ADVERTISEMENT

ಸೂಚ್ಯಂಕ 464 ಅಂಶ ಇಳಿಕೆ:ನಗದು ಕೊರತೆ ಆತಂಕ

ಪಿಟಿಐ
Published 19 ಅಕ್ಟೋಬರ್ 2018, 17:09 IST
Last Updated 19 ಅಕ್ಟೋಬರ್ 2018, 17:09 IST
sensex
sensex   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ನಕಾರಾತ್ಮಕ ವಹಿವಾಟು ಮುಂದುವರಿದಿದೆ. ಮಾಹಿತಿ ತಂತ್ರಜ್ಞಾನ ಮತ್ತು ಹಣಕಾಸು ಕಂಪನಿಗಳ ಷೇರುಗಳು ನಗದು ಕೊರತೆ ಆತಂಕದಿಂದಾಗಿ ಸೂಚ್ಯಂಕವನ್ನು ಕುಸಿಯುವಂತೆ ಮಾಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಗುರುವಾರ 464 ಅಂಶ ಕುಸಿತ ಕಂಡು 34,315 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 149 ಅಂಶ ಇಳಿಕೆಯಾಗಿ 10,303 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಿಲಯನ್ಸ್‌ಗೆ ನಷ್ಟ: ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯು ಉತ್ತಮ ಆರ್ಥಿಕ ಸಾಧನೆ ಪ್ರಕಟಿಸಿದ್ದರೂ ಷೇರುಗಳು ಶೇ 4.11ರಷ್ಟು ಇಳಿಕೆ ಕಂಡಿವೆ. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ₹ 29,945 ಕೋಟಿಯಷ್ಟು ಕರಗಿದ್ದು, ₹ 6.98 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಬ್ಯಾಂಕಿಂಗ್‌ಯೇತರ ಹಣಕಾಸು ಸಂಸ್ಥೆಗಳ (ಎನ್‌ಬಿಎಫ್‌ಸಿ) ನಗದು ಕೊರತೆ ನೀಗಿಸಲು ಆರ್‌ಬಿಐ ಕೆಲವು ಕ್ರಮಗಳನ್ನು ಘೋಷಿಸಿದೆ. ಹೀಗಿದ್ದರೂ ಎನ್‌ಬಿಎಫ್‌ಸಿ ಷೇರುಗಳು ಶೇ 18.5 ರಷ್ಟು ಇಳಿಕೆಯಾಗಿವೆ.ಎಚ್‌ಡಿಎಫ್‌ಸಿ ಷೇರುಗಳು ಶೇ 4.32ರಷ್ಟು ಗರಿಷ್ಠ ಇಳಿಕೆ ಕಂಡಿವೆ.

ಅಮೆರಿಕಎಚ್‌–1ಬಬಿ ವೀಸಾ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿದೆ. ಇದರಿಂದಾಗಿ ಐ.ಟಿ ಷೇರುಗಳು ಶೇ 6 ರಷ್ಟು ಇಳಿಕೆಯಾಗಿವೆ.

‘ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಮರದಿಂದ ಜಾಗತಿಕ ಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಷೇರುಪೇಟೆಗಳಲ್ಲಿ ಚಂಚಲ ವಹಿವಾಟು ನಡೆಯುತ್ತಿದೆ. ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಫೆಡರಲ್‌ ರಿಸರ್ವ್ ಡಿಸೆಂಬರ್‌ನಲ್ಲಿಯೇ ಬಡ್ಡಿದರದಲ್ಲಿ ಏರಿಕೆ ಮಾಡಲಿದೆ ಎಂದು ಫೆಡರಲ್‌ ಓಪನ್‌ ಮಾರ್ಕೆಟ್‌ ಕಮಿಟಿ (ಎಫ್‌ಒಎಂಸಿ) ಬುಧವಾರ ಸೂಚನೆ ನೀಡಿದೆ. ಇದೂ ಸಹ ನಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

ಯೆಸ್‌ ಬ್ಯಾಂಕ್‌ ಸಿಇಒ ರಾಣಾ ಕಪೂರ್‌ ಅವರ ಅಧಿಕಾರಾವಧಿ ವಿಸ್ತರಿಸಲು ಆರ್‌ಬಿಐ ನಿರಾಕರಿಸಿದ್ದು, 2019 ಫೆಬ್ರುವರಿ 1ರ ಒಳಗೆ ಹೊಸ ಸಿಇಒ ನೇಮಿಸಲು ಸೂಚನೆ ನೀಡಿದೆ. ಹೀಗಾಗಿ ಶುಕ್ರವಾರ ಯೆಸ್‌ ಬ್ಯಾಂಕ್‌ ಷೇರುಗಳು ಹೆಚ್ಚಿನ ಕುಸಿತಕ್ಕೊಳಗಾದವು.

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌, ದಿವಾನ್‌ ಹೌಸಿಂಗ್‌ ಫೈನಾನ್ಸ್‌, ಐಎಲ್‌ಆ್ಯಂಡ್‌ ಎಫ್‌ಎಸ್‌ ಮತ್ತು ಕನ್‌ಸ್ಟ್ರಕ್ಷನ್‌ ಷೇರುಗಳು ಶೇ 16.55ರವರೆಗೂ ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.