ADVERTISEMENT

ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು: ಹೂಡಿಕೆದಾರರಿಗೆ ₹ 5.16 ಲಕ್ಷ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 19:31 IST
Last Updated 11 ಜೂನ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಷೇರುಪೇಟೆಗಳ ವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯವಾಗಿದೆ. ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹5.16 ಲಕ್ಷ ಕೋಟಿ ಕರಗಿದ್ದು, ಒಟ್ಟಾರೆ ಬಂಡವಾಳ ಮೌಲ್ಯವು ₹ 251.84 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ವಾರದ ವಹಿವಾಟಿನಲ್ಲಿ 1465 ಅಂಶ ಕುಸಿತ ಕಂಡಿದ್ದರೆ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 382 ಅಂಶ ಇಳಿಕೆ ಆಗಿದೆ.

ಜಾಗತಿಕ ವಿದ್ಯಮಾನಗಳು, ಆರ್‌ಬಿಐನಿಂದ ಬಡ್ಡಿದರ ಏರಿಕೆ ಹಾಗೂ ಹೊಂದಾಣಿಕೆಯ ನೀತಿ ಕೈಬಿಡುವ ನಿರ್ಧಾರ, ಹಣದುಬ್ಬರ ಹೆಚ್ಚಾಗು ಆತಂಕ... ಹೀಗೆ ಹಲವು ಅಂಶಗಳು ವಹಿವಾಟಿನ ಮೇಲೆ ಪರಿಣಾಮ ಬೀರಿದವು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ADVERTISEMENT

ವಿದೇಶಿ ಸಾಂಸ್ಥಿಕ ಬಂಡವಾಳ (ಎಫ್‌ಐಐ) ಹೊರಹರಿವು ಮುಂದುವರಿದಿದೆ. ವಾರದ ವಹಿವಾಟಿನಲ್ಲಿ ₹ 12,663 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಷೇರುಪೇಟೆಯಲ್ಲಿ ನೋಂದಾಯಿತ ಪ್ರಮುಖ 10 ಕಂಪನಿಗಳೂ ನಷ್ಟ ಅನುಭವಿಸಿವೆ. ಮೊದಲ ಸ್ಥಾನದಲ್ಲಿ ಇರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ (ಆರ್‌ಐಎಲ್‌) ಬಂಡವಾಳ ಮೌಲ್ಯ ₹44,311ಕೋಟಿ ಕಡಿಮೆ ಆಗಿದ್ದು,ಒಟ್ಟಾರೆ ಬಂಡವಾಳ ಮೌಲ್ಯ ₹18.36 ಲಕ್ಷ ಕೋಟಿಗೆ ಇಳಿಕೆ ಆಗಿದೆ.

ಎರಡು ಮತ್ತು ಮೂರನೇ ಸ್ಥಾನದಲ್ಲಿ ಇರುವ ಟಿಸಿಎಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರುಕಟ್ಟೆ ಮೌಲ್ಯವು ಕ್ರಮವಾಗಿ ₹ 26,875 ಕೋಟಿ ಮತ್ತು ₹ 16,433 ಕೋಟಿಗಳಷ್ಟು ಕರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.