ADVERTISEMENT

ಮ್ಯೂಚುವಲ್ ಫಂಡ್ ಹೂಡಿಕೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ವಿಚಾರಗಳು

ಅವಿನಾಶ್ ಕೆ.ಟಿ
Published 24 ಅಕ್ಟೋಬರ್ 2021, 20:25 IST
Last Updated 24 ಅಕ್ಟೋಬರ್ 2021, 20:25 IST
   

ಬಡ್ಡಿ ಪ್ರಮಾಣ ಇಳಿದಿರುವ ಈ ಕಾಲದಲ್ಲಿ ಹಣದುಬ್ಬರ ಪ್ರಮಾಣವನ್ನು ಮೀರಿ ಲಾಭಾಂಶ ತಂದುಕೊಡಬಲ್ಲ ಸಾಮರ್ಥ್ಯವಿರುವ ಹೂಡಿಕೆಗಳಲ್ಲಿ ಮ್ಯೂಚುವಲ್ ಫಂಡ್ ಮತ್ತು ಷೇರುಮಾರುಕಟ್ಟೆ ಹೂಡಿಕೆಗಳಿಗೆ ಅಗ್ರಸ್ಥಾನ. ಅಧ್ಯಯನವಿಲ್ಲದೆ ಷೇರು ಮಾರುಕಟ್ಟೆ
ಯಲ್ಲಿ ನೇರವಾಗಿ ಹೂಡಿಕೆ ಮಾಡಿದರೆ ಲಾಭಕ್ಕಿಂತ ನಷ್ಟದ ಸಾಧ್ಯತೆಯೇ ಹೆಚ್ಚು. ಈ ಕಾರಣಕ್ಕಾಗಿ ಹಲವು ಹೂಡಿಕೆದಾರರು ಮ್ಯೂಚುವಲ್ ಫಂಡ್‌ಗಳ ಮೊರೆ ಹೋಗುತ್ತಿದ್ದಾರೆ. ಮ್ಯೂಚುವಲ್ ಫಂಡ್‌ಗಳಲ್ಲಿ ಫಂಡ್ ಮ್ಯಾನೇಜರ್ ಹೂಡಿಕೆ ರಿಸ್ಕ್ಅನ್ನು ನಿರ್ವಹಿಸುವ ಕಾರಣ, ಉತ್ತಮ ಫಂಡ್ ಆಯ್ಕೆ ಮಾಡಿ ಅದರಲ್ಲಿ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಸಾಗುವುದಷ್ಟೇ ಹೂಡಿಕೆದಾರನ ಜವಾಬ್ದಾರಿ. ಮ್ಯೂಚುವಲ್ ಫಂಡ್ ಹೂಡಿಕೆಗೆ ಸಂಬಂಧಿಸಿದ ನಾಲ್ಕು ಪ್ರಮುಖ ವಿಚಾರಗಳನ್ನು ತಿಳಿದುಕೊಳ್ಳೋಣ.

ಉಳಿತಾಯದ ಜತೆಗೆ, ಹೂಡಿಕೆಯೂ ಮುಖ್ಯ!: ಅಡುಗೆ ಕೋಣೆಯ ಸಕ್ಕರೆ ಡಬ್ಬಿಯಲ್ಲಿ, ದೇವರ ಮನೆಯ ಹುಂಡಿಯಲ್ಲಿ, ಮಕ್ಕಳ ಪಿಗ್ಗಿ ಬಾಕ್ಸ್‌ನಲ್ಲಿ ಹಣ ಕೂಡಿಡುವುದು ಬಹುತೇಕರಿಗೆ ರೂಢಿ. ಆದರೆ ವಾಸ್ತವದಲ್ಲಿ, ಹೀಗೆ ಡಬ್ಬದಲ್ಲಿ ನಗದು ಸಂಗ್ರಹಿಸುತ್ತಾ ಹೋದರೆ ಸಂಪತ್ತು ಬೆಳೆಯುವುದಿಲ್ಲ. ಉಳಿಸಿದ ಹಣವನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಿದಾಗ ಮಾತ್ರ ಅದು ದ್ವಿಗುಣವಾಗುತ್ತದೆ. ಹೂಡಿಕೆಗೆ ದೊಡ್ಡ ಮೊತ್ತದ ಹಣವೇ ಬೇಕು ಎಂದೇನೂ ಇಲ್ಲ.

ಡಬ್ಬದಲ್ಲಿ ಕೂಡಿಡುವ ಐನೂರು, ಸಾವಿರ ರೂಪಾಯಿಯನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೂ ಸಾಕು, ನಿರ್ದಿಷ್ಟ ಸಮಯದ ಬಳಿಕ ದೊಡ್ಡ ಮೊತ್ತದ ಹಣವನ್ನು ನೀವು ಗಳಿಸಿಕೊಳ್ಳಬಹುದು. ಶ್ರೀಮಂತರು ಮಾತ್ರ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಆದರೆ ಶ್ರೀಸಾಮಾನ್ಯರಿಗೂ, ಸಿರಿವಂತರಿಗೂ ಅನುಕೂಲ ಮಾಡಿಕೊಡುವಂತಹ ಅನೇಕ ಮಾದರಿಯ ಮ್ಯೂಚುವಲ್ ಫಂಡ್‌ಗಳು ಇವೆ.

ADVERTISEMENT

ಮ್ಯೂಚುವಲ್ ಫಂಡ್ ಹೂಡಿಕೆಯನ್ನು ಬೇಗ ಆರಂಭಿಸಿ ನಿಯಮಿತವಾಗಿ ಹೂಡಿಕೆ ಮಾಡುತ್ತಾ ಬಂದರೆ ದೀರ್ಘಾವಧಿಯಲ್ಲಿ
ಉತ್ತಮ ಲಾಭ ಸಿಗುತ್ತದೆ. ಪ್ರತಿ ತಿಂಗಳು ಮ್ಯೂಚುವಲ್ ಫಂಡ್‌ಗಳಲ್ಲಿ ₹ 1,000 ಹೂಡಿಕೆ ಮಾಡಿ ಶೇ 12ರ ಬಡ್ಡಿ ದರದಂತೆ ಲಾಭಾಂಶ ಪಡೆದುಕೊಂಡರೂ 10 ವರ್ಷಗಳ ಬಳಿಕ ₹ 2.30 ಲಕ್ಷ ನಿಮ್ಮದಾಗುತ್ತದೆ.

ಮಾರುಕಟ್ಟೆ ಕುಸಿದಾಗ ಎಸ್ಐಪಿ ನಿಲ್ಲಿಸಬೇಕೇ?: ಮಾರುಕಟ್ಟೆ ಕುಸಿದಾಗ ಮ್ಯೂಚುವಲ್ ಫಂಡ್‌ ‘ಎನ್ಎವಿ’ (ನಿವ್ವಳ ಆಸ್ತಿ ಮೌಲ್ಯ) ತಗ್ಗುತ್ತದೆ. ಈ ಸ್ಥಿತಿಯಲ್ಲಿ ನೀವು ಎಸ್ಐಪಿ ಮೂಲಕ ಹೆಚ್ಚು ಮ್ಯೂಚುವಲ್ ಫಂಡ್ ಯುನಿಟ್‌ಗಳನ್ನು ಪಡೆದು
ಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಬಳಿ ಹೆಚ್ಚು ಯುನಿಟ್‌ಗಳಿದ್ದರೆ ಮಾರು ಕಟ್ಟೆ ಪುಟಿದೆದ್ದಾಗ ನಿಮಗೆ ಹೆಚ್ಚು ಲಾಭಾಂಶ ಸಿಗುತ್ತದೆ. ಹಾಗಾಗಿ, ಮಾರುಕಟ್ಟೆ ಕುಸಿದ ಸಂದರ್ಭದಲ್ಲಿ ಸಾಧ್ಯವಾದರೆ ಇನ್ನಷ್ಟು ಹೂಡಿಕೆ ಮಾಡಲು ಪ್ರಯತ್ನಿಸಬೇಕೇ ಹೊರತು ಎಸ್ಐಪಿಗಳನ್ನು ಸ್ಥಗಿತಗೊಳಿಸಬಾರದು.

ಎಸ್ಐಪಿಯಲ್ಲಿ ಪ್ರತಿ ತಿಂಗಳು ತೊಡಗಿಸಿದ ಹಣ ಆಯಾಯ ತಿಂಗಳಲ್ಲಿ ಕಟ್ಟಿದ ತಾರೀಕಿಗೆ ಅನುಗುಣವಾಗಿ ವಾರ್ಷಿಕ ಸರಾಸರಿ ಲೆಕ್ಕಕ್ಕೆ ಒಳಪಡುವುದರಿಂದ ನಷ್ಟ ಸಂಭವಿಸುವ ಸಾಧ್ಯತೆ ಬಹಳ ಕಡಿಮೆ ಇರುತ್ತದೆ. ಎಸ್ಐಪಿ ನಿಲ್ಲಿಸಬಾರದು ಎನ್ನುವುದಕ್ಕೆ ಇದು ಕೂಡ ಒಂದು ಪ್ರಮುಖ ಕಾರಣ.

ಎಸ್‌ಐಪಿ ಹೂಡಿಕೆ ಅಥವಾ ಭಾರೀ ಮೊತ್ತದ ಹೂಡಿಕೆ?: ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಅಥವಾ ಒಂದೇ ಬಾರಿಗೆ ದೊಡ್ಡ ಮೊತ್ತದ ಹೂಡಿಕೆ ಪೈಕಿ ಯಾವುದು ಸೂಕ್ತ ಎನ್ನುವ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡುವುದು ಸಾಧ್ಯವಿಲ್ಲ. ಮ್ಯೂಚುವಲ್ ಫಂಡ್‌ಗಳ ಬಗ್ಗೆ ನಿಮಗೆ ಎಷ್ಟು ಅರಿವಿದೆ ಎನ್ನುವುದರ ಜತೆಗೆ ಯಾವ ಫಂಡ್‌ಗಳಲ್ಲಿ, ಯಾವ ಉದ್ದೇಶಕ್ಕಾಗಿ ನೀವು ಹೂಡಿಕೆ ಮಾಡಲು ಬಯಸಿದ್ದೀರಿ ಎನ್ನುವುದನ್ನು ಆಧರಿಸಿ ಇದನ್ನು ತೀರ್ಮಾನಿಸಬೇಕಾಗುತ್ತದೆ. ನೀವು ಪ್ರತಿ ತಿಂಗಳ ವೇತನದಲ್ಲಿ ನಿರ್ದಿಷ್ಟ ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾ ದೊಡ್ಡ ಮೊತ್ತವನ್ನು ಪೇರಿಸಲು ಎಸ್‌ಐಪಿ ಸೂಕ್ತ. ಎಸ್‌ಐಪಿಯಿಂದ ಮಾರುಕಟ್ಟೆ ಏರಿಳಿತದ ಅನುಕೂಲ ನಿಮಗೆ ಸಿಗುತ್ತದೆ. ನಿಮ್ಮ ಬಳಿ ಬೋನಸ್, ಆಸ್ತಿ ಮಾರಾಟ ಅಥವಾ ನಿವೃತ್ತಿಯಿಂದ ಬಂದಿರುವ ಹೆಚ್ಚುವರಿ ಹಣ ಇದ್ದು, ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ಇದ್ದಲ್ಲಿ, ಅದನ್ನು ಡೆಟ್ ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ತೊಡಗಿಸಬಹುದು. ಆದರೆ, ನೀವು ಮ್ಯೂಚುವಲ್ ಫಂಡ್ ಜಗತ್ತಿಗೆ ಹೊಸಬರಾದರೆ ಎಸ್‌ಐಪಿ ಹೂಡಿಕೆ ಸೂಕ್ತ.

ಮಕ್ಕಳ ಹೆಸರಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಸಾಧ್ಯವೇ?: ಪೋಷಕರು, ಪಾಲಕರ ನೆರವಿನೊಂದಿಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಅವರ ಹೆಸರಿನಲ್ಲಿ ಆರಂಭಿಸುವ ವೈಯಕ್ತಿಕ ಮ್ಯೂಚುವಲ್ ಫಂಡ್ ಖಾತೆಗೆ ಪೋಷಕರು ಅಥವಾ ಪಾಲಕರು ಪ್ರತಿನಿಧಿಯಾಗಬೇಕಾಗುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮ್ಯೂಚುವಲ್ ಫಂಡ್‌ಗಳಲ್ಲಿ ಜಂಟಿ ಖಾತೆ ಹೊಂದಲು ಅವಕಾಶವಿಲ್ಲ. ಉದಾಹರಣೆಗೆ, ಮಕ್ಕಳ ಉನ್ನತ ಶಿಕ್ಷಣದ ಉದ್ದೇಶಕ್ಕಾಗಿ, ಮದುವೆ ಖರ್ಚಿಗಾಗಿ ಹೀಗೆ ಹಲವು ಕಾರಣಗಳಿಗೆ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.

ಮಾರಾಟದ ಒತ್ತಡಕ್ಕೆ ಕುಸಿದ ಷೇರುಪೇಟೆ

ಅಕ್ಟೋಬರ್ 22ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 60,821 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.79ರಷ್ಟು ಕುಸಿತ ಕಂಡಿದೆ. 18,114 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.21ರಷ್ಟು ತಗ್ಗಿದೆ. ಮಾರಾಟದ ಒತ್ತಡ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಸಾಮಾನ್ಯ ಸಾಧನೆ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ.

ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 5ರಷ್ಟು ಕುಸಿದಿದೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 4ರಷ್ಟು ತಗ್ಗಿದೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಎಫ್ಎಂಸಿಜಿ ಮತ್ತು ಲೋಹ ವಲಯ ಕ್ರಮವಾಗಿ ಶೇ 6ರಷ್ಟು ಮತ್ತು ಶೇ 5.4ರಷ್ಟು ಇಳಿಕೆಯಾಗಿವೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 4ರಷ್ಟು ಏರಿಕೆ ಕಂಡಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,353.04 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರೆ, ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 4,504.40 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ–ಇಳಿಕೆ: ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಅವೆನ್ಯೂ ಸೂಪರ್ ಮಾರ್ಕೆಟ್ಸ್, ಹ್ಯಾವೆಲ್ಸ್ ಇಂಡಿಯಾ, ಬರ್ಜರ್ ಪೇಂಟ್ಸ್ ಶೇ 10ರಷ್ಟು ಕುಸಿತ ಕಂಡಿವೆ. ಕೋಟಕ್ ಮಹೀಂದ್ರ, ಲಾರ್ಸನ್ ಅಂಡ್ ಟೂಬ್ರೊ ಇನ್ಫೋಟೆಕ್, ಅದಾನಿ ಟ್ರಾನ್ಸ್ಮಿಷನ್ ಮತ್ತು ಬ್ಯಾಂಕ್ ಆಫ್ ಬರೋಡ ಉತ್ತಮ ಗಳಿಕೆ ಕಂಡಿವೆ.

ಮುನ್ನೋಟ: ಜಾಗತಿಕವಾಗಿ ಹೆಚ್ಚಳವಾಗುತ್ತಿರುವ ಹಣದುಬ್ಬರವು ಹೂಡಿಕೆದಾರರನ್ನು ಚಿಂತೆಗೀಡುಮಾಡಿದೆ. ಆದರೂ ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ ಸದ್ಯಕ್ಕೆ ಮುಗಿದೇ ಹೋಯಿತು ಎನ್ನುವ ಸಂದರ್ಭ ಖಂಡಿತ ಇಲ್ಲ. ಮುಂಬರುವ ತ್ರೈಮಾಸಿಕ ಫಲಿತಾಂಶಗಳು, ಜಾಗತಿಕ ವಿದ್ಯಮಾನಗಳು ಷೇರುಪೇಟೆ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ. ಜೆ.ಕೆ. ಪೇಪರ್, ಹೋಮ್ ಫಸ್ಟ್ ಫೈನಾನ್ಸ್, ಎನ್‌ಟಿಪಿಸಿ, ಬಜಾಜ್ ಆಟೊ, ಎಸ್ಆರ್‌ಎಫ್, ಎಬಿಬಿ, ಅದಾನಿ ಪೋರ್ಟ್ಸ್, ಅಂಬುಜಾ ಸಿಮೆಂಟ್ಸ್, ಸಿಯೆಟ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕೋಟಕ್ ಬ್ಯಾಂಕ್, ಮಾರುತಿ ಸುಜುಕಿ, ಎಕ್ಸಿಸ್ ಬ್ಯಾಂಕ್ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.