ADVERTISEMENT

ಅನುಸಂಧಾನ: ಭ್ರಷ್ಟ ಕುದುರೆ ಓಡುತಿದೆ ನೋಡಿದಿರಾ?

ಸಾರ್ವಭೌಮರೆಂದುಕೊಂಡವರ ನೆತ್ತಿಯ ಕುಕ್ಕಲು ಇದು ಸಕಾಲ

ರವೀಂದ್ರ ಭಟ್ಟ
Published 29 ಜನವರಿ 2023, 19:30 IST
Last Updated 29 ಜನವರಿ 2023, 19:30 IST
ರವೀಂದ್ರ ಭಟ್ಟ
ರವೀಂದ್ರ ಭಟ್ಟ   

ರಾಜ್ಯದಲ್ಲಿ ಈಗ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇದರಲ್ಲಿ ಭ್ರಷ್ಟಾಚಾರದ ಆರೋಪದ ಪ್ರಮಾಣವೇ ಹೆಚ್ಚು. ಈ ಬಾರಿ ಚುನಾವಣೆಯಲ್ಲಿ ಭ್ರಷ್ಟಾಚಾರವೇ ಪ್ರಮುಖ ವಿಷಯ. ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪವನ್ನು ಕಾಂಗ್ರೆಸ್ ಪಕ್ಷ ಮಾಡಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ‘ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಗಂಗೋತ್ರಿ’ ಎಂದು ಹೇಳಿದೆ.

ಬಿಜೆಪಿ ಭ್ರಷ್ಟಾಚಾರದಿಂದ ವಿಧಾನಸೌಧ ಮಲಿನವಾಗಿದ್ದು ಅದನ್ನು ಗಂಜಲದಿಂದ ಶುದ್ಧ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಶಿವಕುಮಾರ್ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ ಎಂದು ಬಿಜೆಪಿ ಹೇಳಿದೆ. ಈ ನಡುವೆ ಜಾತ್ಯತೀತ ಜನತಾದಳ ನಾಯಕರೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ.

ಅವರ ವಿರುದ್ಧವೂ ಇಂತಹ ಆರೋಪಗಳು ಕೇಳಿಬಂದಿವೆ. ಒಟ್ಟಾರೆಯಾಗಿ ಎಲ್ಲ ಕಡೆಯಿಂದಲೂ ಭ್ರಷ್ಟ ಕುದುರೆಯನ್ನೇ ಓಟಕ್ಕೆ ಬಿಡಲಾಗಿದೆ. ಈಗ ಈ ಕುದುರೆಯನ್ನು ಕಟ್ಟಿಹಾಕುವ ಕೆಲಸ ಮತದಾರರದ್ದು. ಭ್ರಷ್ಟ ಕುದುರೆಗಳನ್ನು ಲಗಾಮು ಹಾಕಿ ಹಿಡಿಯಬೇಕು ಮತ್ತು ಕಸದಬುಟ್ಟಿಗೆ ಎಸೆಯಬೇಕಾಗಿದೆ.

ADVERTISEMENT

ಭ್ರಷ್ಟಾಚಾರ ಮಾಮೂಲಾಗಿದೆ ಎಂದು ಅದನ್ನು ಒಪ್ಪಿಕೊಂಡು ಸುಮ್ಮನಿರಲಾಗದು. ಮತದಾರರಂತೂ ಸುಮ್ಮನಿರಲೇಬಾರದು. ಗ್ರಾಮ ಪಂಚಾಯಿತಿಯಿಂದ ವಿಧಾನಸೌಧದ ಮಹಡಿಯವರೆಗೂ ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿದೆ. ಅದನ್ನು ತಡೆಯಲಿಕ್ಕಾಗದು ಎಂದು ನಮಗೆ ನಾವೇ ನಿರ್ಧರಿಸಿಕೊಂಡು ಭ್ರಷ್ಟರನ್ನೇ ಆಯ್ಕೆ ಮಾಡಿದರೆ, ನಮ್ಮ ಮಕ್ಕಳು, ಮೊಮ್ಮಕ್ಕಳ ಬದುಕು ದುರ್ಭರವಾಗುತ್ತದೆ. ಅವರ ಸಂಕಷ್ಟಗಳಿಗೆ ನಾವೇ ಸಾಮಗ್ರಿ ಒದಗಿಸಿದಂತಾಗುತ್ತದೆ. ಹೌದು, ಮತದಾರರೂ ಭ್ರಷ್ಟರಾಗಿದ್ದಾರೆ. ಈಗ ಮತದಾರರು ತಮ್ಮ ತನುವ ಸಂತೈಸಿಕೊಳ್ಳಬೇಕು. ಮನವ ಸಂತೈಸಿ ಕೊಳ್ಳಬೇಕು. ಮತದಾರರನ್ನು ಭ್ರಷ್ಟರನ್ನಾಗಿ ಮಾಡಿದ್ದು ರಾಜಕಾರಣಿಗಳೇ ಆದರೂ ಆ ಕೊಳೆಯನ್ನು ತೊಳೆಯುವ ಕೆಲಸವನ್ನು ಮತದಾರರೇ ಮಾಡಬೇಕು.

ಸರ್ಕಾರ ಎನ್ನುವುದು ಒಂದು ಡಕೋಟ ಬಸ್ಸು ಇದ್ದಂತೆ. ಆ ಬಸ್ಸಿನ ಯಾವ ಭಾಗವೂ ಸರಿ ಇಲ್ಲ. ಸರ್ಕಾರ ಬದಲಾಗುವುದು ಎಂದರೆ ಚಾಲಕ ಬದಲಾಗುತ್ತಾನೆ ಅಷ್ಟೆ. ಚಾಲಕ ಬದಲಾದ ತಕ್ಷಣ ಬಸ್ಸು ಬದಲಾಗುವುದಿಲ್ಲ. ಅದರ ಗೇರ್ ಬಾಕ್ಸ್, ಕ್ಲಚ್, ಎಂಜಿನ್ ಎಲ್ಲಾ ಹಾಗೆಯೇ ಇರುತ್ತವೆ. ಬದಲಾದ ಚಾಲಕ ಕೇವಲ ಸ್ಟೀರಿಂಗ್ ವ್ಹೀಲ್‌ ಹಿಡಿದುಕೊಂಡು ಅತ್ತ ಇತ್ತ ತಿರುಗಿಸುತ್ತಾನೆ ಅಷ್ಟೆ. ಬಸ್ ಇದ್ದಲ್ಲೇ ಇರುತ್ತದೆ. ಮುಂದೆ ಸಾಗುವುದಿಲ್ಲ. ಯಾರೋ ಅಲ್ಲೊಬ್ಬ ಇಲ್ಲೊಬ್ಬ ಕಸುಬುದಾರ ಚಾಲಕ ಮಾತ್ರ ಕೊಂಚ ಮೆಕ್ಯಾನಿಕ್ ಆಗಿದ್ದು, ಗೇರ್ ಸರಿ ಮಾಡಿಕೊಂಡು ಬಸ್ಸನ್ನು ಸ್ವಲ್ಪ ಮುಂದೆ ಓಡಿಸುತ್ತಾನೆ ಅಷ್ಟೆ. ಈಗೆಲ್ಲ ನಿಂತ ಬಸ್ಸಿನ ಸ್ಟೀರಿಂಗ್ ವ್ಹೀಲ್‌ ಹಿಡಿದ ಚಾಲಕ ಭರವಸೆಗಳ ಮಳೆ ಸುರಿಸುತ್ತಾನೆ. ಈಡೇರದ ಕನಸುಗಳನ್ನು ಬಿತ್ತುತ್ತಾನೆ. ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಳ್ಳುತ್ತಾನೆ. ಡಕೋಟ ಬಸ್ಸಿಗೆ ಬಣ್ಣದ ಬೆಳಕು ತುಂಬಿ ಭ್ರಮೆ ಹುಟ್ಟಿಸುತ್ತಾನೆ. ಆಮೇಲೆ ಬಸ್ಸಿನ ಒಂದೊಂದೇ ಭಾಗವನ್ನು ಮಾರಾಟ ಮಾಡಲು ಶುರು ಮಾಡುತ್ತಾನೆ.

ಭ್ರಷ್ಟಾಚಾರದ ವಿಷಯಕ್ಕೆ ಬಂದರೆ, ಹಲವಾರು ದಶಕಗಳಿಂದ ಕರ್ನಾಟಕ ರಾಜ್ಯದ ಸ್ಥಿತಿ ಹಾಗೆಯೇ ಇದೆ. ದಶಕದಿಂದ ದಶಕಕ್ಕೆ ಭ್ರಷ್ಟಾಚಾರದ ಪ್ರಮಾಣ ಏರುತ್ತಿದೆಯೇ ವಿನಾ ಇಳಿಯುತ್ತಿಲ್ಲ. ಮಾರುಕಟ್ಟೆಯಲ್ಲಿ ದಿನನಿತ್ಯದ ವಸ್ತುಗಳ ಬೆಲೆ ಏರಿದಂತೆಯೇ ಸರ್ಕಾರಿ ಕಚೇರಿಗಳಲ್ಲಿಯೂ ಲಂಚದ ಪ್ರಮಾಣ ಏರುತ್ತಲೇ ಇದೆ. ಅದು ತಹಶೀಲ್ದಾರರ ಕಚೇರಿಯಾದರೂ ಸೈ, ನೋಂದಣಿ ಇಲಾಖೆಯಾದರೂ ಸೈ, ವಿಧಾನಸೌಧವಾದರೂ ಅಷ್ಟೆ.

‘ಡಿ.ಕೆ.ಶಿವಕುಮಾರ್ ರಾಜಕೀಯ ಪ್ರವೇಶ ಮಾಡಿದಾಗ ಅವರ ಆಸ್ತಿ ಎಷ್ಟಿತ್ತು, ಈಗ ಎಷ್ಟಾಗಿದೆ?’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಶ್ನೆ ಮಾಡಿದ್ದಾರೆ. ಇಂತಹ ಪ್ರಶ್ನೆಯನ್ನು ಅವರೂ ಕೇಳಿಕೊಳ್ಳ ಬೇಕಲ್ಲವೇ? ಸದ್ಯ ರಾಜಕೀಯದಲ್ಲಿ ಇರುವ ಯಾವ ರಾಜಕಾರಣಿಯ ಆಸ್ತಿಯೂ ಅವರು ರಾಜಕೀಯಕ್ಕೆ ಪ್ರವೇಶ ಮಾಡಿದ ಕಾಲದಲ್ಲಿ ಇದ್ದ ಹಾಗೆ ಇಲ್ಲ. ಇದು ವಾಸ್ತವ ಸತ್ಯ. ಇದನ್ನು ಮತದಾರರು ಅರ್ಥ ಮಾಡಿಕೊಳ್ಳದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ.

ಡಿಕೆಶಿ, ಎಚ್‌ಡಿಕೆ, ಬೊಮ್ಮಾಯಿ

ಈಗ ಚರ್ಚೆಯಾಗುತ್ತಿರುವುದು ಶಾಸಕಾಂಗದ ಭ್ರಷ್ಟಾಚಾರದ ವಿಷಯ. ಶಾಸಕಾಂಗದ ಭ್ರಷ್ಟಾಚಾರದ ಜೊತೆಗೇ ಕಾರ್ಯಾಂಗದ ಭ್ರಷ್ಟಾಚಾರವನ್ನೂ ನಿಯಂತ್ರಿಸಬೇಕಾಗಿದೆ. ಶಾಸಕಾಂಗದಲ್ಲಿ ಇರುವವರು ಐದು ವರ್ಷಕ್ಕೆ ಒಮ್ಮೆ ಬದಲಾಗುತ್ತಾರೆ. ಚುನಾವಣೆ ಸಂದರ್ಭದಲ್ಲಿ ಯಾದರೂ ಜನರಿಗೆ ಒಂದಿಷ್ಟು ಹಂಚುತ್ತಾರೆ. ಆದರೆ ಕಾರ್ಯಾಂಗದಲ್ಲಿ ಇರುವವರು ಅಲ್ಲಿ 30–35 ವರ್ಷ ಇರುತ್ತಾರೆ. ಯಾವುದೇ ಪಕ್ಷದ ಸರ್ಕಾರ ಬಂದರೂ ಕೆಲಸ ಮಾಡಬೇಕಾದವರು ಇವರೆ. ಭ್ರಷ್ಟ ಶಾಸಕಾಂಗದಿಂದ ಕಾರ್ಯಾಂಗದ ಭ್ರಷ್ಟಾಚಾರವನ್ನು ತೊಲಗಿಸಲು ಸಾಧ್ಯವಿಲ್ಲ. ಅದಕ್ಕಾಗಿ ಶಾಸಕಾಂಗದ ಭ್ರಷ್ಟಾಚಾರವೂ ಹೋಗಬೇಕು, ಕಾರ್ಯಾಂಗದ ಭ್ರಷ್ಟಾಚಾರವೂ ಹೋಗಬೇಕು. ಇದೊಂದು ತರಹ ಮೊಟ್ಟೆ ಮೊದಲೋ ಕೋಳಿ ಮೊದಲೋ ಎನ್ನುವಂತಾಗಿದೆ. ಶಾಸಕಾಂಗದಿಂದ ಕಾರ್ಯಾಂಗ ಭ್ರಷ್ಟವಾಯಿತೋ ಅಥವಾ ಕಾರ್ಯಾಂಗ ದಿಂದ ಶಾಸಕಾಂಗ ಭ್ರಷ್ಟವಾಯಿತೋ ತಿಳಿಯದು. ಆದರೆ ಎರಡೂ ಅಂಗಗಳು ಭ್ರಷ್ಟವಾಗಿವೆ. ನಾಲ್ಕನೇ ಅಂಗ ಎಂದು ಕರೆಸಿಕೊಳ್ಳುವ ಮಾಧ್ಯಮ ರಂಗ ಕೂಡ ಇದಕ್ಕೆ ಹೊರತಾಗಿಲ್ಲ. ನ್ಯಾಯಾಂಗ ಕೂಡ ಆರೋಪಗಳಿಂದ ಮುಕ್ತವಾಗಿಲ್ಲ.

ಎಲ್ಲ ಕಸವನ್ನೂ ಬದಿಗೆ ಒತ್ತುವ ತಾಕತ್ತು ಇರುವುದು ಮತದಾರರಿಗೆ ಮಾತ್ರ. ಇನ್ನಾದರೂ ತಾಕತ್ತು ಪ್ರದರ್ಶಿಸಬೇಕು. ಪಕ್ಷದ ಹಂಗು ಬಿಟ್ಟು, ಜಾತಿಯ ಗುಂಗು ತೊರೆದು, ಹಣದ ರಂಗಿಗೆ ಮರುಳಾಗದೆ, ಮಾತಿನ ಚಪ್ಪರಕ್ಕೆ ಮೈಮರೆಯದೆ ಮತ ಚಲಾಯಿಸದಿದ್ದರೆ ಮುಳುಗುವುದು ಗ್ಯಾರಂಟಿ. ದಮ್ಮಿದ್ರೆ, ತಾಕತ್ತು ಇದ್ರೆ ಎಂದು ಒಬ್ಬರಿಗೊಬ್ಬರು ಸವಾಲು ಹಾಕುವ ರಾಜಕಾರಣಿಗಳಿಗೆ ಮತದಾರರು ನಿಜವಾದ ತಾಕತ್ತು ತೋರಬೇಕು.

ಇತ್ತೀಚೆಗೆ ಒಂದು ಕತೆ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿತ್ತು. ಅಭ್ಯರ್ಥಿಯೊಬ್ಬ ಮತದಾರನೊಬ್ಬನಿಗೆ ಒಂದು ಸಾವಿರ ರೂಪಾಯಿ ನೀಡಿ, ತನಗೇ ಮತ ಚಲಾಯಿಸುವಂತೆ ಕೇಳಿಕೊಂಡ. ಅದಕ್ಕೆ ಮತದಾರ ತನಗೆ ಹಣ ಬೇಡ, ಒಂದು ಕತ್ತೆ ತಂದುಕೊಡು ಎಂದು ಮನವಿ ಮಾಡಿದ. ಅದಕ್ಕೆ ಒಪ್ಪಿದ ಅಭ್ಯರ್ಥಿ ಸಂತೆಯಲ್ಲೆಲ್ಲಾ ಕತ್ತೆಗಾಗಿ ಹುಡುಕಾಡಿದ. ಎಲ್ಲಿಯೂ ಆತನಿಗೆ ₹ 20 ಸಾವಿರಕ್ಕಿಂತ ಕಡಿಮೆ ದರದ ಕತ್ತೆ ಸಿಗಲಿಲ್ಲ. ಅದಕ್ಕೆ ಮತ್ತೆ ಮತದಾರನ ಬಳಿ ಬಂದ ಆತ ‘ಕಡಿಮೆ ದರದಲ್ಲಿ ಕತ್ತೆ ಸಿಗುವುದಿಲ್ಲ. ಕನಿಷ್ಠ 20 ಸಾವಿರ ರೂಪಾಯಿ ನೀಡಬೇಕು. ಅದಕ್ಕಾಗಿ ನಿನಗೆ ಕತ್ತೆ ಕೊಡಲು ಆಗಲ್ಲ, ಬೇಕಾದರೆ ಎರಡು ಸಾವಿರ ರೂಪಾಯಿ ನೀಡುತ್ತೇನೆ’ ಎಂದ. ಅದಕ್ಕೆ ಮತದಾರ ‘ಕತ್ತೆಗೇ 20 ಸಾವಿರ ರೂಪಾಯಿ ಆದರೆ ನಾನು ಕತ್ತೆಗಿಂತ ಕಡೆನಾ’ ಎಂದು ಪ್ರಶ್ನೆ ಮಾಡಿದನಂತೆ. ಪ್ರತೀ ಮತದಾರನಿಗೆ 6 ಸಾವಿರ ರೂಪಾಯಿ ನೀಡಲು ಮುಂದಾಗಿರುವ ರಾಜಕೀಯ ಮುಖಂಡರಿಗೆ ಈಗ ಮತದಾರರು ಕತ್ತೆಯ ಕತೆಯನ್ನು ಹೇಳಬೇಕಾಗಿದೆ.

ದ.ರಾ.ಬೇಂದ್ರೆ ಅವರು ‘ಹಕ್ಕಿ ಹಾರುತಿದೆ ನೋಡಿದಿರಾ’ ಕವನದಲ್ಲಿ ‘ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ, ಮಂಡಲ-ಗಿಂಡಲಗಳ ಗಡ ಮುಕ್ಕಿ, ತೇಲಿಸಿ ಮುಳುಗಿಸಿ ಖಂಡ-ಖಂಡಗಳ, ಸಾರ್ವಭೌಮರಾ ನೆತ್ತಿಯ ಕುಕ್ಕಿ, ಹಕ್ಕಿ ಹಾರುತಿದೆ ನೋಡಿದಿರಾ?’ ಎಂದು ಹೇಳುತ್ತಾರೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ದೊರೆಗಳನ್ನು ಟೀಕಿಸಿ ಅವರು ಹೀಗೆ ಬರೆದಿದ್ದರು. ಈಗಲೂ ವಿವಿಧ ರಾಜಕೀಯ ಪಕ್ಷಗಳು ಓಟಕ್ಕೆ ಬಿಟ್ಟಿರುವ ಭ್ರಷ್ಟ ಕುದುರೆಗಳ ನೆತ್ತಿಯನ್ನು ಮತದಾರರು ಕುಕ್ಕದೇ ಇದ್ದರೆ ಕಾಲಪಕ್ಷಿ ಮತದಾರರನ್ನೇ ಕುಕ್ಕುತ್ತದೆ.

ಬೇಂದ್ರೆಯವರ ಕ್ಷಮೆ ಕೋರಿ ಅವರ ಕವಿತೆಯ ಕೊನೆಯ ಸಾಲುಗಳನ್ನು ಹೀಗೆ ಬದಲಾಯಿಸಿಕೊಳ್ಳ ಬಹುದೇನೋ? ‘ಲಂಚ ಮುಟ್ಟಿದೆ ದಿಗ್ಮಂಡಲಗಳ ಅಂಚ, ಆಚೆಗೆ ಚಾಚಿದೆ ತನ್ನಯ ಚುಂಚ, ಬ್ರಹ್ಮಾಂಡಗಳನು ದಾಟಿದೆ ಲಂಚದ ಹೊಂಚು, ಭ್ರಷ್ಟ ಕುದುರೆ ಓಡುತಿದೆ ನೋಡಿದಿರಾ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.