಿಂದಾಗಿ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸೂಚ್ಯಂಕಗಳು ಹೆಚ್ಚಿನ ಕುಸಿತ ಕಾಣುವಂತಾಯಿತು.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದ್ದು, ವಿದೇಶಿ ಬಂಡವಾಳ ಹೊರಹರಿವು ಮುಂದುವರಿದಿದ್ದು ಸಹ ವಹಿವಾಟಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದವು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ ಇಳಿಮುಖವಾಗಿಯೇ ವಹಿವಾಟು ಆರಂಭಿಸಿತು. ದಿನದ ನಡುವಿನಲ್ಲಿ 1,966 ಅಂಶ ಕುಸಿತ ಕಂಡು 52,367ಕ್ಕೆ ತಲುಪಿತ್ತು. ನಂತರ ತುಸು ಚೇತರಿಕೆ ಕಂಡು ಕುಸಿತದ ಪ್ರಮಾಣವು 1,491ಕ್ಕೆ ತಲುಪಿತು. 52,842 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 382 ಅಂಶ ಇಳಿಕೆ ಕಂಡು 15,863 ಅಂಶಗಳಿಗೆ ತಲುಪಿತು. ಎರಡೂ ಸೂಚ್ಯಂಕಗಳು ಏಳು ತಿಂಗಳ ಕನಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಅಮೆರಿಕ ಮತ್ತು ಯರೋಪ್‌ನ ದೇಶಗಳು ರಷ್ಯಾದ ತೈಲ ರಫ್ತಿನ ಮೇಲೆ ನಿಷೇಧ ಹೇರಬಹುದು ಎನ್ನುವ ಆತಂಕ ಎದುರಾಗಿದೆ. ಇದರಿಂದಾಗಿ ಕಚ್ಚಾ ತೈಲ ದರವು 2008ರ ಜುಲೈ ಬಳಿಕದ ಗರಿಷ್ಠ ಮಟ್ಟ ತಲುಪಿದೆ. ಇದರ ಪರಿಣಾಮವಾಗಿ ದೇಶಿ ಷೇರುಪೇಟೆಗಳಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬಂತು ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಐರೋಪ್ಯ ಒಕ್ಕೂಟವು ರಷ್ಯಾದ ಮೇಲೆ ಇನ್ನಷ್ಟು ನಿರ್ಬಂಧ ಹೇರಬಹುದು ಎನ್ನುವ ಆತಂಕ ಹಾಗೂ ಕಚ್ಚಾ ತೈಲ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಕುಸಿತ ಕಂಡುಬಂದಿತು ಎಂದು ರೆಲಿಗೇರ್‌ ಬ್ರೋಕಿಂಗ್‌ ಲಿಮಿಟೆಡ್‌ನ ಉಪಾಧ್ಯಕ್ಷ ಅಜಿತ್‌ ಮಿಶ್ರಾ ತಿಳಿಸಿದ್ದಾರೆ.

ನಾಲ್ಕು ದಿನಗಳಲ್ಲಿ ₹ 11.28 ಲಕ್ಷ ಕೋಟಿ ನಷ್ಟ: ಷೇರುಪೇಟೆಯಲ್ಲಿ ಕಂಡುಬಂದ ನಕಾರಾತ್ಮಕ ವಹಿವಾಟಿನಿಂದಾಗಿ ನಾಲ್ಕು ದಿನಗಳಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 11.28 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದಾಗಿ ಷೇರುಪೇಟೆಯ ಒಟ್ಟಾರೆ ಬಂಡವಾಳ ಮೌಲ್ಯವು ₹ 241.10 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಸಾರ್ವಕಾಲಿಕ ಕನಿಷ್ಠ ಮಟ್ಟ ತಲುಪಿದ್ದ ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ 76 ಪೈಸೆ ಕುಸಿತ ಕಂಡಿದೆ. ಇದರಿಂದಾಗಿ ಒಂದು ಡಾಲರ್‌ಗೆ ₹ 76.93ರಂತೆ ವಿನಿಮಯಗೊಂಡಿದೆ. ವಹಿವಾಟಿನ ಒಂದು ಹಂತದಲ್ಲಿ ಸಾರ್ವಕಾಲಿಕ ಕನಿಷ್ಠ ಮಟ್ಟವಾದ ₹ 77ಕ್ಕೆ ತಲುಪಿತ್ತು.

ಬ್ರೆಂಟ್‌ ಕಚ್ಚಾತೈಲ ದರವು ಒಂದು ಬ್ಯಾರಲ್‌ಗೆ ಶೇ 6.08ರಷ್ಟು ಹೆಚ್ಚಾಗಿ 125 ಡಾಲರ್‌ಗಳನ್ನು ದಾಟಿದೆ.

ಮುಖ್ಯಾಂಶಗಳು

ಏಳು ತಿಂಗಳ ಕನಿಷ್ಠ ಮಟ್ಟದಲ್ಲಿ ದಿನದ ವಹಿವಾಟು ಅಂತ್ಯ

ನಾಲ್ಕು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್‌ 3,404 ಅಂಶ ಕುಸಿತ

ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 2.30ರವರೆಗೂ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.