ಮುಂಬೈ: ಐ.ಟಿ, ಆಟೊ ಮತ್ತು ಇಂಧನ ವಲಯದ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಶುಕ್ರವಾರದ ವಹಿವಾಟಿನಲ್ಲಿ ಇಳಿಕೆ ಕಂಡಿವೆ.
ಅಮೆರಿಕದ ಸುಂಕ ನೀತಿಯ ಬಗ್ಗೆ ಉಂಟಾಗಿರುವ ಅನಿಶ್ಚಿತತೆಯು ಸಹ ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 689 ಅಂಶ ಇಳಿಕೆಯಾಗಿ, 85,500ಕ್ಕೆ ವಹಿವಾಟು ಅಂತ್ಯಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 205 ಅಂಶ ಕಡಿಮೆಯಾಗಿ, 25,149ಕ್ಕೆ ಕೊನೆಗೊಂಡಿದೆ.
ಟಿಸಿಎಸ್, ಮಹೀಂದ್ರ ಆ್ಯಂಡ್ ಮಹೀಂದ್ರ, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್ಸ್, ಎಚ್‌ಸಿಎಲ್ ಟೆಕ್, ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಟ್ರೆಂಟ್, ಇನ್ಫೊಸಿಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ.
ಎಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಎಟರ್ನಲ್ ಮತ್ತು ಎಸ್‌ಬಿಐ ಷೇರಿನ ಮೌಲ್ಯದಲ್ಲಿ ಏರಿಕೆಯಾಗಿದೆ.
ಏಷ್ಯಾದ ಮಾರುಕಟ್ಟೆಯಲ್ಲಿ ದಕ್ಷಿಣ ಕೊರಿಯಾ ಮತ್ತು ಜಪಾನ್ ಸಕಾರಾತ್ಮಕ ವಹಿವಾಟು ಕಂಡಿವೆ. ಶಾಂಘೈ ಮತ್ತು ಹಾಂಗ್‌ಕಾಂಗ್ ಇಳಿಕೆ ಕಂಡಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.31ರಷ್ಟು ಏರಿಕೆಯಾಗಿದೆ. ಪ್ರತೀ ಬ್ಯಾರೆಲ್ ದರವು 68.85 ಡಾಲರ್ ಆಗಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಗುರುವಾರದ ವಹಿವಾಟಿನಲ್ಲಿ ₹221 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.