ADVERTISEMENT

ಷೇರುಪೇಟೆಯಲ್ಲಿ ಮತ್ತೆ ತಲ್ಲಣ; ₹5.10 ಲಕ್ಷ ಕೋಟಿ ನಷ್ಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮೇ 2022, 6:54 IST
Last Updated 6 ಮೇ 2022, 6:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾರದ ಕೊನೆಯ ದಿನದ ವಹಿವಾಟಿನಲ್ಲಿ ಷೇರುಪೇಟೆ ಹೂಡಿಕೆದಾರರು ₹5.10 ಲಕ್ಷ ಕೋಟಿ ಕಳೆದುಕೊಂಡಿದ್ದಾರೆ. ಇಂದು ವಹಿವಾಟು ಆರಂಭದಿಂದಲೂ ಷೇರುಪೇಟೆ ಸೂಚ್ಯಂಕಗಳು ಕುಸಿತ ದಾಖಲಿಸಿದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 1000ಕ್ಕೂ ಹೆಚ್ಚು ಅಂಶ (ಶೇ 1.95) ಇಳಿಕೆಯಾಗಿ 54,614.61 ಅಂಶ ತಲುಪಿತ್ತು. ಅದರಿಂದಾಗಿ ಸೆನ್ಸೆಕ್ಸ್‌ ಸಾಲಿನ ಕಂಪನಿಗಳು ₹5,10,150.97 ಕೋಟಿ ನಷ್ಟಕ್ಕೆ ಒಳಗಾದವು.

ಲೋಹ, ಐಟಿ, ಬ್ಯಾಂಕ್‌, ಆಟೊಮೊಬೈಲ್‌ ಹಾಗೂ ಹಣಕಾಸು ವಲಯದ ಕಂಪನಿಗಳ ಷೇರುಗಳು ಶೇಕಡ 2ರಿಂದ 3ರಷ್ಟು ಕುಸಿತ ಕಂಡಿವೆ.

ADVERTISEMENT

ಗುರುವಾರ ರಾತ್ರಿ ಅಮೆರಿಕದ ಷೇರುಪೇಟೆ, ಜಾಗತಿಕ ಷೇರುಪೇಟೆಗಳಲ್ಲಿ ಉಂಟಾಗಿರುವ ಕುಸಿತ, ಬ್ಯಾಂಕ್‌ ಬಡ್ಡಿ ದರ ಹೆಚ್ಚಳ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರಾಟ ಮಾಡಿರುವುದು ದೇಶದ ಷೇರುಪೇಟೆಗಳಲ್ಲಿ ತಲ್ಲಣ ಸೃಷ್ಟಿಸಿದೆ.

ಷೇರುಪೇಟೆ ಮಾಹಿತಿ ಪ್ರಕಾರ, ಗುರುವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹2,074.74 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಇಂದು ಬಜಾಜ್‌ ಫೈನಾನ್ಸ್‌, ವಿಪ್ರೊ, ಆ್ಯಕ್ಸಿಸ್‌ ಬ್ಯಾಂಕ್‌, ಬಜಾಜ್‌ ಫಿನ್‌ಸರ್ವ್‌, ಇನ್ಫೊಸಿಸ್‌ ಹಾಗೂ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಷೇರುಗಳು ನಷ್ಟಕ್ಕೆ ಒಳಗಾಗಿವೆ.

ಮಧ್ಯಾಹ್ನ 12ಕ್ಕೆ ಸೆನ್ಸೆಕ್ಸ್‌ 875.23 ಕಡಿಮೆಯಾಗಿ 54,827 ಅಂಶಗಳು ಹಾಗೂ ನಿಫ್ಟಿ 271.10 ಅಂಶ ಕಡಿಮೆಯಾಗಿ 16,411.55 ಅಂಶಗಳಲ್ಲಿ ವಹಿವಾಟು ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.