ADVERTISEMENT

ಬೆರಗಿನ ಬೆಳಕು: ಸಂತತ್ವದ ಮುಖವಾಡದ ಅಪಾಯ

ಡಾ. ಗುರುರಾಜ ಕರಜಗಿ
Published 20 ಅಕ್ಟೋಬರ್ 2020, 15:14 IST
Last Updated 20 ಅಕ್ಟೋಬರ್ 2020, 15:14 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಬಹಳ ಹಿಂದೆ ಹಿಮಾಲಯ ಪ್ರದೇಶದಲ್ಲಿ ಛದ್ದಂತ ಸರೋವರದ ಬಳಿ ಎಂಟು ಸಾವಿರ ಆನೆಗಳ ಗುಂಪು ವಾಸವಾಗಿತ್ತು. ಅವು ವಿಶೇಷ ಆನೆಗಳು. ಅವೆಲ್ಲ ಆಕಾಶಮಾರ್ಗದಲ್ಲಿ ಹೋಗುವುದಕ್ಕೆ ಯೋಗ್ಯವಾಗಿದ್ದವು. ಬೋಧಿಸತ್ವ ಹಿರಿಯ ಆನೆಯ ಪುತ್ರನಾಗಿ ಹುಟ್ಟಿದ. ಅಚ್ಚ ಬಿಳಿಪು ಬಣ್ಣದ ಮೈ, ಕೆಂಪು ಬಣ್ಣದ ಮುಖ ಮತ್ತು ಪಾದಗಳು. ಅದರ ದಂತದಿಂದ ಆರು ಬಣ್ಣದ ಕಿರಣಗಳು ಹೊರಡುತ್ತಿದ್ದವು. ಅದು ಬೆಳೆದ ಮೇಲೆ ಅತ್ಯಂತ ಬೃಹತ್ ಆನೆಯಾಯಿತು. ಅದರ ಎತ್ತರ ಎಂಭತ್ತೆರಡು ಕೈ ಅಳತೆಗಳು, ನೂರಿಪ್ಪತ್ತು ಕೈ ಅಗಲವಾದ ಬೆನ್ನು, ಐವತ್ತೆಂಟು ಕೈ ಅಳತೆಯ ಸೊಂಡಿಲು, ದಂತಗಳ ಸುತ್ತಳತೆ ಹದಿನೆಂಟು ಕೈ ಮತ್ತು ಉದ್ದ ಮೂವತ್ತು ಕೈ ಅಳತೆಗಳು! ಬೋಧಿಸತ್ವ ಆನೆ ಎಂಟು ಸಾವಿರ ಆನೆಗಳಿಗೆ ನಾಯಕನಾಗಿತ್ತು. ಅದಕ್ಕೆ ಇಬ್ಬರು ಪಟ್ಟದ ಅರಸಿಯರು. ದೊಡ್ಡವಳು ಸುಭದ್ರೆ, ಚಿಕ್ಕವಳು ಚುಲ್ಲಸುಭದ್ರೆ.

ಬೇಸಿಗೆಯ ಕಾಲದಲ್ಲಿ ಇಡೀ ಸರೋವರ ಪುಷ್ಪಮಯವಾಗಿತ್ತು. ಆಗ ಜಲಕ್ರೀಡೆಯಾಡಲು ಬೋಧಿಸತ್ವ ಸರೋವರಕ್ಕೆ ಬಂದು ಹೂವುಗಳಿಂದ ತುಂಬಿದ್ದ ಶಾಲಮರಕ್ಕೆ ಡಿಕ್ಕಿ ಹೊಡೆದ. ಮುಂದೆ ಗಾಳಿಯ ದಿಕ್ಕಿನಲ್ಲಿ ನಿಂತಿದ್ದ ಚುಲ್ಲ ಸುಭದ್ರೆಯ ಮೈಮೇಲೆ ಒಣಗಿದ ಎಲೆಗಳು, ಕೆಂಜಗಗಳು ಉದುರಿದವು. ಆದರೆ ಹಿಂದೆ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಇದ್ದ ಸುಭದ್ರೆಯ ಮೈಮೇಲೆ ಹೂವಿನ ಪರಾಗಗಳು, ಕೇಸರದ ಎಸಳುಗಳು ಬಿದ್ದವು. ಇದನ್ನು ಬೋಧಿಸತ್ವ ಉದ್ದೇಶಪೂರ್ವಕವಾಗಿ ಮಾಡಿದ ಎಂದು ಭಾಸವಾಯಿತು. ಚುಲ್ಲಸುಭದ್ರೆಗೆ ಕೋಪ ಬಂದಿತು, ಬೋಧಿಸತ್ವನ ಬಗ್ಗೆ ವೈರಭಾವ ನಿಂತಿತು. ಮರುದಿನ ಸ್ನಾನಕ್ಕೆ ನೀರಿನಲ್ಲಿಳಿದಾಗ ಎರಡು ತರುಣ ಆನೆಗಳು ಸ್ನಾನ ಮಾಡಿಸಿ ಸತ್ಪೋದಯವೆಂಬ ಮಹಾಪದ್ಮವನ್ನು ಬೋಧಿಸತ್ವನಿಗೆ ನೀಡಿದರು. ಆತ ಪಕ್ಕದಲ್ಲಿದ್ದ ಸುಭದ್ರೆಗೆ ನೀಡಿದ. ಇದರಿಂದ ಚುಲ್ಲ ಸುಭದ್ರೆಯ ದ್ವೇಷ ಹೆಚ್ಚಿತು. ಆಕೆ ಆಹಾರವನ್ನು ಬಿಟ್ಟು, ತಾನು ಸತ್ತು ವಾರಣಾಸಿಯ ರಾಣಿಯಾಗಿ ಬೋಧಿಸತ್ವನ ಮೇಲೆ ಸೇಡು ತೀರಿಸುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದಳು. ಅದರಂತೆ ಆಕೆ ಸತ್ತು ಮದ್ರರಾಜನ ಮಗಳಾಗಿ ಹುಟ್ಟಿ ವಾರಣಾಸಿಯ ರಾಜಕುಮಾರನನ್ನು ಮದುವೆಯಾಗಿ ರಾಣಿಯಾದಳು.

ತನ್ನ ಹಳೆಯ ಸೇಡಿನ ಪ್ರತಿಜ್ಞೆಯನ್ನು ನೆನೆಸಿಕೊಂಡು ತನಗೆ ಅನಾರೋಗ್ಯವೆಂದು ಮಲಗಿಬಿಟ್ಟಳು. ತನಗೆ ಆರು ಬಣ್ಣದ ಕಿರಣಗಳನ್ನು ಸೂಸುವ ಆನೆಯ ದಂತಗಳು ದೊರೆತರೆ ಆರೋಗ್ಯ ದೊರೆಯುತ್ತದೆ. ಅದು ಬೇಕೇ ಬೇಕು ಎಂದು ಹಟ ಹಿಡಿದಳು. ರಾಜ ತನ್ನ ದೇಶದ ಅರವತ್ತು ಸಾವಿರ ಬೇಟೆಗಾರರನ್ನು ಕರೆಸಿದ. ಅವರಲ್ಲೊಬ್ಬ ತಾಳೆಯ ಮರದಷ್ಟು ಎತ್ತರವಿದ್ದ. ಅವನ ಕಣ್ಣಲ್ಲಿ ಕ್ರೌರ್ಯವಿತ್ತು. ಅವನೇ ಸರಿಯಾದ ವ್ಯಕ್ತಿ ಎಂದು ತೀರ್ಮಾನಿಸಿ, ಅವನಿಗೆ ಛದ್ದಂತ ಸರೋವರಕ್ಕೆ ಹೋಗುವ ದಾರಿಯನ್ನು ತಿಳಿಸಿದಳು. ಆತ ಅಲ್ಲಿಗೆ ಏಳು ವರ್ಷ, ಏಳು ತಿಂಗಳು, ಏಳು ದಿನಗಳ ನಂತರ ಹೋಗಿ ಸೇರಿದ. ಆನೆ ಬರುವ ದಾರಿಯಲ್ಲಿ ಸಂತನಂತೆ ಕಾವಿ ಧರಿಸಿ ನಿಂತ. ಅವನೊಬ್ಬ ಋಷಿ ಎಂದು ಗೌರವದಿಂದ ಆನೆ ಬಂದಾಗ ಅದರ ತಲೆಗೆ ಬಾಣ ಹೊಡೆದು ಸೀಳಿದ. ಯಾಕೆ ಹೀಗೆ ಮಾಡಿದೆ, ನೀನು ಸಂತನಲ್ಲವೇ ಎಂದು ಕೇಳಿದಾಗ ಇದು ವಾರಣಾಸಿಯ ರಾಣಿಯ ಆಜ್ಞೆ, ಆಕೆಗೆ ನಿನ್ನ ದಂತ ಬೇಕಾಗಿದೆ ಎಂದಾಗ ಬೋಧಿಸತ್ವನಿಗೆ ಚುಲ್ಲಸುಭದ್ರೆಯ ದ್ವೇಷವಿದು ಎಂದು ತಿಳಿದು ತಾನಾಗಿಯೆ ತನ್ನ ದಂತವನ್ನು ಕತ್ತರಿಸಿಕೊಟ್ಟ. ನಂತರ ರಕ್ತ ಸೋರಿ ಸತ್ತು ಹೋದ. ದಂತವನ್ನು ಪಡೆದಾಗ ಚುಲ್ಲಸುಭದ್ರೆಗೆ ತನ್ನಿಂದ ತನ್ನ ಗಂಡ ಪಟ್ಟ ಕಷ್ಟ ತಿಳಿದು ಆಕೆಯೂ ಸತ್ತು ಹೋದಳು. ದ್ವೇಷ ಯಾರಿಗೆ ಒಳ್ಳೆಯದನ್ನು ಮಾಡೀತು? ಸಂತರ ವೇಷ ಹಾಕಿಕೊಂಡು ಬೋಧಿಸತ್ವನಂತಹ ಮಹಾ ಆನೆಯನ್ನು ಕೊಂದದ್ದು ಮೋಸ. ನೀತಿಯ ಮುಖವಾಡ, ತೆರೆದ ಖಡ್ಗಕ್ಕಿಂತ ಅಪಾಯಕಾರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.