ಮುಂಬೈ: ಕೇಂದ್ರ ಸರ್ಕಾರಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ₹2.1 ಲಕ್ಷ ಕೋಟಿ ಲಾಭಾಂಶ ನೀಡಿದೆ. ಹಾಗಾಗಿ, ಸರ್ಕಾರವು 2024–25ನೇ ಆರ್ಥಿಕ ವರ್ಷದಲ್ಲಿಯೂ ಷೇರು ವಿಕ್ರಯದ ಮೂಲಕ ₹50 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಮಿತಿಯನ್ನೇ ಕಾಯ್ದುಕೊಳ್ಳುವ ನಿರೀಕ್ಷೆಯಿದೆ ಎಂದು ಕ್ರೆಡಿಟ್ ರೇಟಿಂಗ್ಸ್ ಸಂಸ್ಥೆ ಕೇರ್‌ಎಡ್ಜ್ ತಿಳಿಸಿದೆ.
ಫೆಬ್ರುವರಿಯಲ್ಲಿ ಮಂಡನೆಯಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ಷೇರು ವಿಕ್ರಯದ ಮೂಲಕ ₹50 ಸಾವಿರ ಕೋಟಿ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಈ ತಿಂಗಳಿನಲ್ಲಿ ಮಂಡನೆಯಾಗಲಿರುವ ಪೂರ್ಣ ಬಜೆಟ್‌ನಲ್ಲಿ ಸರ್ಕಾರವು ಇದೇ ಗುರಿ ನಿಗದಿಪಡಿಸುವ ಸಾಧ್ಯತೆಯಿದೆ ಎಂದು ಹೇಳಿದೆ.
2023–24ನೇ ಆರ್ಥಿಕ ವರ್ಷದಲ್ಲಿ ಷೇರು ವಿಕ್ರಯದ ಮೂಲಕ ಒಟ್ಟು ₹51 ಸಾವಿರ ಕೋಟಿ ಬಂಡವಾಳ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆದರೆ, ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ₹16,500 ಕೋಟಿ ಸಂಗ್ರಹ ವಾಗಿದ್ದು, ಸರ್ಕಾರವು ಬಂಡವಾಳ ಸಂಗ್ರಹಣೆಯ ಗುರಿ ತಲುಪಿಲ್ಲ.
ಸರ್ಕಾರಕ್ಕೆ ಆರ್‌ಬಿಐ ದಾಖಲೆಯ ಲಾಭಾಂಶ ಪಾವತಿಸಿದೆ. ಹಾಗಾಗಿ, ಸರ್ಕಾರದ ಆರ್ಥಿಕ ಸ್ಥಿತಿ ಸದೃಢವಾಗಿದೆ. ಒಂದು ವೇಳೆ ಸಂಪನ್ಮೂಲ ಕ್ರೋಡೀಕರಣದಲ್ಲಿ ಕೊರತೆ ಎದುರಾದರೆ ಆಸ್ತಿ ನಗದೀಕರಣಕ್ಕೆ ಮುಂದಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಸಂಗ್ರಹಿಸಲು ಉದ್ದೇಶಿಸಿರುವ ಮೊತ್ತದಲ್ಲಿ ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ (ಎಸ್‌ಸಿಐ) ಖಾಸಗೀಕರಣ ಮೂಲಕವೇ ₹12,500 ಕೋಟಿಯಿಂದ ₹22,500 ಕೋಟಿ ಬರುವ ನಿರೀಕ್ಷೆ ಇದೆ.
ಬಳಿಕ ಕಂಟೈನರ್ ಕಾರ್ಪೋರೇಷನ್ ಆಫ್ ಇಂಡಿಯಾ ಹಾಗೂ ಪವನ್ ಹನ್ಸ್ ಕಂಪನಿಯಲ್ಲಿನ ಷೇರು ಹೂಡಿಕೆ ಹಿಂತೆಗೆತಕ್ಕೆ ಮುಂದಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಕಳೆದ ಹತ್ತು ವರ್ಷಗಳಲ್ಲಿ ಷೇರು ವಿಕ್ರಯದ ಮೂಲಕ ಸರ್ಕಾರವು ₹5.2 ಲಕ್ಷ ಕೋಟಿ ಸಂಗ್ರಹಿಸಿದೆ.
₹11.5 ಲಕ್ಷ ಕೋಟಿ ಸಂಗ್ರಹ ಸಾಮರ್ಥ್ಯ
ಸರ್ಕಾರವು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಹೊಂದಿರುವ ಷೇರುಗಳ ಮಾರಾಟದ ಮೂಲಕ ₹11.5 ಲಕ್ಷ ಕೋಟಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ವರದಿ ಹೇಳಿದೆ.
ಸಾರ್ವಜನಿಕ ವಲಯದ ಉದ್ದಿಮೆಗಳಿಂದ ₹5 ಲಕ್ಷ ಕೋಟಿ ಬಂಡವಾಳ ಸಂಗ್ರಹಣೆ ಮಾಡಬಹುದಾಗಿದೆ. ವಿಮೆ ಮತ್ತು ಬ್ಯಾಂಕ್ ಷೇರುಗಳ ಮಾರಾಟದ ಮೂಲಕ ₹6.5 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಬಹುದಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.