ADVERTISEMENT

ಸೆನ್ಸೆಕ್ಸ್ 1,000 ಅಂಶ ಕುಸಿತ: ದಿಢೀರ್‌ ಕುಸಿದ ಬ್ಯಾಂಕಿಂಗ್‌ ವಲಯದ ಷೇರುಗಳು 

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 6:32 IST
Last Updated 1 ಏಪ್ರಿಲ್ 2020, 6:32 IST
ಷೇರುಪೇಟೆ ಕುಸಿತ
ಷೇರುಪೇಟೆ ಕುಸಿತ   

ಬೆಂಗಳೂರು: 2020–21ನೇ ಹಣಕಾಸು ವರ್ಷದ ಮೊದಲ ದಿನ ಷೇರುಪೇಟೆಗಳಲ್ಲಿ ವಹಿವಾಟು ಇಳಿಮುಖವಾಗಿವೆ. ದೇಶದಾದ್ಯಂತ ಲಾಕ್‌ಡೌನ್‌ ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಅಗತ್ಯ ವಸ್ತುಗಳ ಪೂರೈಕೆ ಹೊರತಾಗಿ ಇತರೆ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿವೆ. ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೋಡಿಡ್‌–19 ದೃಢಪಟ್ಟ ಪ್ರಕರಣಗಳು ಏರಿಕೆಯಾಗಿವೆ. ಇಡೀ ಏಷ್ಯಾ ಭಾಗದಲ್ಲಿ ಷೇರುಪೇಟೆಗಳು ಮಾರಾಟ ಒತ್ತಡಕ್ಕೆ ಸಿಲುಕಿದ್ದು, ಸೆನ್ಸೆಕ್ಸ್‌ 1,000 ಅಂಶ ಕಡಿಮೆಯಾಗಿದೆ.

ವಹಿವಾಟು ಆರಂಭದಲ್ಲಿ 36.84 ಅಂಶ ಏರಿಕೆಯಾದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌, ನಂತರದಲ್ಲಿ ಶೇ 2.4ರಷ್ಟು ಇಳಿಕೆಯಾಗಿ 28,750 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 210 ಅಂಶ ಇಳಿಕೆಯಾಗಿ 8,380 ಅಂಶ ಮುಟ್ಟಿತು. ಬುಧವಾರ ಬ್ಯಾಂಕಿಂಗ್‌ ವಲಯದ ಷೇರುಗಳು ತೀವ್ರ ಕುಸಿತಕ್ಕೆ ಒಳಗಾಗಿವೆ. ಕೊಟ್ಯಾಕ್‌ ಮಹೀಂದ್ರಾ ಬ್ಯಾಂಕ್‌ ಶೇ 8, ಎಸ್‌ಬಿಐ ಷೇರು ಶೇ 4ರಷ್ಟು ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರು ಶೇ 3ರಷ್ಟು ಇಳಿಕೆ ಕಂಡಿವೆ. ಆರಂಭದಲ್ಲಿ ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 3ರಷ್ಟು ಗಳಿಕೆ ದಾಖಲಿಸಿತ್ತಾದರೂ, ಅನಂತರ ಕುಸಿಯಿತು. ಐಟಿ ವಲಯದ ಷೇರುಗಳೂ ನಷ್ಟ ಅನುಭವಿಸಿವೆ.

11:55ಕ್ಕೆ ಸೆನ್ಸೆಕ್ಸ್‌ 1,035.29 ಅಂಶ ( ಶೇ 3.51) ಕಡಿಮೆಯಾಗಿ 28,433.20 ಅಂಶಗಳಲ್ಲಿ ವಹಿವಾಟು ನಡೆದಿದೆ. ನಿಫ್ಟಿ 300.30 ಅಂಶ ( ಶೇ 3.49) ಇಳಿಕೆಯಾಗಿ 8,297.45 ಅಂಶ ಮುಟ್ಟಿದೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ತೈಲ 2002ರಲ್ಲಿ ದಾಖಲಾಗಿದ್ದ ದರದಲ್ಲಿ ವಹಿವಾಟು ನಡೆದಿದೆ. ಅಮೆರಿಕದ ಡೌ ಜೋನ್ಸ್‌ನಲ್ಲಿ ತ್ರೈಮಾಸಿಕದಲ್ಲಿ 1987ರ ನಂತರದ ಅತಿ ದೊಡ್ಡ ಕುಸಿತ ಕಂಡಿದೆ. ಶೇ 1.84ರಷ್ಟು ಇಳಿಕೆಯೊಂದಿಗೆ ಡೌ ಜೋನ್ಸ್‌ ದಿನದ ವಹಿವಾಟು ಮುಗಿಸಿತು. ಇಂದು ವಹಿವಾಟು ಆರಂಭದಲ್ಲಿಯೇ ಜಪಾನ್‌ನ ನಿಕ್ಕಿ ಶೇ 1.86ರಷ್ಟು ಕಡಿಮೆಯಾಗಿದೆ.

ಮಂಗಳವಾರ ರಾಷ್ಟ್ರೀಯ ಷೇರು ಸಂವೇದಿ (ನಿಫ್ಟಿ 50) ಸೂಚ್ಯಂಕವು ಶೇ 3.82ರಷ್ಟು ಏರಿಕೆ ದಾಖಲಿಸಿ, 8,597.75 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು. ಮುಂಬೈ ಪೇಟೆಯ ಸೆನ್ಸೆಕ್ಸ್ ಶೇ 3.62ರಷ್ಟು ಏರಿಕೆ ದಾಖಲಿಸಿ, 29,468.49 ಅಂಶಗಳೊಂದಿಗೆ ದಿನದ ವಹಿವಾಟು ಮುಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.