ADVERTISEMENT

3 ತಿಂಗಳ ಗರಿಷ್ಠ ಮಟ್ಟ ತಲುಪಿದ ಷೇರುಪೇಟೆ

ವಿದೇಶಿ ಬಂಡವಾಳ ಒಳಹರಿವು, ನಿರೀಕ್ಷಿತ ಮಟ್ಟದಲ್ಲಿ ತ್ರೈಮಾಸಿಕ ಫಲಿತಾಂಶ

ಪಿಟಿಐ
Published 29 ಜುಲೈ 2022, 13:20 IST
Last Updated 29 ಜುಲೈ 2022, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳ ಪ್ರಮುಖ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶುಕ್ರವಾರದ ವಹಿವಾಟಿನಲ್ಲಿ ಶೇಕಡ 1ಕ್ಕೂ ಹೆಚ್ಚಿನ ಗಳಿಕೆ ಕಂಡವು. ಹೀಗಾಗಿ ಮುಂಬೈ ಷೇರುಪೇಟೆ ಮತ್ತು ರಾಷ್ಟ್ರೀಯ ಷೇರುಪೇಟೆ ವಹಿವಾಟು ದಿನದ ಕೊನೆಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟದಲ್ಲಿ ಅಂತ್ಯವಾಯಿತು.

ಬಿಎಸ್‌ಇ ಸೆನ್ಸೆಕ್ಸ್‌ 712 ಅಂಶ ಏರಿಕೆಯಾಗಿ 57,570 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 228 ಅಂಶ ಹೆಚ್ಚಾಗಿ 17,158 ಅಂಶಗಳಿಗೆ ಏರಿಕೆ ಕಂಡಿತು.

ರಿಲಯನ್ಸ್‌ ಇಂಡಸ್ಟ್ರೀಸ್‌, ಇನ್ಫೊಸಿಸ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್‌ನ ಷೇರುಗಳು ಹೆಚ್ಚಿನ ಖರೀದಿಗೆ ಒಳಗಾದವು. ಇದು ಸೂಚ್ಯಂಕಗಳ ಏರಿಕೆಗೆ ಕಾರಣವಾಯಿತು.

ADVERTISEMENT

ಜೂನ್‌ ತ್ರೈಮಾಸಿಕದ ಫಲಿತಾಂಶ ಉತ್ತಮವಾಗಿರುವುದು, ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ, ಅಮೆರಿಕದ ಫೆಡರಲ್‌ ರಿಸರ್ವ್‌ ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಕೆ ಮಾಡುವುದಿಲ್ಲ ಎನ್ನುವ ನಿರೀಕ್ಷೆಯು ಹೂಡಿಕೆ ಚಟುವಟಿಕೆ ಹೆಚ್ಚಾಗುವಂತೆ ಮಾಡಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

‘ವಿದೇಶಿ ಹೂಡಿಕೆದಾರರು ಷೇರುಗಳನ್ನು ಮಾರಾಟ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಅಲ್ಲದೆ, ಈ ತಿಂಗಳಿನಲ್ಲಿ ಎಂಟು ದಿನ ವಿದೇಶಿ ಹೂಡಿಕೆಯ ಒಳಹರಿವು ಹೆಚ್ಚಾಗಿದೆ. ಇದು ಭಾರತದ ಷೇರುಪೇಟೆಗಳ ಪಾಲಿಗೆ ಮಹತ್ವದ ಅಂಶ. ಹಣಕಾಸು ವಲಯದ ತ್ರೈಮಾಸಿಕ ಫಲಿತಾಂಶವು ನಿರೀಕ್ಷಿತ ಮಟ್ಟದಲ್ಲಿಯೇ ಇರುವುದು ಸಹ ಸಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್‌ ತಿಳಿಸಿದ್ದಾರೆ.

ಬ್ರೆಂಟ್ ಕಚ್ಚಾ ತೈಲ ದರವು ಶೇ 1.92ರಷ್ಟು ಹೆಚ್ಚಾಗಿ ಪ್ರತಿ ಬ್ಯಾರಲ್‌ಗೆ 109.2 ಡಾಲರ್‌ಗೆ ತಲುಪಿದೆ.

ವಲಯವಾರು ಗಳಿಕೆ (%)

ಲೋಹ;4.59

ಇಂಧನ;2.41

ತೈಲ ಮತ್ತು ಅನಿಲ;2.21

ಐ.ಟಿ;1.71

ತಂತ್ರಜ್ಞಾನ;1.68

=

ಮುಖ್ಯಾಂಶಗಳು

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಶೇ 1.38ರಷ್ಟು ಏರಿಕೆ

ಬಿಎಸ್‌ಇ ಮಿಡ್‌ಕ್ಯಾಪ್‌ ಶೇ 1.01ರಷ್ಟು ಹೆಚ್ಚಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.