ADVERTISEMENT

ಮಾರಾಟದ ಒತ್ತಡಕ್ಕೆ ಸೂಚ್ಯಂಕ ಇಳಿಕೆ

ಪಿಟಿಐ
Published 20 ನವೆಂಬರ್ 2018, 18:53 IST
Last Updated 20 ನವೆಂಬರ್ 2018, 18:53 IST
   

ಮುಂಬೈ: ಮೂರು ವಹಿವಾಟಿನ ದಿನಗಳ ಸೂಚ್ಯಂಕದ ಓಟಕ್ಕೆ ಮಂಗಳವಾರ ತಡೆ ಬಿದ್ದಿದೆ. ಇಳಿಮುಖವಾಗಿ ವಹಿವಾಟು ಅಂತ್ಯಗೊಂಡಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ನಡೆದ ಮಾರಾಟದ ಒತ್ತಡ ಹಾಗೂ ದೇಶಿ ಷೇರುಪೇಟೆಗಳಲ್ಲಿನ ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಯಿತು. ಹೀಗಾಗಿ ರೂಪಾಯಿ ಮೌಲ್ಯ ವೃದ್ಧಿ ಮತ್ತು ಕಚ್ಚಾ ತೈಲ ದರ ಇಳಿಕೆಯು ವಹಿವಾಟಿಗೆ ಚೇತರಿಕೆ ನೀಡಲು ಸಾಧ್ಯವಾಗಲಿಲ್ಲ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 300 ಅಂಶ ಇಳಿಕೆ ಕಂಡು 35,474 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.ಮೂರು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 633 ಅಂಶಗಳಷ್ಟು ಏರಿಕೆ ದಾಖಲಿಸಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 107 ಅಂಶ ಇಳಿಕೆಯಾಗಿ 10,656 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸೋಮವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,103 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ಅಮೆರಿಕದ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ವಹಿವಾಟು ಇಳಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ಏಷ್ಯಾ ಮತ್ತು ಯುರೋಪಿನ ಷೇರುಪೇಟೆಗಳಲ್ಲಿಯೂ ಇಳಿಮುಖ ವಹಿವಾಟು ನಡೆಯಿತು.

ರೂಪಾಯಿ ಚೇತರಿಕೆ:

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸತತ 6ನೇ ವಹಿವಾಟು ಅವಧಿಯಲ್ಲಿಯೂ ರೂಪಾಯಿ ಮೌಲ್ಯ ಗಳಿಕೆ ಕಂಡಿದೆ.ಮಂಗಳವಾರ ರೂಪಾಯಿ ಮೌಲ್ಯ 21 ಪೈಸೆಯಷ್ಟು ಹೆಚ್ಚಾಗಿಒಂದು ಡಾಲರ್‌ಗೆ ₹ 71.46ರಂತೆ ವಿನಿಮಯಗೊಂಡಿತು.

ಆರು ವಹಿವಾಟು ಅವಧಿಗಳಲ್ಲಿ ರೂಪಾಯಿ ಮೌಲ್ಯ ಒಟ್ಟಾರೆ 143 ಪೈಸೆಯಷ್ಟು ಹೆಚ್ಚಾಗಿದೆ.ಇತರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಇಳಿಕೆಯಾಗಿದೆ. ಹೀಗಾಗಿ ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡುಬಂದಿದೆ.

ಐ.ಟಿ ಷೇರುಗಳ ಬೆಲೆ ಇಳಿಕೆ:ರೂಪಾಯಿ ಮೌಲ್ಯ ಹೆಚ್ಚಾಗಿರುವುದರಿಂದ ಐ.ಟಿ ಕಂಪನಿಗಳ ಷೇರುಗಳು ಶೇ 3ರವರೆಗೆ ಇಳಿಕೆ ಕಂಡಿವೆ.ವಿಪ್ರೊ ಶೇ 2.59, ಇನ್ಫೊಸಿಸ್ ಶೇ 1.64 ಮತ್ತು ಟಿಸಿಎಸ್‌ ಶೇ 1.28ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.