ADVERTISEMENT

ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ; ಎಚ್‌ಡಿಎಫ್‌ಸಿ ಷೇರು ಶೇ 5ರಷ್ಟು ಏರಿಕೆ

ಪಿಟಿಐ
Published 17 ಮಾರ್ಚ್ 2022, 11:42 IST
Last Updated 17 ಮಾರ್ಚ್ 2022, 11:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಗುರುವಾರವೂ ಸಹ ಖರೀದಿ ಉತ್ಸಾಹ ಮುಂದುವರಿದು, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 57,000 ಅಂಶಗಳ ಗಡಿ ದಾಟಿತು. ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಸಹ ಇಲ್ಲಿನ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ.

ನಿನ್ನೆ 1,040 ಅಂಶ ಜಿಗಿತ ಕಂಡು 56,816 ಅಂಶಗಳಲ್ಲಿ ವಹಿವಾಟು ಮುಗಿಸಿದ್ದ ಸೆನ್ಸೆಕ್ಸ್‌, ಇಂದು 1,047.28 ಅಂಶ (ಶೇ 1.84) ಏರಿಕೆಯಾಗಿ 57,863.93 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 311.70 ಅಂಶ ಹೆಚ್ಚಳವಾಗಿ 17,287.05 ಅಂಶ ಮುಟ್ಟಿದೆ.

ಸೆನ್ಸೆಕ್ಸ್‌ ಸಾಲಿನ ಕಂಪನಿಗಳ ಪೈಕಿ ಎಚ್‌ಡಿಎಫ್‌ಸಿ ಲಿಮಿಟೆಡ್‌ ಷೇರು ಬೆಲೆ ಶೇ 5.36ರಷ್ಟು ಜಿಗಿದಿದೆ. ಅದರೊಂದಿಗೆ ಟೈಟಾನ್‌, ರಿಲಯನ್ಸ್‌, ಕೊಟಾಕ್‌ ಬ್ಯಾಂಕ್‌, ಏಷಿಯನ್‌ ಪೇಂಟ್ಸ್‌, ಸನ್‌ ಫಾರ್ಮಾ ಹಾಗೂ ಟಾಟಾ ಸ್ಟೀಲ್‌ ಷೇರುಗಳು ಶೇ 2.5ರಿಂದ ಶೇ 5ರವರೆಗೂ ಹೆಚ್ಚಳ ಕಂಡಿವೆ.

ADVERTISEMENT

ಆದರೆ, ಇನ್ಫೊಸಿಸ್‌ ಮತ್ತು ಎಚ್‌ಸಿಎಲ್‌ ಟೆಕ್‌ ಷೇರುಗಳ ಬೆಲೆ ಇಳಿಮುಖವಾಗಿದೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರದಲ್ಲಿ ಶೇ 0.25ರಷ್ಟು ಹೆಚ್ಚಳ ಮಾಡಲು ಬುಧವಾರ ಅನುಮೋದನೆ ನೀಡಿದೆ. 2018ರ ನಂತರ ಇದೇ ಮೊದಲ ಬಾರಿಗೆ ಬಡ್ಡಿ ದರ ಏರಿಕೆ ಮಾಡಲಾಗುತ್ತಿದೆ. ಹಣದುಬ್ಬರ ಎದುರಿಸಲು ಬಡ್ಡಿ ದರದಲ್ಲಿ ಇನ್ನಷ್ಟು ಏರಿಕೆಯ ಅವಶ್ಯಕತೆ ಇರುವುದಾಗಿ ಕೇಂದ್ರೀಯ ಬ್ಯಾಂಕ್‌ ಅಭಿಪ್ರಾಯ ಪಟ್ಟಿದೆ.

ಬ್ರೆಂಟ್‌ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ ಶೇಕಡ 3.97ರಷ್ಟು ಹೆಚ್ಚಳವಾಗಿ 101.91 ಡಾಲರ್‌ ತಲುಪಿದೆ.

ಷೇರುಪೇಟೆಯ ಮಾಹಿತಿ ಪ್ರಕಾರ, ಬುಧವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹311.99 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.