ADVERTISEMENT

ಷೇರುಪೇಟೆ | ಯಾವ ಬ್ಯಾಂಕ್ ಸುರಕ್ಷಿತ?

ಅವಿನಾಶ್ ಕೆ.ಟಿ
Published 22 ಮಾರ್ಚ್ 2020, 19:45 IST
Last Updated 22 ಮಾರ್ಚ್ 2020, 19:45 IST
ಅವಿನಾಶ್‌ ಕೆ. ಟಿ.
ಅವಿನಾಶ್‌ ಕೆ. ಟಿ.   

ಮನೆಯಲ್ಲಿ ದುಡ್ಡು ಇಟ್ಟರೆ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌‌ನಲ್ಲಿ ಹಣ ಇಡ್ತೀವಿ. ಆದರೆ, ಬ್ಯಾಂಕ್‌‌ನಲ್ಲೂ ನಮ್ಮ ಹಣಕ್ಕೆ ಖಾತ್ರಿ ಇಲ್ಲ ಅಂದ್ರೆ ಹೇಗೆ. ಯಾವ ಬ್ಯಾಂಕ್‌‌ನಲ್ಲಿ ಹಣ ಇಟ್ಚರೆ ನಮ್ಮ ಹಣ ಸುರಕ್ಷಿತ. ಯೆಸ್ ಬ್ಯಾಂಕ್‌‌ನ ಬಿಕ್ಕಟ್ಟಿನ ಬಳಿಕ ಜನಸಾಮಾನ್ಯರ ವಲಯದಲ್ಲಿ ಈ ಪ್ರಶ್ನೆ ಸಾಮಾನ್ಯವಾಗಿಬಿಟ್ಟಿದೆ. ಈ ಹೊತ್ತಿನಲ್ಲಿ ನಿಮ್ಮ ಬ್ಯಾಂಕ್‌ ಸುರಕ್ಷತವಾಗಿದೆಯೇ ಇಲ್ಲವೇ ಎನ್ನುವುದನ್ನು ಖಾತರಿಪಡಿಸಿಕೊಳ್ಳೋದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬ್ಯಾಂಕ್‌ಗಳ ನಿಯಂತ್ರಣ ಯಾರಿಂದ: ಯಾವುದೇ ಬ್ಯಾಂಕ್‌ ಮೂರು ಪ್ರಮುಖ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಟ್ಟು ಕೆಲಸ ಮಾಡುತ್ತಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ ( ಸೆಬಿ) ಹಾಗೂ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ನೀತಿ ನಿಯಮಗಳಿಗೆ ಅನುಗುಣವಾಗಿ ಬ್ಯಾಂಕ್‌ ಗಳು ಕಾರ್ಯನಿರ್ವಹಿಸುತ್ತವೆ. ಬ್ಯಾಂಕ್‌ನ ವಹಿವಾಟಿನ ಎಲ್ಲಾ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಇಡುವ ಹೊಣೆಗಾರಿಕೆಯೂ ಬ್ಯಾಂಕ್‌ಗಳ ಮೇಲೆ ಇರುತ್ತದೆ. ಈ ಎಲ್ಲ ನಿಯಂತ್ರಣ ಕ್ರಮಗಳ ಹೊರತಾಗಿಯೂ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಆಗಾಗ್ಗೆ ಎಡವುತ್ತಲೇ ಇರುತ್ತದೆ.

ಸರಿಯಾದ ಬ್ಯಾಂಕ್‌ ಆಯ್ಕೆಗೆ 4 ಮಾನದಂಡಗಳು

ADVERTISEMENT

1. ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೊ / ಸಿಎಆರ್( ಸಮರ್ಪಕ ಬಂಡವಾಳ ಅನುಪಾತ) : ಯಾವುದೇ ಬ್ಯಾಂಕ್‌ ಅನಿರೀಕ್ಷಿತ ನಷ್ಟ ಅನುಭವಿಸಿದಾಗ ಅದನ್ನು ಎದುರಿಸಲು ಬ್ಯಾಂಕ್‌ ಹೊಂದಿರುವ ಬಂಡವಾಳವನ್ನು ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೊ ಎಂದು ಕರೆಯಬಹುದು. ‘ಸಿಎಆರ್’ ಹೆಚ್ಚಿಗೆ ಇದ್ದರೆ ಬ್ಯಾಂಕ್‌ ಯಾವುದೇ ನಷ್ಟ ಮಾಡಿಕೊಳ್ಳದೆ ಸಂಕಷ್ಟದ ಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತದೆ. ಆರ್‌ಬಿಐ ಪ್ರಕಾರ, ಯಾವುದೇ ಬ್ಯಾಂಕ್‌ನ ಕ್ಯಾಪಿಟಲ್ ಅಡಿಕ್ವೆಸಿ ರೇಷಿಯೊ ಶೇ 10.875 ರಷ್ಟಿರಬೇಕು.

2. ನಾನ್ ಪರ್ಫಾರ್ಮಿಂಗ್ ಅಸೆಟ್ಸ್ / ಎನ್‌ಪಿಎ ( ವಸೂಲಾಗದ ಸಾಲ) : ಬ್ಯಾಂಕ್‌ಗಳು ನೀಡಿದ ಸಾಲದಲ್ಲಿ ಕೆಲ ಸಾಲಗಳು ಸಮಯಕ್ಕೆ ಸರಿಯಾಗಿ ಮರುಪಾವತಿಯಾಗುವುದಿಲ್ಲ. ಸಾಲ ಪಡೆದ ನಂತರದಲ್ಲಿ ಮೂರು ತಿಂಗಳ ಕಾಲ ಸಾಲ ಪಡೆದ ವ್ಯಕ್ತಿ ಬಡ್ಡಿ ಪಾವತಿ ಮಾಡದಿದ್ದರೆ ಅದನ್ನು ವಸೂಲಾಗದ ಸಾಲ ಎಂದು ಪರಿಗಣಿಸಲಾಗುತ್ತದೆ. ವಸೂಲಾಗದ ಸಾಲದ ಪ್ರಮಾಣ ಹೆಚ್ಚಿಗೆ ಇದ್ದರೆ ಬ್ಯಾಂಕ್‌ನ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂದು ನೀವು ಅರ್ಥೈಸಿಕೊಳ್ಳಬೇಕು.

3. ಸಿಎಎಸ್‌ಎ ರೇಷಿಯೊ ( ಬ್ಯಾಂಕ್‌ನಲ್ಲಿರುವ ಚಾಲ್ತಿ ಮತ್ತು ಉಳಿತಾಯ ಖಾತೆಗಳಲ್ಲಿನ ಮೊತ್ತ) : ನಿರ್ದಿಷ್ಟ ಬ್ಯಾಂಕ್‌ನ ಚಾಲ್ತಿ ಖಾತೆ ಮತ್ತು ಉಳಿತಾಯ ಖಾತೆಗಳಲ್ಲಿನ ಒಟ್ಟು ಠೇವಣಿಗಳ ಅನುಪಾತವನ್ನು ಸಿಎಎಸ್‌ಎ ರೇಷಿಯೊ ಎಂದು ಕರೆಯಲಾಗುತ್ತದೆ. ಸಿಎಎಸ್‌ಎ ರೇಷಿಯೊ ಕಡಿಮೆ ಇದ್ದಾಗ ಹೊರಗಿನಿಂದ ಹೆಚ್ಚಿನ ಬಡ್ಡಿ ದರಕ್ಕೆ ನಿರ್ದಿಷ್ಟ ಬ್ಯಾಂಕ್‌ ಬಂಡವಾಳ ಪಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಿಎಎಸ್‌ಎ ರೇಷಿಯೊ ಕಡಿಮೆ ಇದ್ದರೆ ಬ್ಯಾಂಕ್‌ ತನ್ನ ಬಂಡವಾಳಕ್ಕಾಗಿ ಹೆಚ್ಚು ಪರವಲಾಂಬಿಯಾಗಿದೆ ಎಂದರ್ಥ.

4. ಪ್ರಾವಿಜನ್ ಕವರೇಜ್ ರೇಷಿಯೊ (ಪಿಸಿಆರ್) : ವಸೂಲಾಗದ ಸಾಲಗಳಿಂದ ಉಂಟಾಗುವ ಭವಿಷ್ಯದ ನಷ್ಟವನ್ನು ಭರಿಸಲು ಬ್ಯಾಂಕ್‌ ತನ್ನ ಸ್ವಂತ ನಿಧಿಯಿಂದ ಒಂದಿಷ್ಟು ಪ್ರಮಾಣದ ಹಣವನ್ನು ಮೀಸಲಿಡುತ್ತದೆ. ಇದನ್ನು ಪ್ರಾವಿಜನ್ ಕವರೇಜ್ ರೇಷಿಯೊ (ಪಿಸಿಆರ್) ಎಂದು ಕರೆಯಲಾಗುತ್ತದೆ. ಪಿಸಿಆರ್ ಅನುಪಾತ ಶೇ 70 ಕ್ಕಿಂತ ಹೆಚ್ಚಿಗೆ ಇದ್ದರೆ ಬ್ಯಾಂಕ್‌ ಸಂಭಾವ್ಯ ನಷ್ಟವನ್ನು ಎದುರಿಸಲು ಸಜ್ಜಾಗಿದೆ ಎಂದರ್ಥ.

ನಿಮಗಿದು ಗೊತ್ತಿರಲಿ

*ಬ್ಯಾಂಕ್‌ನಲ್ಲಿ ಎಷ್ಟೇ ದುಡ್ಡು ಇಟ್ಟಿದ್ದರೂ ಡೆಪಾಸಿಟ್ ಇನ್ಶುರೆನ್ಸ್ ಸ್ಕೀಂ (ಠೇವಣಿ ಸುರಕ್ಷತೆ) ಅಡಿಯಲ್ಲಿ ಸುರಕ್ಷತೆಯ ಮೊತ್ತ ₹ 1 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ.

*ಸಾಧ್ಯವಾದಷ್ಟು ಎರಡರಿಂದ ಮೂರು ಖಾತೆ ಆರಂಭಿಸಿ ಎಲ್ಲಾ ಅಕೌಂಟ್ ನಲ್ಲೂ ಹಣ ಇಡುವ ರೂಢಿ ಇಟ್ಟುಕೊಳ್ಳಿ.

*ಗರಿಷ್ಠ ಬಡ್ಡಿ ದರದ ಆಸೆಗೆ ಬಿದ್ದು ಸಣ್ಣ ಪುಟ್ಟ ಬ್ಯಾಂಕ್‌ಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಇಡಬೇಡಿ.

*ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಡುವ ಮುನ್ನ ಅಳೆದೂ ತೂಗಿ ನಿರ್ಧಾರಕ್ಕೆ ಬನ್ನಿ.

ಪೇಟೆಯಲ್ಲಿ ಕೊರೊನಾ ಕಾರ್ಮೋಡ

ಜನವರಿ 20, 2020 ರಂದು ರಾಷ್ಟ್ರೀಯ ಷೇರುಪೇಟೆ ನಿಫ್ಟಿ 12,430 ಅಂಶಗಳ ಗಡಿ ದಾಟಿ ಇತಿಹಾಸ ಸೃಷ್ಟಿಸಿತ್ತು. ಆದರೆ, ಎರಡು ತಿಂಗಳ ಬಳಿಕ ಅದೀಗ 8,745 ಅಂಶಗಳಿಗೆ ಕುಸಿದಿದೆ. ಜನವರಿ 17, 2020 ರಲ್ಲಿ 41,945 ಅಂಶಗಳಲ್ಲಿದ್ದ ಸೆನ್ಸೆಕ್ಸ್ ಈಗ 29,915 ಕ್ಕೆ ಇಳಿದಿದೆ. ಹೌದು. ಕೊರೊನಾ–2 ವೈರಸ್‌ ಸೋಂಕಿನ ಹೊಡೆತಕ್ಕೆ ಷೇರುಪೇಟೆಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದೆ. ಸೂಚ್ಯಂಕಗಳು 4 ವಾರಗಳಿಂದ ನಿರಂತರ ಕುಸಿತ ಕಾಣುತ್ತಿರುವುದು ಹೂಡಿಕೆದಾರರನ್ನು ಕಂಗಾಲಾಗಿಸಿದೆ. ಕಳೆದ ವಾರದ ಪೇಟೆಯ ವಾಹಿವಾಟು 10 ವರ್ಷಗಳಲ್ಲೇ ಕನಿಷ್ಠ ಮಟ್ಟದ್ದಾಗಿದೆ. ವಾರದ ಅವಧಿಯಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಬರೋಬ್ಬರಿ ಶೇ 12 ರಷ್ಟು ಕುಸಿತ ಕಂಡಿವೆ.

ಕಳೆದ ಎರಡು ವಾರಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ₹ 28 ಲಕ್ಷ ಕೋಟಿ ನಷ್ಟ ಉಂಟಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರ್ಚ್‌ನಲ್ಲಿ ₹ 51,243.15 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ₹ 44,160.95 ಕೋಟಿ ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ, ಪೇಟೆ ಮಾರಾಟದ ಒತ್ತಡಕ್ಕೆ ಸಿಲುಕಿದ್ದು,ಕೊರೊನಾ–2 ವೈರಸ್‌ ನಿಯಂತ್ರಣದ ಮೇಲೆ ಸದ್ಯಕ್ಕೆ ಮಾರುಕಟ್ಟೆಯ ಭವಿಷ್ಯ ನಿಂತಿದೆ. ಕೊರೊನಾ ನಿಯಂತ್ರಣಕ್ಕೆ ಬಂದರೆ ಮುಂದಿನ ದಿನಗಳಲ್ಲಿ ಪೇಟೆ ಚೇತರಿಸಿಕೊಳ್ಳಲಿದೆ. ಆದರೆ, ಪರಿಸ್ಥಿತಿ ಹದಗೆಟ್ಟರೆ ಪೇಟೆಯ ಕುಸಿತದ ಪ್ರಮಾಣ ಯಾವ ಮಟ್ಟಕ್ಕೆ ಬರಲಿದೆ ಎನ್ನುವುದನ್ನು ಊಹಿಸುವುದೂ ಕಷ್ಟ.

ವಲಯವಾರು ಪ್ರಗತಿ ನೋಡಿದಾಗ ನಿಫ್ಟಿ ರಿಯಲ್ ಎಸ್ಟೇಟ್ ಶೇ 16 ರಷ್ಟು ಕುಸಿದಿದೆ. ವಾಹನ ತಯಾರಿಕಾ ವಲಯ ಶೇ 13, ಮಾಧ್ಯಮ ವಲಯ ಶೇ 11.96 ಮತ್ತು ಲೋಹ ವಲಯ ಶೇ 11.06 ರಷ್ಟು ತಗ್ಗಿವೆ.

ಗಳಿಕೆ – ಇಳಿಕೆ : ನಿಫ್ಟಿ (50) ಯಲ್ಲಿ ಒಎನ್‌ಜಿಸಿ ಶೇ 9.79, ಐಟಿಸಿ ಶೇ 8.17, ಹಿಂದೂಸ್ಥಾನ್ ಯುನಿಲಿವರ್ ಶೇ 0.91, ಡಾ. ರೆಡ್ಡಿಸ್ ಶೇ 0.42 ರಷ್ಟು ಏರಿಕೆ ಕಂಡಿವೆ. ಇಂಡಸ್ ಇಂಡ್ ಬ್ಯಾಂಕ್ ಶೇ 45.21, ಬಜಾಜ್ ಫೈನಾನ್ಸ್ ಶೇ 25.32, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಶೇ 24.78 ಆ್ಯಕ್ಸಿಸ್ ಬ್ಯಾಂಕ್ 24.73, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 18.22 ರಷ್ಟು ಕುಸಿದಿವೆ.

ಮುನ್ನೋಟ: ಭಾರತದಲ್ಲಿ ಮತ್ತು ಜಾಗತಿಕವಾಗಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮುಂದೆ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಅಂದಾಜು ಸದ್ಯಕ್ಕೆ ಯಾರಲ್ಲೂ ಇಲ್ಲ. ಪರಿಸ್ಥಿತಿ ಹೀಗಿರುವಾಗ ಕೆಲ ಹೂಡಿಕೆದಾರರರು ಆಯ್ದ ಉತ್ತಮ ಕಂಪನಿಗಳಲ್ಲಿ ಹೂಡಿಕೆ ಮಾಡುವತ್ತ ಗಮನಹರಿಸಿದ್ದಾರೆ. ಸದ್ಯದ ಮಟ್ಟಿಗೆ ಮಾರುಕಟ್ಟೆ ಸ್ಥಿತಿ ಕಾಲಾಯ ತಸ್ಮೈ ನಮಃ ಎನ್ನುವಂತಾಗಿದೆ.

(ಲೇಖಕ: ’ಇಂಡಿಯನ್ ಮನಿ ಡಾಟ್‌ಕಾಂ'ನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.