ADVERTISEMENT

ಬೆರಗಿನ ಬೆಳಕು | ನಂಬಿಕೆಯನ್ನಾಗಿಸಿದ ಜ್ಯೋತಿಷ್ಯ

ಡಾ. ಗುರುರಾಜ ಕರಜಗಿ
Published 22 ಜುಲೈ 2020, 19:31 IST
Last Updated 22 ಜುಲೈ 2020, 19:31 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಹಿಂದೆ ಕಳಿಂಗ ರಾಷ್ಟ್ರವನ್ನು ಕಾಳಿಂಗರಾಜ ಆಳುತ್ತಿದ್ದ. ಅವನಿಗೆ ಇಬ್ಬರು ಗಂಡು ಮಕ್ಕಳು – ಮಹಾಕಾಳಿಂಗ ಮತ್ತು ಚೂಳ ಕಾಳಿಂಗ. ಆಸ್ಥಾನದ ಜ್ಯೋತಿಷಿಗಳು ನುಡಿದ ಭವಿಷ್ಯದಂತೆ ದೊಡ್ಡ ಮಗ ರಾಜನಾಗುತ್ತಾನೆ. ಎರಡನೆಯ ಮಗ ಪ್ರವ್ರಜ್ಜೆ ಸ್ವೀಕರಿಸಿ ಭಿಕ್ಷೆ ಬೇಡುತ್ತಾನೆ, ಆದರೆ ಅವನ ಮಗ ಚಕ್ರವರ್ತಿಯಾಗುತ್ತಾನೆ ಎಂದಿತ್ತು. ಮಹಾರಾಜ ತೀರಿದ ಮೇಲೆ ಹಿರಿಯ ಮಗ ರಾಜನಾದ. ಅವನ ಮನಸ್ಸನ್ನು ಒಂದು ವಿಷಯ ಕೊರೆಯುತ್ತಿತ್ತು. ಅದೆಂದರೆ ತನ್ನ ತಮ್ಮನ ಮಗ ಚಕ್ರವರ್ತಿಯಾಗುತ್ತಾನೆ. ಅದಕ್ಕೆ ಅವನು ತನ್ನ ವಿಶ್ವಾಸದ ಕೆಲವರಿಗೆ ತಮ್ಮನನ್ನು ಸೆರೆ ಹಿಡಿಯಬೇಕೆಂದು ಅಪ್ಪಣೆ ನೀಡಿದ. ಆದರೆ ಒಬ್ಬ ಗುಪ್ತಚರ ಈ ವಿಷಯವನ್ನು ತಮ್ಮನಿಗೆ ಹೇಳಿದ. ಆತ ಗುಪ್ತಚರನಿಗೆ ತನ್ನ ಮುದ್ರೆ, ಹೊದ್ದುಕೊಳ್ಳುವ ಕಂಬಳಿ ಮತ್ತು ಖಡ್ಗವನ್ನು ತೋರಿಸಿ, ಮುಂದೆ ಸಮಯ ಬಂದಾಗ ತನ್ನ ಮಗ ಈ ಚಿನ್ಹೆಗಳನ್ನು ತಂದು ತೋರಿಸುತ್ತಾನೆ, ಅವನಿಗೆ ರಾಜ್ಯಾಭಿಷೇಕ ಮಾಡಿಸಬೇಕು ಎಂದು ಹೇಳಿ ರಾತ್ರಿಯೇ ಕಾಡಿಗೆ ಹೋಗಿಬಿಟ್ಟ. ಒಂದು ಸುಂದರ ಪ್ರದೇಶದಲ್ಲಿ ಆಶ್ರಮ ಕಟ್ಟಿಕೊಂಡು ಇದ್ದ.

ಅದೇ ಸಮಯದಲ್ಲಿ ಮದ್ರರಾಷ್ಟ್ರದ ಮದ್ರರಾಜನಿಗೆ ಒಬ್ಬ ಮಗಳಿದ್ದಳು. ಅಲ್ಲಿಯೂ ಜ್ಯೋತಿಷಿಗಳ ಅಭಿಪ್ರಾಯದಂತೆ ಆಕೆ ಭಿಕ್ಷೆ ಬೇಡುತ್ತಾಳೆ. ಆದರೆ ಆಕೆ ಮಗ ಚಕ್ರವರ್ತಿಯಾಗುತ್ತಾನೆ ಎಂದಿತ್ತು. ಇದನ್ನು ತಿಳಿದ ಅನೇಕ ರಾಜಕುಮಾರರು ಅವಳನ್ನು ಮದುವೆಯಾಗಬೇಕೆಂದುಕೊಂಡು ರಾಜ್ಯಕ್ಕೆ ಮುತ್ತಿಗೆ ಹಾಕಿದರು. ರಾಜ, ರಾಣಿ ಮತ್ತು ಮಗಳು ಅವರಿಂದ ತಪ್ಪಿಸಿಕೊಂಡು ಕಾಡಿಗೆ ಬಂದು ಕಾಳಿಂಗಕುಮಾರನ ಆಶ್ರಮದ ಸ್ವಲ್ಪ ಮೇಲ್ಗಡೆ ಆಶ್ರಮವನ್ನು ಕಟ್ಟಿಕೊಂಡು ಇರತೊಡಗಿದರು. ತಂದೆ-ತಾಯಿಯರು ಫಲ ಮೂಲಗಳನ್ನು ತರಲು ಕಾಡಿಗೆ ಹೋದಾಗ ರಾಜಕುಮಾರಿ ಹೂವುಗಳನ್ನು ತಂದು ಮಾಲೆ ಮಾಡುತ್ತಿದ್ದಳು. ಒಂದು ಬಾರಿ ಸುತ್ತಾಡುವಾಗ ನದಿಯ ತೀರದಲ್ಲಿ ಒಂದು ಮಾವಿನ ಮರದಲ್ಲಿ ಹೂವುಗಳು ಬಿಟ್ಟಿದ್ದನ್ನು ಕಂಡಳು. ಆ ಮರ ಹತ್ತುವುದಕ್ಕೂ ಸುಲಭವಾಗಿತ್ತು. ಎಷ್ಟು ಚೆಂದದ ಹೂಗಳು! ಆಕೆ ಮರವನ್ನೇರಿ ಹೂಗಳ ಮಾಲೆಯನ್ನು ಮಾಡಿ ನದಿಯಲ್ಲಿ ಎಸೆದಳು. ಅದು ತೇಲುತ್ತ ಬಂದು ನದಿಯಲ್ಲಿ ಸ್ನಾನ ಮಾಡುತ್ತಿದ್ದ ಕಳಿಂಗಕುಮಾರನ ಕತ್ತಿಗೆ ಸೇರಿತು. ಆತ ಅದನ್ನು ನೋಡಿ ಇದು ಯಾವುದೋ ತರುಣಿ ಮಾಡಿದ ಮಾಲೆ ಎಂದು ಹುಡುಕುತ್ತ ಮೇಲೆ ಬಂದು ಅವಳನ್ನು ಕಂಡ. ಇಬ್ಬರೂ ಕ್ಷತ್ರಿಯರು ಎಂಬುದೂ ತಿಳಿಯಿತು. ಇಬ್ಬರಲ್ಲಿ ಅನುರಾಗ ಮೂಡಿತು. ಎರಡು ಕಡೆಗೂ ಹಿರಿಯರಾದ ರಾಜಕುಮಾರಿಯ ತಾಯಿ-ತಂದೆಯರು ಒಪ್ಪಿ ಮದುವೆಯಾಯಿತು. ನಂತರ ಅವರಿಗೊಬ್ಬ ಮಗ ಜನಿಸಿದ. ಅವನಿಗೆ ಹಿರಿಯರೆಲ್ಲ ಚೆನ್ನಾಗಿ ಶಿಕ್ಷಣ ಕೊಟ್ಟು ಅವನು ತರುಣಾವಸ್ಥೆಯನ್ನು ತಲುಪಿದಾಗ ಅವನ ಜೊತೆಗೆ ಮುದ್ರೆ, ಕಂಬಳಿ ಮತ್ತು ಖಡ್ಗವನ್ನು ಕೊಟ್ಟು ಕಳಿಂಗ ದೇಶಕ್ಕೆ ಕಳುಹಿಸಿದ. ಆಗ ಮಹಾಕಾಳಿಂಗ ಮೃತನಾಗಿದ್ದ. ಮಂತ್ರಿಗಳು ಈ ತರುಣನನ್ನು ಗುರುತಿಸಿ ರಾಜನನ್ನಾಗಿ ಮಾಡಿದರು.

ಜ್ಯೋತಿಷಿಗಳ ಭವಿಷ್ಯದಂತೆ ಎಲ್ಲವೂ ನಡೆಯಿತೇ? ಚಕ್ರವರ್ತಿಯಾದ ಕಳಿಂಗ ರಾಜ ಹೇಳಿದ, ‘ಬಹುಶ: ಜ್ಯೋತಿಷಿಗಳ ಮಾತು ಹಿರಿಯರನ್ನು ಆ ದಿಶೆಯಲ್ಲಿ ನಡೆಯುವಂತೆ ಪ್ರೇರೇಪಿಸಿತು. ಅದು ಹಾಗಾಗುತ್ತದೆಂಬ ನಂಬಿಕೆ, ಆ ನಂಬಿಕೆ ಸತ್ಯವಾಗುವಂತೆ ನಡೆಸಿತು’. ಈ ಮಾತು ಬಹಳ ಸತ್ಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.