ADVERTISEMENT

ಷೇರು ಮಾತು: ಸ್ಟಾಕ್ ಸ್ಪ್ಲಿಟ್ ಎಂದರೇನು?

ಶರತ್ ಎಂ.ಎಸ್.
Published 18 ಅಕ್ಟೋಬರ್ 2021, 19:30 IST
Last Updated 18 ಅಕ್ಟೋಬರ್ 2021, 19:30 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಷೇರುಪೇಟೆಯಲ್ಲಿ ಒಳ್ಳೆಯ ಕಂಪನಿಯ ಷೇರು ಖರೀದಿಸಬೇಕು ಎಂದುಕೊಂಡಿರುತ್ತೀರಿ. ಆದರೆ ಆ ಕಂಪನಿಯ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ₹ 5 ಸಾವಿರ! ನಿಮ್ಮ ಬಳಿ ₹ 3 ಸಾವಿರ ಮಾತ್ರ ಇದೆ. ಇಂತಹ ಪರಿಸ್ಥಿತಿಯಲ್ಲಿ ‘ಅಯ್ಯೋ, ಆ ಷೇರು ನಮ್ಮ ಕೈಗೆಟುಕುವುದಿಲ್ಲ’ ಎಂದು ಸುಮ್ಮನಾಗುತ್ತೀರಿ. ಈ ರೀತಿಯ ಸಂದರ್ಭಗಳನ್ನು ನಿವಾರಿಸಲು ಕಂಪನಿಗಳು ಷೇರುಪೇಟೆಯಲ್ಲಿ ಸ್ಟಾಕ್ ಸ್ಪ್ಲಿಟ್ (ಮುಖಬೆಲೆ ಸೀಳಿಕೆ) ವಿಧಾನ ಬಳಸುತ್ತವೆ.

ಏನಿದು ಸ್ಟಾಕ್ ಸ್ಪ್ಲಿಟ್?: ಷೇರುಪೇಟೆಗೆ ಸೇರ್ಪಡೆಯಾದ ಪ್ರತಿ ಕಂಪನಿಯೂ ತನ್ನ ಹೂಡಿಕೆದಾರರಿಗೆ ಷೇರುಗಳನ್ನು ವಿತರಿಸುತ್ತದೆ. ಹೀಗೆ ಕೂಡುವ ಪ್ರತಿ ಷೇರಿಗೂ ಒಂದು ಮುಖ ಬೆಲೆ (face value) ಇರುತ್ತದೆ. ಮುಖ ಬೆಲೆಯನ್ನು ಸರಳವಾಗಿ ಷೇರಿನ ಮೂಲ ಬೆಲೆ ಎನ್ನಬಹುದು.ಪ್ರತಿ ಕಂಪನಿಯ ಷೇರಿನ ಮೂಲ ಬೆಲೆಯೂ ಒಂದೊಂದು ರೀತಿಯಲ್ಲಿರಬಹುದು. ಒಂದು ಕಂಪನಿಯ ಷೇರಿನ ಮುಖ ಬೆಲೆ ₹ 5 ಇದ್ದರೆ ಮತ್ತೊಂದರದ್ದು ₹ 10 ಇರಬಹುದು.

ಷೇರಿನ ಮುಖ ಬೆಲೆ ವಿಭಜಿಸುವ ಪ್ರಕ್ರಿಯೆಗೆ ಸ್ಟಾಕ್ ಸ್ಪ್ಲಿಟ್ ಎನ್ನುತ್ತಾರೆ, ಉದಾಹರಣೆಗೆ ಇತ್ತೀಚೆಗೆ ಇಂಡಿಯನ್ ರೈಲ್ವೆ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಷೇರಿನ ಮುಖ ಬೆಲೆ ಸೀಳಿಕೆಯ ಘೋಷಣೆ ಮಾಡಿದೆ. ಸದ್ಯ ಹೂಡಿಕೆದಾರ ಹೊಂದಿರುವ ₹ 10 ಮುಖಬೆಲೆಯ ಒಂದು ಷೇರಿಗೆ ಪ್ರತಿಯಾಗಿ ₹ 2 ಮುಖಬೆಲೆಯ ಐದು ಷೇರುಗಳು ಸಿಗಲಿವೆ. ಅಂದರೆ ಹತ್ತು ಐಆರ್‌ಸಿಟಿಸಿ ಷೇರುಗಳನ್ನು ಹೊಂದಿರುವವರಿಗೆ ಐವತ್ತು ಐಆರ್‌ಸಿಟಿಸಿ ಷೇರುಗಳು ಲಭಿಸಲಿವೆ. ಅಕ್ಟೋಬರ್ 29ರ ಒಳಗಾಗಿ (ರೆಕಾರ್ಡ್ ಡೇಟ್) ಐಆರ್‌ಸಿಟಿಸಿ ಷೇರುಗಳನ್ನು ಹೊಂದಿದವರಿಗೆ ಸ್ಟಾಕ್ ಸ್ಪ್ಲಿಟ್‌ನ ಲಾಭ ಸಿಗಲಿದೆ.

ADVERTISEMENT

ಸ್ಟಾಕ್ ಸ್ಪ್ಲಿಟ್ ಮಾಡುವುದೇಕೆ?: ಕಂಪನಿಯೊಂದರ ಷೇರಿನ ಬೆಲೆ ಹೆಚ್ಚಾದಾಗ ಸಾಮಾನ್ಯ ಹೂಡಿಕೆದಾರರು ಆ ಷೇರನ್ನು ಹೆಚ್ಚು ಬೆಲೆಗೆ ಕೊಳ್ಳುವ ಮನಸ್ಸು ಮಾಡುವುದಿಲ್ಲ. ಈ ಅಂಶ ಆಧರಿಸಿ ಷೇರಿನ ಮುಖಬೆಲೆ ತಗ್ಗಿಸಲು ಅವಕಾಶ ಮಾಡಿಕೊಡಲಾಗಿದೆ. ಸ್ಟಾಕ್ ಸ್ಪ್ಲಿಟ್ ಮಾಡಿದಾಗ ಷೇರಿನ ಮುಖ ಬೆಲೆ ಇಳಿಕೆಯಾಗಿ ಷೇರುಗಳ ಸಂಖ್ಯೆ ಹೆಚ್ಚುತ್ತದೆ. ಐಆರ್‌ಸಿಟಿಸಿ ಷೇರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಸದ್ಯ ಒಂದು ಷೇರಿನ ಮುಖಬೆಲೆ ₹ 10. ಸ್ಟಾಕ್ ಸ್ಪ್ಲಿಟ್ ಆದ ಮೇಲೆ ಪ್ರತಿ ಷೇರಿನ ಮುಖಬೆಲೆ ₹ 2ಕ್ಕೆ ಇಳಿಕೆಯಾಗಿ, ಒಂದು ಷೇರು ಹೊಂದಿದ್ದವರಿಗೆ ಐದು ಷೇರುಗಳು ಸಿಗಲಿವೆ.

ಸ್ಟಾಕ್ ಸ್ಪ್ಲಿಟ್ ಆದಾಗ ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರುಗಳ ಸಂಖ್ಯೆ ಮಾತ್ರ ಹೆಚ್ಚಾಗಲಿದೆ. ಸ್ಟಾಕ್ ಸ್ಪ್ಲಿಟ್ ಆದಾಗ, ಅದಾಗಲೇ ಷೇರು ಹೊಂದಿದ್ದವರಿಗೆ ಯಾವುದೇ ಖರ್ಚಿಲ್ಲದೆ ಹೆಚ್ಚುವರಿ ಷೇರುಗಳು ಸಿಗುತ್ತವೆ. ಹೊಸದಾಗಿ ಒಳ್ಳೆಯ ಕಂಪನಿಯ ಷೇರು ಖರೀದಿಸಬೇಕು ಎನ್ನುವವರಿಗೆ ಕಡಿಮೆ ಬೆಲೆಗೆ ಷೇರುಗಳು ಲಭಿಸುತ್ತವೆ.

ಷೇರಿನ ಮುಖಬೆಲೆ ಸೀಳಿಕೆಯಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರುಗಳ ಸಂಖ್ಯೆ ಹೆಚ್ಚಾಗಿ ವಹಿವಾಟಿಗೆ ವೇಗ ದೊರಕುತ್ತದೆ. ಗಮನಿಸಿ, ಮುಖಬೆಲೆ ಸೀಳಿಕೆಯು ಬೆಲೆ ಹೆಚ್ಚಳವಾಗಿರುವ ಷೇರುಗಳಲ್ಲಿ ಮಾತ್ರವಲ್ಲದೆ, ಪೆನ್ನಿ ಸ್ಟಾಕ್‌ಗಳಲ್ಲೂ ನಡೆಯುತ್ತದೆ. ಹಾಗಾಗಿ ಉತ್ತಮ ಕಂಪನಿಗಳನ್ನು ಮಾತ್ರ ಮುಖಬೆಲೆ ಸೀಳಿಕೆ ಸಂದರ್ಭದಲ್ಲಿ ಆಯ್ಕೆ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.