ADVERTISEMENT

ಗೊಣಗಾಟ ಬದಲಿಸಿದ ಹಣೆಯಬರಹ

341

ಡಾ. ಗುರುರಾಜ ಕರಜಗಿ
Published 11 ಆಗಸ್ಟ್ 2019, 19:50 IST
Last Updated 11 ಆಗಸ್ಟ್ 2019, 19:50 IST
   

ಉಣುವುದುಡುವುದು ಪಡುವುದಾಡುವುದು ಮಾಡುವುದು |

ಋಣಗಳೆಲ್ಲವು ಪೂರ್ವಸಂಚಿತಾಂಶಗಳು ||

ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ |

ADVERTISEMENT

ಗೊಣಗಾಟವಳಿಸುವುದೆ ? – ಮಂಕುತಿಮ್ಮ || 170 ||

ಪದ- ಅರ್ಥ

ಉಣುವುದುಡುವುದು= ಉಣುವುದು+ಉಡುವುದು, ಪಡುವು
ದಾಡುವುದು=ಪಡುವುದು+ಆಡುವುದು, ಪೂರ್ವಸಂಚಿತಾಂಶ
ಗಳು= ಪೂರ್ವ(ಹಿಂದಿನಿಂದ)+ಸಂಚಿತ(ಸಂಗ್ರಹವಾದ)+ಅಂಶಗಳು,
ಲಿಖಿತಮಿರೆಯುಂ=ಲಿಖಿತ(ಬರೆಹ)+ಮಿರೆಯುಂ(ಇದ್ದರೂ),ವಾಚಿಸುವನಿಲ್ಲ=ಓದುವವರಿಲ್ಲ, ಗೊಣಗಾಟವಳಿಸುವುದೆ=ಗೊಣಗಾಟ+ಅಳಿಸುವುದೆ.

ವಾಚ್ಯಾರ್ಥ: ಉಣ್ಣುವುದು, ತೊಡುವುದು, ಸುಖ,ದು:ಖಗಳನ್ನು ಪಡುವುದು, ಆಡುವುದು, ಮಾಡುವುದು ಇವೆಲ್ಲ ಋಣಗಳು, ಪೂರ್ವದಲ್ಲಿ ನಾವು ಮಾಡಿ ಸಂಗ್ರಹಿಸಿಕೊಂಡ ಕರ್ಮಫಲದ ಅಂಶಗಳು. ಇದು ನಮ್ಮ ಹಣೆಯಲ್ಲಿ ಬರೆದಿದ್ದರೂ ಅದನ್ನು ಓದುವವನಿಲ್ಲ. ಈ ಕರ್ಮಫಲವನ್ನು ಕೇವಲ ಗೊಣಗಾಟ ಅಳಿಸುವುದೇ?

ವಿವರಣೆ: ನಾವು ಇಂದು ಏನೇನನ್ನು ಅನುಭವಿಸುತ್ತಿದ್ದೇವೋ ಅದೆಲ್ಲ ನಾವು ಹಿಂದೆ ಮಾಡಿದ ಕರ್ಮಗಳ ಫಲ. ಯಾರೋ ಒಬ್ಬರು ಸಜ್ಜನರು ತುಂಬ ಕಷ್ಟದಲ್ಲಿದ್ದಾರೆ. ಬಹಳ ನೊಂದಿದ್ದಾರೆ. ಪಾಪ! ಅವರಿಗೆ ಈ ಸ್ಥಿತಿ ಯಾಕೆ ಬರಬೇಕಿತ್ತು? ಭಗವಂತ ಅವರಿಗೆ ಅನ್ಯಾಯ ಮಾಡಿದ, ವಿಧಿ ಬಹಳ ಕ್ರೂರ ಎಂದೆಲ್ಲ ಮಾತನಾ ಡುತ್ತಾರೆ ಜನ. ಆದರೆ ಅದು ಹಿಂದೆಂದೋ ಮಾಡಿದ ಕೆಲಸದ ಫಲ ಎಂದು ಅನ್ನಿಸುವುದಿಲ್ಲ. ಒಬ್ಬ ತರುಣ ಕಣ್ಣುಗಳಲ್ಲಿ ಕನಸುಗಳನ್ನು ತುಂಬಿಕೊಂಡು ವ್ಯವಹಾರದಲ್ಲಿ ಯಶಸ್ಸಿನ ಮೇಲೆ ಯಶಸ್ಸನ್ನು ಗಳಿಸುತ್ತ ನಡೆದಾಗ ಇಡೀ ವಿಶ್ವವೇ ಅವನನ್ನು ಕೊಂಡಾಡುತ್ತದೆ, ಮಾದರಿ ಎಂದು ಸಮಾಜದ ಮುಂದೆ ಇಡುತ್ತದೆ. ಮೇಲೇರುವ ಭರದಲ್ಲಿ, ಉತ್ಸಾಹದ ಪೂರದಲ್ಲಿ ಯಾವ ಯಾವ ಅನ್ಯಾಯಗಳು ನಡೆದವೋ, ಅವ್ಯವಹಾರಗಳು ನಡೆದವೋ ಜಗತ್ತಿಗೆ ಆಗ ಕಾಣುವುದಿಲ್ಲ. ಆದರೆ ವಿಧಿ ಅದನ್ನಾವುದನ್ನೂ ಮರೆಯುವುದಿಲ್ಲ, ತಪ್ಪದೆ ಲೆಕ್ಕವಿಡುತ್ತದೆ.

ಸಮಯ ಬಂದಾಗ ಅದನ್ನು ವಸೂಲಿಮಾಡುತ್ತದೆ. ಆಗ ಆ ವ್ಯಕ್ತಿಯ ತಳಮಳ, ಭಯ, ಸಂಕಟಗಳನ್ನು ಜನ ಕಂಡು ಮರುಗುತ್ತಾರೆ. ಅದಕ್ಕೆ ಈ ಕಗ್ಗ ಉತ್ತರವನ್ನು ನೀಡುತ್ತದೆ. ಇಂದು ನಾವು ಉಡುವುದು, ಉಣ್ಣುವುದು ಈ ಎಲ್ಲ ಸೌಭಾಗ್ಯ, ದೌರ್ಭಾಗ್ಯಗಳಿಗೆ ನಾವೇ ಕಾರಣರು. ನಾವು ಪಡುವ ಸಂತೋಷ, ಸಮೃದ್ಧಿಗಳಿಗೆ ಅಥವಾ ದು:ಖ, ದುಮ್ಮಾನಗಳಿಗೂ ನಾವೇ ಕಾರಣರು. ನಾವಿಂದು ಆಡುವ ಆಟಗಳಿಗೆ, ಮಾಡುವ ಕೆಲಸಗಳಿಗೆಲ್ಲ ನಮ್ಮ ಋಣಗಳ ಮೂಟೆಯೇ ಮೂಲ ಕಾರಣ. ಇವೆಲ್ಲ ನಾವು ಹಿಂದೆ ಮಾಡಿದ ಕರ್ಮಫಲಗಳ ಅಂಶಗಳು.

ಇವೆಲ್ಲ ನಮ್ಮ ಹಣೆಯಬರಹ. ಈ ಬರಹವನ್ನು ಹಣೆಯಲ್ಲಿ ಬರೆದಿದ್ದರೂ ಅದನ್ನು ಓದುವ ಜಾಣನಿಲ್ಲ. ಅದು ವಿಧಿಲಿಖಿತ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಹಾಗಾದರೆ ಅದರ ಬಗ್ಗೆ ಗೊಣಗಾಟ, ನರಳಾಟವೇಕೆ? ಯಾರಿಂದಲೂ ಅದನ್ನು ಅಳಿಸಲು ಸಾಧ್ಯವಿಲ್ಲದಿದ್ದಾಗ ಗೊಣಗಾಟದಿಂದ ಸಾಧಿಸಲು ಆಗುವುದೇ? ಇದಕ್ಕೆ ಎರಡೇ ಹಾದಿಗಳು. ಒಂದು ನಮ್ಮ ವರ್ತಮಾನದಲ್ಲಿ ಒಳ್ಳೆಯ, ಸದುದ್ದೇಶದ ಕೆಲಸಗಳನ್ನೇ ಮಾಡುತ್ತ ಬಂದರೆ ಮುಂದೆ ಬದುಕು ಹಗುರವಾದೀತು ಯಾಕೆಂದರೆ ನಮ್ಮ ನಾಳೆಗಳನ್ನು ನಿರ್ಮಿಸುವುವು ಇಂದಿನ ಕಾರ್ಯಗಳು. ಎರಡು, ಬಂದದ್ದನ್ನು ತುಟಿ ಬಿಗಿದು ಸಹಿಸಿಕೊಳ್ಳುವುದು. ಅಳುವಿನಿಂದ, ಗೊಣಗಾಟದಿಂದ ಯಾವುದೂ ಬದಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.