ADVERTISEMENT

ಸತತ ಐದನೇ ವಾರ ಷೇರುಪೇಟೆ ಗಳಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 20:09 IST
Last Updated 21 ಆಗಸ್ಟ್ 2022, 20:09 IST

ಸತತ ಐದನೇ ವಾರವೂ ಷೇರುಪೇಟೆ ಸೂಚ್ಯಂಕಗಳು ಗಳಿಕೆ ದಾಖಲಿಸಿವೆ. ಆಗಸ್ಟ್ 19ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಮಟ್ಟದ ಗಳಿಕೆ ಕಂಡಿವೆ. 59,646 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.30ರಷ್ಟು ಜಿಗಿದಿದೆ. 17,758 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.34ರಷ್ಟು ಹೆಚ್ಚಳ ದಾಖಲಿಸಿದೆ. ಬಿಎಸ್ಇ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಸುಮಾರು ಶೇ 1ರಷ್ಟು ಹೆಚ್ಚಳವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ಪವರ್ ಸೂಚ್ಯಂಕ ಶೇ 3ರಷ್ಟು ಗಳಿಸಿಕೊಂಡಿದೆ. ಬಿಎಸ್ಇ ಟೆಲಿಕಾಂ ಶೇ 2ರಷ್ಟು ಮತ್ತು ಕ್ಯಾಪಿಟಲ್ ಗೂಡ್ಸ್ ಶೇ 1.8ರಷ್ಟು ಹೆಚ್ಚಳವಾಗಿವೆ. ಲೋಹ ಸೂಚ್ಯಂಕ ಶೇ 2ರಷ್ಟು ಕುಸಿದಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು₹ 3,128.96 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,808.89 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ: ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ, ಅಂಬುಜಾ ಸಿಮೆಂಟ್ಸ್, ಅದಾನಿ ಎಂಟರ್‌ಪ್ರೈಸಸ್, ಎಚ್‌ಪಿಸಿಎಲ್ ಮತ್ತು ಐಷರ್ ಮೋಟರ್ಸ್ ಜಿಗಿದಿವೆ. ಮಿಡ್ ಕ್ಯಾಪ್‌ನಲ್ಲಿ ಅದಾನಿ ಪವರ್, ಐಆರ್‌ಸಿಟಿಸಿ, ಐಸಿಐಸಿಐ ಸೆಕ್ಯೂರಿಟೀಸ್, ಜೀ ಎಂಟರ್‌ಟೇನ್ಮೆಂಟ್ ಮತ್ತು ಕ್ಲೀನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಗಳಿಗೆ ಕಂಡಿವೆ.

ADVERTISEMENT

ಸ್ಮಾಲ್‌ಕ್ಯಾಪ್‌ನಲ್ಲಿ ಫೋರ್ಬ್ಸ್ ಗೋಕಾಕ್, ರಾಣೆ ಹೋಲ್ಡಿಂಗ್ಸ್, ಜೂಬ್ಲಿಯಂಟ್ ಇಂಡಸ್ಟ್ರೀಸ್, ರೆಪ್ಕೋ ಹೋಮ್ ಫೈನಾನ್ಸ್, ಡಿಎಫ್‌ಎಂ ಫುಡ್ಸ್, ಯಾರಿ ಡಿಜಿಟಲ್ ಇಂಟಿಗ್ರೇಟೆಡ್ ಸರ್ವಿಸಸ್ ಮತ್ತು ಬಾನ್ಕೋ ಪ್ರಾಡಕ್ಟ್ಸ್‌ ಶೇ 20ರಿಂದ ಶೇ 61ರವರೆಗೆ ಜಿಗಿದಿವೆ.

ಇಳಿಕೆ: ಮಿಡ್ ಕ್ಯಾಪ್‌ನಲ್ಲಿ ಮುತ್ತೂಟ್ ಫೈನಾನ್ಸ್, ಭಾರತ್ ಫೋರ್ಜ್, ಅಪೋಲೊ ಹಾಸ್ಪಿಟಲ್ಸ್ ಆ್ಯಂಡ್ ಎಂಟರ್‌ಪ್ರೈಸಸ್ ಮತ್ತು ಬಾಯೆರ್ ಕ್ರಾಪ್ ಸೈನ್ಸ್ ಕುಸಿದಿವೆ. ಸ್ಮಾಲ್ ಕ್ಯಾಪ್‌ನಲ್ಲಿ ನವಕಾರ್ ಕಾರ್ಪೊರೇಷನ್, ಜಾಗರಣ್ ಪ್ರಕಾಶನ್, ಐನಾಕ್ಸ್ ಲೀಷರ್, ಪಿವಿಆರ್, ಡಿಬಿ ರಿಯಾಲ್ಟಿ ಶೇ 10ರಿಂದ ಶೇ 20ರಷ್ಟು ತಗ್ಗಿವೆ.

ಮುನ್ನೋಟ: ಕಳೆದ ಎರಡು ತಿಂಗಳಲ್ಲಿ ಸೆನ್ಸೆಕ್ಸ್ ಶೇ 17ರಷ್ಟು ಜಿಗಿತ ಕಂಡಿದೆ. ಹಾಗೆಂದಮಾತ್ರಕ್ಕೆ 2020-21ರಲ್ಲಿ ಸಿಕ್ಕಿದ ಎರಡಂಕಿ ಬೆಳವಣಿಗೆಯನ್ನು ನೀವು ಈಗ ನಿರೀಕ್ಷಿಸಲು ಸಾಧ್ಯವಿಲ್ಲ. ಷೇರುಪೇಟೆಯಲ್ಲಿ ಸೂಚ್ಯಂಕಗಳ ತ್ವರಿತ ಮತ್ತು ಹರಿತ ಏರಿಳಿತ ತಳ್ಳಿಹಾಕುವಂತಿಲ್ಲ. ಸದ್ಯದ ಮಟ್ಟಿಗೆ ಷೇರು ಹೂಡಿಕೆದಾರರು ವ್ಯವಸ್ಥಿತ ಹೂಡಿಕೆ ಯೋಜನೆ ಪರಿಗಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.