ADVERTISEMENT

ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!

ರವೀಂದ್ರ ಭಟ್ಟ
Published 28 ನವೆಂಬರ್ 2025, 1:04 IST
Last Updated 28 ನವೆಂಬರ್ 2025, 1:04 IST
<div class="paragraphs"><p>ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!</p></div>

ಅನುಸಂಧಾನ: ಭಿನ್ನಮತವೆಂಬುದು ಬೆಂಕಿ ಕಣಾ!

   

ಇತಿಹಾಸದಿಂದ ರಾಜಕಾರಣಿಗಳು ಪಾಠ ಕಲಿಯುವುದಿಲ್ಲ ಎನ್ನುವುದನ್ನು ಕರ್ನಾಟಕದ ರಾಜಕಾರಣಿಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಭಿನ್ನಮತ ಎನ್ನುವ ಬೆಂಕಿಗೆ ಪತಂಗಗಳಂತೆ ತಮ್ಮನ್ನು ಒಡ್ಡಿಕೊಳ್ಳುತ್ತಿದ್ದಾರೆ. ಆ ಬೆಂಕಿ ಅವರನ್ನು ಸುಡುವ ಜೊತೆಗೆ ನಾಡಿನ ಹಿತಕ್ಕೂ ಮಾರಕವಾಗಿದೆ.

–––

ADVERTISEMENT

ರಾಷ್ಟ್ರಕವಿ ಕುವೆಂಪು ಅವರು, ‘ಕರ್ನಾಟಕ ಎಂಬುದೇನು ಹೆಸರೆ ಬರಿಯ ಮಣ್ಣಿಗೆ, ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ ದೇವಿ ಕಣಾ, ಬೆಂಕಿ ಕಣಾ ಸಿಡಿಲು ಕಣಾ’ ಎಂದು ಹೇಳಿದ್ದರು. ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಿದರೆ, ಮತದಾರರೂ ಹೆಸರಿಗೆ ಮಾತ್ರ ಮತದಾರರಲ್ಲ; ಅವರೂ ಒಂದು ಶಕ್ತಿ; ಅವರೂ ಒಂದು ಬೆಂಕಿ ಎನ್ನುವುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಆದರೆ, ನಮ್ಮ ರಾಜಕಾರಣಿಗಳು ಇತಿಹಾಸದಿಂದ ಪಾಠವನ್ನು ಕಲಿಯುತ್ತಲೇ ಇಲ್ಲ. ಇತಿಹಾಸವನ್ನು ತಿಳಿಯದವ ಇತಿಹಾಸವನ್ನು ಸೃಷ್ಟಿಸಲಾರ ಎಂದು ಭಾಷಣ ಮಾಡುವ ಕರ್ನಾಟಕದ ರಾಜಕಾರಣಿಗಳು ಮತದಾರರ ಮನದಾಳವನ್ನು ಅರಿಯದೆ ಮುಗ್ಗರಿಸಿ ಬೀಳುತ್ತಲೇ ಇದ್ದಾರೆ. ರಾಜಕೀಯದಲ್ಲಿ ಭಿನ್ನಮತ ಎನ್ನುವುದು ಬೆಂಕಿಯ ಕಣ. ಅದು ಮೊದಲು ತನ್ನನ್ನು ಸುಡುತ್ತದೆ. ನಂತರ ಇತರರನ್ನು ಸುಡುತ್ತದೆ. ಇದು ಸಾಬೀತಾದ ಸತ್ಯ. ಆದರೂ ನಮ್ಮ ರಾಜಕಾರಣಿಗಳು ಬೆಂಕಿಯನ್ನೇ ಅರಸುತ್ತಾ ಹೋಗುತ್ತಾರೆ. ಈಗಲೂ ರಾಜ್ಯದಲ್ಲಿ ಭಿನ್ನಮತದ ಬೆಂಕಿಯ ಜ್ವಾಲೆ ಹರಡತೊಡಗಿದೆ. ಅದು ಯಾರನ್ನು ಸುಡುತ್ತದೆ ಎನ್ನುವುದೂ ಗೊತ್ತಿರುವ ವಿಚಾರ.

ಭಿನ್ನಮತದ ಜ್ವಾಲೆ ಹರಡಿದ ಬಹುತೇಕ ಎಲ್ಲ ಸಂದರ್ಭಗಳಲ್ಲಿಯೂ ಆಯಾ ಪಕ್ಷಗಳು ಅಧಿಕಾರ ಕಳೆದುಕೊಂಡಿವೆ. ಪದೇ ಪದೇ ಮುಖ್ಯಮಂತ್ರಿ ಬದಲಾಯಿಸಿದರೆ ಕರ್ನಾಟಕದ ಜನರು ಇಷ್ಟಪಡುವುದಿಲ್ಲ ಎನ್ನುವುದು 1983ರ ಚುನಾವಣೆಯಲ್ಲಿ ಮೊದಲ ಬಾರಿಗೆ ಗೊತ್ತಾಯಿತು. ಉತ್ತಮ ಆಡಳಿತ ನೀಡಿದರೆ ಎಂತಹ ಪ್ರಬಲವಾದ ಅಲೆ ಬಂದರೂ ಜನ ಅದನ್ನು ಲೆಕ್ಕಿಸುವುದಿಲ್ಲ ಎನ್ನುವುದಕ್ಕೆ 1978ರ ವಿಧಾನಸಭಾ ಚುನಾವಣೆ ಸಾಕ್ಷಿಯಾಗಿತ್ತು. ದೇಶದಲ್ಲಿ ತುರ್ತು ಪರಿಸ್ಥಿತಿಯ ನಂತರ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಕಂಡಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಜನತಾಪಕ್ಷ ರಾಜ್ಯದಲ್ಲಿಯೂ ಅಧಿಕಾರಕ್ಕೆ ಬಂದೇಬಿಟ್ಟಿತು ಎಂಬ ಭಾವನೆ ಇತ್ತು. ಆದರೆ, ದೇವರಾಜ ಅರಸು ಅವರ ಜನಪರ ಆಡಳಿತ ಮೆಚ್ಚಿಕೊಂಡಿದ್ದ ಮತದಾರರು 1978ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 149 ಸ್ಥಾನಗಳನ್ನು ನೀಡಿದರು. ಉತ್ತಮ ಆಡಳಿತ ನೀಡಿದರೆ ಜನ ಕೈಬಿಡುವುದಿಲ್ಲ ಎನ್ನುವುದಕ್ಕೆ ಇದು ಮೊದಲ ನಿದರ್ಶನವಾಗಿತ್ತು. ನಂತರದ ದಿನಗಳಲ್ಲಿ ದೇವರಾಜ ಅರಸು ಅವರನ್ನು ಪದಚ್ಯುತಗೊಳಿಸಿ ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಇದನ್ನು ಮತದಾರರು ಮೆಚ್ಚಲಿಲ್ಲ. 1983ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 149 ಸ್ಥಾನದಿಂದ 85 ಸ್ಥಾನಗಳಿಗೆ ಕುಸಿಯಿತು.

1984ರಲ್ಲಿ ಇಂದಿರಾ ಗಾಂಧಿ ಅವರ ಹತ್ಯೆ ಆಯಿತು. ಆ ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಪಡೆಯಿತು. ರಾಜ್ಯದಲ್ಲಿಯೂ 28 ಕ್ಷೇತ್ರಗಳ ಪೈಕಿ 24ರಲ್ಲಿ ಕಾಂಗ್ರೆಸ್ ಜಯಗಳಿಸಿತು. ರಾಜ್ಯದಲ್ಲಿ ಆಡಳಿತದಲ್ಲಿದ್ದ ಜನತಾ ಪಕ್ಷ ಕೇವಲ ನಾಲ್ಕು ಸ್ಥಾನ ಗಳಿಸಿತು. ಬಹುಮತದ ಕೊರತೆಯ ನಡುವೆಯೂ ಉತ್ತಮ ಆಡಳಿತ ನೀಡಿದ್ದ ರಾಮಕೃಷ್ಣ ಹೆಗಡೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ಘೋಷಿಸಿದರು. 1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷ 139 ಸ್ಥಾನಗಳಲ್ಲಿ ಜಯಗಳಿಸಿ ಅಧಿಕಾರ ಉಳಿಸಿಕೊಂಡಿತು. ಉತ್ತಮ ಆಡಳಿತಕ್ಕೆ ಮತದಾರ ಮನ್ನಣೆ ನೀಡುತ್ತಾನೆ ಎನ್ನುವುದಕ್ಕೆ ಎರಡನೇ ಉದಾಹರಣೆ ಇದು. ನಂತರದ ದಿನಗಳಲ್ಲಿ ಆಡಳಿತಾರೂಢ ಜನತಾ ಪಕ್ಷ ಅಂತಃಕಲಹದ ಬೀಡಾಯಿತು, ಹೋಳಾಯಿತು. ಹಗರಣಗಳಲ್ಲಿ ಸಿಲುಕಿದ ಹೆಗಡೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು. ಎಸ್.ಆರ್. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಅವರಿಗೂ ಭಿನ್ನಮತದ ಕಾಟ ತಪ್ಪಲಿಲ್ಲ. ಇದನ್ನೆಲ್ಲಾ ಗಮನಿಸಿದ ಮತದಾರ 1989ರ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟರು. 178 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತು. ಆಡಳಿತ ಜನತಾ ಪಕ್ಷದ ಬಹುತೇಕ ಅತಿರಥ ಮಹಾರಥರು ಸೋಲು ಅನುಭವಿಸಿದರು. ದೇವೇಗೌಡರ ನೇತೃತ್ವದ ಜನತಾ ಪಕ್ಷ ಗಳಿಸಿದ್ದು 2 ಸ್ಥಾನ. ಹೆಗಡೆ ನೇತೃತ್ವದ ಜನತಾದಳ ಗಳಿಸಿದ್ದು 24 ಸ್ಥಾನ.

178 ಸ್ಥಾನ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೀರೇಂದ್ರ ಪಾಟೀಲರು ಸಹಜವಾಗಿಯೇ ಮುಖ್ಯಮಂತ್ರಿಯಾದರು. ಅನಾರೋಗ್ಯಪೀಡಿತರಾದ ವೀರೇಂದ್ರ ಪಾಟೀಲರನ್ನು ಪದಚ್ಯುತಿಗೊಳಿಸಲಾಯಿತು. ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಬಂಗಾರಪ್ಪ ಅವರಿಗೂ ಭಿನ್ನಮತದ ಕಾಟ ತಪ್ಪಲಿಲ್ಲ. ಅವರನ್ನೂ ಬದಲಾಯಿಸಿ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಇದನ್ನು ಮತದಾರರು ಸಹಿಸಲಿಲ್ಲ. 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಹೀನಾಯವಾಗಿ ಸೋಲು ಕಂಡಿತು. ಕರ್ನಾಟಕದ ಚುನಾವಣಾ ಇತಿಹಾಸದಲ್ಲಿಯೇ ಕಾಂಗ್ರೆಸ್ ಪಕ್ಷ ಶೇ 26ರಷ್ಟು ಮತ ಗಳಿಸಿ 34 ಕ್ಷೇತ್ರಗಳಲ್ಲಿ ಜಯಗಳಿಸಿತು. ಅಂದರೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 178ರಿಂದ 34ಕ್ಕೆ ಕುಸಿಯಿತು.

ಇನ್ನು ಮುಂದೆ ಜಗಳವಾಡುವುದಿಲ್ಲ. ಉತ್ತಮ ಆಡಳಿತ ನೀಡುತ್ತೇವೆ. ಭಿನ್ನಮತಕ್ಕೆ ಅವಕಾಶ ನೀಡುವುದಿಲ್ಲ ಎಂದೆಲ್ಲ ಜನತಾದಳದ ಮುಖಂಡರು ನೀಡಿದ್ದ ಭರವಸೆಯನ್ನು ಮೆಚ್ಚಿದ ಮತದಾರರು ಜನತಾದಳಕ್ಕೆ ಪ್ರಚಂಡ ಬಹುಮತ ನೀಡಿದ್ದರು. ಆದರೆ ನಾಯಿಬಾಲ ಡೊಂಕು ಎನ್ನುವ ಹಾಗೆ ಜನತಾದಳ ವಿದಳವಾಯಿತು. 1996ರಲ್ಲಿ ದೇವೇಗೌಡರು ಪ್ರಧಾನಿಯಾದರು. ಇಲ್ಲಿ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾದರು. ಮತ್ತೆ ಒಳಜಗಳಗಳು ಆರಂಭವಾದವು. ಮತದಾರರಿಗೆ ಭ್ರಮನಿರಸನವಾಯಿತು. 1999ರ ವಿಧಾನಸಭಾ ಚುನಾವಣೆಯಲ್ಲಿ ಜನತಾದಳಕ್ಕೆ ಮುಟ್ಟಿನೋಡಿಕೊಳ್ಳುವ ಪೆಟ್ಟುಕೊಟ್ಟರು. ಇದೇ ಸಂದರ್ಭದಲ್ಲಿ ಬಿಜೆಪಿ ಬೆಳವಣಿಗೆಯ ಹಾದಿ ಹಿಡಿಯಿತು. ಅದೇ ಮೊದಲ ಬಾರಿಗೆ ಬಿಜೆಪಿ 40 ಸ್ಥಾನಗಳಲ್ಲಿ ಜಯಗಳಿಸಿತು. ಇದೇ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಎಲ್ಲರೂ ಸೋತರು. ದೇವೇಗೌಡರು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಸೋಲುಂಡರು. ಜೆ.ಎಚ್. ಪಟೇಲರಿಗೂ ಜಯ ಸಿಗಲಿಲ್ಲ. ಹೊಳೆನರಸೀಪುರ ಕ್ಷೇತ್ರದಲ್ಲಿ ರೇವಣ್ಣ, ಸಾತನೂರಿನಲ್ಲಿ ಕುಮಾರಸ್ವಾಮಿ ದಯನೀಯವಾಗಿ ಸೋತುಹೋದರು. ಕಾಂಗ್ರೆಸ್ ಪಕ್ಷ ಎಸ್.ಎಂ. ಕೃಷ್ಣ ಅವರ ನೇತೃತ್ವದಲ್ಲಿ 135 ಸ್ಥಾನಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಎಸ್.ಎಂ. ಕೃಷ್ಣ ಅವಧಿಯಲ್ಲಿ ಭಿನ್ನಮತದ ಕಾಟ ಅಷ್ಟೇನೂ ಇರಲಿಲ್ಲ. ಅವಧಿಗೆ ಮುನ್ನವೇ ಚುನಾವಣೆ ಪ್ರಕಟಿಸಿದರು. 2004ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಕಾಂಗ್ರೆಸ್ ಪಕ್ಷ 135ರಿಂದ 65 ಸ್ಥಾನಕ್ಕೆ ಕುಸಿಯಿತು. ಬಿಜೆಪಿ 79 ಸ್ಥಾನ ಪಡೆದು ಅತಿದೊಡ್ಡ ಪಕ್ಷವಾಯಿತು. ಜೆಡಿಎಸ್ 58 ಸ್ಥಾನ ಗಳಿಸಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದವು. ಎನ್. ಧರಂಸಿಂಗ್ ಮುಖ್ಯಮಂತ್ರಿಯಾದರು. ಈ ಸರ್ಕಾರ 20 ತಿಂಗಳು ಕಳೆಯುವುದರಲ್ಲಿ ಪತನವಾಯಿತು. ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಸಖ್ಯ ಬೆಳೆಸಿ ಮುಖ್ಯಮಂತ್ರಿಯಾದರು. ಆದರೆ, ಅವರು ತಮ್ಮ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಬಿಟ್ಟುಕೊಡದೇ ಇರುವುದರಿಂದ ಸರ್ಕಾರ ಪತನವಾಯಿತು. ಕುಮಾರಸ್ವಾಮಿ ಅವರ ವಚನ ಭ್ರಷ್ಟತೆ ಬಿಜೆಪಿಗೆ ಭಾರೀ ಬಲ ತುಂಬಿತು. 2008ರ ಚುನಾವಣೆಯಲ್ಲಿ ಬಿಜೆಪಿ ಬಹುಮತದ ಹತ್ತಿರಕ್ಕೆ ಬಂತು. 110 ಕ್ಷೇತ್ರಗಳಲ್ಲಿ ಜಯ ಗಳಿಸಿದ ಬಿಜೆಪಿ ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ, ನಿರೀಕ್ಷಿತಮಟ್ಟದ ಆಡಳಿತ ಬರಲಿಲ್ಲ. ಆ ಸರ್ಕಾರದಲ್ಲಿಯೂ ಅಂತಃಕಲಹ ವಿಪರೀತವಾಯಿತು. ಗಣಿ ಹಗರಣ, ಲೋಕಾಯುಕ್ತ ತನಿಖೆ ಮುಂತಾದ ಕಾರಣಗಳಿಂದ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು. ಕೆಲಕಾಲ ಸದಾನಂದ ಗೌಡ, ನಂತರ ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದರೂ ಜನರಿಗೆ ಬಿಜೆಪಿ ಮೇಲಿನ ಸಿಟ್ಟು ಕಡಿಮೆಯಾಗಿರಲಿಲ್ಲ. ಭಿನ್ನಮತದ ಬೆಂಕಿಯಲ್ಲಿ ಬಿಜೆಪಿ ಸರ್ಕಾರವೂ ಗಾಸಿಗೊಂಡಿತು; 2013ರ ಚುನಾವಣೆಯಲ್ಲಿ ಸೋಲು ಕಂಡಿತು. ಕಾಂಗ್ರೆಸ್ ಪಕ್ಷ 122 ಸ್ಥಾನ ಗಳಿಸಿ ಸ್ವತಂತ್ರವಾಗಿ ಸರ್ಕಾರ ರಚಿಸಿತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಲಾ 40 ಸ್ಥಾನ ಗಳಿಸಿದವು.

ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿದ್ದರು. ಅವರ ಕಾಲದಲ್ಲಿ ಭಿನ್ನಮತದ ಕಾಟ ಬಹಳ ಇರಲಿಲ್ಲ. ಆದರೂ, 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಅವರು ವಿಫಲರಾದರು. ಮತ್ತೆ ಅತಂತ್ರ ವಿಧಾನಸಭೆ ಸೃಷ್ಟಿಯಾಯಿತು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರು. ನಂತರದ ದಿನಗಳಲ್ಲಿ ‘ಆಪರೇಷನ್ ಕಮಲ’ದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂತು. ಯಡಿಯೂರಪ್ಪ ಮುಖ್ಯಮಂತ್ರಿಯಾದರೂ ಬಹಳ ಕಾಲ ಬಾಳಲಿಲ್ಲ. ಬಸವರಾಜ ಬೊಮ್ಮಾಯಿ ಚುಕ್ಕಾಣಿ ಹಿಡಿದರು. ಮುಖ್ಯಮಂತ್ರಿ ಬದಲಾವಣೆ, ಭಿನ್ನಮತದ ಕಾಟ, ಅಂತಃಕಲಹದ ಕಾರಣಕ್ಕೆ 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ಪಕ್ಷಕ್ಕೆ ಭಾರೀ ಬಹುಮತ ದೊರಕಿತು. ಈಗ ಅದೇ ಭಾರವಾಗುವ ಲಕ್ಷಣ ಕಾಣುತ್ತಿದೆ. ಭಿನ್ನಮತ ನಡೆದಾಗಲೆಲ್ಲಾ ಆಡಳಿತ ಯಂತ್ರ ದಿಕ್ಕುತಪ್ಪಿದೆ. ಇದರ ನಡುವೆ ಮತದಾರರ ಸ್ಥಿತಿ, ಅಯ್ಯೋ ಪಾಪ ಪಾಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.