2025ರ ಮೊದಲಾರ್ಧದಲ್ಲಿ ಫ್ಲೆಕ್ಸಿಕ್ಯಾಪ್ ಮ್ಯೂಚುವಲ್ ಫಂಡ್‌ಗಳು ₹30 ಸಾವಿರ ಕೋಟಿಗೂ ಹೆಚ್ಚಿನ ಹೂಡಿಕೆಯನ್ನು ಸೆಳೆದಿವೆ. ಇದೊಂದು ಗಮನಾರ್ಹ ಮೈಲಿಗಲ್ಲು. ಇದು ಹೂಡಿಕೆದಾರರ ಆಯ್ಕೆಗಳು ಬದಲಾಗುತ್ತಿರುವುದನ್ನು ಹೇಳುತ್ತಿದೆ. ಈ ಬಗೆಯ ಫಂಡ್‌ಗಳಿಗೆ ಇಷ್ಟೊಂದು ದೊಡ್ಡ ಮೊತ್ತವು ಹರಿದುಬಂದಿರುವುದು, ಮಾರುಕಟ್ಟೆಗಳು ಚಲನಶೀಲವಾಗಿರುವ ಈ ಹೊತ್ತಿನಲ್ಲಿ ಬದಲಾವಣೆಗೆ ಒಗ್ಗಿಕೊಳ್ಳುವ ಹಾಗೂ ನಮ್ಯವಾದ ಹೂಡಿಕೆ ತಂತ್ರಗಾರಿಕೆಯ ಮಹತ್ವವನ್ನು ಹೂಡಿಕೆದಾರರು ಗುರುತಿಸುತ್ತಿದ್ದಾರೆ ಎಂಬುದನ್ನೂ ಸೂಚಿಸುತ್ತಿದೆ.
ಮಾರುಕಟ್ಟೆಯಲ್ಲಿ ಹಣದ ಹರಿವು ಒಂದು ವಲಯದಿಂದ ಇನ್ನೊಂದು ವಲಯದತ್ತ ಮತ್ತೆ ಮತ್ತೆ ಸಾಗುತ್ತಿರುವಾಗ, ಜಿಗುಟಾದ ಹೂಡಿಕೆಯ ಕಾರ್ಯತಂತ್ರವು ಸೂಕ್ತವಾಗಲಿಕ್ಕಿಲ್ಲ ಎಂಬುದು ಹೂಡಿಕೆದಾರರಿಗೆ ಅರ್ಥವಾಗುತ್ತಿರುವ ಕಾರಣಕ್ಕೂ ಫ್ಲೆಕ್ಸಿಕ್ಯಾಪ್ ಫಂಡ್‌ಗಳತ್ತ ಹೆಚ್ಚಿನ ಹಣ ಹರಿದುಬರುತ್ತಿರಬಹುದು.
ಮಾರುಕಟ್ಟೆಯಲ್ಲಿ ಈಗ ಏನಾಗುತ್ತಿದೆ ಎಂಬುದರತ್ತ ಒಮ್ಮೆ ಗಮನ ಹರಿಸೋಣ. 2025ರ ಮೊದಲ ಆರು ತಿಂಗಳಲ್ಲಿ ಲಾರ್ಜ್‌ಕ್ಯಾಪ್ ಷೇರುಗಳು (ನಿಫ್ಟಿ 100ರಲ್ಲಿ ಇರುವವು) ಶೇಕಡ 6.98ರಷ್ಟು ಲಾಭ ನೀಡಿದವು. ಆದರೆ ಇದರಲ್ಲಿ ಹೇಳಿಕೊಳ್ಳುವಂಥದ್ದು ಏನೂ ಇಲ್ಲ. ಇದೇ ಅವಧಿಯಲ್ಲಿ ಮಿಡ್‌ಕ್ಯಾಪ್ ಷೇರುಗಳು ಶೇ 4.25ರಷ್ಟು ಲಾಭ ನೀಡಿದವು. ಸ್ಮಾಲ್‌ಕ್ಯಾಪ್ ಷೇರುಗಳು ಶೇ 0.83ರಷ್ಟು ಲಾಭವನ್ನಷ್ಟೇ ಕೊಟ್ಟವು.
ಈ ಅವಧಿಯಲ್ಲಿ ಸ್ಮಾಲ್‌ಕ್ಯಾಪ್ ಮ್ಯೂಚುವಲ್ ಫಂಡ್‌ನಲ್ಲಿ ಹೆಚ್ಚಿನ ಹಣ ತೊಡಗಿಸಿದ್ದವರು ಆಗಿರುವ ಗಾಯಕ್ಕೆ ಈಗ ಮುಲಾಮು ಹಚ್ಚಿಕೊಳ್ಳುತ್ತಿರಬಹುದು. ಲಾರ್ಜ್‌ಕ್ಯಾಪ್ ಫಂಡ್‌ನಲ್ಲಿ ತೊಡಗಿಸಿದ್ದವರು ಖುಷಿಯಿಂದ ಬೀಗಬಹುದು. ಆದರೆ ಮುಂದೆ ಮಾರುಕಟ್ಟೆಯಲ್ಲಿ ಹಣ ಯಾವ ಕಡೆ ಹರಿಯಬಹುದು ಎಂಬುದನ್ನು ಅವರು ಗುರುತಿಸದೆ ಇರಬಹುದು.
ಆದರೆ, ಚೆನ್ನಾಗಿ ನಿರ್ವಹಣೆ ಕಾಣುತ್ತಿರುವ ಫ್ಲೆಕ್ಸಿಕ್ಯಾಪ್ ಫಂಡ್‌ನಲ್ಲಿ ಹಣ ತೊಡಗಿಸಿದರೆ? ಹಣವು ಮುಂದೆ ಯಾವುದೇ ಕಡೆ ಸಾಗಲಿ, ಅದರ ಲಾಭ ಪಡೆದುಕೊಳ್ಳಲು ಆ ಹೂಡಿಕೆದಾರ ಸಜ್ಜಾಗಿರುತ್ತಾನೆ. ಫ್ಲೆಕ್ಸಿಕ್ಯಾಪ್ ವರ್ಗದ ಒಂದು ಫಂಡ್ ಮಾರ್ಚ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ಶೇ 24.33ರಷ್ಟು ಲಾಭ ನೀಡಿದೆ. ಇದೇ ವರ್ಗದ ಇನ್ನೊಂದು ಫಂಡ್ ಇದೇ ಅವಧಿಯಲ್ಲಿ ಶೇ 23.04ರಷ್ಟು ಲಾಭ ನೀಡಿದೆ. ಇವೆಲ್ಲ ಅದೃಷ್ಟದ ಬಲದಿಂದ ಆಗಿದ್ದಲ್ಲ. ಎಲ್ಲಿ ಅವಕಾಶ ಲಭ್ಯವಿತ್ತೋ ಅಲ್ಲಿ ಹಣವನ್ನು ತೊಡಗಿಸಿದ ನಿಧಿ ನಿರ್ವಾಹಕರ ಕಾರಣದಿಂದಾಗಿ ಈ ಪ್ರಮಾಣದ ಲಾಭ ಸಾಧ್ಯವಾಗಿದೆ.
ಈ ವರ್ಷದ ಮೇ ತಿಂಗಳಲ್ಲಿ ಫ್ಲೆಕ್ಸಿಕ್ಯಾಪ್ ಫಂಡ್‌ಗಳತ್ತ ಒಟ್ಟು ₹5,733 ಕೋಟಿ ಹೊಸ ಹೂಡಿಕೆ ಹರಿದುಬಂತು. ಅಂದರೆ ಈ ವರ್ಗದ ಫಂಡ್‌ಗಳಲ್ಲಿ ಹೂಡಿಕೆದಾರರ ಆಸಕ್ತಿ ಸ್ಥಿರವಾಗಿದೆ ಎಂಬುದನ್ನು ಇದು ತೋರಿಸುತ್ತಿದೆ. ಹಣದ ಹರಿವು ಈ ಫಂಡ್‌ಗಳತ್ತ ಸ್ಥಿರವಾಗಿ ಬರುತ್ತಿರುವುದು ಹೊಂದಾಣಿಕೆಯ ಹೂಡಿಕೆ ಕಾರ್ಯತಂತ್ರದ ಬಗ್ಗೆ ಸಾಂಸ್ಥಿಕ ಹೂಡಿಕೆದಾರರಲ್ಲಿ, ಸಣ್ಣ ಹೂಡಿಕೆದಾರರಲ್ಲಿ ವಿಶ್ವಾಸ ಇರುವುದನ್ನು ಹೇಳುತ್ತಿದೆ.
ಷೇರುಪೇಟೆಗಳು ಇಂದು ಹೆಚ್ಚು ಸಂಕೀರ್ಣವಾಗಿವೆ, ಈಗ ಪ್ರಾಮುಖ್ಯ ಪಡೆದಿರುವ ವಲಯವೊಂದು ಬಹುಬೇಗ ಆ ಸ್ಥಿತಿಯನ್ನು ಕಳೆದುಕೊಳ್ಳ ಬಹುದು. ಒಂದು ತ್ರೈಮಾಸಿಕದಲ್ಲಿ ತಂತ್ರಜ್ಞಾನ ವಲಯದ ಷೇರುಗಳು ಹೆಚ್ಚು ಲಾಭ ಕೊಡಬಹುದು. ನಂತರದ ತ್ರೈಮಾಸಿಕದಲ್ಲಿ ಆರೋಗ್ಯಸೇವಾ ವಲಯದ ಷೇರುಗಳು ಹೆಚ್ಚು ಲಾಭ ಕೊಡಬಹುದು. ನಿರ್ದಿಷ್ಟ ಪ್ರಮಾಣದ ಮಾರುಕಟ್ಟೆ ಬಂಡವಾಳದ ವಲಯಗಳಿಗೆ ನಿಶ್ಚಿತ ರೂಪದಲ್ಲಿ ಹಣ ತೊಡಗಿಸುವ ಸಾಂಪ್ರದಾಯಿಕ ಹೂಡಿಕೆ ಪದ್ಧತಿಯು ಈ ಬಗೆಯ ಬದಲಾವಣೆಗಳಿಂದಾಗಿ ಸಿಗುವ ಪ್ರಯೋಜನಗಳನ್ನು ಪರಿಣಾಮಕಾರಿಯಾಗಿ ಪಡೆದುಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ.
ಫ್ಲೆಕ್ಸಿಕ್ಯಾಪ್ ಫಂಡ್‌ಗಳನ್ನು ನಿರ್ವಹಿಸುತ್ತಿರುವವರ ಬಳಿ ಇಂದು ಹಿಂದಿನ ತಲೆಮಾರಿನ ನಿಧಿ ನಿರ್ವಾಹಕರು ಹೊಂದಿಲ್ಲದಿದ್ದ ಅವಕಾಶಗಳು ಇವೆ. ಫ್ಲೆಕ್ಸಿಕ್ಯಾಪ್ ಫಂಡ್ ನಿರ್ವವಣೆ ಮಾಡುತ್ತಿರುವವರು ಹೂಡಿಕೆದಾರರ ಹಣವನ್ನು ಮಾರುಕಟ್ಟೆ ದತ್ತಾಂಶ, ಅರ್ಥ ವ್ಯವಸ್ಥೆಯಲ್ಲಿನ ಬದಲಾವಣೆ, ನಿರ್ದಿಷ್ಟ ವಲಯಗಳಿಗೆ ಸಂಬಂಧಿಸಿದ ಬೆಳವಣಿಗೆ ಆಧರಿಸಿ ತಕ್ಷಣವೇ ಬೇರೆಡೆ ತೊಡಗಿಸ ಬಲ್ಲರು. ಈಚೆಗೆ ಷೇರುಪೇಟೆ ಸೂಚ್ಯಂಕಗಳು ತಮ್ಮ ಗರಿಷ್ಠ ಮಟ್ಟದಿಂದ ಶೇ 10ರಷ್ಟು ಕೆಳಕ್ಕೆ ಬಿದ್ದಾಗ ಫ್ಲೆಕ್ಸಿಕ್ಯಾಪ್ ಫಂಡ್ ನಿರ್ವಾಹಕರು ಹೊಸ ಅವಕಾಶಗಳನ್ನು ಅಲ್ಲಿ ಗುರುತಿಸಿದರು. ಉತ್ತಮ ಗುಣಮಟ್ಟದ ಸ್ಮಾಲ್‌ಕ್ಯಾಪ್ ಹಾಗೂ ಮಿಡ್‌ಕ್ಯಾಪ್ ಷೇರುಗಳು ಆಗ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಸಣ್ಣ ಹೂಡಿಕೆದಾರರು ಆ ಸಂದರ್ಭದಲ್ಲಿ ನಿಶ್ಚಿತ ಠೇವಣಿಗಳತ್ತ ಮುಖ ಮಾಡಿದ್ದರು, ಈ ನಿರ್ವಾಹಕರು ಕಡಿಮೆ ಬೆಲೆಗೆ ಆಯ್ದ ಷೇರುಗಳ ಖರೀದಿಯಲ್ಲಿ ತೊಡಗಿದ್ದರು.
ಈ ಬಗೆಯ ಹೂಡಿಕೆ ಕಾರ್ಯತಂತ್ರದ ಅನುಕೂಲವೆಂದರೆ, ಸಣ್ಣ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಸೂಕ್ತ ಸಮಯಕ್ಕೆ ಕಾಯುತ್ತ ಕೂರುವ ಅಗತ್ಯ ಇರುವುದಿಲ್ಲ. ಸಣ್ಣ ಹೂಡಿಕೆದಾರರು ತಮ್ಮ ಹಣವನ್ನು ಸ್ಮಾಲ್‌ಕ್ಯಾಪ್ ಷೇರುಗಳಲ್ಲಿ ತೊಡಗಿಸಬೇಕೋ, ಲಾರ್ಜ್‌ಕ್ಯಾಪ್ ಷೇರುಗಳಿಗೆ ವಿನಿಯೋಗಿಸಬೇಕೋ ಎಂಬುದರ ಬಗ್ಗೆ ಆಲೋಚಿಸಬೇಕಾಗಿಲ್ಲ. ಆ ಕಷ್ಟದ ಕೆಲಸವನ್ನು ಸಂಶೋಧನಾ ತಂಡ, ವಿಶ್ಲೇಷಣಾ ಪರಿಕರಗಳನ್ನು ಬಳಸಿ ನಿಧಿ ನಿರ್ವಾಹಕ ಮಾಡಿಕೊಡುತ್ತಾನೆ.
ಇದು ಕಟು ಸತ್ಯ
ಷೇರುಪೇಟೆಯಲ್ಲಿ ಇಂದು ನಾಯಕತ್ವದ ಸ್ಥಾನವು ಬಹಳ ಬೇಗ ಬದಲಾಗುತ್ತಿದೆ. 2024ರಲ್ಲಿ ತೀವ್ರಗತಿಯಲ್ಲಿ ಮೌಲ್ಯ ಹೆಚ್ಚಿಸಿಕೊಳ್ಳುವ ಷೇರುಗಳ ಹಾಗೂ ಉತ್ತಮ ಬೆಲೆಗೆ ಸಿಗುತ್ತಿದ್ದ ಗುಣಮಟ್ಟದ ಷೇರುಗಳ ನಡುವೆ ಹಣದ ಹರಿವು ಇತ್ತು. ದೇಶಿ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ಹಾಗೂ ರಫ್ತು ಆಧಾರಿತ ಉದ್ದಿಮೆಗಳ ಷೇರುಗಳ ಮಧ್ಯೆ, ಸಾಂಪ್ರದಾಯಿಕ ವಲಯಗಳು ಹಾಗೂ ಹೊಸಯುಗದ ಕಂಪನಿಗಳ ಷೇರುಗಳ ನಡುವೆ ಹಣದ ಹರಿವು ಇತ್ತು.
ಮಿಡ್‌ಕ್ಯಾಪ್ ಷೇರುಗಳು ಹೊಸ ಎತ್ತರಕ್ಕೆ ಜಿಗಿಯುತ್ತಿರುವಾಗ ನಿಮ್ಮ ಹಣವು ಲಾರ್ಜ್‌ಕ್ಯಾಪ್ ಷೇರುಗಳಲ್ಲಿ ಇತ್ತು ಎಂದಾದರೆ ನೀವು ದೊಡ್ಡ ಪ್ರಮಾಣದಲ್ಲಿ ಲಾಭ ಕಾಣುವುದನ್ನು ತಪ್ಪಿಸಿಕೊಳ್ಳುತ್ತೀರಿ. ಹಾಗೆಯೇ, ಲಾರ್ಜ್‌ಕ್ಯಾಪ್‌ಗಳಿಗೆ ಹೆಚ್ಚು ಬೇಡಿಕೆ ಇದ್ದಾಗ ನಿಮ್ಮ ಹಣ ಮಿಡ್‌ಕ್ಯಾಪ್ ಫಂಡ್‌ಗಳಲ್ಲಿ ಇತ್ತು ಎಂದಾದರೆ ನಿಮಗೆ ಹೆಚ್ಚು ಲಾಭ ದಕ್ಕುವುದಿಲ್ಲ. ಆದರೆ ಫ್ಲೆಕ್ಸಿಕ್ಯಾಪ್ ಫಂಡ್‌ಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಅವು ಮಾರುಕಟ್ಟೆಯ ಹರಿವಿಗೆ ತಕ್ಕಂತೆ ಹೊಂದಿಕೆ ಆಗುತ್ತವೆ. ಮಾರುಕಟ್ಟೆಯ ಚಲನೆಗೆ ವಿರುದ್ಧವಾಗಿ ಅವು ಸಾಗುವುದಿಲ್ಲ.
ಫ್ಲೆಕ್ಸಿಕ್ಯಾಪ್ ಫಂಡ್‌ಗಳು ವಿಕಾಸವನ್ನು ಪ್ರತಿನಿಧಿಸುತ್ತಿವೆ. ಷೇರು ಮಾರುಕಟ್ಟೆ ಗಳು ಚಲನಶೀಲ ವ್ಯವಸ್ಥೆಗಳು, ಅವುಗಳಿಗೆ ಚಲನಶೀಲ ಸ್ಪಂದನೆಯ ಅಗತ್ಯ ಇರುತ್ತದೆ ಎಂಬುದನ್ನು ಈ ಬಗೆಯ ಫಂಡ್‌ಗಳು ಹೇಳುತ್ತವೆ. ಈ ಬಗೆಯ ಫಂಡ್‌ಗಳಿಗೆ ಈ ವರ್ಷದ ಪ್ರಥಮಾರ್ಧದಲ್ಲಿ ₹30 ಸಾವಿರ ಕೋಟಿ ಹರಿದುಬಂದಿದೆ ಎಂಬುದು ಈ ಫಂಡ್‌ಗಳೂ ಜನಪ್ರಿಯವಾಗುತ್ತಿವೆ ಎಂಬುದನ್ನಷ್ಟೇ ಹೇಳುತ್ತಿಲ್ಲ. ಬದಲಿಗೆ, ಹೊಂದಾಣಿಕೆಗೆ ಸಿದ್ಧವಾಗಿರುವುದು ಆಧುನಿಕ ಷೇರು ಮಾರುಕಟ್ಟೆಯಲ್ಲಿ ಉಳಿದುಕೊಳ್ಳುವುದಕ್ಕೂ ಅಗತ್ಯ ಎಂಬುದನ್ನು ಹೇಳುತ್ತಿವೆ.
ದೊಡ್ಡ ಸಮಸ್ಯೆಯೊಂದಕ್ಕೆ ಪರಿಹಾರ ನೀಡುತ್ತವೆ
ಹೂಡಿಕೆದಾರರ ಪೈಕಿ ಹೆಚ್ಚಿನವರು ತಪ್ಪು ಮಾಡುವುದು ಎಲ್ಲಿ ಗೊತ್ತೇ? ಸ್ಮಾಲ್‌ಕ್ಯಾಪ್ ಹಾಗೂ ಮಿಡ್‌ಕ್ಯಾಪ್ ಷೇರುಗಳ ಮೇಲೆ ಹಣ ತೊಡಗಿಸುವುದು ಬಹಳ ಅಪಾಯಕಾರಿ ಎಂದು ಅವರು ಭಾವಿಸುತ್ತಾರೆ. ಆ ವಲಯದ ಷೇರುಗಳಿಂದ ಪೂರ್ತಿಯಾಗಿ ದೂರವಿರುತ್ತಾರೆ. ಇನ್ನು ಕೆಲವರು, ಅಷ್ಟೂ ಹಣವನ್ನು ಈ ವಲಯದ ಷೇರುಗಳ ಮೇಲೆ ತೊಡಗಿಸಿ, ಅವು ಕುಸಿದಾಗಿ ತೀವ್ರ ನಷ್ಟಕ್ಕೆ ಗುರಿಯಾಗುತ್ತಾರೆ.
ನಿಜವಾದ ಸಂಪತ್ತು ಸೃಷ್ಟಿಯಾಗುವುದೇ ಸ್ಮಾಲ್‌ಕ್ಯಾಪ್ ಹಾಗೂ ಮಿಡ್‌ಕ್ಯಾಪ್ ಷೇರುಗಳಲ್ಲಿ. ಸಣ್ಣ ಗಾತ್ರದ ಔಷಧ ಕಂಪನಿಯೊಂದರ ಔಷಧವೊಂದಕ್ಕೆ ನಿಯಂತ್ರಣ ಸಂಸ್ಥೆಯ ಅನುಮೋದನೆ ದೊರೆತಾಗ ಆ ಕಂಪನಿಯು ಹೂಡಿಕೆದಾರರ ಹಣವನ್ನು ಹತ್ತು ಪಟ್ಟು ಹೆಚ್ಚು ಮಾಡಬಲ್ಲದು. ಮಿಡ್‌ಕ್ಯಾಪ್ ವಲಯದ ತಂತ್ರಜ್ಞಾನ ಕಂಪನಿಯೊಂದು ದೊಡ್ಡ ಗುತ್ತಿಗೆಯನ್ನು ಪಡೆದುಕೊಂಡಾಗ ಭಾರಿ ಪ್ರಮಾಣದಲ್ಲಿ ಬೆಳೆಯಬಲ್ಲದು. ಆದರೆ ಸರಿಯಾದ ಸಮಯದಲ್ಲಿ ಈ ವಲಯದ ಷೇರುಗಳಲ್ಲಿ ಹೂಡಿಕೆ ಮಾಡುವುದು ಬಹಳ ಮಹತ್ವದ್ದಾಗುತ್ತದೆ. ಸಣ್ಣ ಹೂಡಿಕೆದಾರರಲ್ಲಿ ಹೆಚ್ಚಿನವರು ಸರಿಯಾದ ಸಮಯವನ್ನು ಗುರುತಿಸುವಲ್ಲಿ ಎಡವುತ್ತಾರೆ.
ಈ ಸಮಸ್ಯೆಯನ್ನು ಪರಿಹರಿಸಿಕೊಡುತ್ತವೆ ಫ್ಲೆಕ್ಸಿಕ್ಯಾಪ್ ಫಂಡ್‌ಗಳು. ಸ್ಮಾಲ್‌ಕ್ಯಾಪ್ ಷೇರುಗಳು ಅಗ್ಗವಾಗಿ ಸಿಗುವಾಗ (ಅವುಗಳ ಖರೀದಿಗೆ ಅದು ಒಳ್ಳೆಯ ಸಂದರ್ಭ) ನಿಧಿ ನಿರ್ವಾಹಕರು ಅವುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಆ ಷೇರುಗಳ ಮೌಲ್ಯವು ಅತಿಯಾದಾಗ ಹಣವನ್ನು ಸುರಕ್ಷಿತವಾದ ಲಾರ್ಜ್‌ಕ್ಯಾಪ್ ಷೇರುಗಳ ಕಡೆ ತಿರುಗಿಸುತ್ತಾರೆ. ಫ್ಲೆಕ್ಸಿಕ್ಯಾಪ್ ಫಂಡ್‌ನಲ್ಲಿ ಹಣ ತೊಡಗಿಸುವುದು ಎಂದರೆ ವೃತ್ತಿಪರ ಟ್ರೇಡರ್ ಒಬ್ಬರನ್ನು ನಿಮ್ಮ ಪೋರ್ಟ್‌ಫೋಲಿಯೊ ನಿರ್ವಹಿಸಲು ನೇಮಕ ಮಾಡಿಕೊಂಡಂತೆ. ಆದರೆ ಈ ನಿರ್ವಾಹಕರು ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತಾರೆ, ನಿಯಮಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ.
ಲೇಖಕ ಹೂಡಿಕೆ ಸಲಹಾ ಸಂಸ್ಥೆ ವಾಲ್‌ಟ್ರಸ್ಟ್ ಪಾರ್ಟ್ನರ್ಸ್‌ನ ಮುಖ್ಯ ತಾಂತ್ರಿಕ ವಿಶ್ಲೇಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.