ADVERTISEMENT

ಸೂಚ್ಯಂಕ 359 ಅಂಶ ಜಿಗಿತ

ಐದು ತಿಂಗಳ ಗರಿಷ್ಠ ಮಟ್ಟದಲ್ಲಿ ಷೇರುಪೇಟೆಯ ವಹಿವಾಟು ಅಂತ್ಯ

ಪಿಟಿಐ
Published 6 ಫೆಬ್ರುವರಿ 2019, 18:19 IST
Last Updated 6 ಫೆಬ್ರುವರಿ 2019, 18:19 IST
   

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ಬಡ್ಡಿದರದಲ್ಲಿ ಬದಲಾವಣೆ ಮಾಡಲಿದೆ ಎನ್ನುವುದು ತಜ್ಞರ ನಿರೀಕ್ಷೆ
ಯಾಗಿದೆ.ಹೀಗಾಗಿ ಬುಧವಾರ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದು, ಸೂಚ್ಯಂಕಗಳು ಏರಿಕೆ ಕಂಡಿವೆ.

ಸತತ ಐದನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಏರಿಕೆ ಕಂಡಿದ್ದು, ಐದು ತಿಂಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 359 ಅಂಶ ಜಿಗಿತ ಕಂಡು 36,975 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 128 ಅಂಶ ಹೆಚ್ಚಾಗಿ 11 ಸಾವಿರದ ಗಡಿ ದಾಟಿತು. 11,062 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಆರ್‌ಬಿಐ ಸಭೆಯ ಹಿನ್ನೆಲೆಯಲ್ಲಿ ದೇಶಿ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಉತ್ತಮ ಖರೀದಿ ವಹಿವಾಟು ನಡೆಸಿದರು. ಇದರಿಂದ ಸೂಚ್ಯಂಕ ಏರಿಕೆ ಕಂಡಿದೆ ಎಂದು ವರ್ತಕರು ಹೇಳಿದ್ದಾರೆ. ಬ್ಯಾಂಕಿಂಗ್‌, ಔಷಧ, ಲೋಹ ಮತ್ತು ಐಟಿ ಷೇರುಗಳು ಶೇ 2ರವರೆಗೂ ಏರಿಕೆ ದಾಖಲಿಸಿವೆ.

‘ಬಾಂಡ್‌ ಗಳಿಕೆಯಲ್ಲಿ ಅಲ್ಪ ಇಳಿಕೆ ಹಾಗೂ ರೂಪಾಯಿ ಮೌಲ್ಯದಲ್ಲಿ ತುಸು ಏರಿಕೆಯು ಸಹ ಷೇರುಪೇಟೆಗೆ ಬಲ ನೀಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

₹ ಬೆಲೆ 78ಕ್ಕೆ ಕುಸಿಯುವ ಸಂಭವ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಈ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯ ₹ 78ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ಕಾರ್ವಿ ಸಂಸ್ಥೆ ಹೇಳಿದೆ.

ಸರಕು ಮತ್ತು ಕರೆನ್ಸಿಗಳ ಬಗ್ಗೆ 2019ರ ವರದಿ ಬಿಡುಗಡೆ ಮಾಡಿರುವ ಸಂಸ್ಥೆಯು, ಸರಕು ಮತ್ತು ಕರೆನ್ಸಿ ಮಾರುಕಟ್ಟೆಗಳಿಗೆ ಈ ವರ್ಷ ಮಿಶ್ರ ಫಲಸಿಗಲಿದೆ ಎಂದಿದೆ.

‘ಭಾರತದ ರೂಪಾಯಿ ₹ 74.50 ಮಟ್ಟವನ್ನು ದಾಟಿದರೆ, ಅದು 2019ರಲ್ಲಿ ₹ 78ರವರೆಗೂ ಕುಸಿಯಲಿದೆ’ ಎಂದು ಸಂಸ್ಥೆಯ ಸಿಇಒ ರಮೇಶ್‌ ವಿ. ತಿಳಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಇರುವುದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆದಾರರು (ಎಫ್‌ಡಿಐ) ಭಾರತದ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುವುದಿಲ್ಲ.2019ರ ದ್ವಿತೀಯಾರ್ಧದಲ್ಲಿ ಚಾಲ್ತಿ ಖಾತೆ ಕೊರತೆ ಸುಧಾರಿಸುವುದು ಕಷ್ಟವಾಗಲಿದೆ.

2017–18ರಲ್ಲಿ ಚಾಲ್ತಿ ಖಾತೆ ಕೊರತೆಯು ₹ 3.45 ಲಕ್ಷ ಕೋಟಿ ಇತ್ತು. ಇದು2018–19ರ ಮೊದಲಾರ್ಧದಲ್ಲಿ ₹ 2.48 ಲಕ್ಷ ಕೋಟಿಗೆ ತಲುಪಿದೆ. ಇದೇ ರೀತಿಯಲ್ಲಿ ಮುಂದುವರೆದರೆ 2018–19ರಲ್ಲಿ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.