ADVERTISEMENT

ಸೆನ್ಸೆಕ್ಸ್‌ 1,017 ಅಂಶ ಜಿಗಿತ

ನಿರೀಕ್ಷಿತ ಮಟ್ಟದಲ್ಲಿ ರೆಪೊ ಏರಿಕೆ: ಕರಡಿ ಕುಣಿತಕ್ಕೆ ತಡೆ

ಪಿಟಿಐ
Published 30 ಸೆಪ್ಟೆಂಬರ್ 2022, 13:37 IST
Last Updated 30 ಸೆಪ್ಟೆಂಬರ್ 2022, 13:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರ್ಥಿಕ ಬೆಳವಣಿಗೆಯ ಕುರಿತು ಅರ್‌ಬಿಐ ನೀಡಿರುವ ಮುನ್ನೋಟದ ಕಾರಣದಿಂದಾಗಿ ದೇಶದ ಷೇರುಪೇಟೆಗಳಲ್ಲಿ ಏಳು ದಿನಗಳ ಕರಡಿ ಕುಣಿತಕ್ಕೆ ಶುಕ್ರವಾರ ತಡೆ ಬಿದ್ದಿತು. ರೆಪೊ ದರ ಏರಿಕೆ ನಿರೀಕ್ಷಿತ ಮಟ್ಟದಲ್ಲಿ ಇದ್ದುದರಿಂದ ಸಕಾರಾತ್ಮಕ ವಹಿವಾಟು ನಡೆಯಿತು.

ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿರುವುದು ಸಹ ಸೂಚ್ಯಂಕಗಳ ಏರಿಕೆಗೆ ನೆರವಾಯಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆಯ ವಹಿವಾಟು ಮಂದಗತಿಯಲ್ಲಿ ಆರಂಭ ಆಯಿತು. ಬಡ್ಡಿದರ ಹೆಚ್ಚಳ ಮತ್ತು ಹಣದುಬ್ಬರದ ಮುನ್ನೋಟ ಕುರಿತು ಆರ್‌ಬಿಐ ನಿರ್ಧಾರ ಹೊರಬಿದ್ದ ಬಳಿಕ ಗೂಳಿ ಓಟ ಜೋರಾಯಿತು. ವಹಿವಾಟಿನ ಅಂತ್ಯದ ವೇಳೆಗೆ ಸೆನ್ಸೆಕ್ಸ್ 1,013 ಅಂಶ ಜಿಗಿತ ಕಂಡು 57,426 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 276 ಅಂಶ ಹೆಚ್ಚಾಗಿ 17,094 ಅಂಶಗಳಿಗೆ ಏರಿಕೆ ಕಂಡಿತು.

ADVERTISEMENT

‘ಆರ್ಥಿಕ ಬೆಳವಣಿಗೆಯ ಬಗ್ಗೆ ಆರ್‌ಬಿಐ ವಿಶ್ವಾಸ ವ್ಯಕ್ತಪಡಿಸಿರುವುದರ ಜೊತೆಗೆ ನಿರೀಕ್ಷೆಗೆ ಅನುಗುಣವಾಗಿ ಬಡ್ಡಿದರ ಹೆಚ್ಚಳ ಮಾಡಿರುವುದರಿಂದ ದೇಶದ ಷೇರುಪೇಟೆಗಳ ಏಳು ದಿನಗಳ ನಕಾರಾತ್ಮಕ ಓಟಕ್ಕೆ ತಡೆ ಬಿದ್ದಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಹಣದುಬ್ಬರದ ಅಂದಾಜನ್ನು ಶೇ 6.70ರ ಮಟ್ಟದಲ್ಲಿಯೇ ಉಳಿಸಿಕೊಳ್ಳಲಾಗಿದೆ. ಆದರೆ, ಜಿಡಿಪಿ ಬೆಳವಣಿಗೆಯು ಶೇ 7ರಷ್ಟು ಆಗಲಿದೆ ಎಂದು ಆರ್‌ಬಿಐ ಅಂದಾಜು ಮಾಡಿರುವುದು ಭಾರತದ ಆರ್ಥಿಕತೆ ಚೇತರಿಕೆ ಕಂಡುಕೊಳ್ಳುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಏಷ್ಯಾದಲ್ಲಿ, ಸೋಲ್‌, ಟೋಕಿಯೊ ಮತ್ತು ಶಾಂಘೈ ಷೇರುಪೇಟೆಗಳ ವಹಿವಾಟು ಇಳಿಕೆ ಕಂಡಿದೆ. ಹಾಂಗ್‌ಕಾಂಗ್ ಷೇರುಪೇಟೆ ಗಳಿಕೆ ಕಂಡಿತು.

ವಹಿವಾಟಿನ ವಿವರ

4.49%

ಸೆನ್ಸೆಕ್ಸ್‌ನಲ್ಲಿ ಭಾರ್ತಿ ಏರ್‌ಟೆಲ್‌ ಷೇರು ಮೌಲ್ಯದಲ್ಲಿ ಆಗಿರುವ ಹೆಚ್ಚಳ

1.45%

ಬಿಎಸ್‌ಇ ಸ್ಮಾಲ್‌ಕ್ಯಾಪ್‌ ಗಳಿಕೆ

3.39%

ವಲಯವಾರು ಟೆಲಿಕಾಂ ಇಂಡೆಕ್ಸ್‌ ಕಂಡಿರುವ ಏರಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.