ADVERTISEMENT

ಪೇಟೆಯಲ್ಲಿ ಮಾರಾಟದ ಒತ್ತಡ

ಎನ್‌ಬಿಎಫ್‌ಸಿಗೆ ನಷ್ಟ l ವಾರದ ವಹಿವಾಟು ನಕಾರಾತ್ಮಕ ಮಟ್ಟದಲ್ಲಿ ಅಂತ್ಯ

ಪಿಟಿಐ
Published 20 ಅಕ್ಟೋಬರ್ 2018, 18:36 IST
Last Updated 20 ಅಕ್ಟೋಬರ್ 2018, 18:36 IST
   

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ನಕಾರಾತ್ಮಕ ಮಟ್ಟದಲ್ಲಿ ಅಂತ್ಯಗೊಂಡಿದೆ.

ಆಯುಧಪೂಜೆ ಪ್ರಯುಕ್ತ ಗುರುವಾರ ವಹಿವಾಟಿಗೆ ರಜೆ ಇತ್ತು. ಹೀಗಾಗಿ ನಾಲ್ಕು ದಿನಗಳ ವಹಿವಾಟಿನಲ್ಲಿ ಎರಡು ದಿನಗಳು ಮಾತ್ರವೇ ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ನಡೆಯಿತು.

ಮಂಗಳವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) 35 ಸಾವಿರದ ಗಡಿ ದಾಟಿತ್ತು. ಆದರೆ ಶುಕ್ರವಾರದ ವಹಿವಾಟಿನಲ್ಲಿ ನಗದು ಕೊರತೆ ಕಾರಣದಿಂದಾಗಿ ಎನ್‌ಬಿಎಫ್‌ಸಿ ಷೇರುಗಳು ಹೆಚ್ಚಿನ ಹಾನಿಗೊಳಗಾದವು. ಇದರಿಂದ ಸೂಚ್ಯಂಕ 464 ಅಂಶ ಕುಸಿತ ಕಾಣುವ ಮೂಲಕ ವಾರದ ವಹಿವಾಟು ನಕಾರಾತ್ಮಕ ಅಂತ್ಯ ಕಾಣುವಂತಾಯಿತು.

ADVERTISEMENT

ದೇಶಿ ಸಾಂಸ್ಥಿಕ ಹೂಡಿಕೆಯ ಬಲದಿಂದ ಸೂಚ್ಯಂಕ ಸೋಮವಾರ 132 ಅಂಶ ಏರಿಕೆ ಕಂಡಿತು. ಎರಡನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ಉತ್ತೇಜನಕಾರಿಯಾಗಿದೆ. ಇದು ಮಂಗಳವಾರದ ವಹಿವಾಟಿನಲ್ಲಿ ಸೂಚ್ಯಂಕವನ್ನು 297 ಅಂಶಗಳಷ್ಟು ಏರಿಕೆ ಕಾಣುವಂತೆ ಮಾಡಿತು. ದಿನದ ವಹಿವಾಟು 35 ಸಾವಿರದ ಗಡಿಯನ್ನು ದಾಟಿತು. ಆದರೆ, ಬುಧವಾರ ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಸಿದರು.

ಇದರ ಜತೆಗೆ ಎನ್‌ಬಿಎಫ್‌ಸಿಗಳಲ್ಲಿ ನಗದು ಕೊರತೆ ಸಮಸ್ಯೆ ಎದುರಾಗಿರುವುದು ಸಹ ಸೂಚ್ಯಂಕವನ್ನು 383 ಅಂಶಗಳಷ್ಟು ಇಳಿಕೆ ಕಾಣುವಂತೆ ಮಾಡಿತು. ಇದರಿಂದ ದಿನದ ವಹಿವಾಟು ಮತ್ತೆ 35 ಸಾವಿರದಿಂದ ಕೆಳಗಿಳಿಯಿತು.

ಶುಕ್ರವಾರಮಾಹಿತಿ ತಂತ್ರಜ್ಞಾನ (ಐ.ಟಿ) ಮತ್ತು ಹಣಕಾಸು ಕಂಪನಿಗಳ ಷೇರುಗಳು ನಗದು ಕೊರತೆ ಆತಂಕದಿಂದ ಸೂಚ್ಯಂಕವನ್ನು 464 ಅಂಶ ಕುಸಿಯುವಂತೆ ಮಾಡಿದವು.34,315 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ವಾರದ ವಹಿವಾಟಿನಲ್ಲಿ ಸೂಚ್ಯಂಕ ಒಟ್ಟಾರೆ 417 ಅಂಶ ಇಳಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಶುಕ್ರವಾರ 149 ಅಂಶ ಇಳಿಕೆಯಾಗಿ 10,303 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.ವಾರದ ವಹಿವಾಟಿನಲ್ಲಿ ನಿಫ್ಟಿ ಒಟ್ಟಾರೆ 168 ಅಂಶ ಇಳಿಕೆ ಕಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗುತ್ತಿರುವ ಏರಿಳಿತ, ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ ಹಾಗೂ ಅಮೆರಿಕ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ವಾಣಿಜ್ಯ ಸಂಘರ್ಷವು ದೇಶದ ಷೇರುಪೇಟೆಗಳ ವಹಿವಾಟಿನ ಮೇಲೆ ಪ್ರಭಾವ ಬೀರಿವೆ.

ಕರಗುತ್ತಿದೆ ಹೂಡಿಕೆದಾರರ ಸಂಪತ್ತು

ಷೇರುಪೇಟೆಯ ವಹಿವಾಟು ಇಳಿಕೆ ಕಾಣುತ್ತಿರುವಂತೆಯೇ ಹೂಡಿಕೆದಾರರ ಸಂಪತ್ತು ಮೌಲ್ಯವೂ ಕರಗಲಾರಂಭಿಸಿದೆ. ವಾರದ ವಹಿವಾಟಿನಲ್ಲಿ ಹೂಡಿಕೆದಾರ ಸಂಪತ್ತು ಮೌಲ್ಯ ₹ 1.68 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 138.68 ಲಕ್ಷ ಕೋಟಿಯಿಂದ ₹ 137 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ಸೆಪ್ಟೆಂಬರ್‌ ತಿಂಗಳ ಅಂತ್ಯದಲ್ಲಿ ಬಂಡವಾಳ ಮೌಲ್ಯ ₹ 145 ಲಕ್ಷ ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಅಕ್ಟೋಬರ್‌ 19ರವರೆಗಿನ ವಹಿವಾಟಿನಲ್ಲಿ ₹ 8 ಲಕ್ಷ ಕೋಟಿಯಷ್ಟು ಸಂಪತ್ತು ಕರಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.