ADVERTISEMENT

ಅನುಸಂಧಾನ: ಜಾತಿ ಎಂಬುದೇ ಜ್ಯೋತಿರ್ಲಿಂಗ!

ರವೀಂದ್ರ ಭಟ್ಟ
Published 28 ಸೆಪ್ಟೆಂಬರ್ 2025, 23:30 IST
Last Updated 28 ಸೆಪ್ಟೆಂಬರ್ 2025, 23:30 IST
...
...   

ಮಾತೆಂಬುದು ಜ್ಯೋತಿರ್ಲಿಂಗ ಎಂದರು ಅಲ್ಲಮಪ್ರಭು. ಅಷ್ಟಕ್ಕೇ ಅವರು ನಿಲ್ಲಿಸಲಿಲ್ಲ. ‘ತಾಳೋಷ್ಠ ಸಂಪುಟವೆಂಬುದು ನಾದಬಿಂದು ಕಳಾತೀತ’ ಎಂದರು. ಅಂದರೆ ಉಸಿರಾಟವನ್ನು ನಿಯಂತ್ರಿಸುವ ಒಂದು ಮುದ್ರೆ ನಾದ ಎಂದರ್ಥ. ನಮ್ಮ ರಾಜಕಾರಣಿಗಳಿಗೆ ಮಾತು ಮುತ್ತು ನಿಜ. ಆದರೆ, ಅವರ ಉಸಿರಾಟವನ್ನು ನಿಯಂತ್ರಿಸುವ ಮುದ್ರೆ ಜಾತಿ. ಶರಣರಿಗೆ ಮಾತು ಜ್ಯೋತಿರ್ಲಿಂಗವಾದರೆ ರಾಜಕಾರಣಿಗಳಿಗೆ ಜಾತಿಯೇ ಜ್ಯೋತಿರ್ಲಿಂಗ. ‘ತೇನ ವಿನಾ ತೃಣಮಪಿ ನ ಚಲತಿ’ ಎಂಬ ಮಾತೊಂದಿದೆ. ರಾಜಕಾರಣದಲ್ಲಿಯೂ ಹಾಗೆ. ಜಾತಿ ಇಲ್ಲದೆ ಇಲ್ಲಿ ತೃಣವೂ ಚಲಿಸುವುದಿಲ್ಲ. ಚುನಾವಣೆಯಲ್ಲಿ ಟಿಕೆಟ್ ನೀಡುವಾಗ ಜಾತಿ, ಸಚಿವರನ್ನು ನೇಮಿಸುವಾಗ ಜಾತಿ, ನಿಗಮ– ಮಂಡಳಿಗಳಿಗೆ ಆಯ್ಕೆ ಮಾಡುವಾಗ ಜಾತಿ, ಉದ್ಯೋಗದಲ್ಲಿ ಜಾತಿ, ಎಲ್ಲವೂ ಜಾತಿಮಯ. ರಾಜ್ಯದಲ್ಲಿ ಜಾತಿವಾರು ಸಮೀಕ್ಷೆ ಪ್ರಕಟಣೆ ಹೊರಬಿದ್ದ ತಕ್ಷಣದಿಂದಲೇ ಜಾತಿ ಜಾತಿಗಳ ಬಣ್ಣ ಬಯಲಾಗುತ್ತಿದೆ. ಕೆಲವರಿಗೆ ತಮ್ಮ ಜಾತಿಯ ಪ್ರತಿಷ್ಠೆ ಉಳಿಸಿಕೊಳ್ಳುವ ತವಕ. ಇನ್ನು ಕೆಲವರಿಗೆ ಕಳೆದುಕೊಳ್ಳುವ ಆತಂಕ. ಒಟ್ಟಾರೆ ಎಲ್ಲರಿಗೂ ಐಡೆಂಟಿಟಿ ಪ್ರಶ್ನೆ.

ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಜಾತಿವಾರು ಸಮೀಕ್ಷೆ ಅನಿವಾರ್ಯ. ತೀರಾ ಹಿಂದುಳಿದ ಜಾತಿಗಳನ್ನು ಗುರುತಿಸಿ ಅವರನ್ನು ಮೇಲಕ್ಕೆತ್ತಲು ಇದು ಸಹಕಾರಿ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಕರ್ನಾಟಕದಲ್ಲಿ ಇಂತಹ ಪ್ರಯತ್ನ ನಡೆದಾಗಲೆಲ್ಲಾ ಅಡ್ಡಿ ಆತಂಕಗಳೇ ಎದುರಾಗಿವೆ. ಮಿಲ್ಲರ್ ವರದಿಯಿಂದ ಇತ್ತೀಚಿನ ಕಾಂತರಾಜ ವರದಿಯವರೆಗೂ ಯಾವುದೂ ಸುಗಮವಾಗಿ ನಡೆದಿಲ್ಲ. ಮಿಲ್ಲರ್ ವರದಿ ಬಂದಾಗ ಆಗಿನ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೇ ನೀಡಿದರು. ಕರ್ನಾಟಕದ ಎರಡನೇ ಹಿಂದುಳಿದ ವರ್ಗಗಳ ಆಯೋಗ ಎಂದು ಕರೆಯಲಾಗುವ ವೆಂಕಟಸ್ವಾಮಿ ಆಯೋಗದ ವರದಿಗೂ ಸಿಕ್ಕಿದ್ದು ತಿರಸ್ಕಾರದ ಭಾಗ್ಯ. ವಿಶ್ವೇಶ್ವರಯ್ಯ ರಾಜೀನಾಮೆ ನೀಡಿದ್ದರೂ, ಮೇಲ್ವರ್ಗದ ಜನರ ಪ್ರತಿಭಟನೆ ಇದ್ದರೂ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗದ ವರದಿಗೆ ಆದ್ಯತೆ ನೀಡಿದ್ದರು. ಆದರೆ 1983ರಲ್ಲಿ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ರಚಿಸಿದ್ದ ಟಿ. ವೆಂಕಟಸ್ವಾಮಿ ಆಯೋಗ 1986ರಲ್ಲಿ ತನ್ನ ವರದಿಯನ್ನು ನೀಡಿತು. ಕೆಲವು ಸಮುದಾಯಗಳನ್ನು ಹೊರಗಿಟ್ಟ ಕಾರಣದಿಂದ ರಾಜಕೀಯ ಒತ್ತಡ ಹೆಚ್ಚಾಗಿ ಹೆಗಡೆ ಸರ್ಕಾರ ವರದಿಯನ್ನು ತಿರಸ್ಕರಿಸಿತು.

ಇದಕ್ಕೂ ಮೊದಲು 1960ರಲ್ಲಿ ಡಾ. ನಾಗನಗೌಡ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ನಿರ್ಣಯಕ್ಕೆ ಸಮಿತಿಯೊಂದನ್ನು ರಚಿಸಲಾಗಿತ್ತು. ಒಟ್ಟು 399 ಜಾತಿಗಳು ಮೀಸಲಾತಿಗೆ ಅರ್ಹವೆಂದು ಈ ಸಮಿತಿ ಅಭಿಪ್ರಾಯಪಟ್ಟಿತ್ತು. ಶಿಕ್ಷಣದಲ್ಲಿ ಶೇ 50ರಷ್ಟು ಮತ್ತು ಸರ್ಕಾರಿ ಉದ್ಯೋಗದಲ್ಲಿ ಶೇ 45ರಷ್ಟು ಈ ಜಾತಿಗಳಿಗೆ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸು ಆಧರಿಸಿ ಸರ್ಕಾರ ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳು ಎಂದು ಎರಡು ಭಾಗ ಮಾಡಿ ಮೀಸಲಾತಿ ಕಲ್ಪಿಸಿತು. ಹಿಂದುಳಿದ ವರ್ಗಗಳಿಗೆ ಶೇ 28 ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಶೇ 22ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ, ಅದನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತು.

ADVERTISEMENT

1970ರ ದಶಕದಲ್ಲಿ ಕರ್ನಾಟಕದ ರಾಜಕೀಯ ಇನ್ನೊಂದು ಮಗ್ಗುಲು ಪಡೆಯಿತು. ದೇವರಾಜ ಅರಸು ಅವರು ಮುಖ್ಯಮಂತ್ರಿಯಾದ ನಂತರ ಬಡವರನ್ನು ಮೇಲೆತ್ತುವುದೇ ಸರ್ಕಾರದ ಮುಖ್ಯ ಕರ್ತವ್ಯ ಎಂಬುದನ್ನು ಅನುಷ್ಠಾನಕ್ಕೆ ತಂದರು. ಯಾವ ಅಂಕಿ ಸಂಖ್ಯೆಯ ಹಂಗಿಲ್ಲದೆ ಅವರು ಹಿಂದುಳಿದ ವರ್ಗಗಳ ಏಳಿಗೆಗೆ ಮುಂದಾದರು. ಹಿಂದುಳಿದ ಜಾತಿಯ ಯುವಕರನ್ನು ಹುಡುಕಿ ಹುಡುಕಿ ಅಧಿಕಾರ ಕೊಡಿಸಿದರು. 1972ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ಮಾಡುವಾಗ ದೇವರಾಜ ಅರಸರು, ‘ನಾವು ಬಹುಸಂಖ್ಯಾತ ಜಾತಿಗಳ ವಿರುದ್ಧ ಅಲ್ಲ. ಆದರೆ ರಾಜ್ಯದಲ್ಲಿ ದೊಡ್ಡ ವರ್ಗ ಎಂದರೆ ತುಳಿತಕ್ಕೆ ಒಳಗಾದ ವರ್ಗ. ಅಧಿಕಾರದ ಹತ್ತಿರಕ್ಕೂ ಬರದ ವರ್ಗ. ಅವರಿಗೆ ಅಧಿಕಾರ ಕೊಡುವುದು ಎಂದರೆ ಪ್ರಜಾಪ್ರಭುತ್ವಕ್ಕೆ ಬೆಲೆ ನೀಡಿದಂತೆ’ ಎಂದು ಹೇಳಿ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು. ಅದಕ್ಕಾಗಿಯೇ ಆ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದ 165 ಶಾಸಕರಲ್ಲಿ 93 ಮಂದಿ ಹಿಂದುಳಿದ ವರ್ಗದವರೇ ಆಗಿದ್ದರು. ಅಂದರೆ ಸಮೀಕ್ಷೆ, ಅಂಕಿ ಸಂಖ್ಯೆಗಿಂತ ಮುಖ್ಯವಾಗಿ ಬೇಕಾಗಿದ್ದು ಹೃದಯ ವೈಶಾಲ್ಯತೆ. ಕೆಳಕ್ಕೆ ಬಿದ್ದವರನ್ನು ಮೇಲಕ್ಕೆ ಎತ್ತಬೇಕು ಎಂಬ ಮಾತೃ ಹೃದಯ. ಅದು ದೇವರಾಜ ಅರಸರಿಗೆ ಇತ್ತು. ಮತ್ತು ಅಂತಹ ಇನ್ನೊಂದು ಉದಾಹರಣೆ ಕರ್ನಾಟಕದ ರಾಜಕೀಯದಲ್ಲಿ ವಿರಳ.

ಮುಖ್ಯಮಂತ್ರಿ ದೇವರಾಜ ಅರಸು ಅವರು ಒಮ್ಮೆ ವಿಧಾನಸಭೆಯಲ್ಲಿ ಮಾತನಾಡುತ್ತಾ, ತಮ್ಮ ಮುಂದೆ ಇದ್ದ ಒಂದು ಲೋಟ ನೀರನ್ನು ಕೈಯಲ್ಲಿ ಹಿಡಿದು ‘ಇದು ಸರ್ಕಾರದ ಕಾರ್ಯಕ್ರಮ. ದಾಹ ಇರುವವನಿಗೆ ಕೊಟ್ಟು ಬಾ ಎಂದರೆ ನೀವು ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರೋಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ ಜಾತಿ, ಧರ್ಮ, ಜನಾಂಗ, ಭಾಷೆಗಳ ವಿಚಾರದಲ್ಲಿ ರಾಜಕಾರಣ ಬೆರೆಸುವುದು ಜನದ್ರೋಹ. ಎಲ್ಲ ವಿಷಯಗಳಲ್ಲಿಯೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದು ಹೇಳಿದ್ದರು. ಅಲ್ಲದೆ ಹಾಗೆಯೇ ನಡೆದುಕೊಂಡಿದ್ದರು. ಈಗ ಮುಖ್ಯಮಂತ್ರಿ ಆದಿಯಾಗಿ ಎಲ್ಲ ರಾಜಕಾರಣಿಗಳೂ ಜಾತಿ ಪ್ರೇಮ ಮೆರೆಸುವುದನ್ನು ನೋಡಿದರೆ ಕಾಲ ಎಲ್ಲಿಗೆ ಬಂತಪ್ಪಾ ಎನಿಸುತ್ತದೆ.

ದೇವರಾಜ ಅರಸು ಅವರು 1972ರಲ್ಲಿ ಎಲ್.ಜಿ. ಹಾವನೂರು ಆಯೋಗ ರಚಿಸಿದರು. ಹಿಂದುಳಿದ ವರ್ಗಗಳ ಮೀಸಲಾತಿ ಮತ್ತು ಇತರ ವಿಷಯಗಳ ಬಗ್ಗೆ ಅಧ್ಯಯನ ನಡೆಸಿದ ಆಯೋಗ 1975ರಲ್ಲಿ ವರದಿ ನೀಡಿತು. ಇದರಲ್ಲಿ ಲಿಂಗಾಯತ, ವೀರಶೈವ, ಬಂಟ, ಕ್ರೈಸ್ತ, ಅರಸು ಮುಂತಾದ ಜಾತಿಗಳನ್ನು ಹಿಂದುಳಿದ ಜಾತಿಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಪ್ರಬಲ ಜಾತಿಗಳ ಪ್ರತಿಭಟನೆಗೆ ಹೆದರಿ ಆಯೋಗದ ವರದಿ ಎರಡು ವರ್ಷ ಜಾರಿಗೆ ಬರಲಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದ ಸಂದರ್ಭದಲ್ಲಿ 1977ರ ಫೆಬ್ರುವರಿ 22ರಂದು ಸರ್ಕಾರ ಹಾವನೂರು ವರದಿಯನ್ನು ಅಂಗೀಕರಿಸಿ ಆದೇಶ ಹೊರಡಿಸಿತು. ದೇವರಾಜ ಅರಸು ಅವರಿಗೂ ಅರಸು ಜಾತಿಯನ್ನು ಪಟ್ಟಿಯಿಂದ ಕೈಬಿಟ್ಟಿದ್ದು ಇಷ್ಟವಾಗದೇ, ಅರಸು ಜಾತಿಯನ್ನು ಹಿಂದುಳಿದ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದರು. ಜೊತೆಗೆ, ವಿವಿಧ ಸಮುದಾಯಗಳ ಬಡವರನ್ನು ವಿಶೇಷ ಗುಂಪು ಎಂದು ಗುರುತಿಸಿ ಶೇ 5ರಷ್ಟು ಮೀಸಲಾತಿ ಒದಗಿಸಿದರು. ಹಾವನೂರು ವರದಿ ಕೂಡಾ ನ್ಯಾಯಾಲಯದ ಮೆಟ್ಟಿಲು ಏರಿತು. ಆಗ ಅಧಿಕಾರದಲ್ಲಿದ್ದ ಗುಂಡೂ ರಾವ್ ಸರ್ಕಾರ ಹೊಸ ಆಯೋಗ ರಚಿಸುವುದಾಗಿ ಹೇಳಿದ್ದರಿಂದ ಹಾವನೂರು ವರದಿಗೂ ಹಿನ್ನೆಡೆಯಾಯಿತು. ನಂತರ ಬಂದ ವೆಂಕಟಸ್ವಾಮಿ ಆಯೋಗದ ವರದಿ ಕತೆಯಂತೂ ಗೊತ್ತೇ ಇದೆ. 1990ರ ದಶಕದಲ್ಲಿ ಚಿನ್ನಪ್ಪ ರೆಡ್ಡಿ ಆಯೋಗದ ವರದಿಗೂ ವ್ಯಾಪಕ ವಿರೋಧ ವ್ಯಕ್ತವಾಯಿತು. ಅದೂ ಸಂಪೂರ್ಣ ಚಾಲ್ತಿಗೆ ಬರಲಿಲ್ಲ.

ಕಾಂತರಾಜ ಆಯೋಗ ನಡೆಸಿದ ಸಮೀಕ್ಷೆ ಕೂಡ ಮೂಲೆ ಸೇರಿತು. ಈಗ ಮತ್ತೊಂದು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆ ನಡೆಯುತ್ತಿರುವಾಗಲೇ ಇದು ಸೂಕ್ತವಾಗಿ ನಡೆಯುತ್ತಿಲ್ಲ ಎಂದು ವಿರೋಧ ಪಕ್ಷಗಳು ಹುಯಿಲೆಬ್ಬಿಸಿವೆ. ಕೆಲವು ಜಾತಿಗಳಿಗೆ ತಾವು ಎಲ್ಲಿ ಗುರುತಿಸಿಕೊಳ್ಳಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ. ಕೆಲವು ಸಣ್ಣ ಸಣ್ಣ ಜಾತಿಗಳು ಅನುಕೂಲದ ದೃಷ್ಟಿಯಿಂದ ದೊಡ್ಡ ಜಾತಿಗಳೊಂದಿಗೆ ಗುರುತಿಸಿಕೊಂಡಿದ್ದವು. ಆದರೆ, ಇದರಿಂದ ಸಾಮಾಜಿಕವಾಗಿಯೂ ಲಾಭವಾಗಿಲ್ಲ. ರಾಜಕೀಯವಾಗಿಯೂ ಲಾಭವಾಗಿಲ್ಲ ಎನ್ನುವುದು ಅವುಗಳಿಗೆ ಅರ್ಥವಾಗಿದೆ. ಅದಕ್ಕೇ ಈಗ ಅವು ಪ್ರತ್ಯೇಕ ಐಡೆಂಟಿಟಿಗೆ ಪ್ರಯತ್ನಿಸುತ್ತಿವೆ.

ರಾಜಕೀಯ ಪಕ್ಷಗಳ ಗೋಳು ಇನ್ನೊಂದು ರೀತಿಯದ್ದು. ಪರಿಶಿಷ್ಟರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲಾ ಒಂದಾದರೆ ತನಗೆ ಲಾಭ ಎಂದು ಕಾಂಗ್ರೆಸ್ ಭಾವಿಸಿದರೆ, ಲಿಂಗಾಯತ ಪ್ರತ್ಯೇಕ ಧರ್ಮ ಎಂಬುದು ಹೆಚ್ಚು ಪ್ರಚಾರವಾದರೆ ಹಿಂದೂಗಳ ಸಂಖ್ಯೆ ಕಡಿಮೆಯಾಗಿ ತನಗೆಲ್ಲಿ ತೊಂದರೆಯಾಗುವುದೋ ಎಂಬ ಆತಂಕ ಬಿಜೆಪಿಗೆ. ಹಿಂದುಳಿದ ವರ್ಗಗಳ ಸಮೀಕ್ಷೆ ನಡೆಸಿ ಎಂದು ರಾಹುಲ್ ಗಾಂಧಿ ಹೇಳಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಲ. ಪಕ್ಷದ ನಿಲುವು ಒಂದು ಕಡೆ, ಜನಾಂಗದ ನಿಲುವು ಇನ್ನೊಂದು ಕಡೆ ಎನ್ನುವುದು ಕೆಪಿಸಿಸಿ ಅಧ್ಯಕ್ಷರಿಗೆ ಎರಡು ಕಡೆಯ ಬಿಸಿ. ಸಮೀಕ್ಷೆಯಿಂದ ವಾಸ್ತವ ಸ್ಥಿತಿ ಹೊರಬಂದರೆ ಇಲ್ಲಿಯವರೆಗೆ ನಡೆಸಿಕೊಂಡು ಬಂದ ದರ್ಬಾರಿಗೆ ಸಂಚಕಾರ ಬರಬಹುದು ಎನ್ನುವುದು ದೊಡ್ಡ ಜಾತಿಗಳ ಭಯವಾದರೆ, ಸಣ್ಣ ಸಣ್ಣ ಜಾತಿಗಳಿಗೆ ಏನಾದರೂ ಲಾಭ ಆಗಬಹುದು ಎಂಬ ಆಸೆ. ಒಟ್ಟಿನಲ್ಲಿ ಎಲ್ಲರೂ ಹೇಳುವುದು ‘ಜಾತಿಯೇ ಶರಣಂ ಸೈಯಪ್ಪ’. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.