ADVERTISEMENT

ಪುಟಿದೆದ್ದ ಸೆನ್ಸೆಕ್ಸ್, ನಿಫ್ಟಿ: ಶೇಕಡ 2.5ರಷ್ಟು ಗಳಿಕೆ

ಬ್ಯಾಂಕಿಂಗ್, ಐ.ಟಿ ಮತ್ತು ತೈಲ ವಲಯದಲ್ಲಿ ಭಾರಿ ವಹಿವಾಟು

ಪಿಟಿಐ
Published 30 ಆಗಸ್ಟ್ 2022, 14:05 IST
Last Updated 30 ಆಗಸ್ಟ್ 2022, 14:05 IST

ಮುಂಬೈ: ಬ್ಯಾಂಕಿಂಗ್, ಐ.ಟಿ. ಮತ್ತು ತೈಲ ವಲಯದ ಷೇರುಗಳ ಖರೀದಿ ಭರಾಟೆ ಜೋರಾಗಿ ನಡೆದ ಕಾರಣದಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಮಂಗಳವಾರ ಶೇಕಡ 2.5ಕ್ಕೂ ಹೆಚ್ಚಿನ ಪ್ರಮಾಣದ ಏರಿಕೆ ಕಂಡವು. ಇದು ಮೇ 20ರ ನಂತರ ಒಂದು ದಿನದಲ್ಲಿ ಕಂಡ ಅತ್ಯುತ್ತಮ ಗಳಿಕೆ.

ಸೆನ್ಸೆಕ್ಸ್ 1,564 ಅಂಶ ಮತ್ತು ನಿಫ್ಟಿ 446 ಅಂಶ ಏರಿಕೆ ಕಂಡವು. ಹಣದುಬ್ಬರ ನಿಯಂತ್ರಿಸುವ ಉದ್ದೇಶದಿಂದ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿ ದರ ಹೆಚ್ಚಳವನ್ನು ಮುಂದುವರಿಸಲಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಜೆರೋಮ್ ಪೊವೆಲ್ ಹೇಳಿದ್ದರು. ಇದಾದ ನಂತರ ಸೂಚ್ಯಂಕಗಳು ಸೋಮವಾರದ ವಹಿವಾಟಿನಲ್ಲಿ ಶೇ 1.4ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದಿದ್ದವು.

‘ಸೂಚ್ಯಂಕಗಳು ಮಂಗಳವಾರ ದಾಖಲಿಸಿರುವ ಏರಿಕೆಯು, ಜಾಗತಿಕ ಷೇರುಪೇಟೆಗಳಿಗೆ ಹೋಲಿಸಿದರೆ ದೇಶದ ಷೇರುಪೇಟೆಗಳು ಹೆಚ್ಚು ಶಕ್ತಿಯುತವಾಗಿವೆ ಎಂಬುದನ್ನು ತೋರಿಸುತ್ತಿದೆ. ವಿದೇಶಿ ಹೂಡಿಕೆದಾರರು ಹೂಡಿಕೆ ಮುಂದುವರಿಸಿರುವುದು ದೇಶದ ಷೇರುಪೇಟೆಗಳ ಏರಿಕೆಗೆ ನೆರವಾದವು’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ADVERTISEMENT

ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕವು ಶೇ 1.97ರಷ್ಟು ಏರಿಕೆ ಕಂಡಿದೆ. ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 1.40ರಷ್ಟು ಏರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 2.60ರಷ್ಟು ಇಳಿಕೆ ಆಗಿದ್ದು, ಪ್ರತಿ ಬ್ಯಾರೆಲ್‌ಗೆ 102.52 ಡಾಲರ್‌ಗೆ ತಲುಪಿದೆ.

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 4,165 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.