ADVERTISEMENT

43 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

ಬ್ಯಾಂಕಿಂಗ್, ಹಣಕಾಸು ವಲಯದ ಷೇರುಗಳ ಗಳಿಕೆ

ಪಿಟಿಐ
Published 10 ನವೆಂಬರ್ 2020, 13:17 IST
Last Updated 10 ನವೆಂಬರ್ 2020, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಷೇರುಗಳ ಗಳಿಕೆಯಿಂದಾಗಿ ದೇಶದ ಷೇರುಪೇಟೆ ಸೂಚ್ಯಂಕಗಳು ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದವು.

ತಾನು ಅಭಿವೃದ್ಧಿಪಡಿಸಿರುವ ಲಸಿಕೆಯು ಕೋವಿಡ್‌–19 ತಡೆಗಟ್ಟುವಲ್ಲಿ ಶೇ 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಫೈಝರ್ ಕಂಪನಿ ಹೇಳಿಕೆ ನೀಡಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಸತತ ಏಳನೇ ವಹಿವಾಟು ಅವಧಿಯಲ್ಲಿಯೂ ಏರಿಕೆ ದಾಖಲಿಸಿದೆ. ಮಂಗಳವಾರದ ವಹಿವಾಟಿನಲ್ಲಿ 680 ಅಂಶ ಜಿಗಿತ ಕಂಡು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 43,277 ಅಂಶಗಳಿಗೆ ತಲುಪಿದೆ. ಮಧ್ಯಂತರ ವಹಿವಾಟಿನಲ್ಲಿ 43,316 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 170 ಅಂಶ ಹೆಚ್ಚಾಗಿ 12,631 ಅಂಶಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 12,644 ಅಂಶಗಳಿಗೆ ತಲುಪಿತ್ತು.

ಎರಡೂ ಸೂಚ್ಯಂಕಗಳು ಸತತ ಎರಡನೇ ವಹಿವಾಟು ಅವಧಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದವು.

ಗಳಿಕೆ: ಬಜಾಜ್‌ ಫೈನಾನ್ಸ್‌ ಕಂಪನಿಯ ಷೇರು ದಿನದ ವಹಿವಾಟಿನಲ್ಲಿ ಶೇ 8.84ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಇಂಡಸ್‌ಇಂಡ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ, ಬಜಾಜ್‌ ಫಿನ್‌ಸರ್ವ್‌, ಎಚ್‌ಡಿಎಫ್‌ಸಿ, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಒಎನ್‌ಜಿಸಿ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ ಷೇರುಗಳ ಬೆಲೆಯೂ ಹೆಚ್ಚಾಗಿದೆ.

ಇಳಿಕೆ: ಟೆಕ್‌ ಮಹೀಂದ್ರಾ, ಎಚ್‌ಸಿಎಲ್‌ ಟೆಕ್‌, ನೆಸ್ಲೆ ಇಂಡಿಯಾ, ಇನ್ಫೊಸಿಸ್‌, ಸನ್‌ ಫಾರ್ಮಾ ಮತ್ತು ಟಿಸಿಎಸ್‌ ಕಂಪನಿಗಳ ಷೇರುಗಳ ಬೆಲೆ ಶೇ 5.73ರವರೆಗೂ ಇಳಿಕೆಯಾಗಿದೆ.

ಕೋವಿಡ್‌–19ಗೆ ಲಸಿಕೆ ಕಂಡುಹಿಡಿಯುವ ಮೂರನೇ ಹಂತದ ಪರೀಕ್ಷೆ ಯಶಸ್ಸಿಯಾಗಿದೆ ಎಂದುಬಯೋಎನ್‌ಟೆಕ್‌ ಮತ್ತು ಫೈಝರ್ ಕಂಪನಿಗಳು ಹೇಳಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ. ಆರ್ಥಿಕತೆ ಚೇತರಿಕೆಯು ಸ್ಥಿರತೆಗೆ ಮರಳುವ ಸಾಧ್ಯತೆಯೂ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟಿಗೆ ಕಾರಣವಾಗಿದೆ’ ಎಂದು ರಿಲಯನ್ಸ್‌ ಸೆಕ್ಯುಟಿರೀಸ್‌ನ ಇನ್‌ಸ್ಟಿಟ್ಯೂಷನಲ್‌ ಬಿಸಿನೆಸ್‌ನ ಮುಖ್ಯಸ್ಥ ಅರ್ಜುನ್‌ ಯಶ್‌ ಮಹಾಜನ್‌ ಹೇಳಿದ್ದಾರೆ.

ಏಷ್ಯಾ, ಹಾಂಗ್‌ಕಾಂಗ್‌, ಸೋಲ್ ಮತ್ತು ಟೋಕಿಯೊದಲ್ಲಿ ಸೂಚ್ಯಂಕಗಳು ಏರಿಕೆ ಕಂಡವು. ಯುರೋಪಿನ ಷೇರುಪೇಟೆಗಳಲ್ಲಿಯೂ ಸಕಾರಾತ್ಮಕ ವಹಿವಾಟು ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.