ADVERTISEMENT

ಷೇರುಪೇಟೆ | ಹಬ್ಬದ ಸಂದರ್ಭದಲ್ಲಿ ಚೇತರಿಕೆ

ಅವಿನಾಶ್ ಕೆ.ಟಿ
Published 23 ಅಕ್ಟೋಬರ್ 2022, 20:45 IST
Last Updated 23 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಕ್ಟೋಬರ್ 21ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಸಿಕೊಂಡಿವೆ. 59,307 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 2.39ರಷ್ಟು ಗಳಿಸಿಕೊಂಡಿದೆ. 17,576 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 2.27ರಷ್ಟು ಜಿಗಿದಿದೆ. ದೀಪಾವಳಿ ಸಂದರ್ಭದಲ್ಲಿ ವ್ಯಾಪಾರ ವಹಿವಾಟು ಹೆಚ್ಚಳ ನಿರೀಕ್ಷೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಸಕರಾತ್ಮಕತೆ, ದೇಶಿಯ ಸಂಸ್ಥೆಗಳಿಂದ ನಿರೀಕ್ಷಿತ ತ್ರೈಮಾಸಿಕ ಫಲಿತಾಂಶ, ವಿದೇಶಿ ಹೂಡಿಕೆದಾರರಿಂದ ಷೇರುಗಳ ಖರೀದಿ ಭರಾಟೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಚೇತರಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 11ರಷ್ಟು ಹೆಚ್ಚಳವಾಗಿದೆ. ಬ್ಯಾಂಕ್ ಸೂಚ್ಯಂಕ ಶೇ 3.7ರಷ್ಟು, ಅನಿಲ ಮತ್ತು ತೈಲ ಸೂಚ್ಯಂಕ ಶೇ 3.4ರಷ್ಟು ಜಿಗಿದಿವೆ. ಮತ್ತೊಂದೆಡೆ ಲೋಹ ಮತ್ತು ಮಾಧ್ಯಮ ಸೂಚ್ಯಂಕಗಳು ಅಲ್ಪ ಪ್ರಮಾಣದ ಕುಸಿತ ದಾಖಲಿಸಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,324.34 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,569.49 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ, ಅದಾನಿ ಟ್ರಾನ್ಸ್‌ಮಿಷನ್, ನೆಸ್ಲೆ ಇಂಡಿಯಾ ಮತ್ತು ಟೋಟಲ್ ಗ್ಯಾಸ್ ಜಿಗಿದಿವೆ. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 0.4ರಷ್ಟು ಗಳಿಸಿಕೊಂಡಿದ್ದು, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಎನ್‌ಎಚ್‌ಪಿಸಿ, ಬ್ಯಾಂಕ್ ಆಫ್ ಇಂಡಿಯಾ, ಸುಪ್ರೀಂ ಇಂಡಸ್ಟ್ರೀಸ್, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಹೆಚ್ಚಳ ದಾಖಲಿಸಿವೆ. ಡೆಲ್ಲಿವರಿ, ಪಿಬಿ ಫಿನ್‌ಟೆಕ್, ಟಾಟಾ ಎಲ್ಸಿ, ಸಂವರ್ಥನಾ ಮದರ್ ಸನ್ ಇಂಟರ್ ನ್ಯಾಷನಲ್, ಕ್ರಿಸೆಲ್, ಎಬಿಬಿ ಇಂಡಿಯಾ ಮತ್ತು ಲಾರಸ್ ಲ್ಯಾಬ್ಸ್ ಶೇ 5ರಿಂದ ಶೇ 31ರಷ್ಟು ಇಳಿಕೆಯಾಗಿವೆ.

ADVERTISEMENT

ಮುನ್ನೋಟ: ಅಕ್ಟೋಬರ್ 24ರಂದು ಮುಹೂರ್ತ ವಹಿವಾಟಿನ ಉದ್ದೇಶದಿಂದ ಷೇರುಪೇಟೆಯಲ್ಲಿ ಸಂಜೆ 6.15ರಿಂದ 7.15ರವರೆಗೆ ವಹಿವಾಟು ನಡೆಯಲಿದೆ. ಈ ವಾರ ಡಾಬರ್, ಕ್ರಾಪ್ಟನ್, ಸೆಂಚುರಿ ಟೆಕ್ಸ್, ಬಂಧನ್ ಬ್ಯಾಂಕ್, ಮಾರುತಿ, ಪಿಸಿ ಜ್ಯುವೆಲರ್, ಎಸ್‌ಐ ಕಾರ್ಡ್ಸ್, ಟಾಟಾ ಪವರ್, ಟಾಟಾ ಕೆಮಿಕಲ್ಸ್, ಐಐಎಫ್‌ಎಲ್, ಆರ್‌ಇಸಿ ಲಿಮಿಟೆಡ್, ಎನ್‌ಟಿಪಿಸಿ, ಸೆಂಟ್ ಗೊಬೆನ್, ಪಿಎನ್‌ಬಿ ಹೌಸಿಂಗ್, ಎವರಿಡೇ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ಬೆಳವಣಿಗೆಗಳ ಜೊತೆ ದೇಶಿ ವಿದ್ಯಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.