ADVERTISEMENT

ವಿಧಾನಸೌಧವೆಂಬ ಮೃತ ಸಮುದ್ರ!

ರವೀಂದ್ರ ಭಟ್ಟ
Published 1 ಡಿಸೆಂಬರ್ 2018, 20:02 IST
Last Updated 1 ಡಿಸೆಂಬರ್ 2018, 20:02 IST
ಚಿತ್ರ: ಹೂಗಾರ್
ಚಿತ್ರ: ಹೂಗಾರ್   

ಇಸ್ರೇಲ್‌ನಲ್ಲಿ ಮೃತ ಸಮುದ್ರವೊಂದಿದೆ. ಜೋರ್ಡಾನ್ ಕಣಿವೆಯಲ್ಲಿರುವ ಈ ಸಮುದ್ರದ ಬಳಿ ಏನೂ ಬೆಳೆಯುವುದಿಲ್ಲ. ಎಲ್ಲವೂ ಬೆಂಗಾಡು. ಅಲ್ಲಿ ಮೀನುಗಳಿಲ್ಲ. ಇತರ ಜಲಚರಗಳಿಲ್ಲ. ಹತ್ತಿರಕ್ಕೆ ಹೋಗುತ್ತಿದ್ದಂತೆ ಉಪ್ಪಿನ ಗಾಳಿ ರಾಚುತ್ತದೆ. ಇದನ್ನು ಸಮುದ್ರ ಎಂದು ಕರೆಯಲಾಗುತ್ತದೆಯಾದರೂ ನಿಜವಾಗಿ ಇದೊಂದು ದೊಡ್ಡ ಕೆರೆ. ಜೋರ್ಡಾನ್ ನದಿಯ ನೀರು ಇದಕ್ಕೆ ಸೇರುತ್ತದೆ. ಆದರೆ ಈ ಸಮುದ್ರದ ಸುತ್ತ ಬೆಟ್ಟಗಳು ಇರುವುದರಿಂದ ಒಮ್ಮೆ ಒಳಕ್ಕೆ ಹೋದ ನೀರು ಹೊರಕ್ಕೆ ಬರುವುದಿಲ್ಲ. ಅದಕ್ಕಾಗಿಯೇ ಇದು ಮೃತ ಸಮುದ್ರ.

ಮೃತ ಸಮುದ್ರದ ಉತ್ತರಕ್ಕೆ 75 ಕಿ.ಮೀ ದೂರದಲ್ಲಿ ಸೀ ಆಫ್ ಗೆಲಿಲಿ ಎಂಬ ಇನ್ನೊಂದು ಸಮುದ್ರ ಇದೆ. ಅಲ್ಲಿ ಜೀವ ವೈವಿಧ್ಯ ಇದೆ. ಅದರ ಸುತ್ತ ಎಲ್ಲ ಪ್ರಾಣಿ ಪಕ್ಷಿಗಳೂ ಇವೆ. ಸಸ್ಯರಾಶಿ ಕಂಗೊಳಿಸುತ್ತದೆ. ಮೃತ ಸಮುದ್ರದಂತೆ ಸೀ ಆಫ್ ಗೆಲಿಲಿಗೂ ಜೋರ್ಡಾನ್ ನದಿಯ ನೀರೇ ಹೋಗುತ್ತದೆ. ಜೋರ್ಡಾನ್ ನದಿ ಎರಡು ಭಾಗವಾಗಿ ಒಂದು ಸೀ ಆಫ್ ಗೆಲಿಲಿಯನ್ನು ಸೇರುತ್ತದೆ. ನಂತರ ಅದು ಇನ್ನೊಂದು ಭಾಗಕ್ಕೆ ಸೇರ್ಪಡೆಯಾಗುತ್ತದೆ. ಇದರ ಒಟ್ಟರ್ಥ ಇಷ್ಟೆ; ಒಳಕ್ಕೆ ಹೋಗುವ ನೀರು ಹೊರಕ್ಕೆ ಬಾರದೇ ಇದ್ದರೆ ಅದು ಮೃತವಾಗುತ್ತದೆ. ಒಳಕ್ಕೆ ಹೋಗುವ ನೀರು ಹೊರಕ್ಕೆ ಬಂದರೆ ಅಲ್ಲಿ ಜೀವ ವೈವಿಧ್ಯ ಇರುತ್ತದೆ. ಕೊಡುಕೊಳ್ಳುವ ಕಡೆ ಜೀವಂತಿಕೆ ಇದೆ. ಬರೀ ತೆಗೆದುಕೊಳ್ಳುವುದು ಮಾತ್ರ ಇದ್ದರೆ ಅಲ್ಲಿ ಜೀವಂತಿಕೆ ಇರುವುದಿಲ್ಲ.

ನಮ್ಮ ವಿಧಾನಸೌಧ ಕೂಡ ಈಗ ಮೃತ ಸಮುದ್ರದಂತೆಯೇ ಆಗಿಬಿಟ್ಟಿದೆ. ಇಲ್ಲಿಯೂ ಜನರ ಸಮಸ್ಯೆಗಳು, ಅಹವಾಲುಗಳ ಸಾವಿರ ಸಾವಿರ ಸಂಖ್ಯೆ ಕಡತಗಳು ಒಳಕ್ಕೆ ಹೋಗುತ್ತವೆ. ಆದರೆ ಅವು ಪರಿಹಾರವಾಗಿ ಹೊರಕ್ಕೆ ಬರುವುದೇ ಇಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಇರುವ ಅಧಿಕಾರಿಗಳ ಹೃದಯಗಳೂ ಈಗ ಮೃತ ಸಮುದ್ರದಂತೆ ಆಗಿವೆ. ಅಲ್ಲಿ ಕರುಣೆ, ಪ್ರೀತಿ, ಕರ್ತವ್ಯಪ್ರಜ್ಞೆ ಯಾವುದೂ ಕಾಣುತ್ತಿಲ್ಲ. ರಾಜಕಾರಣಿಗಳು ಮತದ ಭಯದಿಂದಲಾದರೂ ಒಂದಿಷ್ಟು ಕೆಲಸ ಮಾಡಿದರೂ ಮಾಡಬಹುದು. ಆದರೆ ಅಧಿಕಾರಿಗಳಿಗೆ ಅಂತಹ ಭಯ ಕೂಡ ಇಲ್ಲ.

ADVERTISEMENT

ರಾಜ್ಯದಲ್ಲಿ ಈಗ ನೂರಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಬರಗಾಲವಿದೆ. ಚಿತ್ರದುರ್ಗ, ಗದಗ, ಕೋಲಾರ ಮುಂತಾದ ಜಿಲ್ಲೆಗಳಲ್ಲಿ ಸತತ ಐದನೇ ವರ್ಷ ಬರಗಾಲ. ವಿಜಯಪುರ ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಮಂದಿಗೆ ಕುಡಿಯುವ ನೀರು ದೊರಕುತ್ತಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ 64 ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸ್ಥಿತಿ ಶೋಚನೀಯವಾಗಿದೆ. ತುಮಕೂರು ಜಿಲ್ಲೆಯ ಹಲವಾರು ಗ್ರಾಮಗಳಿಗೆ ಟ್ಯಾಂಕರ್ ನಲ್ಲಿ ನೀರು ಪೂರೈಸಲಾಗುತ್ತಿದೆ. ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಕೋಲಾರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳೂ ಇದಕ್ಕೆ ಹೊರತಲ್ಲ. ಆದರೂ ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿಲ್ಲ. ಅಧಿಕಾರದಲ್ಲಿ ಇರುವವರು ತಮ್ಮ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಭಾವನೆ ಜನರಲ್ಲಿ ಮನೆ ಮಾಡಿದೆ.

ಬರ ನಿರ್ವಹಣೆಗೆ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಆದರೆ ಬಹುತೇಕ ಕಡೆ ಇದರ ಸಭೆಯೇ ನಡೆದಿಲ್ಲ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಶಾಸಕರು ರಾಜಧಾನಿಯಲ್ಲಿ ಕುಳಿತು ಸದ್ಯದಲ್ಲೇ ನಡೆಯುವ ಸಂಪುಟ ವಿಸ್ತರಣೆಯ ಕನಸು ಕಾಣುತ್ತಿದ್ದಾರೆ. ಹಲವಾರು ಸಚಿವರೂ ಕೂಡ ಟಾಸ್ಕ್ ಫೋರ್ಸ್ ಸಭೆ ನಡೆಸಿಲ್ಲ. ಬರದಿಂದ ತತ್ತರಿಸುವ ಜನರಿಗೆ ಅಗತ್ಯ ಸೌಲಭ್ಯ ಒದಗಿಸುವ ಬಗ್ಗೆ ಚಿಂತನೆ ನಡೆಸಿಲ್ಲ. ಡಿ.10ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಲ್ಲಿಯೂ ಬರದ ಬಗ್ಗೆ ತೋರಿಕೆಯ ಚರ್ಚೆ ಬಿಟ್ಟು ಗಂಭೀರ ಚರ್ಚೆ ನಡೆಯುತ್ತದೆ ಎಂಬ ವಿಶ್ವಾಸವೂ ಇಲ್ಲ. ವಿರೋಧ ಪಕ್ಷ ಬಿಜೆಪಿ ಕೂಡ ಬರದ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡ ಹಾಗೆ ಕಾಣುತ್ತಿಲ್ಲ. ಆ ಪಕ್ಷಕ್ಕೆ, ಶಬರಿಮಲೆ ದೇವಾಲಯಕ್ಕೆ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವ ವಿಷಯದಷ್ಟು ಇದು ಆದ್ಯತೆಯ ವಿಷಯವಾಗಿ ಕಾಣುತ್ತಿಲ್ಲ.

ಚಂದ್ರಗುಪ್ತ ಮೌರ್ಯನ ಕಾಲದಲ್ಲಿ ಆತನ ಮಂತ್ರಿಯಾಗಿದ್ದವನು ಚಾಣಕ್ಯ. ಒಂದು ವರ್ಷ ಚಳಿ ಜಾಸ್ತಿಯಾಗುವ ಮುನ್ಸೂಚನೆ ಸಿಕ್ಕಿತು. ಅದಕ್ಕೆ ರಾಜ, ಚಳಿಯಿಂದ ಪ್ರಜೆಗಳಿಗೆ ಕಷ್ಟವಾಗಬಾರದು ಎಂದು ಉಣ್ಣೆಯ ಕಂಬಳಿ ವಿತರಿಸಲು ನಿರ್ಧರಿಸಿದ. ನೇಕಾರರಿಗೆ ಹೇಳಿ ಉಣ್ಣೆಯ ಕಂಬಳಿಗಳನ್ನು ಮಾಡಿಸಿದ. ಎಲ್ಲ ಕಂಬಳಿಗಳನ್ನು ಚಾಣಕ್ಯನ ಮನೆಯಲ್ಲಿ ಇರಿಸಿದ. ಈ ವಿಷಯ ಪಕ್ಕದ ರಾಜ್ಯದ ರಾಜನಿಗೆ ಗೊತ್ತಾಯಿತು. ತಾನೂ ಹಾಗೇ ಮಾಡಬೇಕು ಎಂದು ಅಂದುಕೊಂಡ. ಆದರೆ ಅದಕ್ಕೆ ಬೇಕಾದಷ್ಟು ಹಣ ಆತನಲ್ಲಿ ಇರಲಿಲ್ಲ. ಅದಕ್ಕೊಂದು ಉಪಾಯ ಮಾಡಿದ. ತನ್ನ ರಾಜ್ಯದ ಪ್ರಖ್ಯಾತ ಕಳ್ಳನನ್ನು ಕರೆದು ಚಾಣಕ್ಯನ ಮನೆಯಲ್ಲಿ ಇರುವ ಕಂಬಳಿ ಕದ್ದುಕೊಂಡು ಬರಲು ಹೇಳಿದ.

ಕಳ್ಳನು ಚಾಣಕ್ಯನ ಮನೆಗೆ ಬಂದ. ಮನೆ ಎಂದರೆ ಅದು ಮನೆಯಾಗಿರಲಿಲ್ಲ. ಅದೊಂದು ಗುಡಿಸಲು. ತನ್ನ ಶಿಷ್ಯ ಚಂದ್ರಗುಪ್ತ ಮೌರ್ಯನೇ ರಾಜನಾಗಿದ್ದರೂ ಚಾಣಕ್ಯ ವಾಸ ಮಾಡುತ್ತಿದ್ದುದು ಒಂದು ಗುಡಿಸಲಿನಲ್ಲಿ. ಕಳ್ಳ ಬಂದಾಗ ಚಾಣಕ್ಯ ಒಂದು ಚಾಪೆಯ ಮೇಲೆ ಚಳಿಯಿಂದ ನಡುಗುತ್ತಾ ಮಲಗಿದ್ದ. ಗುಡಿಸಲು ತುಂಬಾ ಹೊಚ್ಚಹೊಸ ಉಣ್ಣೆ ಕಂಬಳಿಗಳು ಇದ್ದರೂ ಚಾಣಕ್ಯ ಅದನ್ನು ಹೊದ್ದುಕೊಳ್ಳದೆ ಚಳಿಯಲ್ಲಿಯೇ ಮಲಗಿದ್ದ. ಕಳ್ಳನಿಗೆ ಆಶ್ಚರ್ಯವಾಯಿತು. ಆದರೂ ಆತ ಕಂಬಳಿ ಕದಿಯಲು ಮುಂದಾದ. ಆಗ ರಾಜಭಟರು ಆತನನ್ನು ಹಿಡಿದರು. ಆಗ ಆತ ಚಾಣಕ್ಯನಲ್ಲಿ, ‘ಗುಡಿಸಲು ತುಂಬಾ ಉಣ್ಣೆಯ ಕಂಬಳಿ ತುಂಬಿದ್ದರೂ ನೀವು ಅದನ್ನು ಬಳಸದೆ ಚಳಿಯಿಂದ ನಡುಗುತ್ತಾ ಮಲಗಿದ್ದು ಯಾಕೆ?’ ಎಂದು ಕೇಳಿದ. ಅದಕ್ಕೆ ಚಾಣಕ್ಯನು, ‘ಅವು ರಾಜ್ಯದ ಬಡವರಿಗೆ ವಿತರಿಸಲು ತಂದಿಟ್ಟ ಕಂಬಳಿಗಳು. ಅದನ್ನು ಹೊದ್ದು ಮಲಗುವ ಅಧಿಕಾರ ನನಗೆ ಇಲ್ಲ’ ಎಂದು ಉತ್ತರಿಸಿದ.

ನಾವು ಈಗ ಇಷ್ಟು ಔದಾರ್ಯದ ನಾಯಕರನ್ನು ಬಯಸುತ್ತಿಲ್ಲ. ಆದರೆ ಕನಿಷ್ಠ ಕರ್ತವ್ಯ ಪ್ರಜ್ಞೆಯಾದರೂ ಬೇಕಲ್ಲ? ಬರಗಾಲದಲ್ಲಿಯೂ ಶೋಕಿ ಮಾಡುವ, ವಿದೇಶಗಳಿಗೆ ಹೋಗುವ, ಸಚಿವರಾಗುವ ಕನಸು ಕಾಣುತ್ತಾ ಕನವರಿಸುವ ರಾಜಕಾರಣಿಗಳು, ಜನರ ನೆರವಿಗೆ ಬರಬೇಕಾದ ಅಧಿಕಾರಿಗಳನ್ನು ನೋಡಿದರೆ ಅವರು ಚಾಣಕ್ಯನಂತೆ ಕಾಣುವುದಿಲ್ಲ. ಕಳ್ಳರಂತೆಯೇ ಕಾಣುತ್ತಾರೆ. ಬರಗಾಲ ಬರುತ್ತದೆ ಎನ್ನುವ ಮುನ್ಸೂಚನೆ ನಮಗೂ ಇತ್ತು. ಆದರೆ ನಾವು ಮುಂದಾಲೋಚನೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಬರಗಾಲ ಬಂದಿದೆ. ಆದರೂ ನಾವು ಎಚ್ಚೆತ್ತುಕೊಂಡಿಲ್ಲ. ಇದು ಕೇವಲ ಪ್ರಾಕೃತಿಕ ಬರ ಅಲ್ಲ. ಮಾನವೀಯತೆಯ ಬರವೂ ಹೌದು.

‘ಬರ ಇದೆ ಎಂದು ಜನ ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೆಯೇ’ ಎಂದು ಒಮ್ಮೆ ಶಿವರಾಮ ಕಾರಂತರು ಕೇಳಿದ್ದರು. ಜನ ಮಸಾಲೆ ದೋಸೆ ತಿನ್ನಲಿ. ಆದರೆ ಅಧಿಕಾರದಲ್ಲಿ ಇರುವವರೂ ಮಸಾಲೆ ದೋಸೆ ತಿನ್ನುವುದರಲ್ಲಿಯೇ ನಿರತರಾದರೆ ಸತತ ಬರಗಾಲದಿಂದ ಸಂಕಷ್ಟಕ್ಕೆ ಒಳಗಾಗಿ ನೆರವಿಗಾಗಿ ಕೈಚಾಚಿ ನಿಂತವರ ಬೊಗಸೆಗೆ ಒಂದು ಹನಿ ನೀರು ಹಾಕುವವರು ಯಾರು?

ಎಲ್ಲಿಯವರೆಗೆ ನಾವು ತೆಗೆದುಕೊಳ್ಳುವುದರಲ್ಲಿಯೇ ಖುಷಿ ಪಡುತ್ತೇವೆಯೋ ಅಲ್ಲಿಯವರೆಗೆ ನಾವು ಮೃತ ಸಮುದ್ರದಂತೆಯೇ ಇರುತ್ತೇವೆ. ತೆಗೆದುಕೊಂಡಷ್ಟು ಕೊಡುವುದರಲ್ಲಿಯೂ ಮುಂದಾದರೆ ಮಾತ್ರ ಜೀವ ಸೆಲೆ ಉತ್ಪತ್ತಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.