ADVERTISEMENT

ಅನುರಣನ | ಎಸ್‌ಐಟಿ: ಸರ್ಕಾರಕ್ಕೆ ನಿರ್ಲಕ್ಷ್ಯವೆ?

ನಾರಾಯಣ ಎ.
Published 26 ಸೆಪ್ಟೆಂಬರ್ 2025, 0:30 IST
Last Updated 26 ಸೆಪ್ಟೆಂಬರ್ 2025, 0:30 IST
   
ಗಂಭೀರ ಅಪರಾಧ ಕೃತ್ಯಗಳು ನಡೆದಿರುವ ಆರೋಪಗಳ ತನಿಖೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ವರ್ತಿಸುತ್ತಿರುವ ರೀತಿ, ತನಿಖೆಯ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟಿಸುವಂತಿದೆ. ಜನರ ಮನಸ್ಸಿನಲ್ಲಿರುವ ಗೊಂದಲಗಳ ನಿವಾರಣೆಯ ಬದಲು, ಅನುಮಾನಗಳನ್ನು ಹೆಚ್ಚಿಸುವಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಸತ್ಯಸಂಗತಿ ಬೆಳಕಿಗೆ ಬರುವುದು ವಿರೋಧ ಪಕ್ಷಕ್ಕೂ ಬೇಕಾಗಿರುವಂತೆ ಕಾಣಿಸುತ್ತಿಲ್ಲ.

ನೇರವಾಗಿ ಹೇಳಬೇಕು ಎಂದಾದರೆ ಧರ್ಮಸ್ಥಳದಲ್ಲಿ ನೂರಾರು ಹೆಣಗಳ ಅಕ್ರಮ ವಿಲೇವಾರಿಯಾಗಿದೆ ಎನ್ನುವ ಆಪಾದನೆಗಿಂತ ಹೆಚ್ಚು ಬೆಚ್ಚಿ ಬೀಳಿಸುವುದು ರಾಜ್ಯ ಸರ್ಕಾರ ಈ ಪ್ರಕರಣವನ್ನು ನಿಭಾಯಿಸುತ್ತಿರುವ ರೀತಿ. ಅಕ್ರಮ ಹೆಣ ವಿಲೇವಾರಿ ಆಪಾದನೆಯ ತನಿಖೆಗೆಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದು ಬಿಟ್ಟರೆ, ಸರ್ಕಾರ ಈ ವಿಚಾರದಲ್ಲಿ ಇಡುತ್ತಿರುವ ಪ್ರತಿಯೊಂದು ಹೆಜ್ಜೆಯೂ ಅದರ ನಿಜವಾದ ಉದ್ದೇಶದ ಬಗ್ಗೆ ಅನುಮಾನ ಮೂಡಿಸುತ್ತಿದೆ.

ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವ ಉದ್ದೇಶ ಸರ್ಕಾರಕ್ಕೆ ಇದ್ದಂತೆ ಕಾಣಿಸುತ್ತಿಲ್ಲ; ಸತ್ಯ ಏನು ಎನ್ನುವುದನ್ನು ತಿಳಿದುಕೊಳ್ಳುವ ಇರಾದೆಯೂ ಇದ್ದ ಹಾಗೆ ಕಾಣಿಸುವುದಿಲ್ಲ. ಯಾವ ದೃಷ್ಟಿಯಿಂದ ನೋಡಿದರೂ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಿರುವ ವಿಷಯವನ್ನು ಈ ಸರ್ಕಾರ ಅದೆಷ್ಟು ನಿರ್ಲಿಪ್ತತೆಯಿಂದ ನಿರ್ವಹಿಸುತ್ತಿದೆ ಎಂದರೆ, ಸರ್ಕಾರದಲ್ಲಿ ಇರುವವರಿಗೆ ‘ಕಾನೂನು ಬದ್ಧ ಆಡಳಿತದಲ್ಲಿ’ ಕನಿಷ್ಠ ವಿಶ್ವಾಸವೂ ಇದ್ದ ಹಾಗಿಲ್ಲ. ಇದನ್ನು ನಿರ್ಲಿಪ್ತತೆ ಎನ್ನಬೇಕೋ ಅಥವಾ ಅಸಡ್ಡೆ ಎನ್ನಬೇಕೋ ಅರ್ಥವಾಗದಂತಿದೆ.

ಯಾರಾದರೂ ನ್ಯಾಯ ಕೇಳಿದರೆ ಅದನ್ನೇ ಒಂದು ಪಿತೂರಿ ಎನ್ನುವ ನಿರೂಪಣೆಯನ್ನು ಮುಂದಿಡುತ್ತಿರುವ ಕರ್ನಾಟಕದ ವಿರೋಧ ಪಕ್ಷಗಳ ಮತ್ತು ಮಾಧ್ಯಮಗಳ ಕೆಲವು ಮಂದಿಯ ಜೊತೆಗೆ ಸ್ವತಃ ಉಪಮುಖ್ಯಮಂತ್ರಿಗಳೇ ಧ್ವನಿಗೂಡಿಸಿದ್ದಾರೆ. ರಾಜ್ಯದ ಗೃಹಮಂತ್ರಿಗಳ ಮಾತುಗಳನ್ನು ಕೇಳುತ್ತಿದ್ದರೆ, ಯಾರೋ ಮಾಡುತ್ತಿರುವ ಆಪಾದನೆಗಳಿಂದ ಯಾರನ್ನೋ ಬಚಾವ್ ಮಾಡಬೇಕೆನ್ನುವ ಉದ್ದೇಶ ಅವರಿಗಿದೆ ಎಂದು ಅನ್ನಿಸುತ್ತದೆಯೇ ಹೊರತು, ಧರ್ಮಸ್ಥಳದ ಸುತ್ತಮುತ್ತ ನಡೆದುಹೋಗಿರಬಹುದಾದ, ಪತ್ತೆಯಾಗದ ಅತ್ಯಾಚಾರ, ಕೊಲೆ ಮತ್ತು ಹೆಣ್ಣುಮಕ್ಕಳ ಕಣ್ಮರೆ ಪ್ರಕರಣಗಳ ಸತ್ಯಾಸತ್ಯತೆಯನ್ನು ಭೇದಿಸುವ ಇರಾದೆ ಇದ್ದ ಹಾಗೆ ಕಾಣಿಸುವುದಿಲ್ಲ. ಮುಖ್ಯಮಂತ್ರಿಗಳು ಈ ವಿಷಯದಲ್ಲಿ ಆಡುವ ಮಾತುಗಳು ನ್ಯಾಯ ಸಿಗಬಹುದು ಎನ್ನುವ ಭರವಸೆ ಮೂಡಿಸುವುದಿಲ್ಲ. ಮೇಲಿನವರ ಕತೆಯೇ ಹೀಗಾದ ಮೇಲೆ ಎಸ್‌ಐಟಿಯಿಂದ ಏನು ಅಪೇಕ್ಷಿಸುವುದು. ಸಹಜವಾಗಿಯೇ ಆರಂಭದಲ್ಲಿ ಎಸ್‌ಐಟಿ ಬಗ್ಗೆ ಇದ್ದ ಭರವಸೆ ಈಗ ಉಳಿದಿಲ್ಲ. ನ್ಯಾಯಾಲಯದಲ್ಲಿ ಸರ್ಕಾರೀ ವಕೀಲರ ವಾದಗಳು ಇದೇ ಜಾಡುಹಿಡಿದಂತೆ ಕಾಣಿಸುತ್ತದೆ.

ADVERTISEMENT

ಸಾಕ್ಷಿದಾರ ಹೇಳಿದ ಸ್ಥಳಗಳಲ್ಲಿ ಅಗೆದಾಗ ಅಲ್ಲಿ ಮೂಳೆಗಳು ಸಿಗಲಿಲ್ಲ ಎನ್ನುವುದು ನಿಜವೇ ಆಗಿರಬಹುದು. ಆದರೆ, ಅದಕ್ಕೆ ಕಾರಣ ಆತ ಆರಂಭದಲ್ಲಿ ಅಪಾದಿಸಿದಂತೆ ಅಲ್ಲಿ ಹೆಣಗಳನ್ನು ಅಕ್ರಮವಾಗಿ ಹೂತು ಹಾಕಿಯೇ ಇರಲಿಲ್ಲ ಎಂದೇ, ಅಥವಾ ಆತ ತೋರಿಸಬೇಕಾದ ಜಾಗ ಬಿಟ್ಟು ಬೇರೆ ಜಾಗಗಳನ್ನು ತೋರಿಸಿದ ಎಂಬುದೇ? ಆತ ಮೊದಲಿಗೆ ಆಪಾದನೆ ಮಾಡಿದ್ದೇ ಸುಳ್ಳು ಮತ್ತು ಅದನ್ನು ಆತ ಯಾವುದೋ ಪಿತೂರಿಯ ಭಾಗವಾಗಿ ಮಾಡಿದ ಎನ್ನುವುದು ಕೆಲವರ ವಾದವಾದರೆ, ಆತ ಆರಂಭದಲ್ಲಿ ಮಾಡಿದ ಆಪಾದನೆಗಳೆಲ್ಲ ಸತ್ಯವಾಗಿದ್ದು, ಆ ನಂತರ ಯಾವುದೋ ಒತ್ತಡಕ್ಕೋ, ಆಮಿಷಕ್ಕೋ ಬಲಿಯಾಗಿ ಎಸ್‌ಐಟಿಗೆ ತಪ್ಪು ಮಾಹಿತಿ ನೀಡಿದ್ದ ಎನ್ನುವುದು ಇನ್ನೊಂದು ವಾದ. ಇವೆರಡರಲ್ಲಿ ಎಸ್‌ಐಟಿ ತನಿಖೆ ಯಾವ ಜಾಡುಹಿಡಿದು ಸಾಗುತ್ತಿದೆ ಎನ್ನುವುದು ಸ್ಪಷ್ಟವಿಲ್ಲ.

ಪ್ರಕರಣವನ್ನು ಆರಂಭದಿಂದಲೂ ಗಮನಿಸುತ್ತಾ ಬಂದ ಯಾರಿಗೇ ಆದರೂ ಒಂದು ವಿಷಯ ಸ್ಪಷ್ಟ ಆಗುತ್ತದೆ. ಅದೇನೆಂದರೆ, ಸಾಕ್ಷಿದಾರ ತೋರಿದ ಜಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಅವಶೇಷಗಳು ಸಿಗಲಿಲ್ಲ ಎನ್ನುವುದೊಂದನ್ನೇ ಹಿಡಿದು ಪ್ರಕರಣದ ಗಂಭೀರತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಯಾಕೆಂದರೆ, ಆ ನಂತರ ಬೇರೆ ಬೇರೆ ಕಡೆ ಮೂಳೆಗಳು ದೊರಕಿವೆ. ಆತ ತಪ್ಪು ಸ್ಥಳಗಳನ್ನು ತೋರಿಸಿದ್ದಾನೆ, ಸರಿಯಾದ ಸ್ಥಳಗಳನ್ನು ನಾವು ತೋರಿಸುತ್ತೇವೆ ಎಂದು ಕೆಲವು ಸ್ಥಳೀಯರು ಮುಂದೆ ಬಂದಿದ್ದಾರೆ. ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಿತೂರಿ ಮಾಡುವವರು ನ್ಯಾಯಾಲಯದ ಮೊರೆಹೋಗಲಾರರು ಎನ್ನುವುದು ಸಾಮಾನ್ಯಜ್ಞಾನ.

ಅಷ್ಟಕ್ಕೂ ಅಲ್ಲಿರುವುದು ಅಕ್ರಮ ಶವ ವಿಲೇವಾರಿಯ ಕತೆಯಷ್ಟೇ ಅಲ್ಲ. ಅದು ಸುಳ್ಳು ಎಂದು ತರ್ಕಕ್ಕಾಗಿ ಒಪ್ಪಿಕೊಂಡರೂ, ಧರ್ಮಸ್ಥಳದ ಸುತ್ತಮುತ್ತ ಅಧಿಕೃತವಾಗಿ ದಾಖಲಾದ ಐದು ಕೊಲೆ ಪ್ರಕರಣಗಳಲ್ಲಿ ಅಪರಾಧಿಗಳು ಯಾರು ಎನ್ನುವುದು ಪತ್ತೆಯಾಗಿಲ್ಲ ಎನ್ನುವುದು ಗಂಭೀರ ವಿಚಾರ. ಪ್ರತಿ ಕೊಲೆ ನಡೆದಾಗಲೂ ಪೊಲೀಸರು ಕಳಪೆ ತನಿಖೆ ನಡೆಸುವುದು, ಅಮಾಯಕರನ್ನು ಸಿಲುಕಿಸುವ ಪ್ರಯತ್ನ ನಡೆಸುವುದು ಯಾಕೆ ಎನ್ನುವುದು ಗಂಭೀರ ಪ್ರಶ್ನೆ. ಐದು ಕೊಲೆ ಪ್ರಕರಣಗಳ ಪೈಕಿ ಇಡೀ ರಾಜ್ಯದ ಗಮನವನ್ನು ದೊಡ್ಡ ಮಟ್ಟದಲ್ಲಿ ಸೆಳೆದ ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳೆಲ್ಲಾ ನಿಗೂಢವಾಗಿ ಸಾವನ್ನಪ್ಪಿದರು ಎನ್ನುವುದು ಗಂಭೀರ ವಿಷಯ.

ಸಾಕ್ಷಿದಾರ ಹೇಳಿದ ಸ್ಥಳದಲ್ಲಿ ಅವಶೇಷಗಳು ಸಿಗದೇ ಹೋದರೂ ಬೇರೆಡೆ ಸಿಕ್ಕಿವೆ ಎನ್ನುವುದೂ ಗಂಭೀರ ವಿಚಾರ. ಧರ್ಮಸ್ಥಳ ಪಂಚಾಯಿತಿ ನೀಡಿದ ಅಧಿಕೃತ ದಾಖಲೆಗಳ ಪ್ರಕಾರ, ಹಲವಾರು ಮೃತದೇಹಗಳನ್ನು ಯಾವುದೇ ಕಾನೂನು ಪ್ರಕ್ರಿಯೆಯನ್ನು ಪಾಲಿಸದೆ ಹೂಳಲಾಗಿದೆ ಎನ್ನುವುದೂ ಗಮನಿಸಬೇಕಾದ ವಿಚಾರ. ಆದರೆ ಸರ್ಕಾರ ಇವ್ಯಾವುದನ್ನೂ ಪರಿಗಣಿಸಿದ ಹಾಗಿಲ್ಲ.

ಇನ್ನು ವಿರೋಧ ಪಕ್ಷವಾದ ಬಿಜೆಪಿಯ ನಡವಳಿಕೆಯಂತೂ ವಿಚಿತ್ರವಾಗಿದೆ. ಕೊಲೆ, ಅತ್ಯಾಚಾರ, ಅಪಹರಣ, ಕಾನೂನುಬಾಹಿರ ಹೆಣ ವಿಲೇವಾರಿ, ಹೀಗೆ ಯಾವ ಅಪರಾಧ ಪ್ರಕರಣಗಳೇ ಆಗಿರಲಿ, ಅವೆಲ್ಲವೂ ಒಂದು ತೀರ್ಥಕ್ಷೇತ್ರದ ಆಸುಪಾಸಿನಲ್ಲಿ ನಡೆದರೆ ಪ್ರಶ್ನಿಸಲೇಬಾರದು; ಪ್ರಶ್ನಿಸಿದರೆ ಅದು ಧರ್ಮವಿರೋಧಿ ನಡೆ ಎನ್ನುವಂತಿದೆ ರಾಜ್ಯ ಬಿಜೆಪಿ ನಾಯಕರ ನಿಲುವು! ಇಂತಹದ್ದೊಂದು ಅಮಾನವೀಯ, ಅಪ್ರಬುದ್ಧ ಮತ್ತು ಅಸಂಗತ ವಾದವನ್ನು ಮುಂದಿಡುವುದಕ್ಕೆ ಆ ಪಕ್ಷದ ನಾಯಕರಿಗೆ ಯಾವುದೇ ಅಂಜಿಕೆ, ಅಳುಕು, ನಾಚಿಕೆ ಏನೂ ಇಲ್ಲ.

ಇಷ್ಟೆಲ್ಲಾ ಆಗಿಯೂ ಕಾಂಗ್ರೆಸ್ಸಿಗೆ ಹೋಲಿಸಿದರೆ ಬಿಜೆಪಿಯವರು ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಬಿಜೆಪಿಯ ರಾಜ್ಯಾಧ್ಯಕ್ಷರು ಪಕ್ಷದ ಒಂದಷ್ಟು ಮಂದಿಯ ಜತೆಗೆ 13 ವರ್ಷಗಳ ಹಿಂದೆ ಕೊಲೆಗೀಡಾದ ಸೌಜನ್ಯ ಮನೆಗೆ ಭೇಟಿ ನೀಡಿದ್ದಾರೆ. ಆ ಕುಟುಂಬ ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಮೂಲಕ ಸೌಜನ್ಯ ಪ್ರಕರಣದಲ್ಲಿ ನಡೆಯುತ್ತಿರುವ ಹೋರಾಟವೇ ಬೇರೆ, ಅಕ್ರಮ ಹೆಣ ವಿಲೇವಾರಿ ಆಪಾದನೆಯ ಸುತ್ತ ಎದ್ದಿರುವ ವಿವಾದವೇ ಬೇರೆ ಎಂದು ಬಿಜೆಪಿಯೂ ಒಪ್ಪಿಕೊಂಡಂತಾಗಿದೆ.

ಕರ್ನಾಟಕದಲ್ಲಿ ಇರುವ ರಾಜಕೀಯ ಪಕ್ಷಗಳ ಪೈಕಿ, ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ಮತ್ತು ಕರ್ನಾಟಕ ರಾಷ್ಟ್ರೀಯ ಸಮಿತಿ (ಕೆಆರ್‌ಎಸ್) ಮಾತ್ರ ಸೌಜನ್ಯ ಮತ್ತು ಹತ್ಯೆಯಾಗಿ ಹೋದ ಇತರ ನತದೃಷ್ಟ ಜೀವಗಳಿಗೆ ನ್ಯಾಯ ಒದಗಿಸಬೇಕು ಎಂದು ಆರಂಭದಿಂದಲೇ ಗಟ್ಟಿ ಧ್ವನಿ ಎತ್ತಿರುವುದು. ಬಿಜೆಪಿಯವರು ಕೆಆರ್‌ಎಸ್‌ ಪಕ್ಷದ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ, ಆದರೆ ಸಿಪಿಎಂ ಪಕ್ಷದ ಮತ್ತು ಸಮಸ್ತ ಎಡಪಂಥೀಯ ಸಂಘಟನೆಗಳ ಮೇಲೆ ಇನ್ನಿಲ್ಲದಂತೆ ಮುಗಿಬಿದ್ದಿದ್ದರು. ಇಡೀ ಪ್ರಕರಣವು ಎಡಪಂಥೀಯರು ಮಾಡಿರುವ ಪಿತೂರಿ ಎಂದು ಕಂಡಕಂಡಲ್ಲಿ ಆಪಾದಿಸಿದರು. ಕೇರಳದಲ್ಲಿ ಶಬರಿಮಲೆಯ ಮೇಲೆ ದಾಳಿ, ಇಲ್ಲಿ ಹೀಗೆ ದಾಳಿ ಎಂದು ಎಡಪಂಥೀಯರನ್ನು ಧರ್ಮವಿರೋಧಿಗಳೆಂದು ಚಿತ್ರಿಸಲು ಹೊರಟರು.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಹೆಣ್ಣುಮಕ್ಕಳೂ ಭೇಟಿನೀಡಬಹುದೆಂದು ತೀರ್ಪು ನೀಡಿದ್ದು ಸುಪ್ರೀಂ ಕೋರ್ಟು ಎನ್ನುವ ಸತ್ಯ ಮತ್ತು ಎಡಪಕ್ಷಗಳ ಸುದೀರ್ಘ ಆಡಳಿತ ಇರುವ ಕೇರಳದಲ್ಲಿ ವೈದಿಕ ಹಿಂದೂಗಳ ದೇವಾಲಯಗಳು ಅತ್ಯಂತ ಸುಂದರವಾಗಿವೆ ಹಾಗೂ ಸುಸ್ಥಿತಿಯಲ್ಲಿವೆ ಎನ್ನುವ ಸತ್ಯ ಬಿಜೆಪಿಯ ಆಪಾದನೆಗಳ ಸುಂಟರಗಾಳಿಯಲ್ಲಿ ಅಕ್ಷರಶಃ ಕೊಚ್ಚಿಕೊಂಡು ಹೋಗಿತ್ತು. ಇಷ್ಟೆಲ್ಲಾ ರಂಪಾಟ ಮಾಡಿದ ನಂತರ ಕೊನೆಗೂ ಈಗ ಬಿಜೆಪಿ ಕೂಡ, ಕೆಆರ್‌ಎಸ್‌ ಮತ್ತು ಎಡಪಕ್ಷಗಳ ವಾದವನ್ನು ಒಪ್ಪಿಕೊಂಡಿದೆ. ಅಷ್ಟರಮಟ್ಟಿಗೆ ಬಿಜೆಪಿ ಒಳ್ಳೆಯ ಕೆಲಸ ಮಾಡಿದೆ. ಆದರೆ, ಕಾಂಗ್ರೆಸ್ಸಿನ ಎಡಬಿಡಂಗಿತನ ಮುಂದುವರಿದಿದೆ.

ಸರ್ಕಾರ ಏನೇ ಮಾಡಬಹುದು, ನ್ಯಾಯಾಲಯಗಳು ಏನೇ ತೀರ್ಪು ನೀಡಬಹುದು, ಪೊಲೀಸರು ಯಥಾಪ್ರಕಾರ ಮನುಷ್ಯತ್ವ ಮರೆತು ಅಧಿಕಾರದ ಅಮಲು ಪ್ರದರ್ಶಿಸಬಹುದು... ಆದರೆ, ಇವೆಲ್ಲವನ್ನೂ ಮೀರಿ, ಇಡೀ ರಾಜ್ಯದಲ್ಲಿ, ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸತ್ಯ ಏನು ಎಂದು ತಿಳಿದ ಲಕ್ಷ ಲಕ್ಷ ಜನರಿದ್ದಾರೆ. ಅವರು ಸತ್ಯ ಏನು ಎಂದು ತಿಳಿಯಲು ಸರ್ಕಾರದತ್ತ, ನ್ಯಾಯಾಲಯಗಳತ್ತ, ತನಿಖಾ ಸಂಸ್ಥೆಗಳತ್ತ ಮುಖಮಾಡಿ ನಿಂತಿಲ್ಲ. ಅವರು ತಮಗೆ ಮನವರಿಕೆ ಆಗಿಹೋಗಿರುವ ಸತ್ಯಕ್ಕೆ ಒಂದು ಅಧಿಕೃತ ಮುದ್ರೆ ಬೀಳಲಿ ಎನ್ನುವ ಒಂದೇ ಕಾರಣಕ್ಕೆ ಕಾನೂನು ಹೋರಾಟ ನಡೆಸುತ್ತಿದ್ದಾರೆ, ಸರ್ಕಾರದ ಮೇಲೆ ಒತ್ತಾಯ ತರುತ್ತಿದ್ದಾರೆ. ಸರ್ಕಾರ, ರಾಜಕೀಯ ಪಕ್ಷಗಳು, ಮಾಧ್ಯಮ ಮತ್ತು ನ್ಯಾಯಾಲಯ… ಹೀಗೆ ಯಾರೂ ಸತ್ಯ–ನ್ಯಾಯದ ಪರ ಇಲ್ಲ ಎನ್ನುವ ಒಂದು ಅಭಿಪ್ರಾಯ ಅಷ್ಟೊಂದು ದೊಡ್ಡ ಸಂಖ್ಯೆಯ ಜನರಲ್ಲಿ ಮೂಡಿದರೆ ಆಗ ಅವರ ಮನದಾಳದಲ್ಲಿ ಹುಟ್ಟಲಿರುವ ಸಾತ್ವಿಕ ರೋಷದ ಪರಿಣಾಮ ಏನಾಗಬಹುದು? ಸಂಬಂಧಪಟ್ಟ ಎಲ್ಲರೂ ಯೋಚಿಸಬೇಕಾದ ವಿಷಯವಿದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.