ADVERTISEMENT

ಬುಲ್ ಮತ್ತು ಬೇರ್ ಮಾರ್ಕೆಟ್ ಎಂದರೇನು?

ಶರತ್ ಎಂ.ಎಸ್.
Published 4 ಅಕ್ಟೋಬರ್ 2021, 17:10 IST
Last Updated 4 ಅಕ್ಟೋಬರ್ 2021, 17:10 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಷೇರುಪೇಟೆಯಲ್ಲಿ ಗೂಳಿ ಓಟ, ದಾಖಲೆ ಬರೆದ ಸೂಚ್ಯಂಕಗಳು, ಕರಡಿ ಹಿಡಿತಕ್ಕೆ ಸೆನ್ಸೆಕ್ಸ್- ನಿಫ್ಟಿ ಭಾರೀ ಕುಸಿತ... ಹೀಗೆ ಷೇರುಪೇಟೆಯ ಸ್ಥಿತಿಗತಿಗಳನ್ನು ಸುದ್ದಿ ಮಾಧ್ಯಮಗಳಲ್ಲಿ ವಿಶ್ಲೇಷಣೆ ಮಾಡುವುದನ್ನು ಗಮನಿಸಿರುತ್ತೀರಿ. ಆದರೆ, ವಾಸ್ತವದಲ್ಲಿ ‘ಗೂಳಿ ಓಟ’ ಮತ್ತು ‘ಕರಡಿ ಹಿಡಿತ’ ಎಂದರೇನು?

ಷೇರು ಮಾರುಕಟ್ಟೆಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ದಿನನಿತ್ಯ ಬಳಕೆಯಾಗುವ ಈ ಪದಗಳ ಮಹತ್ವವೇನು? ಗೂಳಿ ಓಟ ಅಥವಾ ಕರಡಿ ಹಿಡಿತದಿಂದ ಹೂಡಿಕೆದಾರನಿಗೆ ಉಂಟಾಗುವ ಲಾಭ-ನಷ್ಟವೇನು?

ಏನಿದು ಗೂಳಿ ಓಟ, ಕರಡಿ ಹಿಡಿತ?: ಷೇರುಪೇಟೆ ಬಗ್ಗೆ ಮಾತನಾಡುವಾಗ ‘ಬುಲ್ ಮಾರ್ಕೆಟ್’ ಮತ್ತು ‘ಬೇರ್ ಮಾರ್ಕೆಟ್’ ಎನ್ನುವ ಪದ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಷೇರು ಮಾರುಕಟ್ಟೆ ಸಕಾರಾತ್ಮಕ ಹಾದಿಯಲ್ಲಿದೆಯೋ ನಕಾರಾತ್ಮಕ ಹಾದಿ ತುಳಿದಿದೆಯೋ ಎನ್ನುವುದನ್ನು ಬುಲ್ ಮತ್ತು ಬೇರ್ ಮಾರ್ಕೆಟ್ ಪದಗಳು ಸೂಚಿಸುತ್ತವೆ. ಬುಲ್ (ಗೂಳಿ) ಎನ್ನುವುದು ಷೇರು ಮಾರುಕಟ್ಟೆಯಲ್ಲಿನ ಆಶಾವಾದದ ಸಂಕೇತ. ಕರಡಿ (ಬೇರ್) ಷೇರುಪೇಟೆಯಲ್ಲಿ ಆವರಿಸಿದ ನಿರಾಶಾವಾದದ ಸೂಚಕ.

ADVERTISEMENT

ಷೇರು ಬೆಲೆಗಳು ನಿರಂತರವಾಗಿಏರಿಕೆ ಕಂಡರೆ ಅದನ್ನು ಗೂಳಿ ಪಥ (ಬುಲ್ ಪೇಸ್) ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಲಾಭ ಗಳಿಕೆಯ ಉದ್ದೇಶದೊಂದಿಗೆ ಹೆಚ್ಚೆಚ್ಚು ಷೇರುಗಳನ್ನು ಖರೀದಿಸುತ್ತಾರೆ. ಸಾಮಾನ್ಯವಾಗಿ, ಅರ್ಥ ವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದ್ದಾಗ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಇರುತ್ತದೆ. ಆರ್ಥಿಕ ಹಿಂಜರಿತವಿದೆ, ನಿರೋದ್ಯೋಗ ಸಮಸ್ಯೆಯಿದೆ, ಷೇರುಪೇಟೆಯಲ್ಲಿ ನೋಂದಾಯಿತ ಆಗಿರುವ ಕಂಪನಿಗಳು ಬೆಳವಣಿಗೆ ಸಾಧಿಸುವ ಸಾಧ್ಯತೆ ಕಮ್ಮಿ ಎನ್ನುವ ಮುಂದಾಲೋಚನೆಯೊಂದಿಗೆ ಷೇರುಗಳ ಮಾರಾಟದ ಒತ್ತಡ ಹೆಚ್ಚಾದರೆ ಅದನ್ನು ಕರಡಿ ಪಥ (ಬೇರ್ ಪೇಸ್) ಎನ್ನುತ್ತಾರೆ. ಈ ವೇಳೆ ಷೇರುಗಳ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬರುತ್ತದೆ.

ಏರಿಳಿತಕ್ಕೆ ಹೆದರಬೇಡಿ: ಷೇರು ಮಾರುಕಟ್ಟೆಯಲ್ಲಿ ಏರಿಳಿತ ಎನ್ನುವುದು ತೀರಾ ಸಾಮಾನ್ಯ ಸಂಗತಿ. ಇತ್ತೀಚಿನ ಉದಾಹರಣೆಯನ್ನು ತೆಗೆದುಕೊಂಡರೆ, 2020ರ ಮಾರ್ಚ್‌ನಲ್ಲಿ ಕೋವಿಡ್ ಪ್ರಕರಣಗಳು ಜಾಗತಿಕವಾಗಿ ಹೆಚ್ಚಳವಾದಾಗ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಕರಡಿ ಪಥ ಹಿಡಿದು, 25,000 ಅಂಶಗಳಿಗೆ ಕುಸಿದಿತ್ತು. ಆದರೆ ಕೋವಿಡ್ ಪ್ರಕರಣಗಳು ಇಳಿಕೆಯಾಗುವ ಜತೆಗೆ ಲಸಿಕೆ ಲಭ್ಯತೆ ಹೆಚ್ಚಾದಾಗ ಸೆನ್ಸೆಕ್ಸ್ ಗಣನೀಯವಾಗಿ ಏರಿಕೆ ಕಂಡು 60,000 ಅಂಶಗಳ ಗಡಿ ಮುಟ್ಟಿ ಹೊಸ ದಾಖಲೆ ಬರೆಯಿತು.

ಸರಳವಾಗಿ ಹೇಳುವುದಾದರೆ ಹಣದ ಒಳಹರಿವು ಹೆಚ್ಚಿದಾಗ ಷೇರು ಪೇಟೆ ಗೂಳಿ ಪಥದಲ್ಲಿರುತ್ತದೆ, ಹಣದ ಹೊರಹರಿವು ಹೆಚ್ಚಾದಾಗ ಪೇಟೆ ಕರಡಿ ಪಥದಲ್ಲಿರುತ್ತದೆ. ಸಣ್ಣ ಹೂಡಿಕೆದಾರರು ವಿಶ್ಲೇಷಣೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಒಳ್ಳೆಯ ಕಂಪನಿಗಳಲ್ಲಿ ಹೂಡಿಕೆ ಮಾಡುವತ್ತ ಗಮನಹರಿಸಬೇಕು.

ಆಗ ಹೂಡಿಕೆದಾರನಿಗೆ ಬಂಡವಾಳ ನಷ್ಟ ಉಂಟಾಗುವುದಿಲ್ಲ. ಷೇರು ಮಾರುಕಟ್ಟೆ ಹೂಡಿಕೆ ಮಾಡುವಾಗ ಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರ ಈ ಎರಡು ನಿಯಮಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ. ‘ಒಂದನೆಯ ನಿಯಮ: ಎಂದಿಗೂ ಹಣ ಕಳೆದುಕೊಳ್ಳಬೇಡಿ, ಎರಡನೆಯ ನಿಯಮ: ಒಂದನೇ ನಿಯಮವನ್ನು ಎಂದಿಗೂ ಮರೆಯಬೇಡಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.