ಸೆನ್ಸೆಕ್ಸ್
ಮುಂಬೈ: ನಾಳೆ (ಏಪ್ರಿಲ್ 2) ಅಮೆರಿಕವು ಭಾರತ ಸೇರಿದಂತೆ ಇತರೆ ದೇಶಗಳ ವಿರುದ್ಧ ಸುಂಕ ಹೇರುವ ನಿರ್ಧಾರ ಕೈಗೊಳ್ಳುವ ಹಿನ್ನೆಲೆ ಅನಿಶ್ಚಿತ ವಾತಾವರಣದ ನಡುವೆ ಐಟಿ ಮತ್ತು ಖಾಸಗಿ ಬ್ಯಾಂಕ್ ಷೇರುಗಳಲ್ಲಿನ ಮಾರಾಟದಿಂದಾಗಿ ಮಂಗಳವಾರ ಷೇರು ಮಾರುಕಟ್ಟೆ ಕುಸಿತ ಕಂಡಿದೆ.
ಹೊಸ ಹಣಕಾಸು ವರ್ಷವನ್ನು ನಷ್ಟದ ಸೂಚನೆಯೊಂದಿಗೆ ಪ್ರಾರಂಭಿಸಿದ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ₹1,390.41 ಅಂಶಗಳಷ್ಟು ಕುಸಿದು 76,024ಕ್ಕೆ ಸ್ಥಿರವಾಯಿತು. ಸೆನ್ಸೆಕ್ಸ್‌ನ 28 ಘಟಕಗಳು ಕುಸಿತ ಕಂಡರೆ, ಕೇವಲ ಎರಡು ಮಾತ್ರ ಮುನ್ನಡೆ ಸಾಧಿಸಿದವು. ದಿನದ ವಹಿವಾಟಿನಲ್ಲಿ, ಸೂಚ್ಯಂಕವು 1,502 ಅಂಶಗಳಷ್ಟು ಕುಸಿದು 75,912ಕ್ಕೆ ತಲುಪಿತ್ತು.
ಎನ್‌ಎಸ್‌ಇ ನಿಫ್ಟಿ 353.65 ಅಂಶಗಳಷ್ಟು ಕುಸಿದು 23,165ಕ್ಕೆ ತಲುಪಿತ್ತು. ಪ್ರಮುಖ ಸೂಚ್ಯಂಕಗಳು ಈ ತಿಂಗಳಿನಲ್ಲೇ ಒಂದೇ ದಿನದ ಗರಿಷ್ಠ ನಷ್ಟವನ್ನು ದಾಖಲಿಸಿವೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಪ್ರಿಲ್ 2ರಂದು ಇತರೆ ದೇಶಗಳ ಮೇಲೆ ಸುಂಕವನ್ನು ವಿಧಿಸುವ ಘೋಷಣೆ ಮಾಡಲಿದ್ದಾರೆ. ಈ ದಿನವನ್ನು ಅವರು ಅಮೆರಿಕದ ವಿಮೋಚನಾ ದಿನ ಎಂದು ಬಣ್ಣಿಸಿದ್ದಾರೆ. ಇದರ ಆತಂಕ ಷೇರುಪೇಟೆಗಳ ಮೇಲೆ ಪರಿಣಾಮ ಬೀರಿದೆ.
ಸೆನ್ಸೆಕ್ಸ್ ಪಟ್ಟಿಯ ಎಚ್‌ಸಿಎಲ್ ಟೆಕ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಇನ್ಫೋಸಿಸ್, ಟೈಟಾನ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ರಿಲಯನ್ಸ್ ಇಂಡಸ್ಟ್ರೀಸ್, ಲಾರ್ಸೆನ್ ಅಂಡ್ ಟೂಬ್ರೊ, ಟೆಕ್ ಮಹೀಂದ್ರ ಮತ್ತು ಎನ್‌ಟಿಪಿಸಿ ಪ್ರಮುಖವಾಗಿ ನಷ್ಟ ಕಂಡಿವೆ.
ಇಂಡಸ್‌ಇಂಡ್ ಬ್ಯಾಂಕ್ ಶೇ 5ಕ್ಕಿಂತ ಹೆಚ್ಚು ಜಿಗಿದರೆ, ಜೊಮಾಟೊ ಸ್ವಲ್ಪ ಚೇತರಿಕೆ ಕಂಡಿದೆ.
ನಾಳೆ ಅಮೆರಿಕದಿಂದ ಸುಂಕ ಘೋಷಣೆಗೆ ಮುಂಚಿತವಾಗಿ ಜಾಗತಿಕ ಮಾರುಕಟ್ಟೆಗಳ ಏರಿಳಿತದ ನಡುವೆ, ದೇಶೀಯ ಮಾರುಕಟ್ಟೆ ಇಂದು ಗಮನಾರ್ಹ ಕುಸಿತ ಕಂಡಿದೆ.
ಅಮೆರಿಕ ಮಾರುಕಟ್ಟೆಗೆ ನೇರ ಸಂಬಂಧವಿರುವ ಕಾರಣ ಐಟಿ ವಲಯದ ಮೇಲೆ ಅಧಿಕ ಪರಿಣಾಮ ಬೀರಿದೆ.
ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಸಿಯೋಲ್, ಟೋಕಿಯೊ, ಶಾಂಘೈ ಮತ್ತು ಹಾಂಗ್ ಕಾಂಗ್ ಏರಿಕೆ ಕಂಡಿವೆ. ಯುರೋಪ್ ಮಾರುಕಟ್ಟೆಗಳು ಲಾಭದೊಂದಿಗೆ ವಹಿವಾಟು ನಡೆಸಿದವು. ಸೋಮವಾರ ಅಮೆರಿಕ ಮಾರುಕಟ್ಟೆಗಳು ಸಕ ಏರಿಕೆಯೊಂದಿಗೆ ಕೊನೆಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.