
ಮುಂಬೈ: ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ತೀವ್ರಗೊಂಡಿರುವುದು ಹಾಗೂ ಜಾಗತಿಕ ಷೇರುಪೇಟೆಗಳಲ್ಲಿನ ಮಂದಗತಿಯ ವಹಿವಾಟು ಮಂಗಳವಾರ ಭಾರತದ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದವು. ಇದರಿಂದಾಗಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,065 ಅಂಶ ಕುಸಿಯಿತು.
ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹9.86 ಲಕ್ಷ ಕೋಟಿಯಷ್ಟು ಕರಗಿದೆ.
ಅಮೆರಿಕದ ಡಾಲರ್ ಎದುರು ರೂಪಾಯಿ ದುರ್ಬಲವಾಗಿದ್ದುದು, ವಿದೇಶಿ ಹೂಡಿಕೆಯ ಹೊರಹರಿವು ಕೂಡ ಹೂಡಿಕೆದಾರರ ಉತ್ಸಾಹ ತಗ್ಗಿಸಿದವು ಎಂದು ವರ್ತಕರು ಹೇಳಿದ್ದಾರೆ. ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕವು 353 ಅಂಶಗಳಷ್ಟು ಕುಸಿದಿದೆ. ದಕ್ಷಿಣ ಕೊರಿಯಾ, ಜಪಾನ್, ಶಾಂಘೈ, ಹಾಂಗ್‌ಕಾಂಗ್ ಷೇರುಪೇಟೆಗಳು ಕೂಡ ಇಳಿಕೆ ಆಗಿವೆ.
‘ಅಮೆರಿಕದ ಆಡಳಿತ ವ್ಯವಸ್ಥೆಯು ಸುಂಕವನ್ನು ತನ್ನ ವಿದೇಶ ನೀತಿಯ ಅಸ್ತ್ರದಂತೆ ಬಳಕೆ ಮಾಡುತ್ತಿದೆ. ಇದು ಜಾಗತಿಕ ಮಾರುಕಟ್ಟೆಗಳಲ್ಲಿನ ಹೂಡಿಕೆದಾರರಲ್ಲಿ ಅಸಮಾಧಾನ ಮೂಡಿಸಿದೆ. ಇದರಿಂದಾಗಿ ಷೇರುಪೇಟೆಗಳಲ್ಲಿ ಅಸ್ಥಿರತೆ ಹೆಚ್ಚಾಗಿದೆ. ಇದೇ ಹೊತ್ತಿನಲ್ಲಿ, ಸುರಕ್ಷಿತ ಹೂಡಿಕೆಗಳಾದ ಬೆಳ್ಳಿ ಮತ್ತು ಚಿನ್ನದ ಬೆಲೆ ಹೆಚ್ಚಳವಾಗಿದೆ’ ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.
‘ಜಾಗತಿಕ ಮಟ್ಟದಲ್ಲಿ ವ್ಯಾಪಾರ ಸಮರವು ತೀವ್ರಗೊಂಡಿರುವುದು ಹಾಗೂ ವಿದೇಶಿ ಹೂಡಿಕೆಯ ನಿರಂತರ ಹೊರಹರಿವು ಹೂಡಿಕೆದಾರರ ಮೇಲೆ ಕೆಟ್ಟ ಪರಿಣಾಮ ಬೀರಿವೆ. ಅಮೆರಿಕದ ಅಧ್ಯಕ್ಷರು ಯುರೋಪಿನ ಕೆಲವು ದೇಶಗಳ ಮೇಲೆ ಹೊಸದಾಗಿ ಸುಂಕ ವಿಧಿಸುವುದಾಗಿ ಹೇಳಿರುವುದು ಕಳವಳ ಮೂಡಿಸಿದೆ’ ಎಂದು ಆಶಿಕಾ ಇಂಟರ್ ನ್ಯಾಷನಲ್ ಈಕ್ವಿಟಿಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.