ADVERTISEMENT

ಅನುರಣನ ಅಂಕಣ: ಜಾತೀಯ ಅಹಂನ ಸಮೀಕ್ಷೆ ನೋಡಾ!

ನಾರಾಯಣ ಎ.
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
   
ಅಧಿಕಾರ ಮತ್ತು ಸಂಪತ್ತಿನ ನ್ಯಾಯಯುತ ಮರುಹಂಚಿಕೆಗೆ ಅಗತ್ಯವಾದ ಮಾಹಿತಿಯನ್ನು ಸಮರ್ಪಕವಾಗಿ ಕಲೆಹಾಕುವಂತೆ ಮಾಡುವ ಶಕ್ತಿಯೂ ಹಿಂದುಳಿದ ಸಮುದಾಯಗಳ ನಾಯಕರಿಗಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಈ ವಾಸ್ತವವನ್ನು ಸಾರಿ ಹೇಳುತ್ತಿವೆ.

ಕರ್ನಾಟಕದಲ್ಲಿ ಸರ್ಕಾರ ನಡೆಸಲು ಹೊರಟದ್ದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು. ಆದರೆ, ರಾಜ್ಯದಲ್ಲಿ ನಿಜಕ್ಕೂ ನಡೆದದ್ದು ಮತ್ತು ನಡೆಯುತ್ತಿರುವುದು ಬಹುತೇಕ ಜಾತಿ–ಆಧಾರಿತ ಅಹಂಕಾರದ ಸಮೀಕ್ಷೆ. ‘ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದಿಲ್ಲ, ನಡೀರಿ’ ಅಂತ ಸಮೀಕ್ಷಕರನ್ನು ಹೊರಗಟ್ಟಿದವರಿಗೆ ತಮ್ಮ ಜಾತಿಯವರು ಇತರರಿಗಿಂತ ಹೆಚ್ಚು ಸಂಪತ್ತು–ಅಧಿಕಾರ ಹೊಂದಿರುವುದು ಎಲ್ಲಿ ಜಗಜ್ಜಾಹೀರು ಆಗಿಬಿಡುತ್ತದೋ ಎಂಬ ಆತಂಕ ಇದ್ದಿರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ಅವರಲ್ಲಿ ಕಂಡದ್ದು ಅಹಂಕಾರ. ಎಲ್ಲರ ಉದ್ಧಾರಕ್ಕೆ ಸಂಬಂಧಿಸಿದ್ದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ತಿರಸ್ಕಾರ. ಬೆಂಗಳೂರು ಮಹಾನಗರವೊಂದರಲ್ಲೇ ಸುಮಾರು ಆರು ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲ ಎನ್ನುವುದು ಈ ತನಕದ ಅಧಿಕೃತ ವರದಿ.

ಈ ಸಮೀಕ್ಷೆಯನ್ನು ಒಂದು ರಾಜಕೀಯ ಪಕ್ಷವು ತನ್ನ ಖಯಾಲಿಗಾಗಿ ನಡೆಸುತ್ತಿದೆ, ಓರ್ವ ಮುಖ್ಯಮಂತ್ರಿ ಯಾರನ್ನೋ ತುಷ್ಟೀಕರಿಸಲು ನಡೆಸುತ್ತಿದ್ದಾರೆ ಎನ್ನುವ ಅಪಪ್ರಚಾರ ನಡೆದಿದೆ. ವಾಸ್ತವ ಅದಲ್ಲ. ಹಿಂದುಳಿದವರನ್ನು ಗುರುತಿಸಲು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯೊಂದನ್ನು ಇಡೀ ಜನಸಂಖ್ಯೆಯನ್ನು ಒಳಗೊಂಡಂತೆ ನಡೆಸಬೇಕೆಂದು ಹೇಳಿದ್ದು ಸರ್ವೋಚ್ಚ ನ್ಯಾಯಾಲಯದ 1992ರ ತೀರ್ಪು. ಆ ತೀರ್ಪಿಗೆ ಆಧಾರ, ಸಂವಿಧಾನದ ಪೀಠಿಕೆಯಲ್ಲೇ ಪ್ರತಿಪಾದಿತವಾದ ಸಾಮಾಜಿಕ–ರಾಜಕೀಯ–ಆರ್ಥಿಕ ನ್ಯಾಯ. ಸಮೀಕ್ಷೆ ನಡೆಸಲು ಕಾನೂನಿನ ಒತ್ತಾಸೆ ಒದಗಿಸಿದ್ದು ಕರ್ನಾಟಕದ ವಿಧಾನಮಂಡಲ 1995ರಲ್ಲಿ ಅಂಗೀಕರಿಸಿದ ಕಾಯ್ದೆ. ಸಮೀಕ್ಷೆಗೆ ನೈತಿಕ ಸಮರ್ಥನೆ ನೀಡಿದ್ದು ‘ಬಿದ್ದವರನು ಮೇಲೆತ್ತಲು ಎಲ್ಲರೂ ಕೈನೀಡಬೇಕೆಂಬ’ ಮಾನವತೆಯ ಮಂತ್ರ.

ಸಮೀಕ್ಷೆಯನ್ನು ಶತಾಯಗತಾಯ ಕುಲಗೆಡಿಸಬೇಕೆಂದು ಹೊರಟ ಕುಲೀನ ಜಾತಿಗಳ ಕುತಂತ್ರದ ಹಿಂದೆ ಕೆಲಸ ಮಾಡಿದ್ದು ಒಂದೇ ಒಂದು ಶಕ್ತಿ. ಅದರ ಹೆಸರು: ಜಾತಿ ಆಧಾರಿತ ಅಹಂಕಾರ. ಆ ಅಹಂಕಾರದ ಅಪರಿಮಿತ ಆಳ–ಅಗಲ ಎಷ್ಟಿದೆಯೆಂದರೆ, ಅವರಿಗೆ ಸಂವಿಧಾನ, ಸರ್ವೋಚ್ಚ ನ್ಯಾಯಾಲಯ, ವಿಧಾನಮಂಡಲದ ಉಭಯ ಸದನಗಳು, ಆ ಸದನಗಳು ರೂಪಿಸಿದ ಕಾಯ್ದೆ, ಆ ಕಾಯ್ದೆಗೆ ಅಂತಿಮಮುದ್ರೆ ಒತ್ತಿದ್ದ ರಾಜ್ಯಪಾಲರು – ಹೀಗೆ ಎಲ್ಲರೂ ಕಾಲಕಸ. ಹಾಗಾಗಿಯೇ ‘ವರ್ಣಾಶ್ರಮ–ಅಧರ್ಮ’ದ ತುತ್ತತುದಿಯಲ್ಲಿ ಪ್ರತಿಷ್ಠಾಪಿಸಿಕೊಂಡಿರುವ ಒಂದು ಜಾತಿಗೆ ಸೇರಿದ ಮತ್ತು ತಮ್ಮ ಅಪಕ್ವ ಹೇಳಿಕೆಗಳಿಗೆ ಹೆಸರಾಗಿರುವ ಸಂಸದರು ಸಿಡಿದೆದ್ದು ಸಮೀಕ್ಷೆಗೆ ಸಹಕರಿಸಬೇಡಿ ಎಂದು ಕರೆ ನೀಡಿದ್ದು. ಸಾಲದು ಎಂಬಂತೆ, ಪಕ್ವ ವಯಸ್ಸಿನ ಮಾಜಿ ಅಡ್ವೋಕೇಟ್ ಜನರಲ್‌ವರೆಗೆ ಆ ಜಾತಿಯ ಆಯಕಟ್ಟಿನ ಜಾಗದಲ್ಲಿರುವವರೆಲ್ಲಾ ಸೇರಿ ಸ್ವಬಾಂಧವರಿಗೆ ಸಮೀಕ್ಷೆ ಬಹಿಷ್ಕರಿಸಿ ಎನ್ನುವ ಬ್ರಹ್ಮಜ್ಞಾನ ಉದ್ದೇಶಿಸಿದ್ದು. ಹಾಗೆ ಅವರುಗಳು ನೀಡಿದ ಅಸಹಕಾರ ಚಳವಳಿಯ ಕರೆ ವಾಟ್ಸ್‌ಆ್ಯಪ್‌ ವಿಶ್ವವಿದ್ಯಾನಿಲಯದ ಮೂಲಕ ಮನೆಮನೆಗಳಿಗೆ ತಲುಪಿದ ಪರಿಣಾಮವಾಗಿಯೇ ಇಡೀ ಸಮೀಕ್ಷೆಯ ಬಗ್ಗೆ ಒಂದು ರೀತಿಯ ಅಪನಂಬಿಕೆ, ಅವಗಣನೆ, ತಿರಸ್ಕಾರ ಹುಟ್ಟಿಕೊಂಡದ್ದು.

ADVERTISEMENT

ಸರ್ಕಾರದ ಜತೆಗೆ ಅಸಹಕಾರ ತೋರುವುದು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆಯಾದ ಅಸ್ತ್ರ. ಸರ್ಕಾರವೊಂದು ಜನವಿರೋಧಿ, ಜೀವವಿರೋಧಿ, ಪರಿಸರ ವಿರೋಧಿ ಕ್ರಮಗಳಿಗೆ ಮುಂದಾದಾಗ ಅಸಹಕಾರ ತೋರಿ ಪ್ರತಿಭಟಿಸುವುದು ಅಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಸಾಮಾಜಿಕ ನ್ಯಾಯವನ್ನು ವಿಸ್ತರಿಸುವ ಉದ್ದೇಶ ಹೊಂದಿದ ಸರಳವಾದ ಅಂಕಿ–ಅಂಶ ಸಂಗ್ರಹದ ಕೆಲಸಕ್ಕೆ ಚುನಾಯಿತ ಸರ್ಕಾರವೊಂದು ನ್ಯಾಯಾಲಯದ ಆದೇಶದ ಮೇರೆಗೆ ಮುಂದಾದಾಗ ಅಸಹಕಾರಕ್ಕೆ ಯಾರಾದರೂ ಕರೆನೀಡಿದ್ದು ಇದೇ ಮೊದಲಿರಬೇಕು. ನ್ಯಾಯದ ವಿರುದ್ಧ ಅಸಹಕಾರ ತೋರುವುದು ಅನ್ಯಾಯ ಆಗುತ್ತದೆ. ಅನ್ಯಾಯಕ್ಕೆ ಬಹಿರಂಗ ಕರೆನೀಡುವ ಧೈರ್ಯ ಒದಗಿಸಬಲ್ಲ ಒಂದು ಶಕ್ತಿ ಸಂವಿಧಾನೋತ್ತರ ಭಾರತದಲ್ಲಿ ಇನ್ನೂ ಉಳಿದುಕೊಂಡಿದ್ದರೆ ಅದರ ಹೆಸರೇ ಜಾತಿ ಮತ್ತು ಕೆಲವು ಜಾತಿಗಳಿಗೆ ತಮ್ಮ ಅಸ್ಮಿತೆಯ ಒಂದೇ ಕಾರಣದಿಂದ ಸಂಚಯವಾಗುವ ಶಕ್ತಿ ನೀಡುವ ಅಹಂ. ಸಮೀಕ್ಷಕರು ಮನೆಗೆ ಬಂದಾಗ ಮಾಹಿತಿ ನೀಡದೆ ಹೊರದಬ್ಬಿ ಎನ್ನುವ ಅರ್ಥದ ಕರೆನೀಡಿದವರಿಗೆ ಆ ಧೈರ್ಯ ನೀಡಿದ್ದು ಅವರ ಜಾತಿ. ಈ ಸಮೀಕ್ಷೆ ಮೇಲ್ಜಾತಿಯವರ ವಿರುದ್ಧ ನಡೆಯುತ್ತಿರುವ ಹುನ್ನಾರ ಎಂದು ಇನ್ನೋರ್ವ ಕೇಂದ್ರ ಸಚಿವರು ಅರ್ಥಹೀನ ಹೇಳಿಕೆ ನೀಡಲು ಪ್ರೇರೇಪಣೆ ನೀಡಿದ್ದು ಅವರ ಜಾತಿ. ಇಷ್ಟೆಲ್ಲಾ ಪ್ರಶ್ನೆಗಳನ್ನು ಯಾಕೆ ಕೇಳಬೇಕು ಎಂದು ಸಮೀಕ್ಷೆಯ ಪ್ರಶ್ನಾವಳಿಯ ಪ್ರಸ್ತುತತೆಯನ್ನೇ ಪ್ರಶ್ನಿಸುವ ಮೂಲಕ ತಮ್ಮದೇ ಪಕ್ಷದ, ತಮ್ಮದೇ ಸರ್ಕಾರದ ನೈತಿಕ ಸ್ಥೈರ್ಯ ಕುಗ್ಗಿಸುವ ಅಸಂಗತ ಹೇಳಿಕೆ ನೀಡಲು ಉಪ ಮುಖ್ಯಮಂತ್ರಿಗಳಿಗೆ ಒತ್ತಾಸೆ ಒದಗಿಸಿದ್ದು ಕೂಡ ಅವರ ಜಾತಿಬಲ.

ಹಿಂದಿನ ಸಮೀಕ್ಷೆ ಅಪೂರ್ಣವಾಗಿತ್ತು, ಆ ಕಾರಣಕ್ಕೆ ಅದು ಅವೈಜ್ಞಾನಿಕ ಮತ್ತು ಅದರ ಫಲಿತಾಂಶ ತಿರಸ್ಕರಿಸಬೇಕು ಎಂದು ರಂಪ ಮಾಡಿದ್ದ ಶಕ್ತಿಗಳೇ ಈ ಸಮೀಕ್ಷೆಯಲ್ಲಿ ಪಾಲ್ಗೊಳ್ಳದೇ ಅದನ್ನು ಅಪೂರ್ಣಗೊಳಿಸಿ ಎಂದು ಕರೆ ನೀಡುತ್ತಿದ್ದಾರೆ. ಎರಡನೆಯ ಸಮೀಕ್ಷೆಯ ಅಂಕಿ–ಅಂಶಗಳನ್ನೂ ತಿರಸ್ಕರಿಸಬೇಕೆಂದು ಪಟ್ಟುಹಿಡಿಯಲು ಬೇಕಾದ ಸಿದ್ಧತೆಗಳು ಈ ಮೂಲಕ ನಡೆಯುತ್ತಿವೆ. ಒಟ್ಟಿನಲ್ಲಿ, ಕರ್ನಾಟಕದ ಶಕ್ತಿವಂತ–ಯುಕ್ತಿವಂತ ಜಾತಿಗಳ ಕೆಲವರು ವಿಧವಿಧದ ತಂತ್ರ–ಪ್ರತಿತಂತ್ರ ಹೂಡಿ, ವಾದ–ವಿವಾದ ಎಬ್ಬಿಸಿ, ತರ್ಕ–ಕುತರ್ಕಗಳನ್ನು ಮಂಡಿಸಿ ಸದರಿ ಚಾಲ್ತಿಯಲ್ಲಿರುವ ಎರಡನೆಯ ಸಮೀಕ್ಷೆಯನ್ನೂ ಹಳ್ಳಹಿಡಿಯುವಂತೆ ಮಾಡಲು ಹಗಲಿರುಳು ಶ್ರಮಿಸುತ್ತಿದ್ದರೆ, ಕರ್ನಾಟಕದ ಮಂತ್ರಿಮಂಡಲದಲ್ಲಿ ಇರುವ ಹಿಂದುಳಿದ ಜಾತಿಗಳಿಗೆ ಸೇರಿದ ಐವರು ಸಚಿವರಿಗೆ (ಹೌದು, ಐದೇ ಐದು ಮಂದಿ) ಈ ಎಲ್ಲ ಅಪಪ್ರಚಾರ–ಪಿತೂರಿಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುವ ಧೈರ್ಯವೂ ಬಾರದೆ ಹೋದದ್ದಕ್ಕೆ ಕಾರಣ ಅವರ ಜಾತಿ. ಯಾರ ಧ್ವನಿ ಎಷ್ಟಿದೆ ಎನ್ನುವುದು ಸಮೀಕ್ಷೆಯ ಪೂರ್ವಭಾವಿ ಹಂತದಲ್ಲೇ ತಿಳಿದುಹೋಗಿದೆ. ತಿಳಿದ ಸತ್ಯಕ್ಕೂ ಅಧಿಕೃತ ಅಂಕಿ–ಅಂಶಗಳ ಆಧಾರ ಇರಬೇಕು ಎನ್ನುವ ಕಾರಣಕ್ಕಷ್ಟೇ ಸಮೀಕ್ಷೆ ಪೂರ್ಣಗೊಳ್ಳಬೇಕಿರುವುದು.

ಆಡಳಿತ ಪಕ್ಷಗಳು ಬದಲಾಗಬಹುದು, ಪ್ರತಿನಿಧಿಗಳು ಬದಲಾಗಬಹುದು, ಮುಖ್ಯಮಂತ್ರಿ ಮತ್ತು ಮಂತ್ರಿಗಳು ಯಾವುದೇ ಜಾತಿಯಿಂದಲಾದರೂ ಬರಬಹುದು. ಅದೇನೇ ತಲೆಕೆಳಗಾದರೂ, ಈ ದೇಶದಲ್ಲಿ ನಿಜವಾದ ಅಧಿಕಾರ ಚಲಾಯಿಸಲು ಸಾಧ್ಯ ಆಗುವುದು ಕೆಲವೇ ಜಾತಿಗಳಿಗೆ ಮಾತ್ರ. ಈ ಜಾತಿಗಳು ಸಂಖ್ಯೆಯಲ್ಲಿ ಕಡಿಮೆ ಇರಬಹುದು, ಅವರ ಚುನಾಯಿತ ಪ್ರತಿನಿಧಿಗಳ ಸಂಖ್ಯೆ ಎಷ್ಟಾದರೂ ಇರಬಹುದು. ಅಧಿಕಾರದ ಮೇಲಿನ ಅವರ ನಿಯಂತ್ರಣ ಮಾತ್ರ ಅಬಾಧಿತವಾಗಿರುತ್ತದೆ. ಅಕಸ್ಮಾತ್ತಾಗಿ ದುರ್ಬಲ ಜಾತಿಗಳ ನಡುವೆ ಮೇಲೆದ್ದು ಬಂದ ನಾಯಕನೊಬ್ಬ ಅಧಿಕಾರದ  ತುತ್ತತುದಿಯ ಹುದ್ದೆಗೆ ಏರಿದರೂ, ಅಧಿಕಾರದ ಮೇಲೆ ಅವರಿಗೆ  ಪೂರ್ತಿ ನಿಯಂತ್ರಣ ಇರುವುದಿಲ್ಲ.

ಆಯಕಟ್ಟಿನ ರಾಜಕೀಯ ಹುದ್ದೆಗಳನ್ನು ಪಡೆಯುವುದು ಬೇರೆ, ನಿಜವಾದ ಅಧಿಕಾರವನ್ನು ಪಡೆಯುವುದೇ ಬೇರೆ. ದುರ್ಬಲ ಜಾತಿಗಳಿಗೆ ಇದು ಇನ್ನೂ ಅರ್ಥವಾದಂತೆ ಕಾಣಿಸುವುದಿಲ್ಲ. ತಮ್ಮ ಜಾತಿಗೆ ಅಥವಾ ತಮ್ಮ ಸಾಮಾಜಿಕ ಹಿನ್ನೆಲೆಯ ನಾಯಕನೊಬ್ಬ ಮುಖ್ಯಮಂತ್ರಿಯಾಗಿ ಬಿಟ್ಟರೆ, ಅವರ ಮೂಲಕ ಒಂದಷ್ಟು ಉನ್ನತಾಧಿಕಾರದ ಹುದ್ದೆಗಳನ್ನು ಆಯಾ ಜಾತಿಯ ಸಮುದಾಯದ ಮಂದಿಗೆ ಕೊಡಿಸಿಬಿಟ್ಟರೆ, ರಾಜಕೀಯ ಅಧಿಕಾರ ನಮಗೆ ಸಿಕ್ಕಿಬಿಟ್ಟಿತು ಎನ್ನುವ ಭ್ರಮೆಯಲ್ಲಿ ಈ ಜಾತಿಗಳು ಇರುತ್ತವೆ. ಆದರೆ, ವಾಸ್ತವದಲ್ಲಿ ಅಧಿಕಾರವನ್ನು ಮತ್ತು ಸಂಪತ್ತನ್ನು ನ್ಯಾಯಯುತವಾಗಿ ತಮ್ಮ ಪರ ಮರುಹಂಚಿಕೆ ಮಾಡಲು ಅಗತ್ಯವಾಗಿರುವ ಮಾಹಿತಿಯನ್ನು ಕೂಡ ನೆಟ್ಟಗೆ ಕಲೆಹಾಕುವಂತೆ ಮಾಡುವ ಶಕ್ತಿ ಈ ಸಮುದಾಯಗಳ ನಾಯಕರಿಗೆ ಇರುವುದಿಲ್ಲ. ಕರ್ನಾಟಕದಲ್ಲಿ ಸಮೀಕ್ಷೆಯ ಸುತ್ತ ನಡೆಯುತ್ತಿರುವ ವಿದ್ಯಮಾನಗಳು ಈ ವಾಸ್ತವವನ್ನು ಸಾರಿ ಹೇಳುತ್ತಿವೆ.

ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದು ಹಿಂದುಳಿದ ಜಾತಿಗೆ ಸೇರಿದ, ಭಾರೀ ಜನಬೆಂಬಲ ಹೊಂದಿರುವ ನಾಯಕ. ಆದರೂ, ಹಿಂದುಳಿದ ಜಾತಿಗಳಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಅಗತ್ಯ ಇರುವ ಕನಿಷ್ಠ ಅಂಕಿ–ಅಂಶಗಳನ್ನು ಸಂಗ್ರಹಿಸುವ, ಪ್ರಕ್ರಿಯೆಯೊಂದನ್ನು ಪ್ರಾರಂಭಿಸಿ ತಾರ್ಕಿಕ ಅಂತ್ಯಕ್ಕೆ ಒಯ್ಯಲು ಅಸಾಧ್ಯವೇನೋ ಎನ್ನುವ ಪರಿಸ್ಥಿತಿ ಇದೆ.

ಈ ದೇಶದಲ್ಲಿ ನ್ಯಾಯಯುತವಾದ ಬೇಡಿಕೆ ಮಂಡಿಸುವವರು ಶಕ್ತಿಯುತರೂ ಆಗಿರಬೇಕು. ಇಲ್ಲದೆ ಹೋದರೆ ಅವರನ್ನು ದೈವವೂ ಕಣ್ಣೆತ್ತಿ ನೋಡುವುದಿಲ್ಲ. ಇತರ ಹಿಂದುಳಿದ ವರ್ಗ (ಒಬಿಸಿ) ಎಂದು ಅಧಿಕೃತವಾಗಿ ರೂಪುಗೊಂಡಿರುವ ಪಟ್ಟಿಯಲ್ಲಿರುವ ನಿಜವಾದ ಹಿಂದುಳಿದ ಜಾತಿಗಳು ಒಟ್ಟಾದರೆ ಅದು ಬಹುದೊಡ್ಡ ಸಂಖ್ಯೆ, ಭಾರೀ ಶಕ್ತಿ. ಹಿಂದುಳಿದ ಜಾತಿಗಳು ಇದನ್ನು ಅರಿಯುತ್ತಿಲ್ಲ. ತಮ್ಮಂತೆ ದುರ್ಬಲರಾಗಿರುವ ದಲಿತ–ಅಲ್ಪಸಂಖ್ಯಾತರೊಂದಿಗೆ ಸೇರಿ ಒಂದು ರಾಜಕೀಯ ಶಕ್ತಿಯಾಗಿ ಆವಿರ್ಭವಿಸುತ್ತಿಲ್ಲ. ಹೆಚ್ಚು ಅವಕಾಶಗಳನ್ನು ಪಡೆದುಕೊಂಡಿರುವ ಹಿಂದುಳಿದ ಜಾತಿಗಳು ತೀರಾ ಹಿಂದುಳಿದವರಿಗಾಗಿ ಒಂದಷ್ಟು ತ್ಯಾಗಕ್ಕೆ ಸಿದ್ಧರಾಗುತ್ತಿಲ್ಲ. ಈ ಸ್ಥಿತಿ ಮುಂದುವರಿದಷ್ಟೂ ಕಾಲ ಅವರ ಮೇಲೆ ಪ್ರಬಲ ಜಾತಿಗಳ ಅಹಂ ಸವಾರಿ ಮಾಡುತ್ತಲೇ ಇರುತ್ತದೆ. ಹಿಂದುಳಿದ ಜಾತಿಗೆ ಸೇರಿದವರು ಈ ಸತ್ಯವನ್ನು ಅರಿತು ಎರಡನೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬರುತ್ತಿರುವ ವಿರೋಧವನ್ನು ಒಗ್ಗಟ್ಟಾಗಿ ಹಿಮ್ಮೆಟ್ಟಿಸದೆ ಹೋದರೆ, ಮೊದಲ ಸಮೀಕ್ಷೆಯ ವರದಿಗಾದ ಗತಿಯೇ ಈ ಸಮೀಕ್ಷೆಯ ವರದಿಗೂ ಕಾದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.