ಆಚಾರ್ಯ ರಜನೀಶ್ ಅವರದ್ದು ಎಂದು ಹೇಳಲಾದ ವಿಡಿಯೊ ತುಣುಕೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ ರಜನೀಶ್ ಅವರು ಮಹಾತ್ಮ ಗಾಂಧಿ ಅವರನ್ನು ಗೇಲಿ ಮಾಡಿದ್ದಾರೆ. ಗಾಂಧಿಯವರು ಸಾಧಾರಣವಾಗಿ ರೈಲ್ವೆಯ ಮೂರನೇ ದರ್ಜೆ ಬೋಗಿಯಲ್ಲಿಯೇ ಪ್ರಯಾಣ ಬೆಳೆಸುತ್ತಿದ್ದರು. 60–70 ಮಂದಿ ಪ್ರಯಾಣ ಮಾಡುವ ಮೂರನೇ ದರ್ಜೆಯ ಒಂದು ಬೋಗಿಯನ್ನು ಗಾಂಧಿ ಅವರಿಗಾಗಿಯೇ ಮೀಸಲಿಡಲಾಗುತ್ತಿತ್ತು ಎಂದು ಆರೋಪಿಸುವ ರಜನೀಶ್ ‘ಗಾಂಧೀಜಿ ಅವರ ಬಡವರ ಮೇಲಿನ ಪ್ರೀತಿ ಅತಿ ದುಬಾರಿ’ ಎಂದು ಟೀಕಿಸುತ್ತಾರೆ. ಗಾಂಧಿ ಅವರ ಬಡವರ ಮೇಲಿನ ಪ್ರೀತಿ ದುಬಾರಿ ಹೌದೋ ಅಲ್ಲವೋ ಎನ್ನುವುದು ಭಾರತೀಯರಿಗೆಲ್ಲಾ ಗೊತ್ತಿದೆ. ಆದರೆ ನಮ್ಮ ರಾಜಕಾರಣಿಗಳ ಬಡವರ ಮೇಲಿನ ಪ್ರೀತಿ ಮತ್ತು ಪ್ರಾಮಾಣಿಕತನ ರಾಜ್ಯಕ್ಕೆ ದುಬಾರಿಯಾಗಿರುವುದು ಹೌದು.
ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯ ಮಂತ್ರಿಯೊಬ್ಬರು ಖಾಸಗಿ ಮಾತುಕತೆಯಲ್ಲಿ ಒಂದು ಮಾತು ಹೇಳಿದ್ದರು. ಅವರ ಮಾತು ಹೀಗಿದೆ: ‘ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ, ಹಣ ಹೊಡೆಯಲು ಯಾವುದೇ ಯೋಜನೆ ರೂಪಿಸದವರು, ಹಣಕ್ಕಾಗಿ ಯಾರ ಮೇಲೂ ಒತ್ತಡ ಹೇರದವರು ಮನೆಗೆ ಬಂದ ಹಣವನ್ನು ಹಾಗೆಯೇ ಇಟ್ಟುಕೊಂಡರೂ ವರ್ಷಕ್ಕೆ ಎರಡು ಸಾವಿರ ಕೋಟಿ ರೂಪಾಯಿ ಗಳಿಸಬಹುದು’. ವರ್ಷಕ್ಕೆ ₹ 2 ಸಾವಿರ ಕೋಟಿ ಅಂದರೆ ಐದು ವರ್ಷಕ್ಕೆ ಸುಮ್ಮನೆ ₹ 10 ಸಾವಿರ ಕೋಟಿ ಬಂದು ಬೀಳುತ್ತದೆ ಎಂದಾಯಿತು. ಅಲ್ಲಿಗೆ ಮುಖ್ಯಮಂತ್ರಿಯೊಬ್ಬನ ‘ಪ್ರಾಮಾಣಿಕತೆ’ ಎಷ್ಟು ದುಬಾರಿ ಎಂದು ಯೋಚಿಸಿ. ಜೊತೆಗೆ 34 ಮಂದಿ ಮಂತ್ರಿಗಳೂ ‘ಪ್ರಾಮಾಣಿಕರು’ ಎಂದುಕೊಂಡರೂ ವರ್ಷಕ್ಕೆ ಕನಿಷ್ಠ ಎಷ್ಟು ಗಳಿಸಬಹುದು ಎಂದು ಊಹಿಸಿ.
ಕರ್ನಾಟಕ ರಾಜ್ಯ ವಿಧಾನಸಭೆಯ ಈಗಿನ 224 ಶಾಸಕರ ಪೈಕಿ ಶೇ 97ರಷ್ಟು ಮಂದಿ ಕೋಟ್ಯಧಿಪತಿಗಳು. ಈಗಿರುವ ಶಾಸಕರ ಸರಾಸರಿ ಆಸ್ತಿ ₹ 64.39 ಕೋಟಿ. ಕಳೆದ ವಿಧಾನಸಭೆಯಲ್ಲಿ ಶಾಸಕರ ಸರಾಸರಿ ಆಸ್ತಿ ₹ 34.59 ಕೋಟಿಯಷ್ಟು ಇತ್ತು. ಅಂದರೆ ಐದು ವರ್ಷದಲ್ಲಿ ಶಾಸಕರ ಆಸ್ತಿ ಸರಿಸುಮಾರು ದುಪ್ಪಟ್ಟಾಗಿದೆ. ಸರ್ಕಾರದ ಸಾಲದ ಪ್ರಮಾಣವೂ ಹಾಗೆಯೇ ಬೆಳೆದಿದೆ. ನೆನಪಿಡಿ, ದೇಶದಲ್ಲಿಯೇ ಅತ್ಯಂತ ಹೆಚ್ಚು ಆಸ್ತಿಯನ್ನು ಹೊಂದಿದ ಶಾಸಕರ ಸಾಲಿನಲ್ಲಿ ಕರ್ನಾಟಕದ ಶಾಸಕರಿಗೇ ಮೊದಲ ಸ್ಥಾನ ಇದೆ. ಸರ್ಕಾರ ಬಡವಾಗುತ್ತಿದೆ, ರಾಜಕಾರಣಿಗಳು ಶ್ರೀಮಂತರಾಗುತ್ತಿದ್ದಾರೆ. ಇದರ ಮ್ಯಾಜಿಕ್ ಏನಿರಬಹುದು?
ಅಧಿಕಾರದಲ್ಲಿ ಇರುವವರಿಗೆ ಹಣ ಮಾಡುವುದು ಸುಲಭ. ಸರ್ಕಾರದ ಯೋಜನೆಗಳ ಒಳಮಾಹಿತಿಗಳನ್ನು ಮೊದಲೇ ಪಡೆದುಕೊಂಡು, ಹಣ ಮಾಡಿಕೊಳ್ಳುವ ದಾರಿಗಳನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ. ಉದಾಹರಣೆಗೆ, ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನೇ ನೋಡಿ. ಕೆಲವರು ಅದು ಬಿಡದಿ ಬಳಿ ಬರುತ್ತದೆ ಎನ್ನುತ್ತಾರೆ. ಇನ್ನು ಕೆಲವರು ನೆಲಮಂಗಲದ ಬಳಿ ಹೊಸ ವಿಮಾನ ನಿಲ್ದಾಣ ಸ್ಥಾಪಿಸಲಾಗುವುದು ಎನ್ನುತ್ತಾರೆ. ಅಧಿಕಾರದಲ್ಲಿ ಇರುವವರಿಗೆ ವಿಮಾನ ನಿಲ್ದಾಣ ಎಲ್ಲಿ ಬರುತ್ತದೆ ಎನ್ನುವುದು ಮೊದಲೇ ಗೊತ್ತಾಗುತ್ತದೆ. ಆ ಪ್ರದೇಶದ ಭೂಮಿ ಬೆಲೆ ಗಗನಮುಖಿಯಾಗುತ್ತದೆ. ಅಧಿಕಾರಿಗಳು, ರಾಜಕಾರಣಿಗಳು ಬೇನಾಮಿಯಾಗಿ ಅಲ್ಲಿ ಭೂಮಿ ಖರೀದಿ ಮಾಡುತ್ತಾರೆ. ಅದೇ ಭೂಮಿಯನ್ನು ಸರ್ಕಾರಕ್ಕೇ ಮಾರಾಟ ಮಾಡಿ ಹಣ ಗಳಿಸುತ್ತಾರೆ. ಸರ್ಕಾರಕ್ಕೆ ಮಾರದೇ ಇದ್ದರೂ ಭೂಮಿಯ ಬೆಲೆ ಹಲವು ಪಟ್ಟು ಹೆಚ್ಚಾಗುವುದ ರಿಂದ ವರ್ಷದೊಳಗೇ ಅಪಾರ ಲಾಭವಂತೂ ಗ್ಯಾರಂಟಿ.
ಈಗ ಒಂದು ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣವಾಗುತ್ತಿದೆ ಎಂದುಕೊಳ್ಳಿ. ರಸ್ತೆಗೆ ಭೂಮಿ ವಶಪಡಿಸಿಕೊಳ್ಳುವುದು ಸರಿ. ಆ ರಸ್ತೆಯ ಅಕ್ಕಪಕ್ಕದ ಭೂಮಿಯನ್ನೂ ವಶಪಡಿಸಿಕೊಳ್ಳಲಾಗುತ್ತದೆ ಎಂದು ಇಲಾಖೆಯೊಳಗೇ ಒಂದು ಅಧಿಸೂಚನೆ ಹೊರಬೀಳುತ್ತದೆ. ಇದು ಸಾರ್ವಜನಿಕ ಅಧಿಸೂಚನೆ ಅಲ್ಲ. ಇಲಾಖೆಯ ಒಳಗೇ ಮಾಡಿಕೊಂಡಿದ್ದು. ಆದರೂ ಅದು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತದೆ. ವರ್ತುಲ ರಸ್ತೆ ಬರುತ್ತದೆ ಎಂದು ಗೊತ್ತಾದಾಗಲೇ ಅದರ ಸುತ್ತಮುತ್ತ ಭೂಮಿಯ ಬೆಲೆ ಗಗನಕ್ಕೆ ಏರಿರುತ್ತದೆ. ಜೊತೆಗೆ ಈ ಅಧಿಸೂಚನೆಯಿಂದ ಬೆದರಿದ ಭೂಮಾಲೀಕರು ಅಧಿಸೂಚನೆಯನ್ನು ಕೈಬಿಡುವಂತೆ ರಾಜಕಾರಣಿಗಳ ಬಳಿಗೆ ಧಾವಿಸುತ್ತಾರೆ. ವ್ಯವಹಾರ ಕುದುರುತ್ತದೆ. ರಾಜಕಾರಣಿಗಳು ಅನಾಯಾಸವಾಗಿ ಹಣ ಗಳಿಸುತ್ತಾರೆ.
ನೀರಾವರಿ ಯೋಜನೆ, ಕೈಗಾರಿಕೆಗಳ ಸ್ಥಾಪನೆ, ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಬಡಾವಣೆಗಳ ನಿರ್ಮಾಣ ಮುಂತಾದ ಯೋಜನೆಗಳಲ್ಲಿಯೂ ಇದೇ ರೀತಿ ಭೂಮಿಯ ದುರ್ಬಳಕೆಯಾಗುತ್ತದೆ. ಅಧಿಸೂಚನೆ ಹೊರಡಿಸಲು, ಅಧಿಸೂಚನೆ ವಾಪಸು ಪಡೆಯಲೂ ಹಣದ ಚಲಾವಣೆ ನಡೆಯುತ್ತದೆ. ಯಾವುದೇ ಯೋಜನೆ ಬಂದರೂ ಅದರಿಂದ ಜನರಿಗೆ ಅನುಕೂಲವಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ರಾಜಕಾರಣಿಗಳಿಗೆ ಮಾತ್ರ ಒಳಿತಾಗುತ್ತದೆ. ಒಳಿತಾಗದೇ ಇದ್ದರೆ ಅದನ್ನು ಒಳಿತಾಗುವಂತೆ ಮಾಡಿಕೊಳ್ಳುವುದು ಹೇಗೆ ಎಂಬ ಕಲೆಗಾರಿಕೆ ರಾಜಕಾರಣಿಗಳಿಗೆ ಗೊತ್ತಿರುತ್ತದೆ.
ಯೋಜನೆಗಳ ಜಾರಿಗೆ ಬೇನಾಮಿ ಗುತ್ತಿಗೆದಾರರಾಗಿಯೂ ಕೆಲವು ರಾಜಕಾರಣಿಗಳು ಕೆಲಸ ಮಾಡುತ್ತಾರೆ. ಸಾಮಗ್ರಿ ಖರೀದಿಯಲ್ಲಿಯೂ ಹಣ ಮಾಡುತ್ತಾರೆ. ಮೊದಲೆಲ್ಲಾ ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವಾಗ ಕಮಿಷನ್ ಪಡೆಯುವ ಪದ್ಧತಿ ಇತ್ತು. ಈಗ ಕೆಲವು ವರ್ಷಗಳಿಂದ ಕಾಮಗಾರಿಗೆ ಆದೇಶ ಹೊರಡಿಸುವಾಗಲೇ ಕಮಿಷನ್ ಪಡೆಯುವ ಪದ್ಧತಿಯನ್ನು ಜಾರಿಗೆ ತರಲಾಗಿದೆ. ರಾಜಕಾರಣಿಗಳು ಎಷ್ಟು ಸೃಜನಶೀಲರಾಗಿದ್ದಾರೆಂದರೆ ಎಲ್ಲವೂ ಕಾನೂನುಬದ್ಧವಾಗಿಯೇ ನಡೆಯುತ್ತವೆ ಮತ್ತು ಇದರಲ್ಲಿ ಆ ಪಕ್ಷ ಈ ಪಕ್ಷ ಎಂಬ ಭೇದಭಾವ ಇಲ್ಲ. ಈ ವಿಚಾರದಲ್ಲಿ ಎಲ್ಲರೂ ಒಂದು. ಅವರ ಕಿಸೆಯಲ್ಲಿ ಇವರ ಕೈ ಇವರ ಕಿಸೆಯಲ್ಲಿ ಅವರ ಕೈ ಇದ್ದೇ ಇರುತ್ತದೆ.
ಇನ್ನು ವರ್ಗಾವಣೆ ಮತ್ತು ನೇಮಕಾತಿ ಕತೆ ಬೇರೆಯದೇ ಇದೆ. ಸಾಮೂಹಿಕ ವರ್ಗಾವಣೆಯದ್ದು ಒಂದು ಕತೆಯಾದರೆ ವರ್ಷಪೂರ್ತಿ ನಡೆಯುವ ವರ್ಗಾವಣೆಯದ್ದು ಇನ್ನೊಂದು ಕತೆ. ವರ್ಗ ಮಾಡಿಸಿಕೊಳ್ಳಲೂ ಹಣ, ವರ್ಗ ರದ್ದು ಮಾಡಿಸಲೂ ಹಣ. ಆರ್‌ಟಿಒ, ಸಬ್ ರಿಜಿಸ್ಟ್ರಾರ್, ಪೊಲೀಸ್ ಇನ್‌ಸ್ಪೆಕ್ಟರ್ ಮುಂತಾದ ಹುದ್ದೆಗಳ ವರ್ಗಾವರ್ಗಿಗೆ ಹಣವೋ ಹಣ. ಈಗಿನ ಟ್ರೆಂಡ್ ಏನೆಂದರೆ, ವರ್ಗ ಮಾಡಲು ಅಥವಾ ವರ್ಗ ರದ್ದು ಮಾಡಲು ಹಣ ಕೊಡುವುದಲ್ಲದೆ ನಿಯಮಿತವಾಗಿ ಇಂತಿಷ್ಟು ಕೊಡಬೇಕು ಎಂಬ ಷರತ್ತೂ ಸೇರಿಕೊಂಡಿದೆ. ಬಡ್ತಿ ಯಾರಿಗೆ ಬೇಡ ಹೇಳಿ? ಆದರೆ ಆರ್‌ಟಿಒ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಬಡ್ತಿ ನೀಡದೇ ಇರಲು ಹಣ ಕೊಡುವ ಪದ್ಧತಿಯೂ ಇದೆ! ಮೇಲಿನ ಹುದ್ದೆಗಿಂತ ಇರುವ ಹುದ್ದೆಯೇ ಹೆಚ್ಚು ‘ಲಾಭದಾಯಕ’ ಎಂಬ ಕಾರಣ ಇದರ ಹಿಂದೆ ಇರುತ್ತದೆ. ಹಣ ಇಲ್ಲದೆ ಯಾವುದೇ ನೇಮಕಾತಿ ನಡೆಯುವ ಪರಿಸ್ಥಿತಿಯೇ ಇಲ್ಲ. ಕೆಪಿಎಸ್‌ಸಿಯಾದರೂ ಪರೀಕ್ಷೆ ನಡೆಸಲಿ, ಪರೀಕ್ಷಾ ಪ್ರಾಧಿಕಾರವಾದರೂ ಪರೀಕ್ಷೆ ನಡೆಸಲಿ ಅಥವಾ ನೇರ ನೇಮಕಾತಿಯೇ ಆಗಿರಲಿ, ಎಲ್ಲ ಕಡೆಯೂ ಝಣ ಝಣ ಕಾಂಚಾಣದ್ದೇ ಕಾರುಬಾರು.
ಅಧಿಕಾರ ನಡೆಸಿದ ಅಧಿಕಾರಿಯೇ ಆಗಲಿ, ರಾಜಕಾರಣಿಯೇ ಆಗಲಿ ಬಡವರಾದ ಉದಾಹರಣೆಗಳು ಇಲ್ಲ. ಅಧಿಕಾರಿಗಳು ನೇಮಕಾತಿ ಸಂದರ್ಭದಲ್ಲಿ ಬಂಡವಾಳ ಹೂಡಿದರೆ ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಬಂಡವಾಳ ಹೂಡುತ್ತಾರೆ. ಚುನಾವಣೆಗಾಗಿ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುವ ರಾಜಕಾರಣಿಗಳ ಆಸ್ತಿ ಒಂದು ಚುನಾವಣೆಯಿಂದ ಇನ್ನೊಂದು ಚುನಾವಣೆಗೆ ಹೆಚ್ಚಾಗುತ್ತದೆಯೇ ವಿನಾ ಕರಗುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೊಂದು ಪವಾಡ. ಈ ಪವಾಡದಲ್ಲಿ ಪ್ರಜೆಗಳಿಗೆ ಪಾಲಿಲ್ಲ. ಪ್ರಜಾಪ್ರಭುತ್ವವೂ ಬಡವಾಗುತ್ತಿದೆ, ರಾಜ್ಯವೂ ಬಡವಾಗುತ್ತಿದೆ, ಪ್ರಜೆಗಳೂ ಬಡವರಾಗುತ್ತಿದ್ದಾರೆ, ಇದರಿಂದ ಹೊರಬರಬೇಕು ಎಂದರೆ ಇನ್ನು ಮುಂದೆ ಬಡವರನ್ನೇ ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.