ADVERTISEMENT

834 ಅಂಶ ಏರಿಕೆ ದಾಖಲಿಸಿದ ಸೆನ್ಸೆಕ್ಸ್

ಪಿಟಿಐ
Published 19 ಜನವರಿ 2021, 15:46 IST
Last Updated 19 ಜನವರಿ 2021, 15:46 IST
ಬಿಎಸ್‌ಇ ಸೆನ್ಸೆಕ್ಸ್
ಬಿಎಸ್‌ಇ ಸೆನ್ಸೆಕ್ಸ್   

ಮುಂಬೈ: ಎರಡು ದಿನಗಳಿಂದ ಇಳಿಕೆಯ ಹಾದಿಯಲ್ಲಿ ಇದ್ದ ಬಿಎಸ್‌ಇ ಸೆನ್ಸೆಕ್ಸ್, ಮಂಗಳವಾರದ ವಹಿವಾಟಿನಲ್ಲಿ 834 ಅಂಶಗಳ ಭಾರಿ ಏರಿಕೆ ದಾಖಲಿಸಿತು. ಸರಿಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ ಸೆನ್ಸೆಕ್ಸ್ ಕಂಡ ದೊಡ್ಡ ಏರಿಕೆ ಇದು.

ಅಮೆರಿಕ ಮತ್ತು ಇತರ ಕೆಲವು ದೇಶಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಮತ್ತೊಂದು ಸುತ್ತಿನ ಪ್ಯಾಕೇಜ್ ಘೋಷಣೆ ಆಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಹೂಡಿಕೆದಾರರು ಷೇರುಗಳ ಖರೀದಿಗೆ ಮುಂದಾಗಿದ್ದು ಸೆನ್ಸೆಕ್ಸ್ ಏರಿಕೆಗೆ ಕಾರಣವಾಯಿತು. ಚೇತರಿಕೆ ಕಂಡುಕೊಂಡ ರೂಪಾಯಿ ಮೌಲ್ಯ ಹಾಗೂ ವಿದೇಶಿ ಬಂಡವಾಳದ ಒಳಹರಿವು ಕೂಡ ಸಕಾರಾತ್ಮಕ ವಹಿವಾಟಿಗೆ ಕೊಡುಗೆ ನೀಡಿದವು.

ರಾಷ್ಟ್ರೀಯ ಷೇರುಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ 239 ಅಂಶಗಳ ಏರಿಕೆ ಕಂಡಿತು. ಸೆನ್ಸೆಕ್ಸ್‌ನಲ್ಲಿ ಬಜಾನ್‌ ಫಿನ್‌ಸರ್ವ್‌ ಷೇರು ಗರಿಷ್ಠ ಶೇ 6.77ರಷ್ಟು ಏರಿಕೆ ಕಂಡಿತು. ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ, ಎಲ್‌ಆ್ಯಂಡ್‌ಟಿ, ಐಸಿಐಸಿಐ ಬ್ಯಾಂಕ್, ಸನ್‌ ಫಾರ್ಮಾ ಮತ್ತು ಎನ್‌ಟಿಪಿಸಿ ಷೇರುಗಳು ಹೆಚ್ಚಿನ ಏರಿಕೆ ಕಂಡವು.

ADVERTISEMENT

ಮಂಗಳವಾರದ ವಹಿವಾಟಿನಲ್ಲಿ ಟೆಕ್ ಮಹೀಂದ್ರ, ಐಟಿಸಿ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಮಾತ್ರ ಇಳಿಕೆ ದಾಖಲಿಸಿದವು. ‘ಅಮೆರಿಕದಲ್ಲಿ ಇನ್ನೊಂದು ಸುತ್ತಿನ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡಿದರೆ, ನಮ್ಮಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳವಾಗಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಇನ್ನಷ್ಟು ಏರಿಕೆ ಕಾಣಬಹುದು’ ಎಂದು ಜಿಯೋಜಿತ್ ಹಣಕಾಸು ಸೇವೆಗಳ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು 11 ಪೈಸೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.