ADVERTISEMENT

ಸೂಚ್ಯಂಕ: 690 ಅಂಶ ಕುಸಿತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 18:17 IST
Last Updated 21 ಡಿಸೆಂಬರ್ 2018, 18:17 IST

ಮುಂಬೈ: ಹೂಡಿಕೆದಾರರು ಲಾಭ ಬಾಚಿಕೊಳ್ಳಲು ರಿಯಾಲಿಟಿ, ಬ್ಯಾಂಕಿಂಗ್‌, ಐ.ಟಿ ಮತ್ತು ವಾಹನ ಉದ್ದಿಮೆಯ ಪ್ರಮುಖ ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರಿಂದ ಶುಕ್ರವಾರದ ವಹಿವಾಟಿನಲ್ಲಿ ಷೇರುಪೇಟೆ ಸಂವೇದಿ ಸೂಚ್ಯಂಕವು 690 ಅಂಶಗಳ ಕುಸಿತ ದಾಖಲಿಸಿತು.

ಮುಂದಿನ ವರ್ಷ ಜಾಗತಿಕ ಆರ್ಥಿಕ ಬೆಳವಣಿಗೆ ದರವು ಕುಂಠಿತಗೊಳ್ಳಲಿದೆ ಎನ್ನುವ ಆತಂಕದ ಕಾರಣಕ್ಕೆ ವಾರಾಂತ್ಯದ ವಹಿವಾಟಿನಲ್ಲಿ ಮಾರಾಟ ಒತ್ತಡ ಕಂಡು ಬಂದಿತು. ರೂಪಾಯಿ ವಿನಿಮಯ ದರ ಕುರಿತ ಕಳವಳವೂ ಮಾಹಿತಿ ತಂತ್ರಜ್ಞಾನ ವಲಯದ ಷೇರುಗಳ ಬೆಲೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ರಿಲಯನ್ಸ್‌, ಇನ್ಫೊಸಿಸ್‌, ಟಿಸಿಎಸ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ, ಐಟಿಸಿ, ಮಾರುತಿ, ಎಲ್‌ಆ್ಯಂಡ್‌ಟಿ, ಎಚ್‌ಯುಎಲ್‌, ಆ್ಯಕ್ಸಿಸ್‌ ಬ್ಯಾಂಕ್‌, ವಿಪ್ರೊ ಮತ್ತು ಇಂಡಸ್‌ ಇಂಡ್‌ ಬ್ಯಾಂಕ್‌ ಷೇರುಗಳ ಬೆಲೆ ಶೇ 4ರವರೆಗೆ ಕುಸಿತ ಕಂಡವು.

ADVERTISEMENT

ಎನ್‌ಟಿಪಿಸಿ, ಪವರ್‌ಗ್ರಿಡ್‌ ಮತ್ತು ಕೋಲ್‌ ಇಂಡಿಯಾ ಷೇರುಗಳ ಬೆಲೆಗಳು ಮಾತ್ರ ಶೇ 1ರಷ್ಟು ಗಳಿಕೆ ಕಂಡವು.

ಕಾರಣಗಳು: ಲಾಭ ಮಾಡಿಕೊಳ್ಳುವ ಉದ್ದೇಶದ ಮಾರಾಟ ಒತ್ತಡ, ಬಡ್ಡಿ ದರ ಹೆಚ್ಚಿಸುವ ಬಗ್ಗೆ ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಇಂಗಿತ ವ್ಯಕ್ತಪಡಿಸಿರುವುದು, ಡಾಲರ್‌ ಎದುರು ರೂಪಾಯಿ ವಿನಿಮಯ ದರ ಕುಸಿತ, ಕೃಷಿ ಸಾಲ ಮನ್ನಾ ನಿರ್ಧಾರದಿಂದ ಬ್ಯಾಂಕ್‌ಗಳ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದೆ ಎನ್ನುವ ಆತಂಕವು ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ
ಬೀರಿದೆ.

ಸಂವೇದಿ ಸೂಚ್ಯಂಕವು 689.60 ಅಂಶ ಕಳೆದುಕೊಂಡು 35,742 ಅಂಶಗಳಿಗೆ ಕುಸಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 197 ಅಂಶಗಳಿಗೆ ಎರವಾಗಿ 10,754 ಅಂಶಗಳಿಗೆ ಇಳಿದಿದೆ.

ಅಮೆರಿಕ ಆಡಳಿತದಲ್ಲಿನ ಬಿಕ್ಕಟ್ಟು, ಚೀನಾ ಜತೆಗಿನ ವಾಣಿಜ್ಯ ಬಾಂಧವ್ಯದಲ್ಲಿ ಮತ್ತೆ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯು ಜಾಗತಿಕ ಷೇರುಪೇಟೆಯಲ್ಲಿ ತಲ್ಲಣ ಮೂಡಿಸಿದೆ. ಹೂಡಿಕೆದಾರರು ಷೇರುಗಳನ್ನು ಗರಿಷ್ಠ ಪ್ರಮಾಣದಲ್ಲಿ ಮಾರಾಟ ಮಾಡಲು ಇದು ಕೂಡ ಕಾರಣವಾಗಿದೆ.

**

₹ 2.2 ಲಕ್ಷ ಕೋಟಿ ನಷ್ಟ

ಶುಕ್ರವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 2.2 ಲಕ್ಷ ಕೋಟಿಯಷ್ಟು ಕಡಿಮೆಯಾಗಿದೆ. ಷೇರುಪೇಟೆಯ ಒಟ್ಟಾರೆ ಮಾರುಕಟ್ಟೆ ಮೌಲ್ಯವು ₹ 145.56 ಲಕ್ಷ ಕೋಟಿಯಿಂದ ₹ 143.30 ಲಕ್ಷ ಕೋಟಿಗೆ ಇಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.