ಅದು 1980ರ ದಶಕದ ಉತ್ತರಾರ್ಧ. ಕೆಲವು ಪತ್ರಿಕೆಗಳು ನಿಷ್ಠುರ ಸತ್ಯವನ್ನು ನಿರ್ಭಯವಾಗಿ ಬರೆಯುತ್ತಿದ್ದ ಕಾಲ. ಕನ್ನಡ ಪತ್ರಿಕೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ದೇವಾಲಯ ಇರುವ ಸಣ್ಣ ಗ್ರಾಮವೊಂದರ ಬಗ್ಗೆ ಆಗ ಹೀಗೆ ಬರೆದಿತ್ತು: ‘ಅಲ್ಲಿ ಕಾಂಗ್ರೆಸ್ಸಿನ ರಾಜೀವ್ ಗಾಂಧಿಯವರ ಕೇಂದ್ರ ಸರ್ಕಾರದ ಅಧಿಕಾರವೂ ಲೆಕ್ಕಕ್ಕಿಲ್ಲ, ರಾಮಕೃಷ್ಣ ಹೆಗಡೆಯವರ ಜನತಾ ಪಕ್ಷದ ರಾಜ್ಯ ಸರ್ಕಾರವೂ ಲೆಕ್ಕಕ್ಕಿಲ್ಲ...’ ಹಾಗಾದರೆ ಆ ಗ್ರಾಮದಲ್ಲಿ ಅಬಾಧಿತವಾಗಿ ಅಧಿಕಾರ ಚಲಾಯಿಸುತ್ತಿದ್ದದ್ದು ಯಾರು?
ಆ ವಿವರಗಳು ಈ ಲೇಖನಕ್ಕೆ ಪ್ರಸ್ತುತವಲ್ಲ. ಆದರೂ ಆ ಹಳೆಯ ಪತ್ರಿಕಾ ವಾಕ್ಯವನ್ನು ಪ್ರಸ್ತಾಪಿಸಿದ್ದಕ್ಕೆ ಕಾರಣ ಇದೆ. ಮೇಲಿನ ಪ್ರಶ್ನೆಯನ್ನು ಆ ಪತ್ರಿಕೆ ಎತ್ತಿದ್ದು, ಅಂದು ಅಧಿಕಾರದಲ್ಲಿ ಇದ್ದವರು ಕಾಲೇಜು ವಿದ್ಯಾರ್ಥಿನಿಯೊಬ್ಬಳ ನಿಗೂಢ ಅಪಹರಣ ಮತ್ತು ಕೊಲೆಯ ವಿಚಾರವಾಗಿ ಸರಿಯಾಗಿ ಸ್ಪಂದಿಸಲಿಲ್ಲ ಎನ್ನುವ ಕಾರಣಕ್ಕೆ. ಒಂದು ಗ್ರಾಮಕ್ಕೆ ಸಂಬಂಧಿಸಿದಂತೆ ಎತ್ತಿದ ಆ ಪ್ರಶ್ನೆಯನ್ನು ಇಂದು ಇಡೀ ಕರಾವಳಿ ಕರ್ನಾಟಕವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕೇಳಬೇಕಿದೆ.
ಯಾಕೆಂದರೆ ಕರಾವಳಿಯ ವಿಲಕ್ಷಣ ಅಧಿಕಾರದಾಟ ಈಚೆಗೆ ಮತ್ತೆರಡು ಹೆಣಗಳನ್ನು ಬೀಳಿಸಿದೆ. ಅಲ್ಲಿ ಹೆಣಗಳು ಉರುಳುವಂತೆ ಮಾಡುವ ನೀಚ ಕೋಮುವಾದಿ ರಾಜಕೀಯ ಶಕ್ತಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿರುವಂತೆ ಕಾಣಿಸುತ್ತದೆ. ಎರಡು ವರ್ಷಗಳ ಕಾಂಗ್ರೆಸ್ ಆಡಳಿತದ ಅವಧಿಯುದ್ದಕ್ಕೂ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆಗಳಲ್ಲಿ ಯಾವ ಕ್ಷಣವಾದರೂ ಹೆಣವೊಂದು ಉರುಳೀತು, ಉರುಳಿದ ಹೆಣಗಳ ಮೇಲೆ ರಾಜಕೀಯದ ಭರ್ಜರಿ ಬೇಟೆ ನಡೆದೀತು ಎಂಬ ಸ್ಫೋಟಕ ಸ್ಥಿತಿ ಇತ್ತು. ಅಲ್ಲಿನ ಶಾಸಕರು, ವೃತ್ತಿಪರ ಕೋಮುವಿಷ ವಿತರಕರು ಪ್ರಚಂಡ ದ್ವೇಷಭಾಷಣಗಳನ್ನು ಮಾಡುತ್ತಲೇ ಇದ್ದರು.
ಅಲ್ಲಿನ ಸಾಂಸ್ಕೃತಿಕ ಪರಿಕರಗಳಾದ ಭೂತಕೋಲ, ಯಕ್ಷಗಾನ, ನಾಗದರ್ಶನ, ಪ್ರವಚನ ಮತ್ತು ಕೊನೆಯೇ ಇಲ್ಲವೆಂಬಂತೆ ಜರುಗುವ ‘ಪುನರ್‌ಪ್ರತಿಷ್ಠಾಪನೆ ಬ್ರಹ್ಮಕಲಶೋತ್ಸವ’ಗಳೆಲ್ಲವೂ ದ್ವೇಷ ಪ್ರಸರಣಕ್ಕೆ ಬಳಕೆ ಆಗುತ್ತಲೇ ಇದ್ದವು. ಆದರೆ ಕೋಮುವಾದ ಸಂಹಾರದ ಶಪಥ ಮಾಡಿ ಅಧಿಕಾರಕ್ಕೇರಿದ ಕಾಂಗ್ರೆಸ್ ಮಾತ್ರ ಏನೂ ಆಗುತ್ತಿಲ್ಲ, ಏನೂ ಆಗುವುದೂ ಇಲ್ಲ ಎನ್ನುವ ಸಮಾಧಿ ಸ್ಥಿತಿಯಲ್ಲಿತ್ತು. ಮತ್ತೀಗ ಅಲ್ಲಿ ಒಂದರ ನಂತರ ಇನ್ನೊಂದರಂತೆ ಎರಡು ಹೆಣಗಳು! ಹರಿದ ನೆತ್ತರು ಸೃಷ್ಟಿಸಿದ ಕೆಸರಲ್ಲಿ ಲಂಗು ಲಗಾಮಿಲ್ಲದೆ ಕೆನೆದು ಕುಪ್ಪಳಿಸುತ್ತಿರುವ ರಾಜಕೀಯ ಕಂಬಳದ ಕೋಣಗಳು! ಹಾಗಾಗಿ ಮತ್ತದೇ ಪ್ರಶ್ನೆ. ಕರಾವಳಿ ಯಾರ ನಿಯಂತ್ರಣದಲ್ಲಿದೆ?
ಅಧಿಕಾರಕ್ಕೆ ಬಂದ ಎರಡು ವರ್ಷಗಳ ನಂತರ ಎರಡನೆಯ ಹೆಣ ಬಿದ್ದು ಎರಡು ದಿನಗಳಾದ ನಂತರ ಕೋಮುದ್ವೇಷವನ್ನು ನಿಗ್ರಹಿಸಲು ಅಲ್ಲಿಗೊಂದು ‘ಕೋಮುಹಿಂಸೆ ನಿಗ್ರಹ ಕಾರ್ಯಪಡೆ’ಯನ್ನು ಸ್ಥಾಪಿಸಲು ಕಾಂಗ್ರೆಸ್ ನೇತೃತ್ವದ ಸರ್ಕಾರ ನಿರ್ಧರಿಸಿದೆ! ಕರಾವಳಿಯಲ್ಲಿ ಸೃಷ್ಟಿಯಾಗಿರುವುದು ಒಂದು ರಾಜಕೀಯ– ಸಾಮಾಜಿಕ– ಸಾಂಸ್ಕೃತಿಕ ಬಿಕ್ಕಟ್ಟು. ಬೇಕಿರುವುದು ರಾಜಕೀಯ ಪರಿಹಾರ. ರಾಜಕೀಯವಾಗಿ ಪರಿಹರಿಸಬೇಕಿರುವುದನ್ನು ಪೊಲೀಸರನ್ನು ಮುಂದಿಟ್ಟುಕೊಂಡು ನಿಗ್ರಹಿಸಿಬಿಡುತ್ತೇವೆ ಎನ್ನುವ ಪ್ರಸ್ತಾಪವೇ ಪರಿಸ್ಥಿತಿಯ ಪ್ರಖರತೆ ಸರ್ಕಾರಕ್ಕೆ ಅರ್ಥವಾಗಿಲ್ಲ ಎನ್ನುವುದಕ್ಕೊಂದು ಪುರಾವೆ. ಅದಕ್ಕಿಂತಲೂ ಮುಖ್ಯವಾಗಿ, ಕೋಮುದ್ವೇಷ ಎಂಬ ಕಾರ್ಕೋಟಕವು ವ್ಯವಸ್ಥೆಯ ಸರ್ವಾಂಗವನ್ನೂ ವ್ಯಾಪಿಸಿ ರುವ ಪರಿಸ್ಥಿತಿಯಲ್ಲಿ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬಲ್ಲ ಪೊಲೀಸರಾದರೂ ಎಷ್ಟಿರಬಹುದು? ಪೊಲೀಸರ ಬಗ್ಗೆ ಹೀಗೊಂದು ಕೋಮುವಾದ– ಲೆಕ್ಕಪರಿಶೋಧನೆಯೇ (ಆಡಿಟಿಂಗ್ ಪೊಲೀಸ್ ಫೋರ್ಸ್ ಫಾರ್ ಕಮ್ಯುನಲಿಸಂ) ಮೊದಲು ಅಲ್ಲಿ ನಡೆಯಬೇಕಿದೆ.
ಕರಾವಳಿಯ ಎಲ್ಲರೂ ಕೋಮುವಾದಿಗಳಲ್ಲ, ಅಲ್ಲಿ ಜನವಿವೇಕ ಜಾಗೃತವಾಗಿದೆ ಎನ್ನುವ ವಾದದಲ್ಲಿ ಸತ್ಯಾಂಶ ಇರಬಹುದು. ಆದರೆ ಆ ನೆಲದ ರಾಜಕೀಯ– ಸಾಮಾಜಿಕ ಸನ್ನಿವೇಶವನ್ನು ಈ ಲೋಕೋತ್ತರ ವಿವರಣೆಯಾಚೆಗೆ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಮುಖ್ಯವಾಗಿ 2013ರ ಚುನಾವಣೆಯ ನಂತರದ ಕರಾವಳಿಯ ರಾಜಕೀಯ ಪರಿವರ್ತನೆಯನ್ನು ಮಾಮೂಲಿ ಕೋಮುವಾದಿ ರಾಜಕಾರಣದ ಪರಿಧಿಯೊಳಗಷ್ಟೇ ನೋಡಿದರೆ ಸಾಲದು.
ಇಡೀ ದೇಶವನ್ನು ಗಮನದಲ್ಲಿ ಇಟ್ಟುಕೊಂಡು 1950ರ ದಶಕದಲ್ಲೇ ಬಿ.ಆರ್.ಅಂಬೇಡ್ಕರ್ ಅವರು ಪ್ರಸ್ತಾಪಿಸಿದ ವಿಚಾರವೊಂದು ಕರಾವಳಿಯ ವಿಚಾರದಲ್ಲಿ ಪ್ರಸ್ತುತ ಎನಿಸುತ್ತದೆ. ಅದು ಅಂಬೇಡ್ಕರ್ ಅವರು ದೇಶದ ಬಗ್ಗೆ ಕಂಡಿದ್ದ ದುಃಸ್ವಪ್ನವೂ ಆಗಿತ್ತು. ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ಎರಡು ರೀತಿಯ ಬಹುಮತಗಳ ಬಗ್ಗೆ ಅಂಬೇಡ್ಕರ್ ಹೇಳಿದ್ದರು. ಮೊದಲನೆಯದು, ರಾಜಕೀಯ ಬಹುಮತ (ಪೊಲಿಟಿಕಲ್ ಮೆಜಾರಿಟಿ). ಎರಡನೆಯದು, ಮತಭ್ರಾಮಕ ಬಹುಮತ (ಕಮ್ಯುನಲ್ ಮೆಜಾರಿಟಿ).
ರಾಜಕೀಯ ಬಹುಮತ ಎಂದರೆ, ಒಂದು ದೊಡ್ಡ ಸಂಖ್ಯೆಯ ಜನ ಒಂದು ರಾಜಕೀಯ ಪಕ್ಷವನ್ನು ಅದರ ಗುಣಾವಗುಣಗಳ, ಸಾಧನೆ–ವೈಫಲ್ಯಗಳ ಮತ್ತು ನಾಯಕತ್ವದ ಒಳಿತು–ಕೆಡುಕುಗಳ ಪರಾಮರ್ಶೆ ನಡೆಸಿ ಆ ಪಕ್ಷಕ್ಕೆ ನೀಡುವ ಬೆಂಬಲ. ಮತಭ್ರಾಮಕ ಬಹುಮತ ಎಂದರೆ, ಒಂದು ರಾಜಕೀಯ ಪಕ್ಷವು ಕಪೋಲಕಲ್ಪಿತ ವೈರಿಯನ್ನು ಸೃಷ್ಟಿಸಿಕೊಂಡು ಬಹುಸಂಖ್ಯಾತ ಜನರ ಧರ್ಮರಕ್ಷಣೆ ತನ್ನಿಂದ ಮಾತ್ರ ಸಾಧ್ಯವೆಂದು ನಂಬಿಸಿ ಆ ಧರ್ಮಕ್ಕೆ ಸೇರಿದವರ ಮತಗಳನ್ನು ತನ್ನ ಸುತ್ತ ಧ್ರುವೀಕರಿಸಿಕೊಳ್ಳುವುದು.
ರಾಜಕೀಯ ಬಹುಮತ ಬದಲಾಗುತ್ತಿರುತ್ತದೆ, ಮತಭ್ರಾಮಕ ಬಹುಮತ ಒಮ್ಮೆ ಸೃಷ್ಟಿಯಾಗಿಬಿಟ್ಟರೆ ಬಹುಕಾಲ ಉಳಿಯುತ್ತದೆ. ಮತಭ್ರಾಮಕ ಬಹುಮತವನ್ನು ಮುಂದುವರಿಸಲು ಬಹುಸಂಖ್ಯಾತ ಧರ್ಮದವರಲ್ಲಿ ಒಂದು ಭಯ ಸದಾ ಜೀವಂತವಾಗಿ ಇರಬೇಕು. ಭಯ ಜೀವಂತವಾಗಿ ಇರಬೇಕಾದರೆ ಬಹುಸಂಖ್ಯಾತರ ನಡುವೆ ಆಗೊಂದು ಈಗೊಂದು ಹೆಣ ಉರುಳುತ್ತಿರಬೇಕು. ಹೆಣ ಉರುಳಲು ಬೇಕಾದ ಕೋಮುಪ್ರಚೋದನೆ ನಿರಂತರವಾಗಿ ಆಗುತ್ತಿರಬೇಕು. ಬೀದಿ ಕಾಳಗದಲ್ಲಿ ಉರುಳಿದ ಹೆಣಗಳನ್ನೂ ತಮ್ಮವರದ್ದೆಂದು ತಬ್ಬಿಕೊಳ್ಳಬೇಕು. ಕರಾವಳಿಯಲ್ಲಿ ಆಗುತ್ತಿರುವುದು ಇದೇ ಅಲ್ಲವೆ?
ಕರಾವಳಿಯಲ್ಲಿ ವೈದಿಕ ಹಿಂದೂವಾದಕ್ಕೆ ಸಣ್ಣಮಟ್ಟದ ಪ್ರತಿರೋಧವನ್ನಾದರೂ ಒಡ್ಡಬಲ್ಲ ಲಿಂಗಾಯತರಿಲ್ಲ. ದಲಿತರ ಸಂಖ್ಯೆ ದೊಡ್ಡದೇನಿಲ್ಲ. ಅಲ್ಲಿ ಬಹುಸಂಖ್ಯಾತರಾಗಿರುವವರು ರಾಜಕೀಯ ಪ್ರಜ್ಞೆಯೊಂದನ್ನು ಬೆಳೆಸಿ
ಕೊಳ್ಳದ ಹಿಂದುಳಿದ ಜಾತಿಗಳು. ಅಷ್ಟೇ ಅಲ್ಲ, ಹಸಿವು ಸೇರಿದಂತೆ ಮೂಲಭೂತ ಆರ್ಥಿಕ ಅವಶ್ಯಕತೆಗಳು ಅಲ್ಲಿ ಜನರಿಗೆ ಸಮಸ್ಯೆಯಾಗಿ ಉಳಿದಿಲ್ಲ. ಮಾಮೂಲಿ ಜನಪರ– ಕಲ್ಯಾಣ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮಾಡುವ ರಾಜಕೀಯಕ್ಕೆ ಅಲ್ಲಿ ಗಿರಾಕಿಗಳು ಕಡಿಮೆ. ಮತಭ್ರಾಮಕ ಬಹುಮತವೊಂದರ ಸೃಷ್ಟಿಗೆ ಎಲ್ಲವೂ ಪೂರಕ. ಪೂರಕವಲ್ಲದ ಅಲ್ಲಿನ ನಾಡ ಸಂಸ್ಕೃತಿಯನ್ನು ವೈದಿಕವಾದವು ಒಳಹೊಕ್ಕು ಭೇದಿಸಿಯಾಗಿದೆ. ಮತಭ್ರಾಮಕ ಬಹುಮತವು ಒಂದು ಪಕ್ಷದ ಪರವಾಗಿ ಒಮ್ಮೆ ರೂಪುಗೊಂಡರೆ ಆಮೇಲೆ ಆ ಪಕ್ಷ ಮತ್ತು ಅದರ ಪ್ರತಿನಿಧಿ ಗಳು ಏನೇ ಅನಾಹುತ ಮಾಡಿದರೂ ಗೆಲ್ಲಬಹುದು. ಎಷ್ಟೇ ಕೊಳಕು ಮಾತುಗಳನ್ನು ಆಡಿಯೂ ದಕ್ಕಿಸಿಕೊಳ್ಳಬಹುದು. ‘ಪೆಟ್ರೋಲ್ ಬೆಲೆ ಲೀಟರ್‌ಗೆ 500 ರೂಪಾಯಿ ಆದರೂ ನಿಷ್ಠೆ ಬದಲಿಸುವುದಿಲ್ಲ’ ಅಂತ ಅಲ್ಲೊಬ್ಬ ಮತದಾರ ಹೇಳಿದ್ದನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು.
ದುರ್ದೈವ ಎಂದರೆ, ಕರಾವಳಿಯಲ್ಲಿ ಇದನ್ನೆಲ್ಲಾ ಪ್ರಶ್ನಿಸುವ ಬಲಿಷ್ಠ ಮಾಧ್ಯಮ ಇಲ್ಲ. ಧಾರ್ಮಿಕ ಮುಂದಾಳು
ಗಳಿಲ್ಲ. ನಾಗರಿಕ ಸಂಘಟನೆಗಳಿಲ್ಲ. ಅಲ್ಲಿನ ಅಪಾಯಕಾರಿ ರಾಜಕೀಯವನ್ನು ಇನ್ನೊಂದು ರಾಜಕೀಯ ಪಕ್ಷವೇ ಹಿಮ್ಮೆಟ್ಟಿಸಬೇಕಿದೆ. ಆದರೆ, ವಿಧಾನಸಭಾ ಚುನಾವಣೆಗಳಲ್ಲಿ ಹತ್ತು ವರ್ಷಗಳಿಂದೀಚೆಗೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ 35 ವರ್ಷಗಳಿಂದೀಚೆಗೆ ಸತತ ಸೋಲುಂಡ ನಂತರವೂ ಕಾಂಗ್ರೆಸ್ ಪಕ್ಷವು ಜಿಲ್ಲೆಯಲ್ಲಿ ದಟ್ಟೈಸುತ್ತಿರುವ ಮತಭ್ರಾಮಕ ಬಹುಮತವನ್ನು ಗಂಭೀರ ವಾಗಿ ಪರಿಗಣಿಸಿಯೇ ಇಲ್ಲ. ಬದಲಿಗೆ ಕೋಮುವಾದವನ್ನು ಪೋಷಿಸುವ ಸ್ಥಳೀಯ ಧರ್ಮೋದ್ಯಮಿಗಳ ಜತೆ ಕಾಂಗ್ರೆಸ್ ನಾಯಕರು ‘ಗುರು–ಶಿಷ್ಯ’ ಸಂಬಂಧ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈ ಶಕ್ತಿಗಳ ವಿರುದ್ಧ ಪ್ರಾಮಾಣಿಕವಾಗಿ ಸೆಣಸುತ್ತಿರುವವರನ್ನು ತಮ್ಮ ವೈರಿಗಳೆಂದು ಕಾಣುತ್ತಾರೆ. ಅದೇವೇಳೆ, ಮತಭ್ರಾಮಕ ಬಹುಮತವನ್ನು ಪೊರೆಯುವ ದೊಡ್ಡ ವ್ಯಕ್ತಿಗಳ ಕೂದಲು ಕೊಂಕಿದರೂ ಸಾಕು ‘ನಿಮ್ಮ ಜತೆ ನಾವಿದ್ದೇವೆ’ ಎಂದು ಅಭಯ ನೀಡುತ್ತಾರೆ.
ಏಪ್ರಿಲ್ 27ರಂದು ಮಂಗಳೂರಿನಲ್ಲಿ ಜನ ಗುಂಪುಗೂಡಿ ವ್ಯಕ್ತಿಯೊಬ್ಬರನ್ನು ಥಳಿಸಿ ಕೊಂದ ಪ್ರಕರಣವು ಧರ್ಮದ್ವೇಷದ ವಿಷವು ಕರಾವಳಿಯ ಸಾಮಾನ್ಯ ಜನರಲ್ಲೂ ತೀವ್ರವಾಗಿ ಹಬ್ಬಲಾರಂಭಿಸಿದೆ ಎನ್ನುವುದಕ್ಕೆ ಸಾಕ್ಷಿ. ಆ ಗುಂಪುಹಲ್ಲೆಯಲ್ಲಿ ದಾರುಣವಾಗಿ ಜೀವ ಕಳೆದುಕೊಂಡದ್ದು ಹೊರರಾಜ್ಯದ ಅಮಾಯಕ
ಕಾರ್ಮಿಕ ಮಾತ್ರವಲ್ಲ, ರಾಜ್ಯದಲ್ಲಿ ಅಧಿಕಾರ ಹೊತ್ತಿರುವ ಕಾಂಗ್ರೆಸ್ ಪಕ್ಷ ಕೂಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.